ಟ್ಯಾಂಕರ್ ನೀರಿಗೂ ಬರ: ಗಗನಮುಖೀಯಾದ ದರ
Team Udayavani, May 7, 2019, 6:10 AM IST
ಉಡುಪಿ: ಉಡುಪಿ ನಗರ ಈಗ ಟ್ಯಾಂಕರ್ ನೀರಿನಿಂದ ಬದುಕುತ್ತಿದೆ! ನಗರಸಭೆಯಿಂದ ಬರುವ ನಳ್ಳಿ ನೀರು ಸ್ಥಗಿತಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸವನ್ನು ನಗರಸಭೆ ಇದುವರೆಗೂ ಮಾಡಿಲ್ಲ. ಕೆಲವೆಡೆ ನಗರಸಭಾ ಸದಸ್ಯರೇ ತಮ್ಮ ಸ್ವಂತ ಖರ್ಚಿನಿಂದ, ದಾನಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ನೀರು ಪೂರೈಕೆ ಮಾಡಿಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ನೀರಿನ ಟ್ಯಾಂಕರ್‌ಗಳ ಓಡಾಟ ಹೆಚ್ಚಾಗಿದೆ. ಟ್ಯಾಂಕರ್ ನೀರಿನ ಬೇಡಿಕೆ ಹೆಚ್ಚುತ್ತಿದ್ದಂತೆಯೇ ದರ ಕೂಡ ಗಗನಮುಖೀಯಾಗಿದೆ.
12,000 ಮತ್ತು 6,000 ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು 12,000 ಲೀಟರ್ ನೀರಿಗೆ 1,200 ರೂ.ಗಳಿಂದ 1,500 ರೂ. ಹಾಗೂ 2,000 ರೂ.ಗಳವರೆಗೂ ದರ ಇದೆ. 2,000 ಲೀಟರ್‌ನ ಟ್ಯಾಂಕರ್‌ಗೆ 600ರಿಂದ 1,000 ರೂ.ಗಳವರೆಗೆ ಪಡೆಯಲಾಗುತ್ತಿದೆ. ಟ್ಯಾಂಕರ್‌ನಿಂದ ಟ್ಯಾಂಕರ್‌ಗೆ ದರದಲ್ಲಿ ಅಜಗಜಾಂತರವಿದೆ!.
300ರಿಂದ 500 ರೂ. ಹೆಚ್ಚಳ
ಸಾಮಾನ್ಯವಾಗಿ 12,000 ಲೀಟರ್‌ಗೆ 1,000 ರೂ., 1,200ರವರೆಗೆ ದರ ಇತ್ತು. ಆದರೆ ಮಾರ್ಚ್‌ನ ಅನಂತರ ದರ ಹೆಚ್ಚಾಗುತ್ತಾ ಹೋಗಿದೆ. ಕಳೆದ ಎರಡು ವಾರಗಳಿಂದ ದರ ಒಂದೇ ಸಮನೆ ಹೆಚ್ಚಾಗಿದೆ. ನಿಗದಿತವಾಗಿ ವರ್ಷವಿಡೀ ಪೂರೈಸಲಾಗುತ್ತಿರುವ ಹೊಟೇಲ್, ಆಸ್ಪತ್ರೆ, ಫ್ಲ್ಯಾಟ್‌ಗಳಿಗೆ ಈ ಹಿಂದಿನ ದರದಲ್ಲಿಯೇ ನೀರು ಪೂರೈಸಲಾಗುತ್ತಿದೆ. ಆದರೆ ಬೇಸಗೆಯಲ್ಲಿ ಅದರಲ್ಲೂ ಕಳೆದೆರಡು ತಿಂಗಳಿನಲ್ಲಿ ನೀರಿಗಾಗಿ ಬೇಡಿಕೆ ಇಡುತ್ತಿರುವವರು ಹೆಚ್ಚು ದರ ಪಾವತಿಸಬೇಕಾಗಿದೆ. ನಗರ ಮಧ್ಯದಿಂದ ಸ್ವಲ್ಪ ದೂರವಿದ್ದರೆ ದರ ಮತ್ತಷ್ಟು ಹೆಚ್ಚು. ನೀರಿಗಾಗಿ ಕರೆ ಮಾಡಿದ ಕೂಡಲೇ ಟ್ಯಾಂಕರ್‌ನವರು “ಎಷ್ಟು ಬೇಕು? ಯಾವ ಏರಿಯಾ?’ ಎಂದು ಪ್ರಶ್ನೆ ಮಾಡಿಯೇ ಅನಂತರ ಬೆಲೆ ಹೇಳುತ್ತಾರೆ. ವಿಶೇಷವೆಂದರೆ ಕೆಲವೆಡೆ ಸಣ್ಣ ಟ್ಯಾಂಕರ್‌ನಲ್ಲಿ ತರುವ ನೀರಿಗೂ ದೊಡ್ಡ ಟ್ಯಾಂಕರ್‌ನ ದರವನ್ನೇ ಪಡೆಯಲಾಗುತ್ತಿದೆ!.
