ವ್ಯವಸ್ಥೆಯ ಅಸಡ್ಡೆಗೆ ಸಿಲುಕಿರುವ ಸಮೃದ್ಧ ಜಲನಿಧಿ
Team Udayavani, Apr 26, 2017, 3:41 PM IST
ಮರುಜೀವಕ್ಕೆಕಾಯುತ್ತಿರುವ ನೆಂಪು ಮಂಗಲ್ಸನಕಟ್ಟೆಯ ಬ್ರಹ್ಮನ ಕೆರೆ
ಕೊಲ್ಲೂರು: ಕುಡಿಯುವ ನೀರಿನ ವಿಚಾರದಲ್ಲಿ ಸರಕಾರಗಳು ಬೇಸಗೆ ಬಂತೆಂದೆರೆ ಸಾಕಷ್ಟು ಹಣ ಖರ್ಚು ಮಾಡುತ್ತವೆ. ಹೊಸ ಹೊಸ ಬಾವಿಗಳ ನಿರ್ಮಾಣವಾಗುತ್ತದೆ. ಕೊಳವೆಬಾವಿಗಳ ರಚನೆಯಾಗುತ್ತದೆ. ಎಲ್ಲೆಲ್ಲಿಂದಲೋ ನೀರನ್ನು ಟ್ಯಾಂಕರ್‌ಗಳ ಮೂಲಕ ತಂದು ಸರಬರಾಜು ಮಾಡಲಾಗುತ್ತದೆ. ಆದರೆ ಗ್ರಾಮ ಮಟ್ಟದಲ್ಲಿರುವ ಅಂತರ್ಜಲದ ಮೂಲವಾಗಿರುವ ಕೆರೆಗಳ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸುವುದೇ ಕಡಿಮೆಯಾಗಿ ಬಿಟ್ಟಿದೆ. ಹೊಸ ಹೊಸ ಕೊಳವೆ ಬಾವಿಗಳ ನಿರ್ಮಾಣವಾಗುತ್ತದೆಯೇ ವಿನಃ ಅಲ್ಲಲ್ಲಿ ಇರುವ ಸಮೃದ್ಧ ಜಲಮೂಲಗಳ ಅಭಿವೃದ್ಧಿಗೆ ಮಾತ್ರ ಆಸಕ್ತಿ ವಹಿಸದಿರುವುದು ದುರದೃಷ್ಟಕರ. ವ್ಯವಸ್ಥೆಯ ಅಸಡ್ಡೆಗೆ ಸಿಲುಕಿರುವ ಸಮೃದ್ಧ ಜಲಮೂಲವೊಂದು ಕಾಯಕಲ್ಪಕ್ಕೆ ಕಾಯುತ್ತಿರುವುದು ಕರ್ಕುಂಜೆ ಗ್ರಾಮ ಪಂಚಾಯತ್‌ನ ಮಂಗಲ್ಸನಕಟ್ಟೆಯ ಸಮೀಪ ಕಾಣಬಹುದು.
ಪ್ರಾಚೀನವಾದ ಮಂಗಲ್ಸನಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಯಕ್ಷೀ ದೇವಸ್ಥಾನದ ಹಿಂಭಾಗದಲ್ಲಿರುವ ಬ್ರಹ್ಮನ ಕೆರೆಯಲ್ಲಿ ನೀರು ಎಂದಿಗೂ ಬತ್ತುವುದಿಲ್ಲ. ಬ್ರಹ್ಮನ ಕೆರೆ ಎಂದು ಕರೆಯಲ್ಪಡುವ ಈ ಕೆರೆ ಇಡೀ ಗ್ರಾಮದ ಜೀವಜಲದ ಮೂಲ. ಸುಮಾರು ಅರ್ಧ ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ಬ್ರಹ್ಮನ ಕೆರೆ ಹೆಚ್ಚೇನು ಆಳವಿಲ್ಲ. ಆದರೆ ಸದಾ ಕಾಲ ನೀರಿನ ಒರತೆಯಿಂದ ಸಮೃದ್ಧ ಜಲದಿಂದ ಕಂಗೊಳಿಸುತ್ತದೆ.
ಇತಿಹಾಸವನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿರುವ ಈ ಬ್ರಹ್ಮನ ಕೆರೆ ಕಾರಣಿಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತದೆ. ಶತಶತಮಾನಗಳ ಹಿಂದೆ ಈ ಕೆರೆಯಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿಯುತ್ತಿತ್ತು. ಈ ರೀತಿ ಪ್ರವಾಹೋಪಾದಿಯಲ್ಲಿ ನೀರು ಹರಿಯುವುದರಿಂದ ಜನತೆ ಆತಂಕಕ್ಕೆ ಸಿಲುಕಿ ಕೊನೆಗೆ ಬಂಡೆಗಳ ಸರಿಸಿ ಜಲವನ್ನು ನಿಯಂತ್ರಣ ಮಾಡಲಾಗಿತ್ತು ಎನ್ನುವ ಪ್ರತೀತಿಯೂ ಇದೆ.
ಮೂರ್‍ನಾಲ್ಕು ದಶಕಗಳ
ಪೂರ್ವದಲ್ಲಿ ಈ ಕೆರೆಯು ನಿತ್ಯವೂ ತುಂಬಿ ತುಳುಕುತ್ತಿದ್ದು ಇಡೀ ಬಯಲಿಗೆ ಹರಿದು ಹೋಗುತ್ತಿತ್ತು. ಈ ಕೆರೆಯ ನೀರನ್ನೆ ನಂಬಿಕೊಂಡು ಗ್ರಾಮಸ್ಥರು ಮೂರು ಹಂಗಾಮಿಯಲ್ಲಿ ಭತ್ತ, ಕಬ್ಬು, ಗೆಣಸು, ಮೆಣಸು ಮುಂತಾದ ಕೃಷಿ ಮಾಡುತ್ತಿದ್ದರು. ಈ ಭಾಗದಲ್ಲಿ ಕಬ್ಬು ಬೇಸಾಯ ಸಾಕಷ್ಟು ಜನಪ್ರಿಯವಾಗಿತ್ತು. ಇಲ್ಲಿಯೇ ಆಲೆಮನೆ ಮಾಡಿಕೊಂಡು ಬೆಲ್ಲ ತಯಾರಿ ಮಾಡಲಾಗುತ್ತಿತ್ತು. ಅದಕ್ಕೆಲ್ಲಾ ಕಾರಣ ಈ ಕೆರೆಯ ಸಮೃದ್ಧ ನೀರೇ ಆಗಿತ್ತು. ಆದರೆ ಇತ್ತೀಚೆಗಿನ ದಶಕಗಳಿಂದ ಕೆರೆಯಲ್ಲಿ ಕೆಸರು ತುಂಬಿಕೊಂಡಿದ್ದು ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಹಾಗಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕೆರೆಗೆ ಮರುಜೀವ ನೀಡಿದರೆ ಖಂಡಿತಾ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಮತ್ತೆ ಜನಪ್ರಿಯವಾಗಲಿದೆ.
ಯಥೇತ್ಛವಾದ ಜಲದ ಒರತೆ
ಕೆಲವಷ್ಟು ವರ್ಷಗಳ ಹಿಂದೆ ಸ್ಥಳೀಯಾಡಳಿತ ಸ್ಪಲ್ಪಮಟ್ಟಿಗೆ ದುರಸ್ತಿ ಮಾಡಿತ್ತು. ಮತ್ತೆ ಯಾರೂ ಕೂಡ ಕೆರೆಯ ಬಗ್ಗೆ ಆಸಕ್ತಿಯೇ ತಾಳಲಿಲ್ಲ. ಯಥೇತ್ಛವಾದ ಜಲದ ಒರತೆ ಇಲ್ಲಿ ಗಮನಿಸಬಹುದು. ಕೆಸರು ದಟ್ಟವಾಗಿದ್ದರೂ ಕೂಡ ಕೆರೆಯಲ್ಲಿ ನೀರು ತುಂಬಿಕೊಂಡಿದೆ. ಕೆಸರು ತೆಗೆದು, ಇನ್ನಷ್ಟು ಆಳ ಮಾಡಿ, ಸುತ್ತ ಕಲ್ಲಿನ ಆವರಣ ಮಾಡಿದರೆ ಇದೊಂದು ಅಪೂರ್ವವಾದ ಜಲಮೂಲವಾಗಲಿದೆ. ಮಾತ್ರವಲ್ಲ ಈ ಭಾಗದ ಕೃಷಿಕರಿಗೆ ವರದಾನವಾಗಲಿದೆ. ಕೆರೆ ಮಂಗನ್ಸಕಟ್ಟೆಯ ಎತ್ತರ ಭಾಗದಲ್ಲಿರುವುದರಿಂದ ತಗ್ಗು ಪ್ರದೇಶಕ್ಕೆ ಇದರಿಂದ ನೀರಿನ ಸದ್ಬಳಕೆ ರೈತಾಪಿಗಳು ಮಾಡಿಕೊಳ್ಳುವ ಸಾಧ್ಯತೆ ಇದೆ.
