ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ
Team Udayavani, Oct 24, 2021, 6:23 AM IST
ಉಡುಪಿ: ಜಿಲ್ಲೆಯಾದ್ಯಂತ ಶನಿವಾರವೂ ಗುಡುಗು ಸಹಿತ ಮಳೆ ಮುಂದುವರಿದಿದ್ದು, ಹಲವು ಮನೆಗಳಿಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಶನಿವಾರ ಬೆಳಗ್ಗೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಕನಗುಂದಿಯಲ್ಲಿ ಸತೀಶ್ ಅವರ ಮನೆಗೆ ಸಿಡಿಲು ಬಡಿದು ಗೋಡೆ, ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಹಾನಿಯಾಗಿ ಸುಮಾರು 15,000 ರೂ. ನಷ್ಟ ಉಂಟಾಗಿದೆ. ಕಣಜಾರು ಗ್ರಾಮದ ಹರಿಶ್ಚಂದ್ರ ಅವರ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿ 20,000 ರೂ. ನಷ್ಟ ಸಂಭವಿಸಿದೆ.
ಕುಚ್ಚಾರು ಕಾನ್ಬೆಟ್ಟು ನಾಗೇಶ್ ನಾಯಕ್ ಅವರ ಮನೆಗೆ ಶನಿವಾರ ಸಿಡಿಲು ಬಡಿದ ಪರಿಣಾಮ ವಿದ್ಯುತ್ ಉಪಕರಣ ಸೇರಿದಂತೆ ವಿದ್ಯುತ್ ಲೈನ್ ಸಂಪೂರ್ಣ ಸುಟ್ಟುಹೋಗಿ ಅಪಾರ ಹಾನಿ ಸಂಭವಿಸಿದೆ. ತಹಶೀಲ್ದಾರ್ ಪುರಂದರ ಕೆ. ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕುಂದಾಪುರ: ವಿವಿಧೆಡೆ ಹಾನಿ
ಕುಂದಾಪುರ ತಾಲೂಕಿನಲ್ಲಿ ಹಲವು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಶಂಕನಾರಾಯಣ ಗ್ರಾಮದ ಶೇಷಿ ಪೂಜಾರ್ತಿ 75,000 ರೂ., ಅಂಪಾರು ಗ್ರಾಮದ ಗುಣರತ್ನಾ ಅವರಿಗೆ 80,000 ರೂ., ಅಂಪಾರು ಗ್ರಾಮದ ಕರುಣಾಕರ ಅವರಿಗೆ 50,000 ರೂ., ಬಾರಂದಾಡಿ ಪ್ರೇಮಾ ಅಚಾರಿ ಅವರಿಗೆ 40,000 ರೂ. ನಷ್ಟ ಉಂಟಾಗಿದೆ.
ಇದನ್ನೂ ಓದಿ:ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ
ಹೆಂಗವಳ್ಳಿ ಗ್ರಾಮದ ಹಾಲು ಡೈರಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಹಾನಿಯಾಗಿ ಸುಮಾರು 1 ಲ.ರೂ. ನಷ್ಟವಾಗಿದೆ. ಕಾವ್ರಾಡಿ ಗ್ರಾಮದ ಖಲೀಫ್ ಅವರ ಮನೆ ಮೇಲೆ ಮರಬಿದ್ದು 35,000 ರೂ., ಕೊಡ್ಲಾಡಿ ಗ್ರಾಮದ ಅಣ್ಣಯ್ಯ ನಾಯ್ಕ ಅವರ ಅಡಿಕೆ ತೋಟ ಭಾಗಶಃ ಹಾನಿಯಾಗಿ 25,000 ರೂ. ನಷ್ಟ ಸಂಭವಿಸಿದೆ.
ಎಲ್ಲೋ ಅಲರ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಮಳೆಯಾಗಿದ್ದು, ಶನಿವಾರ ಮಳೆಯ ಪ್ರಮಾಣ ಕಡಿಮೆ ಇತ್ತು. ಕರಾವಳಿಯಲ್ಲಿ ಅ. 24ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.