ಟ್ಯಾಂಕರ್ ಇದ್ದರೂ ನೀರಿಲ್ಲ
ನಗರದಲ್ಲಿ 12,000 ಲೀಟರ್‌ನ 30ರಷ್ಟು ಹಾಗೂ 600 ಲೀಟರ್‌ನ 20ರಷ್ಟು ಟ್ಯಾಂಕರ್‌ಗಳಿವೆ. ಕಟ್ಟಡ ಗುತ್ತಿಗೆದಾರರು, ಬಿಲ್ಡರ್‌ಗಳು, ಕೆಲವು ಖಾಸಗಿ ಸಂಸ್ಥೆಗಳದ್ದು ಪ್ರತ್ಯೇಕ ಟ್ಯಾಂಕರ್‌ಗಳಿವೆ. ಆದರೆ ಕಳೆದೊಂದು ತಿಂಗಳಿನಿಂದ ನೀರಿನ ಮೂಲದ ಸಮಸ್ಯೆಯಾಗಿದೆ. ಉಡುಪಿ ನಗರದ ಇಂದ್ರಾಳಿ, ದೊಡ್ಡಣಗುಡ್ಡೆ, ಕಲ್ಸಂಕ, ಸಗ್ರಿ, ತೊಟ್ಟಂ ಮೊದಲಾದೆಡೆಗಳ ಬಾವಿಗಳನ್ನೇ ಈ ಟ್ಯಾಂಕರ್‌ಗಳು ಅವಲಂಬಿಸುತ್ತಾ ಬಂದಿವೆ. ಆದರೆ ಈ ಬಾರಿ ಅಲ್ಲಿಯೂ ನೀರಿನ ಕೊರತೆ ಉಂಟಾಗುವ ಆತಂಕವಿದೆ. ಈಗಲೇ ಅಲ್ಲಿ ಟ್ಯಾಂಕರ್‌ಗಳ ಸಾಲು ಕಂಡುಬಂದಿದೆ. ಒಂದರಿಂದ ಎರಡು ತಾಸು ಕಾಲ ಕ್ಯೂನಲ್ಲಿ ನಿಲ್ಲಬೇಕಾಗಿದೆ. ಇದು ನೀರು ಪೂರೈಸುವ ಟ್ಯಾಂಕರ್‌ನವರಿಗೂ ಸಮಸ್ಯೆಯಾಗಿದೆ. ಹಾಗಾಗಿ ಅವರು ದರ ಕೂಡ ಹೆಚ್ಚಿಸುತ್ತಿದ್ದಾರೆ. ಇದರ ನಡುವೆಯೂ ಕೆಲವೊಂದು ಟ್ಯಾಂಕರ್‌ನವರು ಮನೆಗಳಿಗೆ ಆಫ್ ಸೀಜನ್ ದರವನ್ನೇ ವಿಧಿಸಿ ಮಾನವೀಯತೆ ತೋರಿಸುತ್ತಿದ್ದಾರೆ. ಈ ವರ್ಷ ಟ್ಯಾಂಕರ್‌ನವರು ಮಲ್ಪೆ, ವಡಭಾಂಡೇಶ್ವರ, ತೊಟ್ಟಂನ ಬಾವಿಗಳನ್ನು ಅವಲಂಬಿಸಿದ್ದಾರೆ. ಇಂದ್ರಾಳಿಯ ಬಾವಿಗಳಿಗೂ ಟ್ಯಾಂಕರ್‌ಗಳಿಂದ ಭಾರೀ ಬೇಡಿಕೆ ಇದೆ. ಲಾರಿಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಇಟ್ಟು ಅದರ ಮೂಲಕ ನೀರು ಪೂರೈಸಲಾಗುತ್ತಿದೆ.
