ಕಣಜಾರು ರಾಜೀವ ನಗರದಲ್ಲಿ ನೀರೇ ಇಲ್ಲ, ಕಣ್ಣೀರೆ ಎಲ್ಲ !
ದಿನಕ್ಕೆರಡು ಕೊಡ ನೀರು ಮಾತ್ರ; ಟ್ಯಾಂಕರ್ ನೀರು ಪೂರೈಕೆ ಇಲ್ಲ ; ವಾರದಲ್ಲಿ 2 ದಿನಗಳಾದರೂ ನೀರು ಕೊಡಿ: ಮನವಿ
Team Udayavani, May 3, 2019, 6:00 AM IST
ಕುಡಿಯುವ ನೀರಿಗಾಗಿ ಕಿಲೋಮೀಟರ್ ದೂರ ನಡೆದುಕೊಂಡು ಹೋಗುತ್ತಿರುವ ನಾಟ್ಲ ನಿವಾಸಿಗಳು.
ಇದ್ದ ಬಾವಿ ಕುಸಿದು ಹೋಗಿದೆ, ಹೊಸ ಬಾವಿ ಕಾಮಗಾರಿ ಕುಂಟುತ್ತಿದೆ. ಇದರ ಮಧ್ಯೆ ಬಿರುಬೇಸಗೆಯಲ್ಲಿ ನೀರಿನ ಅಭಾವದಿಂದ ಜನ ಕಂಗಾಲಾಗಿದ್ದಾರೆ. ನೀರೆ ಗ್ರಾ.ಪಂ. ಹಲವೆಡೆ ಈ ದೃಶ್ಯ ಕಂಡುಬಂದಿದ್ದು, ಪರಿಹಾರ ಕಾಣದೆ ಜನ ದಿಕ್ಕೇ ತೋಚದಾಗಿದ್ದಾರೆ.
ಅಜೆಕಾರು: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟ್ಲ, ರಾಜೀವ ನಗರ, ಮಿಷನ್ ಕಂಪೌಂಡ್ ಪರಿಸರದಲ್ಲಿ ನೀರಿನ ಅಭಾವ ಸಂಪೂರ್ಣ ಬಿಗಡಾಯಿಸಿದ್ದು ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಒದಗಿದೆ.
ಈ ಪಂಚಾಯತ್ ವ್ಯಾಪ್ತಿಯ ಕಣಜಾರು ರಾಜೀವ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿರುವ ಸಾರ್ವಜನಿಕ ಬಾವಿ ಬರಿದಾಗಿದ್ದು ಸುಮಾರು 20 ಮನೆಗಳವರಿಗೆ ನೀರಿಲ್ಲ.
ಕಳೆದ ಕೆಲ ದಿನಗಳ ಹಿಂದೆ ರಾಜೀವ ನಗರದಲ್ಲಿ ಸುಮಾರು 2000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅನ್ನು ಪಂಚಾಯತ್ ಇರಿಸಿದೆ. ಆದರೆ ವಾರಕ್ಕೊಮ್ಮೆಯೂ ನೀರು ಬಾರದೆ ಇರುವುದರಿಂದ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೆಸರು ನೀರು
ಕುಡಿಯುವ ನೀರಿಗಾಗಿ ರಾತ್ರಿ ಇಡೀ ಎಚ್ಚರವಿದ್ದು ಸಾರ್ವಜನಿಕ ಬಾವಿಯ ತಳಭಾಗದಲ್ಲಿರುವ ಕೆಸರು ನೀರನ್ನೇ ಸಂಗ್ರಹಿಸುವ ಪರಿಸ್ಥಿತಿ ರಾಜೀವ ನಗರ ನಾಗರಿಕರದ್ದಾಗಿದೆ. ಹನಿ ನೀರಿಗೂ ತತ್ವಾರವಾಗಿರುವ ಈ ಪರಿಸರಕ್ಕೆ ಪಂಚಾಯತ್ ಆಡಳಿತ ಟ್ಯಾಂಕರ್ ಮೂಲಕವೂ ನೀರು ಕೊಡಲು ಮುಂದಾಗದಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ನೀರಿಲ್ಲದೆ ಇರುವುದರಿಂದ ಪರಿಸರದ ಜನತೆ ಮೂರು ನಾಲ್ಕು ದಿಗಳಿಗೊಮ್ಮೆ ಸ್ನಾನ, ಬಟ್ಟೆ ಒಗೆಯಬೇಕಾಗಿದೆ.
