ಮಳೆಗಾಲದ ಏಡಿ ಬೇಟೆಯ ಸಂಭ್ರಮ
Team Udayavani, Jul 11, 2017, 1:20 AM IST
ಕಾರ್ಕಳ: ಜೂನ್-ಜುಲೈ ತಿಂಗಳು ಆರಂಭವಾದರೆ ಸಾಕು ಪ್ರಕೃತಿ ತುಂಬಿಕೊಂಡು ಹಳ್ಳ ಕೊಳ್ಳ ಹೊಸ ಹರಿವನ್ನು ಪಡೆಯುತ್ತದೆ.ಆಗಲೇ ಇವರಲ್ಲಿ ಅದೇನೋ ಸಂಭ್ರಮದ ಮಳೆ ಜಿನುಗುತ್ತದೆ. ಆದರೆ ಇವರಿಗೆ ನಿಜವಾದ ಸಂಭ್ರಮ ಧೋ ಧೋ ಎಂದು ರಾತ್ರಿ ಪೂರ್ತಿ ಸುರಿವ ಮಳೆಯಲ್ಲಿ ನೆನೆದು, ಕೈಲಿ ಗೋಣಿಯನ್ನೋ ಚೀಲವನ್ನೋ ಅದರೊಳಗೆ ಸಣ್ಣ ಕತ್ತಿಯನ್ನೋ ಭರ್ಜಿಯನ್ನೋ ಹಿಡಿದು ಗದ್ದೆ, ಹಳ್ಳ ಕೊಳ್ಳಗಳನ್ನು ಹುಡುಕಿ ಹೋಗೋದರಲ್ಲಿಯೇ.
ಯಾರಿವರು? ಅಂತ ನೀವು ಕೇಳಿದರೆ ಉತ್ತರ, ಮಳೆಗಾಲದಲ್ಲಿ ಏಡಿ ಬೇಟೆಗೆ ಹೋಗುವ ಉತ್ಸಾಹಿ ಗುಂಪು. ಈ ಸಲದ ಮಳೆ ಕೊಂಚ ಕಡಿಮೆ ಇದ್ದರೂ ಹಳ್ಳಿಗಳಲ್ಲಿ ಏಡಿ, ಹಳ್ಳದ ಮೀನುಗಳನ್ನು ಹಿಡಿಯುವ ಯುವ ಜನರ ಗುಂಪು ಕಡಿಮೆಯಾಗಿಲ್ಲ. ಜುಲೈ ತಿಂಗಳಲ್ಲಿ ಮಳೆ ಬಿರುಸುಗೊಂಡರೆ ಊರಿನ ಹಳ್ಳಗಳಲ್ಲಿ ಮೀನು ಹಾಗೂ ಏಡಿ ಬೇಟೆಯ ಹುರುಪು ಕೂಡ ಜಾಸ್ತಿ.
ಏಡಿ ಹಿಡಿಯೋ ಸಂಭ್ರಮ
ಹೊರಗೆ ಮಳೆ ಬೀಳುತ್ತಿದೆ ಅಂತ ಬೆಚ್ಚಗೇ ಕಂಬಳಿ ಹೊದ್ದು ಮಲಗಿಕೊಳ್ಳುವವರ ದಂಡು ಒಂದೆಡೆಯಾದರೆ, ಜೂನ್ ತಿಂಗಳ ಮೊದಲ ಮಳೆ ಬೋರೆಂದು ಬಂದದ್ದೇ ತಡ ಉಬ್ಬೆರ್ ಸಂಭ್ರಮದಲ್ಲಿ ಕಳೆದು ಹೋಗುವವರ ದಂಡು ಮತ್ತೂಂದೆಡೆ. ಮಳೆಗಾಲದ ಶುರುವಾತಿನಲ್ಲಿ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಬ್ಬೆರ್‌ಗ್ ಪೋಯಾ? ಅಂತ ಖುಷಿಯಿಂದ ಕೇಳಿ ತಲೆಗೆ ಟೊಪ್ಪಿ ಏರಿಸಿ, ಗೋಣಿ ಕತ್ತಿ, ಏಡಿ ಹಿಡಿಯೋ ಬುಟ್ಟಿ,ಮುಂತಾದ ಉಪಕರಣಗಳನ್ನು ಹಿಡಿದು ಹಳ್ಳದ ಕಡೆಗೋ? ಗದ್ದೆಯ ಕಡೆಗೋ ಹೋಗುವ ಉತ್ಸಾಹಿ ಯುವಕರು ಕಾಣಸಿಗುತ್ತಾರೆ. ತಾಲೂಕಿನಲ್ಲಿಯೂ ಅಂತಹ ಕೆಲವು ಗುಂಪು ಸಕ್ರಿಯವಾಗಿದೆ.