ಫೋನ್ ಎತ್ತುತ್ತಿಲ್ಲ
ನಮಗೆ ದಿನಕ್ಕೆ 50ಕ್ಕೂ ಅಧಿಕ ಕರೆಗಳು ಬರುತ್ತವೆ. ಆದರೆ ಕೆಲವು ಕರೆಗಳನ್ನು ಎತ್ತುವುದಿಲ್ಲ. ಎತ್ತಿದರೂ ಅವರಿಗೆ ನೀರು ಒದಗಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ನಾವು ವಹಿಸಿಕೊಂಡಿರುವವರಿಗೆ ನೀರು ಒದಗಿಸಿಕೊಡಲು ಹರಸಾಹಸಪಡುತ್ತಿದ್ದೇವೆ. ನೀರಿಗಾಗಿ ಕಾದು ತುಂಬಿಸಿ ತರಬೇಕು. ಐಸ್‌ಪ್ಲ್ರಾಂಟ್‌ಗಳಿಗೂ ನೀರು ಒದಗಿಸಬೇಕಾಗಿದೆ. ನೀರಿನ ಬೇಡಿಕೆ ಭಾರೀ ಇದೆ ಎನ್ನುತ್ತಾರೆ ನಗರದಲ್ಲಿ ಕಳೆದ 15 ವರ್ಷಗಳಿಂದ ನೀರು ಪೂರೈಕೆ ಮಾಡುತ್ತಿರುವ ಟ್ಯಾಂಕರ್‌ಗಳ ಮಾಲಕರೋರ್ವರು.
ಕೆರೆ, ಬಾವಿಗಳ ಹೂಳೆತ್ತಿಲ್ಲ
ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆ, ಬಾವಿಗಳ ಹೂಳು ತೆಗೆದು ಸ್ವತ್ಛಗೊಳಿಸುವ ಕೆಲಸವನ್ನು ಈ ಬಾರಿ ನಡೆಸಿಲ್ಲ. ಕೆಲವೆಡೆ ನೀರಿದ್ದರೂ ಅದನ್ನು ಬಳಸಲಾಗುತ್ತಿಲ್ಲ. ಇನ್ನು ಕೆಲವೆಡೆ ನಳ್ಳಿ ನೀರು ಬರುತ್ತದೆ ಎಂದು ಹೇಳಿ ಲಭ್ಯವಿದ್ದ ಬಾವಿಗಳನ್ನು ನಿರ್ಲಕ್ಷಿಸಲಾಗಿದೆ. ಅಂಥ ಬಾವಿಗಳಲ್ಲಿ ಹುಲ್ಲು, ಗಿಡ ಬೆಳೆದಿದೆ. ನಗರಸಭೆ ಕೂಡಲೇ ಕಾರ್ಯಪ್ರವೃತ್ತವಾಗಿ ಇಂಥ ಕೆರೆ, ಬಾವಿಗಳನ್ನು ಸುಸ್ಥಿತಿಗೆ ತರಬೇಕು. ಮಣ್ಣಪಳ್ಳ ಕೆರೆಯ ಹೂಳು ತೆಗೆದರೆ ಅದರ ಸುತ್ತಲಿನ ಪ್ರದೇಶದ ಬಾವಿಗಳ ಒರತೆ ಹೆಚ್ಚಾಗಲಿದೆ.
-ನಿತ್ಯಾನಂದ ಒಳಕಾಡು, ನಾಗರಿಕ ಸಮಿತಿ
15 ವರ್ಷಗಳಲ್ಲೇ ಅಧಿಕ
ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ 15-16 ವರ್ಷಗಳಿಂದ ಇದೇ ಮೊದಲ ಬಾರಿಗೆ ಟ್ಯಾಂಕರ್ ನೀರಿಗೆ ಇಷ್ಟು ಬೇಡಿಕೆ ಬಂದಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಗ್ರಾಹಕರಿಂದ ಕರೆಗಳು ಬರುತ್ತಿವೆ. ಟ್ಯಾಂಕರ್‌ಗಳ ಕೊರತೆ ಇಲ್ಲ. ಆದರೆ ಶುದ್ಧ ನೀರಿನ ಬಾವಿಗಳ ಕೊರತೆ ಇದೆ. ಬಾವಿ ಇರುವವರು ನೀರು ಕೊಡಲು ಮುಂದೆ ಬಂದರೆ ಅನುಕೂಲವಾಗಬಹುದು. ಕೆಲವೆಡೆ ನೀರು ಪೂರೈಕೆ ಮಾಡಿದರೆ ನಮಗೆ ಲಾಭವಾಗುವುದಿಲ್ಲ. ಕಾರ್ಮಿಕರ ಸಂಬಳಕ್ಕೆ ಸರಿಯಾಗುತ್ತದೆ. ಆದರೂ ಮಾನವೀಯ ನೆಲೆಯಲ್ಲಿ ನೀರು ಪೂರೈಸುತ್ತಿದ್ದೇವೆ.
-ಚಂದ್ರಶೇಖರ್, ಟ್ಯಾಂಕರ್ ಮಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.