ಒಕ್ಕೊರಳ ಆಗ್ರಹ
ಈ ಕೆರೆಯ ಹೂಳು ತೆಗೆದು ಅಭಿವೃದ್ಧಿಗೊಳಿಸಬೇಕು ಎನ್ನುವುದು ಈ ಭಾಗದ ಗ್ರಾಮಸ್ಥರ ಒಕ್ಕೊರಳ ಆಗ್ರಹವಾಗಿದೆ. ಈಗಾಗಲೇ ಗ್ರಾಮ ಪಂಚಾಯತ್‌ನಿಂದ ಶಾಸಕರ ತನಕ ಮನವಿಗಳನ್ನು ಸಲ್ಲಿಸಲಾಗಿದೆ. ಇನ್ನೂ ಯಾವುದೇ ಸ್ಪಂದನ ಸಿಕ್ಕಿಲ್ಲ ಎನ್ನುತ್ತಾರೆ. ನೀರು ಇಲ್ಲದೆಡೆ ನೀರು ಹುಡುಕುವ ಬದಲು ಇರುವ ನೀರಿನ ಮೂಲವನ್ನು ಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಈ ಕೆರೆಯ ಅಭಿವೃದ್ಧಿಯಿಂದ ಕುಡಿಯುವ ನೀರು ಮಾತ್ರವಲ್ಲ ಕೃಷಿಗೂ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಅಂತರ್ಜಲದ ಮಟ್ಟವೂ ಏರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಕೃಷಿಕರ ಜೀವನಾಡಿ
ಈ ಭಾಗ ಸಂಪೂರ್ಣ ಕೃಷಿ ಆಧಾರಿತ ಪ್ರದೇಶ. ಭತ್ತ, ದ್ವಿದಳ ಧಾನ್ಯ, ಮೆಣಸು, ಗೆಣಸು, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಎರಡು ಮೂರು ದಶಕಗಳ ಹಿಂದೆ ಈ ಕೆರೆಯ ನೀರನ್ನೇ ಆಶ್ರಯಿಸಿಕೊಂಡು ಕಬ್ಬನ್ನು ಬೆಳೆಯಲಾಗುತ್ತಿತ್ತು. ಈ ಭಾಗದ ಕಬ್ಬು ಬೆಳೆಗೆ ಸಾಕಷ್ಟು ದಶಕಗಳ ಇತಿಹಾಸ ಇದೆ. ಆದರೆ ಇತ್ತೀಚೆಗಿನ ಎರಡು ದಶಕಗಳಿಂದ ಬ್ರಹ್ಮನ ಕೆರೆಯಲ್ಲಿ ಹೂಳು ತುಂಬಿ ನೀರು ಹರಿಯುವಿಕೆ ಕಡಿಮೆಯಾಯಿತು. ಕೃಷಿ ಚಟುವಟಿಕೆಯೂ ನಿಂತಿತು. ಕೃಷಿಕರ ವಿಚಾರದಲ್ಲಿ ಮುಂಚೂಣಿ ಸ್ಥಾನದಲ್ಲಿರಬೇಕಾದ ವ್ಯವಸ್ಥೆಯೂ ಅಷ್ಟೊಂದು ಆಸಕ್ತಿ ವಹಿಸದ ಪರಿಣಾಮ ಕೆರೆ ನನೆಗುದಿಗೆ ಬಿದ್ದಿದೆ. ಸರಕಾರ ಮನಸ್ಸು ಮಾಡಿ ಈ ಕೆರೆಗೆ ಮರು ಜೀವ ನೀಡಿದರೆ ಈ ಭಾಗದ ಕೃಷಿ ಭೂಮಿ ಹಸನುಗೊಳ್ಳುವ ಎಲ್ಲ ಸಾಧ್ಯತೆಗಳು ಇವೆ.
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.