ಹೆಚ್ಚು ಬಾರಿ ಗೆದ್ದ ಕಾಂಗ್ರೆಸ್ಸೇ ಈ ಬಾರಿ ಕಣದಲ್ಲಿಲ್ಲ
Team Udayavani, Mar 23, 2019, 12:30 AM IST
ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರದಿಂದ ಇದುವರೆಗೆ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಪಕ್ಷ ಕಾಂಗ್ರೆಸ್. ಈ ವರೆಗೆ ಒಟ್ಟು 12 ಬಾರಿ ಜಯ ಗಳಿಸಿದೆ.
ಚಿಕ್ಕಮಗಳೂರಿನಿಂದಲೂ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ್ದು ಇದೇ. ಈ ವರೆಗೆ 10 ಬಾರಿ ಜಯ ಗಳಿಸಿದೆ. ಎರಡು ಉಪಚುನಾವಣೆಗಳಲ್ಲಿ ಗೆದ್ದವರೂ ಕಾಂಗ್ರೆಸ್‌ನವರು; ಒಬ್ಬರು ಇಂದಿರಾ ಗಾಂಧಿ, ಇನ್ನೊಬ್ಬರು ಕೆ. ಜಯಪ್ರಕಾಶ್ ಹೆಗ್ಡೆ. ಆದರೆ ಇದೇ ಮೊದಲ ಬಾರಿ ಕಾಂಗ್ರೆಸ್ ಸ್ಪರ್ಧಿಸದ ಚುನಾವಣೆ ನಡೆಯುತ್ತಿದೆ.
ಉಡುಪಿಯಲ್ಲಿ ಕಾಂಗ್ರೆಸ್ ಬಿಟ್ಟರೆ ಬಿಜೆಪಿ ನಾಲ್ಕು, ಸ್ವತಂತ್ರ ಪಾರ್ಟಿ ಒಂದು ಬಾರಿ ಗೆದ್ದಿದೆ. ಅತಿ ಹೆಚ್ಚು ಬಾರಿ ಆಯ್ಕೆಯಾದವರು ಆಸ್ಕರ್ ಫೆರ್ನಾಂಡಿಸ್ (5). ಅನಂತರದ ಸ್ಥಾನದಲ್ಲಿ ಯು. ಶ್ರೀನಿವಾಸ ಮಲ್ಯ (3) ಬರುತ್ತಾರೆ. ಮಿಕ್ಕುಳಿದಂತೆ ಜೆ.ಎಂ. ಲೋಬೋ ಪ್ರಭು (ಸ್ವತಂತ್ರ ಪಾರ್ಟಿ), ರಂಗನಾಥ ಶೆಣೈ (ಕಾಂಗ್ರೆಸ್), ಟಿ.ಎ. ಪೈ (ಕಾಂಗ್ರೆಸ್), ಜಯರಾಮ ಶೆಟ್ಟಿ (ಬಿಜೆಪಿ), ವಿನಯಕುಮಾರ ಸೊರಕೆ (ಕಾಂಗ್ರೆಸ್), ಮನೋರಮಾ ಮಧ್ವರಾಜ್ (ಬಿಜೆಪಿ), ಡಿ.ವಿ. ಸದಾನಂದ ಗೌಡ (ಬಿಜೆಪಿ), ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), ಶೋಭಾ ಕರಂದ್ಲಾಜೆ (ಬಿಜೆಪಿ) ಒಂದೊಂದು ಬಾರಿ ಗೆಲುವು ಸಾಧಿಸಿದ್ದಾರೆ.
ಉಡುಪಿ ಕ್ಷೇತ್ರದ (1951) ಆರಂಭಿಕ ಹೆಸರು ಸೌತ್ ಕೆನರಾ (ನಾರ್ತ್). ಆಗ ಮದ್ರಾಸ್ ಪ್ರಾಂತದ ವ್ಯಾಪ್ತಿಯಲ್ಲಿತ್ತು. ಆಗಿನ ಪ್ರಥಮ ಸಂಸದರು ಯು. ಶ್ರೀನಿವಾಸ ಮಲ್ಯ. ಕ್ಷೇತ್ರದ ಹೆಸರು ಮೈಸೂರು ರಾಜ್ಯದ ಜತೆ ಸೇರಿ 1957ರಲ್ಲಿ ಉಡುಪಿ ಎಂದು ಬದಲಾಯಿತು. 2009ರ ಬಳಿಕ ಉಡುಪಿ-ಚಿಕ್ಕಮಗಳೂರು ಕ್ಷೇತ್ರವಾಯಿತು.
1951ರಿಂದ 1967ರ ವರೆಗೆ ಚಿಕ್ಕಮಗಳೂರು ಕ್ಷೇತ್ರದ ಭಾಗಗಳು ಹಾಸನ ಲೋಕಸಭಾ ಕ್ಷೇತ್ರದೊಂದಿಗೆ ಇದ್ದವು. ಆಗಿನ ಕ್ಷೇತ್ರದ ಹೆಸರು ಹಾಸನ-ಚಿಕ್ಕಮಗಳೂರು. ಇಲ್ಲಿನ ಪ್ರಥಮ ಲೋಕಸಭಾ ಸದಸ್ಯ ಕಾಂಗ್ರೆಸ್‌ನ ಎಚ್. ಸಿದ್ದನಂಜಪ್ಪ. ಅವರು 1957ರಲ್ಲಿ ಅವಿರೋಧವಾಗಿ ಆಯ್ಕೆಯಾದರೆ, 1962ರಲ್ಲಿ ಚುನಾಯಿತರಾದರು. ಇವರು ಒಟ್ಟು 3 ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. 1967ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಪ್ರತ್ಯೇಕವಾದಾಗ ಪ್ರಥಮ ಸದಸ್ಯರಾದವರು ಪಿಎಸ್‌ಪಿಯ ಎಂ. ಹುಚ್ಚೇಗೌಡರು; ಕೊನೆಯ ಸಂಸದರು ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ.