ವಾರದಲ್ಲಿ ಎರಡು
ದಿನಗಳಾದರೂ ನೀರು ಕೊಡಿ
ಪಂಚಾಯತ್‌ನವರು ಅಳವಡಿಸಿರುವ ಟ್ಯಾಂಕ್‌ಗೆ ವಾರಕ್ಕೆ ಕನಿಷ್ಠ 2 ದಿನವಾದರೂ ನೀರು ಪೂರೈಸಿದಲ್ಲಿ ಸ್ವಲ್ಪವಾದರೂ ಅನುಕೂಲ ವಾಗಬಹುದು ಎಂಬುದು ಸ್ಥಳೀಯ ಮಹಿಳೆ ವನಿತಾ ಅವರ ಅಭಿಪ್ರಾಯ.
8 ವರ್ಷದಿಂದ ನೀರಿಲ್ಲ
ಇದೇ ಪಂಚಾಯತ್‌ನ ನಾಟ್ಲ ಭಾಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿ ನಿವಾಸಿಗಳಿಗೆ ಕಳೆದ 8 ವರ್ಷಗಳಿಂದ ನೀರಿನ ಆಸರೆಯೇ ಇಲ್ಲ. 8 ವರ್ಷಗಳ ಹಿಂದೆ ಸಾರ್ವಜನಿಕ ಬಾವಿಯೂ ಕುಸಿದು ಹೋದ ಅನಂತರ ಇಲ್ಲಿನ ನಿವಾಸಿಗಳು ಸುಮಾರು 1 ಕಿ.ಮೀ. ದೂರದಿಂದ ಖಾಸಗಿ ವ್ಯಕ್ತಿಗಳ ಬಾವಿಯ ನೀರನ್ನೇ ಅವಲಂಬಿಸಿದ್ದಾರೆ. ಈ ಬೇಸಗೆಯಲ್ಲಿ ಆ ನೀರೂ ಇಲ್ಲವಾಗಿದೆ.
ಬಾವಿ ಅಂತರ್ಜಲ ಕುಸಿತ ಹಿನ್ನೆಲೆಯಲ್ಲಿ 2 ಕೊಡ ನೀರು ಸಿಗುತ್ತಿದೆ. ಅದನ್ನು ಕಾಲನಿ ನಿವಾಸಿಗಳು ಕುಡಿಯಲು ಮಾತ್ರ ಬಳಸುತ್ತಾರೆ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಸ್ನಾನ ಮಾಡಲು ನೀರಿಲ್ಲದಂತಾಗಿದ್ದು ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ.
ಕಾಮಗಾರಿ ನಿಧಾನ
ನಾಟ್ಲ ಭಾಗದಲ್ಲಿ ಬಾವಿ ಕುಸಿದ ಬಳಿಕ ಹೊಸ ಬಾವಿ ಮಂಜೂರಾಗಿ ಕಾಮಗಾರಿ ಕಳೆದ ಡಿಸೆಂಬರ್‌ನಲ್ಲಿ ಆರಂಭವಾದರೂ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಈ ಕಾಲನಿಯ ನಿವಾಸಿಗಳಿಗೆ ನೀರಿಗೆ ನಿತ್ಯ ಸಮಸ್ಯೆಯಾಗಿದೆ.
ದೂರದೃಷ್ಟಿತ್ವದ ಯೋಜನೆ ಅಗತ್ಯ
ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮೂಲ ಬಹಳಷ್ಟು ಕಡಿಮೆ ಇದ್ದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೂರದೃಷ್ಟಿಯುಳ್ಳ ಸಮಗ್ರ ಕುಡಿಯುವ ನೀರಿನ ಯೋಜನೆಗಳನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದಾಗಿದೆ.
