ಮೂವತ್ತು ಸಾವಿರಕ್ಕೂ ಮಿಕ್ಕಿ ಬೀಜದುಂಡೆ ಬಿತ್ತನೆ
Team Udayavani, Jun 19, 2019, 5:51 AM IST
ಮಲ್ಪೆ: ಪರಿಸರ ಮತ್ತು ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿಯ ಸಂವೇದನಾ ಫೌಂಡೇಶನ್ ಟ್ರಸ್ಟ್‌ನ ಸದಸ್ಯರು ಮಲ್ಪೆಯಿಂದ ಮಂತ್ರಾಲಯದವರೆಗೆ ಬರೋಬ್ಬರಿ 545 ಕಿ.ಮೀ ಪಾದಯಾತ್ರೆ ಮೂಲಕ ಕ್ರಮಿಸಿ 30ಸಾವಿರ ಬೀಜದುಂಡೆಯನ್ನು ಬಿತ್ತುವ ಸಂಕಲ್ಪದೊಂದಿಗೆ ಮಂತ್ರಾಲಯದಲ್ಲಿ ಗುರುರಾಯರ ದರ್ಶನವನ್ನು ಮಾಡಲಿದ್ದಾರೆ.
ಸಂವೇದನಾ ಫೌಂಡೇಶನ್ ಪ್ರಕಾಶ್ ಮಲ್ಪೆ ಮತ್ತವರ ಉತ್ಸಾಹಿ ಬಳಗ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಸಕಲ ತಯಾರಿಗಳು ನಡೆಯುತ್ತಿದೆ. ತಂಡವು ಜೂ. 22ರ ಮುಂಜಾನೆ 4-30ಕ್ಕೆ ಮಲ್ಪೆ ಕೊಡವೂರು ಶಂಕರನಾರಾಯಣ ದೇವಸ್ಥಾನದಿಂದ ಹೊರಡಲಿದ್ದು ಮುಂದಿನ 14 ದಿನಗಳೊಳಗೆ ಮಂತ್ರಾಲಯ ವನ್ನು ತಲುಪುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಮಲ್ಪೆಯಿಂದ 30 ಸಾವಿರ ಬೀಜದುಂಡೆ ಈಗಾಗಲೇ ಸಿದ್ದವಾಗಿದ್ದು, ಉಳಿದಂತೆ ಶಿವಮೊಗ್ಗ, ಸಿಂಧನೂರು, ಗಂಗಾವತಿ, ರಾಯಚೂರುನಲ್ಲಿ ಬೀಜ ದುಂಡೆಯ ತಯಾರಿ ನಡೆಯುತ್ತಿದ್ದು ಅಲ್ಲಿಂದಲೂ ಒಂದಷ್ಟು ಮಂದಿ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ.
45 ಕಿ.ಮೀ. ನಡಿಗೆ
ಪ್ರತಿದಿನ ಬೆಳಗ್ಗೆ 4-30ರಿಂದ 9-00, ಸಂಜೆ 4.30ರಿಂದ 9ಗಂಟೆಯವರೆಗೆ ಒಟ್ಟು 40-45 ಕಿ.ಮೀ ದೂರ ಕ್ರಮಿಸಲಿದೆ. ರಾತ್ರಿವೇಳೆ ದೇವಸ್ಥಾನ, ಛತ್ರ, ಸಾರ್ವಜನಿಕ ಸ್ಥಳ, ಶಾಲಾ ಕಾಲೇಜುಗಳಲ್ಲಿ ತಂಗುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ. ಶಾಲಾ ಕಾಲೇಜು ಗಳಲ್ಲಿ ಪರಿಸರ ಜಾಗೃತಿ ಮತ್ತು ರಾಷ್ಟ್ರಪ್ರೇಮದ ಬಗ್ಗೆ ಉಪನ್ಯಾಸವನ್ನು ನಡೆಸಲಾಗುತ್ತದೆ ಎಂದು ಸಂವೇದನಾ ಫೌಂಡೇಶನ್ ಟ್ರಸ್ಟ್‌ನ ಪ್ರಕಾಶ್ ಮಲ್ಪೆ ಹೇಳುತ್ತಾರೆ. ಪಾದಯಾತ್ರೆಯ ಮಾರ್ಗ
ಕೊಡವೂರು ದೇಗುಲದಿಂದ ಆರಂಭವಾಗಿ ಕುಕ್ಕೆಹಳ್ಳಿ, ಪೆರ್ಡೂರು, ಹೆಬ್ರಿ, ಆಗುಂಬೆ, ತೀರ್ಥಹಳ್ಳಿ, ಶಿವಮೊಗ್ಗ, ಹೊನ್ನಾಳಿ, ಹರಿಹರ, ಹೊಸಪೇಟೆ, ಗಂಗಾವತಿ, ಮಾನ್ವಿ, ನೀರಮಾನ್ವಿ, ಬಿಚ್ಚಾಳೆ ಮೂಲಕ ಮಂತ್ರಾಲಯನ್ನು ತಲುಪಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಲಿದ್ದಾರೆ.
