ಕಾಪು: ಬಿಜೆಪಿ ಟಿಕೆಟ್‌ಗೆ ಭಾರೀ ಪೈಪೋಟಿ
Team Udayavani, Apr 9, 2018, 7:15 AM IST
ಕಾಪು: ಕರ್ನಾಟಕ ವಿಧಾನ ಸಭಾ ಚುನಾವಣೆ ರಂಗೇರುತ್ತಿದೆ. ಕಾಪು ಕ್ಷೇತ್ರದಲ್ಲೂ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧಗೊಳ್ಳುತ್ತಿವೆ. ಆದರೆ ಇಲ್ಲಿ ಟಿಕೆಟ್‌ಗಾಗಿ ಬಿಜೆಪಿಯೊಳಗೆಯೇ ಭಾರೀ ಪೈಪೋಟಿ ಕಾಣಿಸಿಕೊಂಡಿದೆ. ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ನಡುಕ ಪ್ರಾರಂಭಗೊಂಡಿದ್ದರೆ, ಬೆಂಬಲಿಗರಲ್ಲಿ ಕುತೂಹಲ, ಕಾತರ ಹೆಚ್ಚಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ವಿನಯಕುಮಾರ್ ಸೊರಕೆ ಟಿಕೆಟ್ ಪಡೆದು ಸ್ಪರ್ಧಿಸುವುದು ಖಚಿತವಾಗಿದ್ದು, ಅವರೆದುರು ಸ್ಪರ್ಧೆಗೆ ಬಿಜೆಪಿಯಿಂದ ಅವರಿಗಿಂತಲೂ ಪ್ರಭಾವಿಯಾದ ವ್ಯಕ್ತಿ ಅಥವಾ ಪ್ರಭಾವಿ ಸಮುದಾಯದ ಸ್ಪರ್ಧಿಯನ್ನೇ ಕಣಕ್ಕಿಳಿಸಬೇಕೆಂಬ ಒತ್ತಾಯ ಮತ್ತು ಒತ್ತಡಗಳು ಕಾರ್ಯಕರ್ತರಿಂದ ವ್ಯಕ್ತವಾಗುತ್ತಿವೆ.
ಕಾಪು ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ – ಕ್ಷೇತ್ರ ಪ್ರಭಾರಿ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ಕುಯಿಲಾಡಿ ಸುರೇಶ್ ನಾಯ್ಕ, ಕಟಪಾಡಿ ಶಂಕರ ಪೂಜಾರಿ, ಶೀಲಾ ಕೆ. ಶೆಟ್ಟಿ ಎರ್ಮಾಳು, ಗೀತಾಂಜಲಿ ಸುವರ್ಣ ಅವರು ಕೂಡ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸಲು ನಾವು ಸಿದ್ಧ ಎನ್ನಲಾರಂಭಿಸಿದ್ದಾರೆ.
ಆಕಾಂಕ್ಷಿಗಳಲ್ಲಿ ಚಡಪಡಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಲಾಲಾಜಿ, ಗುರ್ಮೆ, ಯಶ್‌ಪಾಲ್ ಪರವಾಗಿರುವ ಅವರವರ ಅಭಿಮಾನಿ ಕಾರ್ಯಕರ್ತರು ನಮ್ಮ ನಾಯಕರಿಗೇ ಟಿಕೆಟ್ ಘೋಷಣೆಯಾಗಿದೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ ಮತ್ತು ನಮ್ಮ ನಾಯಕರೇ ಕಾಪು ಕ್ಷೇತ್ರದ ಮುಂದಿನ ಶಾಸಕರು ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಎಬ್ಬಿಸುತ್ತಿರುವ ಗುಲ್ಲಿನಿಂದಾಗಿ ಟಿಕೆಟ್ ಆಕಾಂಕ್ಷಿಗಳು ಮಾತ್ರ ಚಡಪಡಿಕೆಗೊಳಗಾಗಿದ್ದಾರೆ.
ಜಾಲತಾಣಗಳಲ್ಲಿ ಸಕ್ರಿಯರು!