ಜನರ ಬೇಡಿಕೆ
– ಬೇಸಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ
– ಪಂಚಾಯತ್ ವ್ಯಾಪ್ತಿಗೆ ಸಮಗ್ರ ನೀರು ಒದಗಿಸಲು ಸೂಕ್ತ ಯೋಜನೆ
– ನಳ್ಳಿ ನೀರಿನ ಸಮರ್ಪಕ ಪೂರೈಕೆ
– ಪಂಚಾಯತ್ ವ್ಯಾಪ್ತಿಯ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳ ದುರಸ್ತಿ
– ಇಂಗು ಗುಂಡಿ ನಿರ್ಮಾಣಕ್ಕೆ ಒತ್ತು
ಟ್ಯಾಂಕರ್ ನೀರು ಪೂರೈಕೆಗೆ ಚಿಂತನೆ
ಪಂಚಾಯತ್ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
-ಸದಾನಂದ ಪ್ರಭು,
ಅಧ್ಯಕ್ಷರು ನೀರೆ ಗ್ರಾ.ಪಂ.
ಸಮಸ್ಯೆ ನಿವಾರಣೆ
ನಾಟ್ಲ ಭಾಗದಲ್ಲಿ ಕಳೆದ 8 ವರ್ಷಗಳಿಂದ ನೀರಿನ ಸಮಸ್ಯೆ ಇದ್ದು ಇದರ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಿದ ಫಲವಾಗಿ ಈ ಬಾರಿ ತೆರೆದ ಬಾವಿ ಮಂಜೂರುಗೊಂಡಿದ್ದು ಕಾಮಗಾರಿ ನಡೆಯುತ್ತಿದೆ. ಮುಂದಿನ ವರ್ಷದಿಂದ ಈ ಭಾಗದ ಪ.ಜಾತಿ, ಪ.ಪಂಗಡ ಕಾಲನಿಯ ನಿವಾಸಿಗಳ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ.
-ಹೈದರಾಲಿ, ಸದಸ್ಯರು ನೀರೆ ಗ್ರಾ.ಪಂ.
ಕಣ್ಣೀರು ಮಾತ್ರ
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದ ಮುಖಂಡರು ಆಶ್ವಾಸನೆ ನೀಡಿ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರೂ ಈಗ ನೀರೇ ಇಲ್ಲದಂತಹ ಪರಿಸ್ಥಿತಿ ಬಂದಿದ್ದರೂ ಕೇಳುವವರೇ ಇಲ್ಲ. ಕುಡಿಯುವ ನೀರನ್ನಾದರೂ ಟ್ಯಾಂಕರ್ ಮೂಲಕ ಪೂರೈಕೆ ಮಾಡಿದರೆ ಆಡಳಿತ ವರ್ಗಕ್ಕೆ ಪುಣ್ಯ ಲಭಿಸುತ್ತಿತ್ತು. ನೀರಿಲ್ಲದೆ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಮ್ಮದಾಗಿದೆ.
-ಸರೋಜಿನಿ, ಸ್ಥಳೀಯ ಮಹಿಳೆ
ಉದಯವಾಣಿ ಆಗ್ರಹ
ಗ್ರಾ.ಪಂ. ವ್ಯಾಪ್ತಿಯ ಅಗತ್ಯವಿರುವೆಡೆ ಕೂಡಲೇ ಟ್ಯಾಂಕರ್ ನೀರು ಪೂರೈಸಬೇಕು. ನೀರಿನ ಕಾಮಗಾರಿಗಳನ್ನು ತುರ್ತು ಆದ್ಯತೆ ಮೇರೆಗೆ ಪೂರೈಸುವುದು. ಮುಂದೆ ಶಾಶ್ವತ ಕ್ರಮಗಳಿಗೆ ಮುಂದಾಗಬೇಕು.
ಮಾಹಿತಿ ನೀಡಿ
ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ವಾಟ್ಸಪ್ ನಂಬರ್ 9148594259 ಬರೆದು ಕಳುಹಿಸಿ.
-ಜಗದೀಶ್ ರಾವ್ ಅಂಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.