10 ಜಾತಿಯ ಬೀಜದುಂಡೆ
ತಂಡವು 30 ಸಾವಿರ ಬೀಜದುಂಡೆ ಯೊಂದಿಗೆ ಪಾದಯಾತ್ರೆ ತೆರಳಲಿದೆ. ಅಶ್ವಥ, ಆಲ, ಶ್ರೀಗಂಧ, ಹೊಂಗೆ, ಹುಣಸೆ, ರೈನ್‌ಟ್ರಿ, ಕಹಿಬೇವು ಸೇರಿದಂತೆ 10 ಜಾತಿಯ ಮರಗಳ ಬೀಜದ ಉಂಡೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಜಾಗದಲ್ಲಿ ಬೀಜದುಂಡೆಯನ್ನು ಇಡುತ್ತಾ ಮುಂದೆ ಸಾಗಲಿದೆ. ಪಾದಯಾತ್ರೆ ಮಾಡುವ ತಂಡದ ಸದಸ್ಯರ ಕೈಯಲ್ಲಿ ಚೂಪಾದ ದಂಡವಿದ್ದು, ಅದೇ ದಂಡದಲ್ಲಿ ಮಣ್ಣನ್ನು ಒಂದೂವರೆ ಇಂಚು ಹೊಂಡ ತೆಗೆದು ಬೀಜದುಂಡೆ ನೆಟ್ಟು ಮುಂದೆ ಸಾಗಲಿದೆ.
ರಾಷ್ಟ್ರೀಯತೆ, ಪ್ರಕೃತಿ ಬೆಳೆಸುವ ಚಿಂತನೆ
ಪಾದಯಾತ್ರೆ ನಡೆಸಿ ಶ್ರೀ ಗುರು ರಾಯರ ದರ್ಶನ ಮಾಡುವ ಆಶಯವನ್ನು ಹೊಂದಿದ್ದು ಇದೀಗ ಈ ಕೆಲಸಕ್ಕೆ ಮುಂದಾಗಿದ್ದೇವೆ. ನಮ್ಮ ಪಾದಯಾತ್ರೆ ಪರಿಸರ ಮತ್ತು ಧಾರ್ಮಿಕ ಜಾಗೃತಿಯ ಸಂದೇಶವಾಗಿದೆ. ನಮ್ಮ ಟ್ರಸ್ಟ್‌ನ ಸದಸ್ಯರಲ್ಲದೆ ಇತರರೂ ನಮ್ಮೊಂದಿಗೆ ಹೆಜ್ಜೆ ಹಾಕಲು ಆಸಕ್ತಿ ತೋರುತ್ತಿದ್ದಾರೆ. ಅಗತ್ಯ ಪರಿಕರಗಳನ್ನು ಹೊತ್ತೂಯ್ಯಲು ವಾಹನ ಒಂದು ನಮ್ಮೊಂದಿಗೆ ಹಿಂಬಾಲಿಸಿಕೊಂಡು ಬರಲಿದೆ ಎಂದು ಮಲ್ಪೆ ಸಂವೇದನಾ ಫೌಂಡೇಶನ್‌ನ ಪ್ರಕಾಶ್ ಮಲ್ಪೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.