ಹಳ್ಳೇಡಿಯ ರುಚಿ ಬಲ್ಲವನೇ ಬಲ್ಲ
ಮೊದಲ ಮಳೆ ಬಿದ್ದಾಗ ಹಳ್ಳದ ಏಡಿಗಳ ಚಟುವಟಿಕೆ ಜಾಸ್ತಿ. ಅಲ್ಲದೇ ಅವುಗಳ ಸಂತತಿಯೂ ಮಳೆಗಾಲಕ್ಕೆ ಹೆಚ್ಚಾಗುತ್ತದೆ. ಕಡಲಿನ ಮೀನುಗಾರಿಕೆ ಮುಗಿದು ಪೇಟೆಗೆ ಮೀನುಗಳು ಬರುವುದಿಲ್ಲ. ಈ ಸಮಯದಲ್ಲಿ ಹಳ್ಳ ಕೊಳ್ಳದ ಮೀನುಗಳನ್ನು ಹಳ್ಳದ ಏಡಿಗಳನ್ನೋ ಹಿಡಿದು ಅವುಗಳ ಬಗೆ ಬಗೆ ಖಾದ್ಯ ತಯಾರಿಸಿ ತಿಂದು ಖುಷಿ ಪಡುವವರು ಇದ್ದಾರೆ. ಏನೇ ಆಗಲಿ ಹಳ್ಳದ ಏಡಿಗಳ ರುಚಿಯೋ ರುಚಿ ಅನ್ನೋದು ಏಡಿ ಖಾದ್ಯ ತಿಂದವರ ಹೇಳಿಕೆ.
ಹಳ್ಳಿಯ ಹಳ್ಳಗಳಲ್ಲಿಯೇ ಸಂಭ್ರಮ
ನಗರ ಪ್ರದೇಶಗಳಲ್ಲಿ ಹಳ್ಳ ಕೊಳ್ಳಗಳು ಮಾಯವಾಗು ತ್ತಿದ್ದರೂ ಗ್ರಾಮೀಣ ಪ್ರದೇಶಗಳ ಹಳ್ಳ, ತೋಡು, ಗದ್ದೆಗಳ ಮೂಲೆ ಗಳಲ್ಲಿ ಮಳೆಗಾಲದ ಏಡಿಗಳು ಮನೆಮಾಡಿಕೊಂಡಿರುತ್ತದೆ. ಮಳೆಗಾಲ ಆರಂಭದಲ್ಲಿ ತಾಲೂಕಿನ ಗ್ರಾಮಗಳಾದ ಮಾಳ, ಸಾಣೂರು, ಕಲ್ಯಾ, ಅಜೆಕಾರು, ಕಡಾರಿ ಮೊದಲಾದ ಕಡೆಗಳಲ್ಲಿ ಹಳ್ಳಗಳ ಹರಿವು ಜಲಮೂಲಗಳು ಅಧಿಕವಾಗಿರುವುದರಿಂದ ಇಲ್ಲಿ ಹಳ್ಳದ ಏಡಿಗಳ ಸಂಖ್ಯೆ ಜಾಸ್ತಿ. ಹಾಗಾಗಿ ರಾತ್ರಿಯಾದರೆ ಸಾಕು ಅವುಗಳು ನೀರಲ್ಲಿ ತೇಲಿ ಬರುತ್ತದೆ, ಮಳೆ ಬಂದರಂತೂ ಅವುಗಳ ಅಸ್ತಿತ್ವ ಎದ್ದು ಕಾಣುತ್ತದೆ.ಹಾಗಾಗಿ ಇದೇ ಸಮಯವೇ ಏಡಿ ಬೇಟೆಗೆ ಸುಗ್ಗಿಕಾಲ ಅನ್ನುವುದು ಏಡಿ ಹಿಡಿಯುವವರ ಮಾತು.ಆದರೂ ಹಿಂದಿನ ಕಾಲದಲ್ಲಿ ಇದ್ದಷ್ಟು ಸಂಭ್ರಮ ಈಗಿನ ಮಂದಿಗೆ ಇಲ್ಲ. ಎಲ್ಲವೂ ಬದಲಾಗಿರುವಾಗ ಏಡಿ ಹಿಡಿಯುವ ಸಡಗರವೂ ಬದಲಾಗಿರುವುದು ವಿಶೇಷವಲ್ಲ ಎನ್ನುವುದು ಹಳ್ಳಿಯ ಹಳೆ ಮಂದಿಗಳ ಹೇಳಿಕೆ.
ಮಳೆ ಜಾಸ್ತಿ ಬಿರುಸಾದರೆ ಹಳ್ಳದ ಏಡಿಗಳನ್ನು ಹಿಡಿಯೋದು ಕಷ್ಟ. ಜೂನ್ ಜುಲೈ ತಿಂಗಳಲ್ಲಿ ಏಡಿಗಳನ್ನು ಹಿಡಿಯೋ ಖುಷಿ ಬೇರೆಯೇ. ಈಗಲೂ ಊರಿನ ಸಣ್ಣ ಮಕ್ಕಳ ಜತೆಗೂಡಿ ಏಡಿ ಹಿಡಿಯಲು ರಾತ್ರಿ ಹೊತ್ತು ಗ್ಯಾಸ್‌ಲೈಟ್ ಹಿಡಿದು ಏಡಿ ಬೇಟೆಗೆ ಹೋಗುತ್ತೇವೆ. ಅಲ್ಲದೇ ಹಳ್ಳದ ಮೀನುಗಳು ಕೂಡ ಈ ಸಮಯದಲ್ಲಿ ಸಿಗುತ್ತವೆ. ಹಳ್ಳದ ಏಡಿಗಳಲ್ಲಿ ಕಪ್ಪು ಮತ್ತು ಬಿಳಿ ಏಡಿಗಳೆಂಬ ಎರಡು ವಿಧಗಳಿದ್ದರೂ ಜಾಸ್ತಿ ಬೇಟೆಗೆ ಸಿಗುವುದು ಕಪ್ಪು ಏಡಿಗಳು.
-ನಾಗೇಂದ್ರ, ಬೈಲೂರು
ಏಡಿ ಹಿಡಿಯುವ ತಂಡದ ಸದಸ್ಯ
– ಪ್ರಸಾದ್ ಶೆಣೈ ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.