ಮೂರು ತಿಂಗಳಿಗೊಮ್ಮೆ ವೇತನ: ಅಸಹಾಯಕತೆಯಲ್ಲಿ ಗ್ರಾಮ ಸಹಾಯಕರು
Team Udayavani, Jul 4, 2019, 9:52 AM IST
ಸಾಂದರ್ಭಿಕ ಚಿತ್ರ
ಕಾರ್ಕಳ: ಗ್ರಾಮದ ಸಮಗ್ರ ಮಾಹಿತಿ ಹೊಂದಿರುವವರು ಗ್ರಾಮ ಸಹಾಯಕರು. ಸರಕಾರದ ಯಾವುದೇ ಯೋಜನೆಗಳಿಗೆ ಗ್ರಾಮೀಣ ಜನರು ಮೊದಲು ಸಂಪರ್ಕಿಸುವುದು ಅವರನ್ನೇ. ಹೀಗಿರುವ ಗ್ರಾಮ ಸಹಾಯಕರಿಗೆ ಇರುವುದು ಅಲ್ಪ ವೇತನ; ಕೆಲವು ಸಮಯದಿಂದೀಚೆಗೆ ಅದೂ ಸಕಾಲದಲ್ಲಿ ಪಾವತಿಯಾಗದೆ ಗ್ರಾಮಸಹಾಯಕರೀಗ ಅಸಹಾಯಕರಾಗಿದ್ದಾರೆ!
ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ಕೂ ಗ್ರಾಮಸ್ಥರು ಮೊದಲು ಭೇಟಿಯಾಗುವುದು ತಮ್ಮೂರ ಗ್ರಾಮ ಸಹಾಯಕರನ್ನು. ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ಮನಸ್ವಿನಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗೂ ಅವರನ್ನೇ ಸಂಪರ್ಕಿಸಲಾಗುತ್ತದೆ. ಆದರೆ ಅವರ ಅಲ್ಪ ವೇತನ ಪಾವತಿಯಾಗುತ್ತಿರುವುದು ಮೂರು ತಿಂಗಳಿಗೊಮ್ಮೆ. ಕೆಲವೊಮ್ಮೆ ಮೂರು ತಿಂಗಳು ಕಳೆದರೂ ದೊರೆಯುತ್ತಿಲ್ಲ.
12 ಸಾವಿರ ರೂ. ಸಂಬಳ
ಗ್ರಾಮ ಸಹಾಯಕರಿಗೆ ವರ್ಷದ ಹಿಂದಿನ ತನಕ ಇದ್ದ ಸಂಬಳ 10 ಸಾವಿರ ರೂ. 2018ರ ಎಪ್ರಿಲ್‌ನಲ್ಲಿ 12 ಸಾವಿರ ರೂ.ಗೆ ಏರಿಸಲಾಯಿತು. ಗೌರವ ಧನವೆಂದು ಪಾವತಿಸಲಾಗುವ ಈ ಹಣದಲ್ಲಿ ಅವರ ಕುಟುಂಬ ನಿರ್ವಹಣೆ ದುಸ್ತರ. ಪ್ರಮೋದ್ ಮಧ್ವರಾಜ್ ಅವರು ಸಂಸದೀಯ ಕಾರ್ಯದರ್ಶಿಯಾಗಿದ್ದ ವೇಳೆ ಪ್ರತಿತಿಂಗಳು ವೇತನ ಪಾವತಿಯಾಗುತ್ತಿತ್ತು ಎಂದು ಗ್ರಾಮ ಸಹಾಯಕ ರೋರ್ವರು ಹೇಳುತ್ತಾರೆ.
ಮಳೆ ಹಾನಿ ಸಮೀಕ್ಷೆ
ಕಂದಾಯ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡುವುದರೊಂದಿಗೆ ಮಳೆ ಹಾನಿಯಂಥ ಪ್ರಕೃತಿ ವಿಕೋಪ ಸಂಭವಿಸಿದಾಗ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದು ಕೂಡ ಗ್ರಾಮ ಸಹಾಯಕರೇ. ಜನನ-ಮರಣದ ಮಾಹಿತಿ, ಚುನಾವಣೆ ವೇಳೆ ಕಾರ್ಯನಿರ್ವಹಣೆ, ಭೂ ಕಂದಾಯ ತೆರಿಗೆ ವಸೂಲಾತಿ, ತಾಲೂಕು ಕಚೇರಿಯ ಕೆಲಸ ಕಾರ್ಯಗಳ ನಿಭಾವಣೆಯೊಂದಿಗೆ ಇದೀಗ ಕೃಷಿ ಸಮ್ಮಾನ್ ನಿಧಿ ಅರ್ಜಿ ಸ್ವೀಕಾರವನ್ನು ಗ್ರಾಮ ಸಹಾಯಕರೇ ಮಾಡುತ್ತಿದ್ದಾರೆ. ಇದರೊಂದಿಗೆ ತಿಂಗಳಿಗೆ ಒಂದೆರಡು ಬಾರಿ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಯೂ ಅವರಿಗಿದೆ.