ಚಿಕ್ಕಮಗಳೂರಿನಿಂದ (ಹಾಸನ-ಚಿಕ್ಕಮಗಳೂರು ಸೇರಿ) ಕಾಂಗ್ರೆಸ್ 10, ಬಿಜೆಪಿ ಐದು, ಜನತಾದಳ, ಪಿಎಸ್‌ಪಿ ತಲಾ ಒಮ್ಮೆ ಗೆದ್ದಿವೆ. ಹಾಸನ ಚಿಕ್ಕಮಗಳೂರುಕ್ಷೇತ್ರವಿರುವಾಗ ಕಾಂಗ್ರೆಸ್‌ನಿಂದ ಸಿದ್ಧನಂಜಪ್ಪ 3, ಚಿಕ್ಕಮಗಳೂರು ಪ್ರತ್ಯೇಕ ಕ್ಷೇತ್ರವಾದ ಬಳಿಕ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಬಿಜೆಪಿಯಿಂದ 3 ಬಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಡಿ.ಬಿ. ಚಂದ್ರೇಗೌಡ, ಡಿ.ಎಂ. ಪುಟ್ಟೇಗೌಡ, ಡಿ.ಕೆ. ತಾರಾದೇವಿ ತಲಾ 2 ಬಾರಿ, ಬಿ.ಎಲ್. ಶಂಕರ್ ಜನತಾ ದಳದಿಂದ, ಎಂ. ಹುಚ್ಚೇಗೌಡ ಪಿಎಸ್‌ಪಿಯಿಂದ, ಕ್ಷೇತ್ರ ಪುನರ್ವಿಂಗಡನೆ ಅನಂತರ ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ, ಕಾಂಗ್ರೆಸ್‌ನಿಂದ ಕೆ. ಜಯಪ್ರಕಾಶ್ ಹೆಗ್ಡೆ ತಲಾ ಒಮ್ಮೆ ಆಯ್ಕೆಯಾಗಿದ್ದಾರೆ.
ಪಕ್ಷೇತರರಿಗಿಲ್ಲ ಇಲ್ಲಿ ಮಣೆ
ಈ ಕ್ಷೇತ್ರದಲ್ಲಿ ಪ್ರಥಮ ಬಾರಿ ಚುನಾಯಿತರಾದವರು ಪಿಎಸ್‌ಪಿಯ ಹುಚ್ಚೇಗೌಡರಾದ ಕಾರಣ ಆಗ ಕಾಂಗ್ರೆಸ್‌ಗೆ ಪಿಎಸ್‌ಪಿಯೇ ಪ್ರಬಲ ಅಭ್ಯರ್ಥಿ ಎಂದು ತಿಳಿದುಬರುತ್ತದೆ. ಉಡುಪಿಯಲ್ಲಿಯೂ ಕೆಎಂಪಿಪಿ (ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ), ಎಸ್‌ಪಿ, ಪಿಎಸ್‌ಪಿ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿತ್ತು. ಅನಂತರ ಕಾಂಗ್ರೆಸ್‌ಗೆ ಜನತಾ ಪಾರ್ಟಿ, ಜನತಾದಳ ಎದುರಾಳಿಯಾದರೆ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಆ ಸ್ಥಾನವನ್ನು ತುಂಬಿದೆ. ಉಡುಪಿಯಲ್ಲಾಗಲೀ, ಚಿಕ್ಕಮಗಳೂರಿನಲ್ಲಾಗಲೀ ಪಕ್ಷೇತರರು ಒಮ್ಮೆಯೂ ಗೆಲುವು ಸಾಧಿಸಿಲ್ಲ, ಮಾತ್ರವಲ್ಲ ಗಣನೀಯ ಮತಗಳನ್ನೂ ಪಡೆದಿಲ್ಲ.
ಅತಿ ಕಡಿಮೆ, ಅತಿ ಹೆಚ್ಚು ಅಂತರದ ಜಯ
1996ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್ ಅತಿ ಕಡಿಮೆ ಮತಗಳಿಂದ ಚುನಾಯಿತರಾಗಿದ್ದರು. ಅವರು 2,35,932 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ 2,33,478 ಮತ ಗಳಿಸಿದ್ದರು. ಆಗಿನ ಗೆಲುವಿನ ಅಂತರ 2,454. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆಗೆ 5,81,168 ಮತ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಗೆ 3,99,525 ಮತ, ಜೆಡಿಎಸ್‌ನ ವಿ. ಧನಂಜಯಕುಮಾರ್‌ಗೆ 14,895 ಮತ, ಸಿಪಿಐಯ ವಿಜಯ ಕುಮಾರ್‌ಗೆ 9,691 ಮತ, ಬಿಎಸ್‌ಪಿಯ ಜಾಕಿರ್ ಹುಸೇನ್‌ಗೆ 7,449 ಮತ, ಆಪ್‌ನ ಗುರುದೇವ್‌ಗೆ 6,049 ಮತಗಳು ದೊರಕಿದ್ದವು. ಆಗಿನ ಅಂತರ 1,81,643. ಇದು ಇತಿಹಾಸದಲ್ಲಿ ಅತಿ ಹೆಚ್ಚು ಅಂತರದ ಗೆಲುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.