ಮುಂಡ್ಕೂರು ಅರದಾಳುವಿನಲ್ಲಿ ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರ ಆಗ್ರಹ
Team Udayavani, Jul 16, 2017, 3:00 AM IST
ಬೆಳ್ಮಣ್: ಗ್ರಾಮ ಪಂಚಾಯತ್‌ಗಳ ಇತಿಹಾಸದಲ್ಲೇ ಅತ್ಯಂತ ದೀರ್ಘವಾದ ಗ್ರಾಮಸಭೆ ಶುಕ್ರವಾರ ಮುಂಡ್ಕೂರಿನಲ್ಲಿ ನಡೆಯಿತು.
ಮುಂಡ್ಕೂರು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂ. ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಡ್ಕೂರು ಸಪಳಿಗರ ಭವನದಲ್ಲಿ ಬೆಳಗ್ಗೆ 10.30ಕ್ಕೆ ಪ್ರಾರಂಭಗೊಂಡ ಸಭೆ ಮುಕ್ತಾಯಗೊಂಡದ್ದು ಸಂಜೆ 5.30ಕ್ಕೆ.
ಇಡೀ ದಿನ ಮದ್ಯದಂಗಡಿ ಬಗ್ಗೆ ಚರ್ಚೆ
ಪಂಚಾಯತ್ ವ್ಯಾಪ್ತಿಯ ಅರದಾಳು ಎಂಬಲ್ಲಿ ಮುಂಡ್ಕೂರು ಪೇಟೆಯಿಂದ ಸ್ಥಳಾಂತರಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮ ಪಂಚಾಯತ್ ಪರವಾನಿಗೆ ನೀಡಿದ ಬಗ್ಗೆ ಅರದಾಳುವಿನ ಗ್ರಾಮಸ್ಥರು ಬಾರೀ ಅಕ್ರೋಶ ವ್ಯಕ್ತಪಡಿಸಿ ಬಳಿ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಆಧಿಕಾರಿಗಳು ಮದ್ಯದಂಗಡಿ ಮಾಲಕರನ್ನು ಸ್ಥಳಕ್ಕೆ ಕರೆಯಿಸಿ ಭಾಗಶಃ ಸಮಸ್ಯೆ ಪರಿಹರಿಸಿದರು. ಮಾಲಕರು ಅತೀ ಶೀಘ್ರ ಮದ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸುವುದಾಗಿ ತಿಳಿಸಿದ ಬಳಿಕ ಗ್ರಾಮಸ್ಥರು ಶಾಂತರಾಗಿ ತೆರಳಿದರು.
ಡೋರ್ ನಂಬ್ರ ಕೊಟ್ಟ ಬಗ್ಗೆ ಆಕ್ಷೇಪ
ಅರದಾಳುವಿನ ಎಸ್‌ಟಿ ಕಾಲನಿಯ ಸಮೀಪ ಮದ್ಯದಂಗಡಿಯನ್ನು ತೆರೆಯದಂತೆ ಅರದಾಳು ಗ್ರಾಮಸ್ಥರು ಅಕ್ಷೇಪ ಸಲ್ಲಿಸಿದ್ದರೂ ಡೋರ್ ನಂಬ್ರ ನೀಡಿದ್ದ ಪಂಚಾಯತ್ ವಿರುದ್ಧ ವಾಗ್ಧಾಳಿ ನಡೆಯಿತು. ಪಂಚಾಯತ್ ಮದ್ಯದಂಗಡಿಗೆ ಕೊಟ್ಟ ಕಟ್ಟಡ ಪರವಾನಿಗೆ ಹಾಗೂ ಡೋರ್ ನಂಬರನ್ನು ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಪಂಚಾಯತ್ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರ ಆಕ್ರೋಶ
ಎಸ್‌ಟಿ ಕಾಲನಿ ಹಾಗೂ ಜನತಾ ಕಾಲನಿಯ ನೂರಾರು ಮಹಿಳೆಯರು ಆಕ್ರೋಶಿತರಾಗಿ ನಮಗೆ ರಸ್ತೆಯಲ್ಲಿ ನಡೆಯುವಂತಿಲ್ಲ. ಹೆಣ್ಣು ಮಕ್ಕಳ ಮುಂದೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಮನೆ ಮುಂದೆ ಮದ್ಯದ ಬಾಟಲಿಗಳನ್ನು ಬಿಸಾಡುತ್ತಾರೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಸಭೆಯಲ್ಲಿ ತೋಡಿಕೊಂಡರು .
