ಮಂಜೂರಾತಿ ನಿರೀಕ್ಷೆಯಲ್ಲಿ ಮೂರು ಪ್ರಸ್ತಾವನೆ
Team Udayavani, Mar 31, 2022, 12:03 PM IST
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಿರುವ ಪ್ರಮುಖ ಕಾಮಗಾರಿಗಳ ಪ್ರಸ್ತಾವನೆ ರಾಜ್ಯಕ್ಕೆ ಹೋಗಿ ತಿಂಗಳು ಕಳೆದರೂ ಮಂಜೂರಾತಿ ಸಿಕ್ಕಿಲ್ಲ.
ಉಡುಪಿ ತಾಲೂಕಿನ ನಿಟ್ಟೂರಿನಲ್ಲಿರುವ ಸರಕಾರಿ ಬಾಲಕಿಯರ ಬಾಲಮಂದಿರದ ಕಟ್ಟಡ 25 ವರ್ಷ ಹಳೆಯದು. ಅದನ್ನು ಕೆಡವಿ ಸುಸಜ್ಜಿತವಾದ ಮಕ್ಕಳ ಸ್ನೇಹಿ ಕಟ್ಟಡ ನಿರ್ಮಾಣಕ್ಕಾಗಿ 5 ಕೋ.ರೂ. ಅಂದಾಜು ಮೊತ್ತದಲ್ಲಿ ನೀಲನಕಾಶೆ ಸಿದ್ಧಪಡಿಸಿ ಅಂದಾಜುಪಟ್ಟಿ ಸಹಿತವಾದ ಪ್ರಸ್ತಾವನೆಯನ್ನು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ 2021ರ ಆಗಸ್ಟ್ 17ರಂದು ಸಲ್ಲಿಸಲಾಗಿತ್ತು. ಈವರೆಗೂ ನಿರ್ದೇಶನಾಲಯದಿಂದ ಈ ಸಂಬಂಧ ಮಂಜೂರಾತಿಯ ಪತ್ರ ವ್ಯವಹಾರ ನಡೆದಿಲ್ಲ.
ಕಾರ್ಕಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನ ಕಚೇರಿಯ (ಸಿ ಡಿ ಪಿ ಒ) ನೂತನ ಕಟ್ಟಡ ನಿರ್ಮಾಣಕ್ಕೆ 2 ಕೋ.ರೂ., ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ 1.35 ಕೋ.ರೂ.ಗಳ ಪ್ರಸ್ತಾವನೆಗಳನ್ನು ಪ್ರತ್ಯೇಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿದೆ. ಈ ಎರಡು ಪ್ರಸ್ತಾವನೆಗಳನ್ನು ಕ್ರಮವಾಗಿ 2021ರ ಡಿ. 21ರಂದು ಹಾಗೂ ನ. 20ರಂದು ಸಲ್ಲಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ ವಿಚಾರವಾಗಿ 8.35 ಕೋ.ರೂ. ಪ್ರಸ್ತಾವನೆ ಹೋಗಿದ್ದರೂ, ಈವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭ
ಜಿಲ್ಲಾ ಕೇಂದ್ರದಲ್ಲಿರುವ (ಬನ್ನಂಜೆ) ಬಾಲಭವನದ ಸಮಗ್ರ ಅಭಿವೃದ್ಧಿಗೆ 22 ಲ.ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 12 ಲ.ರೂ. ಈಗಾಗಲೇ ಬಿಡುಗಡೆಯಾಗಿದೆ. ಇದರ ಕಾಮಗಾರಿ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ. ಎಪ್ರಿಲ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಬಾಲಭವನದ ಪಕ್ಕದಲ್ಲಿರುವ ರಂಗಮಂದಿರದ ಎದುರಿನಲ್ಲಿ ಮಕ್ಕಳ ವಾಕಿಂಗ್ ಟ್ರ್ಯಾಕ್, ಆಟಿಕೆಗಳನ್ನು ಹೊಸದಾಗಿ ಹಾಕಲಾಗುತ್ತದೆ.
ಅಪೌಷ್ಟಿಕ ಮಕ್ಕಳು
ಜಿಲ್ಲೆಯಲ್ಲಿ 65,960 ಮಕ್ಕಳಿದ್ದಾರೆ. ಇವರಲ್ಲಿ 725 ಮಕ್ಕಳು ಅಪೌಷ್ಟಿಕತೆ, 65 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ. ಅವರಿಗೆ ಇಲಾಖೆಯಿಂದ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಅಪೌಷ್ಟಿಕತೆ ಹೊಂದಿದ ಮಕ್ಕಳನ್ನು ಗುರುತಿಸುವ ಕಾರ್ಯ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪವೂ ಇದೆ. ಜಿಲ್ಲೆಯಲ್ಲಿ 6 ತಿಂಗಳಿಂದ 3 ವರ್ಷ 28,577 ಮಕ್ಕಳು, 3ರಿಂದ 6 ವರ್ಷದ 31,690 ಮಕ್ಕಳು, 5,527 ಗರ್ಭಿಣಿಯರು, 6,690 ಬಾಣಂತಿಯರು 1,191 ಅಂಗನವಾಡಿ ಕೇಂದ್ರದಿಂದ ಸೌಲಭ್ಯ ಪಡೆಯುತ್ತಿದ್ದಾರೆ.
ಪ್ರಸ್ತಾವನೆ ಸಲ್ಲಿಕೆ
ಬಾಲಕಿಯರ ಬಾಲಮಂದಿರ ನೂತನ ಕಟ್ಟಡ ನಿರ್ಮಾಣ ಸಹಿತವಾಗಿ ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕಿನಲ್ಲಿ ಆಗಬೇಕಿರುವ ಕಟ್ಟಡಕ್ಕಾಗಿ ಸೂಕ್ತ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಂಜೂರಾತಿಯ ಬಗ್ಗೆ ಈವರೆಗೂ ಮಾಹಿತಿ ಬಂದಿಲ್ಲ. ಬಾಲಭವನದ ಅಭಿವೃದ್ಧಿಗೆ ಮೊದಲ ಹಂತದ 12 ಲ.ರೂ. ಬಿಡುಗಡೆಯಾಗಿದೆ. –ವೀಣಾ ವಿವೇಕಾನಂದ, ಉಪನಿರ್ದೇಶಕಿ (ಪ್ರಭಾರ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.