ಸೇವಾ ಭದ್ರತೆ ಇಲ್ಲ
ಸರಕಾರದ ಇನ್ನಿತರ ಇಲಾಖೆಗಳ ಸಿಬಂದಿ ವರ್ಗಕ್ಕೆ ಹಂತ ಹಂತವಾಗಿ ಸೇವಾ ಖಾಯಮಾತಿ ದೊರೆತರೂ ಗ್ರಾಮ ಸಹಾಯಕರನ್ನು ಖಾಯಂಗೊಳಿಸುವತ್ತ ಯಾವ ಸರಕಾರವೂ ಮನಮಾಡಿಲ್ಲ. ಇತರ ಇಲಾಖೆಗಳಲ್ಲಿ ಸಿಬಂದಿಯ ಅರ್ಹತೆ ಆಧಾರದಲ್ಲಿ ಮುಂಭಡ್ತಿ ನೀಡುವ ಪದ್ಧತಿ ಇದೆ. ಆದರೆ ಅದೆಷ್ಟೋ ದಶಕಗಳಿಂದ ಗ್ರಾಮ ಸಹಾಯಕರಾಗಿರುವವರು ಸರಕಾರದ ಯಾವೊಂದು ಸೌಲಭ್ಯವೂ ಇಲ್ಲದೆ ನಿವೃತ್ತರಾಗಬೇಕಾದ ದುಃಸ್ಥಿತಿಯಲ್ಲಿದ್ದಾರೆ. ತಮ್ಮ ಹುದ್ದೆ ಖಾಯಂಗೊಳಿಸುವಂತೆ ನೌಕರರು ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ದ.ಕ. ಜಿಲ್ಲೆಯಲ್ಲಿ 345 ಹಾಗೂ ಉಡುಪಿ ಜಿಲ್ಲೆಯಲ್ಲಿ 222 ಗ್ರಾಮ ಸಹಾಯಕರು ಇಂದಲ್ಲ ನಾಳೆಯಾದರೂ ತಮ್ಮ ಹುದ್ದೆ ಖಾಯಂಗೊಳ್ಳಲಿದೆ ಎನ್ನುವ ಆಶಾವಾದ ದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹುದ್ದೆ ಖಾಯಂ ಕುರಿತು ಈ ಬಾರಿಯ ಅಧಿವೇಶನದಲ್ಲಾದರೂ ಪ್ರಸ್ತಾವವಾಗಲಿದೆಯಾ ಎನ್ನುವ ಆಶಾವಾದ ಅವರದ್ದು.
ಸೇವಾ ಭದ್ರತೆ ಒದಗಿಸುವಂತೆ ಸರಕಾರಕ್ಕೆ ಅದೆಷ್ಟೋ ಬಾರಿ ಮನವಿ ಸಲ್ಲಿಸಲಾಗಿದೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದೇವೆ. ಆದಾಗ್ಯೂ ಯಾವುದೇ ಸರಕಾರ ಸ್ಪಂದಿಸಿಲ್ಲ. ಕಂದಾಯ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಮಾಡುವ ವೇಳೆಯೂ ನಮ್ಮನ್ನು ಪರಿ ಗಣಿಸದೇ ಇರುವುದು ಬೇಸರದ ಸಂಗತಿ.
–ಎಂ. ಕೃಷ್ಣಪ್ಪ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮ ಸಹಾಯಕರ ಸಂಘ, ದ.ಕ.
ನಮಗೆ ಸಿಗುವ ವೇತನವೇ ಅತ್ಯಲ್ಪ. ಅದನ್ನು ಕೂಡ ಮೂರು ತಿಂಗಳಿಗೊಮ್ಮೆ ಪಾವತಿ ಮಾಡಲಾಗುತ್ತಿದೆ. ಇದರಲ್ಲಿ ಮನೆ ಖರ್ಚು ಹೊಂದಿಸುವುದೇ ಕಷ್ಟಕರ. ನಮ್ಮ ಹುದ್ದೆಯನ್ನು ಖಾಯಂಗೊಳಿಸಿ, ಡಿ ಗ್ರೂಪ್ ನೌಕರರೆಂದು ಪರಿಗಣಿಸುವಂತೆ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ.
– ಮಾಧವ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮ ಸಹಾಯಕರ ಸಂಘ, ಉಡುಪಿ
ಗೌರವಧನದ ಮೇಲೆ ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಕಂದಾಯ ಕಚೇರಿಯಿಂದಲೇ ವೇತನ ಬಿಡುಗಡೆಯಾಗುವಾಗ ತಡವಾಗುತ್ತಿದೆ.
ಶಶಿಕಾಂತ್ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಸಹಾಯಕರ ವೇತನ ಪಾವತಿಯಲ್ಲಿ ವಿಳಂಬವಾಗಿದೆ. ಬೆಂಗಳೂರಿನ ಕಂದಾಯ ಕಚೇರಿಯಲ್ಲಿ ಈ ಕುರಿತು ವಿಚಾರಿಸುತ್ತೇನೆ.
ಹೆಪ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಜಿಲ್ಲಾಧಿಕಾರಿ
ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.