ಮಡಿವಾಳಕಟ್ಟೆ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ
Team Udayavani, Mar 17, 2018, 8:15 AM IST
ಅಜೆಕಾರು: ಕೆರ್ವಾಶೆ ಗ್ರಾ. ಪಂ. ವ್ಯಾಪ್ತಿಯ ಮಡಿವಾಳ ಕಟ್ಟೆ ಕೆರೆ ಹೂಳಿನಿಂದ ತುಂಬಿದ್ದು ಇದನ್ನು ಅಭಿವೃದ್ಧಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.ಕೆರ್ವಾಶೆ ಗ್ರಾ.ಪಂ.ನ ಈ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಕೆರ್ವಾಶೆ ಸಾಗರ್ ಸಭಾಭವನದಲ್ಲಿ ಮಾ.15ರಂದು ನಡೆಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಂ. ಅಭಿವೃದ್ಧಿ ಅಧಿಕಾರಿಯವರು ಕೆರೆ ಹೂಳೆತ್ತಲು ಸಾಕಷ್ಟು ಅನುದಾನ ಪಂ.ನಲ್ಲಿ ಲಭ್ಯವಿಲ್ಲ. ಈ ಬಗ್ಗೆ ತಾ.ಪಂ., ಜಿ.ಪಂ. ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಈ ಕೆರೆಯ ದಾಖಲೆ ಪರಿಶೀಲಿಸಿ ಕೆರೆ ಒತ್ತುವರಿಯಾಗಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೋಲಾರ್ ಕಳವು ಪ್ರಸ್ತಾವ
ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿ ಸಿರುವ ಲಕ್ಷಾಂತರ ರೂ. ಮೌಲ್ಯದ ಸೋಲಾರ್ ಬ್ಯಾಟರಿ ಕಳವಾಗಿರುವುದನ್ನು ಗ್ರಾಮಸ್ಥರು ಸಭೆಯಲ್ಲಿ ಪ್ರಸ್ತಾವಿಸಿ ಕಳ್ಳರ ಮಾಹಿತಿ ಲಭಿಸಿದೆಯೇ ಎಂದು ಪೊಲೀಸ್ ಇಲಾಖೆಯಲ್ಲಿ ಕೇಳಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಓರ್ವ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಜೆಕಾರು ಎಎಸ್‌ಐ ಗ್ರಾಮಸ್ಥರಿಗೆ ತಿಳಿಸಿದರು.
ತಾ. ಪಂ. ಸದಸ್ಯೆ ಸೌಭಾಗ್ಯ ಮಡಿವಾಳ ಕೇಂದ್ರ ಸರಕಾರದ ದೀನ್ ದಯಾಳ್ ಯೋಜನೆಯಡಿ ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲಾಗುವುದು ಎಂದರು.
ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಿದ್ದಪ್ಪ ಭಾಗವಹಿಸಿದ್ದರು. ಉಪಾಧ್ಯಕ್ಷೆ ಸುಶೀಲಾ, ಪಂಚಾಯತ್ ಸದಸ್ಯರಾದ ಧರ್ಮರಾಜ್ ಹೆಗ್ಡೆ, ಸದಾನಂದ ಸಾಲಿಯಾನ್, ಸುನಿಲ್ ಶೆಟ್ಟಿ, ನೋದಾ ಪೂಜಾರಿ, ಭೋಜ ಪೂಜಾರಿ, ಚಂದ್ರಾವತಿ ಉಪಸ್ಥಿತರಿದ್ದರು. ಪಂ.ಅ.ಅಧಿಕಾರಿ ನಿರ್ಮಲಾ ವರದಿ ಮಂಡಿಸಿದರು. ಆರೋಗ್ಯ, ಶಿಕ್ಷಣ, ಅರಣ್ಯ, ಪೊಲೀಸ್, ಪಶು ಸಂಗೋಪನೆ, ಆಯುಷ್, ಕೃಷಿ ಇಲಾಖಾಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು. ಸದಾನಂದ ಸಾಲಿಯಾನ್ ಸ್ವಾಗತಿಸಿ, ನಿರ್ಮಲಾ ವಂದಿಸಿದರು.
ಗ್ರಾಮಸ್ಥರಾದ ರಾಮ ಸೇರ್ವೆಗಾರ್, ಪ್ರಭಾಕರ್ ನಾಯ್ಕ, ದಾಮ್ಲೆà ಭಟ್, ರಾಧಾಕೃಷ್ಣ ಪಟವರ್ಧನ, ಪ್ರಶಾಂತ್ ಡಿ’ಸೋಜಾ ಮಾತನಾಡಿದರು.
ಜನವಸತಿ ಪ್ರದೇಶದಲ್ಲಿ ಹಂದಿ ಸಾಕಣೆಗೆ ಆಕ್ಷೇಪ
ಜನವಸತಿ ಪ್ರದೇಶದಲ್ಲಿ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯದ ಜತೆಗೆ ಸ್ಥಳೀಯರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಹಂದಿ ಸಾಕಣೆಗೆ ಪಂಚಾಯತ್ ಅನುಮತಿ ಇದೆಯೇ ಎಂದು ರಾಮ ಸೇರ್ವೆಗಾರ್ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂ. ಆಡಳಿತ ಹಂದಿ ಸಾಕಾಣಿಕೆಗೆ ಯಾವುದೇ ಪರವಾನಿಗೆ ಯಾರಿಗೂ ನೀಡಿಲ್ಲ. ಜನವಸತಿ ಪ್ರದೇಶದಲ್ಲಿ ಹಂದಿ ಸಾಕಾಣಿಕೆಗೆ ನಿರ್ಬಂಧವು ಇದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಸ್ಥಳೀಯರು ಸಹಕರಿಸಿ
ಮಡಿವಾಳಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸಲು ಉದ್ಯೋಗಖಾತರಿ ಯೋಜನೆ ಯಡಿ ಅವಕಾಶವಿದೆ. ಆದರೆ ಈ ಯೋಜನೆಯಡಿ ಯಾವುದೇ ಯಂತ್ರ ಬಳಸಿ ಕೆಲಸ ಮಾಡು ವಂತಿಲ್ಲ. ಸ್ಥಳೀಯರು ಹೆಚ್ಚಿನ ಮುತುವರ್ಜಿ ವಹಿಸಿ ಕೆರೆ ಅಭಿವೃದ್ಧಿಪಡಿಸಲು ಸಹಕರಿಸಬೇಕು.
– ನಿರ್ಮಲಾ, ಪಿಡಿಒ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.