ಪಂಚಾಯತ್ ಮದ್ಯದಂಗಡಿಗೆ ಪರವಾನಿಗೆ ನೀಡಿಲ್ಲ
ಪಂಚಾಯತ್ ಅಭಿವೃದ್ಧಿ ಅ ಧಿಕಾರಿ ರಮೇಶ್ ಹಾಗೂ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ ಉತ್ತರಿಸಿ, ಪಂಚಾಯತ್‌ನಿಂದ ಮದ್ಯದಂಗಡಿಗೆ ಪರವಾನಿಗೆ ನೀಡಿಲ್ಲ, ಪಂಚಾಯತ್‌ನಿಂದ ನೀಡಿದ ಎಲ್ಲ ಪರವಾನಿಗೆಗಳನ್ನು ರದ್ದುಗೊಳಿಸಿ ಅಂಗಡಿಯನ್ನು ತೆರವುಗೊಳಿಸುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಥಳಕ್ಕೆ ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು
ಜನರ ಆಕ್ರೋಶಕ್ಕೆ ಮಣಿದು ಕಾರ್ಕಳ ಗ್ರಾಮಾಂ ತರ ಠಾಣೆಯ ಅಧಿಕಾರಿ ಪುರುಷೋತ್ತಮ, ನಗರ ಠಾಣಾಧಿಕಾರಿ ರವಿ, ಅಬಕಾರಿ ಆಧಿಕಾರಿ ಸುಧೀರ್ ಕುಮಾರ್ ಸ್ಥಳಕ್ಕಾಗಮಿಸಿ, ಪಂಚಾಯತ್ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಅರದಾಳು ವಾರ್ಡ್‌ನ ಸದಸ್ಯ ರಘುವೀರ ಶೆಣೈ ಮತ್ತಿತರರಿದ್ದು ಮದ್ಯದಂಗಡಿ ಮಾಲಕ ವಾದಿರಾಜ ಶೆಟ್ಟರನ್ನೂ ಕರೆಯಿಸಿ ಮನವೊಲಿಸಿದರು.
ಶೀಘ್ರ ಸ್ಥಳಾಂತರದ ಭರವಸೆ
ಜನರ ತೊಂದರೆಗಳ ಬಗ್ಗೆ ಮನವರಿಕೆಯಾದ ಬಳಿಕ ಮದ್ಯದಂಗಡಿ ಮಾಲಕ ವಾದಿರಾಜ ಶೆಟ್ಟಿಯವರು ಈ ಹಿಂದೆಯೇ 3 ತಿಂಗಳ ಅವಧಿಗೆ ಈ ಮದ್ಯದಂಗಡಿಯನ್ನು ಪ್ರಾರಂಭಿಸಿದ್ದು ಈಗಾಗಲೇ ಬೇರೆ ಕಡೆ ಸ್ಥಳ ನೋಡಲಾಗಿದೆ. ಪಂಚಾಯತ್‌ನ ಸಹಕಾರದಲ್ಲಿ ಮುಂದೆ ಆ ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಿದರು.
ಈ ಎಲ್ಲ ವಿದ್ಯಮಾನಗಳ ಬಳಿಕ ಅರದಾಳು ಗ್ರಾಮಸ್ಥರು, ಜನಪ್ರತಿನಿಧಿಗಳು ತೆರಳಿದರು. ಒಟ್ಟಾರೆಯಾಗಿ ಮದ್ಯದಂಗಡಿ ವಿವಾದ ಇಡೀ ದಿನದ ಗ್ರಾಮ ಸಭೆಯನ್ನು ನುಂಗಿತ್ತು.
ಉಳಿದಂತೆ ಚರ್ಚಿತ ವಿಷಯಗಳು
ಎಂದಿನಂತೆ ವಿವಿಧ ಇಲಾಖೆಗಳ ಮಾಹಿತಿಗಳನ್ನು ನೀಡಲಾಗಿ ಸಂಕಲಕರಿಯ ಪ್ರಗತಿಪರ ಕೃಷಿಕ ಭಾಸ್ಕರ ಶೆಟ್ಟಿ ಅವರು ತನ್ನ ಮನೆ ಪಕ್ಕದಲ್ಲಿ ವಿದ್ಯುತ್‌ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು, ತುಂಡಾಗಿ ಬಿದ್ದರೆ ಪ್ರಾಣಕ್ಕೆ ಅಪಾಯವಿದೆ ಎಂದು ಮೆಸ್ಕಾಂ ಅಧಿ ಕಾರಿಗಳಲ್ಲಿ ದೂರಿದಾಗ ಸ್ಪಂದಿಸಿದ ಬೆಳ್ಮಣ್ ವಲಯದ ಎಸ್‌ಒ ಪ್ರದೀಪ್ ಅವರು ಅದನ್ನು ಸರಿಪಡಿಸುವ ಭರವಸೆ ನೀಡಿದರು.
ಸತ್ಯೇಂದ್ರ ಸಾಲ್ಯಾನ್ ನೋಡೆಲ್ ಅಧಿಕಾರಿಯಾಗಿದ್ದು, ಪಶು ಇಲಾಖೆಯ ನರಸಿಂಹ, ಆರೋಗ್ಯ ಇಲಾಖೆಯ ನಿರ್ಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೌಭಾಗ್ಯಾ, ತೋಟಗಾರಿಕೆಯ ಆನಂದ್, ಗ್ರಾಮಕರಣಿಕ ಸುಕೇಶ್, ಸಚ್ಚೇರಿಪೇಟೆ ಕೆನರಾ ಬ್ಯಾಂಕ್‌ನ ಪ್ರಬಂಧಕಿ ಮೀನಾ ನಾಯಕ್ ಮಾಹಿತಿ ನೀಡಿದರು. ಜೋಸೆಫ್, ಅವಿಲ್ ಡಿ’ಸೋಜಾ, ನಿತ್ಯಾನಂದ ಪೂಂಜಾ, ಪ್ರಭಾಕರ ಶೆಟ್ಟಿ, ಉದಯ ಪೂಜಾರಿ ಗ್ರಾಮಸ್ಥರ ಪರವಾಗಿ ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.