ಈ ಬಾರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಪಕ್ಷದ ಅಭ್ಯರ್ಥಿ ಗಳ ಪಟ್ಟಿ ಸಿದ್ಧಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಬರುತ್ತಿರುವ ಅಭಿಪ್ರಾಯ, ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಅವರು ಗಮನಿಸುತ್ತಾರಾ, ಅದನ್ನು ನೋಡಿ ಟಿಕೆಟ್ ನೀಡುತ್ತಾರಾ ಅಥವಾ ಅದೇ ಟಿಕೆಟ್ ಪಡೆಯಲು ಅರ್ಹತೆಯ ಮಾನದಂಡವೇ ಎಂಬಿತ್ಯಾದಿ ಪ್ರಶ್ನೆಗಳು ಆಕಾಂಕ್ಷಿಗಳ ಮನದಲ್ಲಿ ಮೂಡುತ್ತಿವೆ.
ಗುಪ್ತ್ ಗುಪ್ತ್ ಸರ್ವೇ
ಅಭ್ಯರ್ಥಿಯ ಆಯ್ಕೆಗಾಗಿ ಬಿಜೆಪಿ ಈಗಾಗಲೇ ಗುಪ್ತ್ ಗುಪ್ತ್ ಮಾದರಿಯಲ್ಲಿ ಮೂರು ಸುತ್ತಿನ ಸರ್ವೇ ಕಾರ್ಯ ಮತ್ತು ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಿದೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಕ್ರೋಡೀಕರಿಸಿಕೊಂಡಿದೆ. ಪಕ್ಷದೊಳಗೆ ಗುಪ್ತಗಾಮಿನಿಯಂತೆ ಕಾರ್ಯ ನಿರ್ವಹಿಸುತ್ತಿರುವ ಪಕ್ಷದ ಮತ್ತು ಸಂಘದ ಕಾರ್ಯಕರ್ತರು ಕೂಡ ಯಾರಿಗೆ ಟಿಕೆಟ್ ನೀಡಿದರೆ ಪಕ್ಷ ಕಾಪುವಿನಲ್ಲಿ ಬಿಜೆಪಿ ಮತ್ತೆ ಗೆಲ್ಲಬಹುದು ಎನ್ನುವುದನ್ನು ನಾಯಕರ ಮುಂದೆ ವಿವರಿಸಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯದಂತೆ ತೀರ್ಮಾನ: ಮಟ್ಟಾರು
ಬಿಜೆಪಿ ಒಂದು ವರ್ಷದ ಹಿಂದೆಯೇ ಚುನಾವಣೆಗಾಗಿ ಸರ್ಕಸ್ ಪ್ರಾರಂಭಿಸಿದೆ. ವರ್ಷದ ಅವಧಿಯಲ್ಲಿ ಮೂರು ತಂಡಗಳು ಕಾಪು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗಾಗಿ ಸರ್ವೇ ನಡೆಸಿವೆ. ಕಳೆದ ತಿಂಗಳು ಮಧ್ಯಪ್ರದೇಶದ ಸಂಸದ ಗಣೇಶ್ ಸಿಂಗ್ ಅವರು ಕೂಡ ಕಾಪುವಿಗೆ ಆಗಮಿಸಿ ಅಭ್ಯರ್ಥಿಯ ಆಯ್ಕೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಅಭ್ಯರ್ಥಿಗಳಾಗಬಯಸುತ್ತಿರುವವರ ರಾಜಕೀಯ ನಡೆ, ಪಕ್ಷಕ್ಕಾಗಿ ನಡೆಸುತ್ತಿರುವ ಹೋರಾಟ, ಹೊಂದಿರುವ ಜನ ಬೆಂಬಲ, ಸಮುದಾಯದ ಬೆಂಬಲ, ಅವರಲ್ಲಿರುವ ಸಂಘಟನೆಯ ಪ್ರೀತಿ ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದಂತೆ ಟಿಕೆಟ್ ಹಂಚಿಕೆಯಾಗಲಿದ್ದು, ಮುಂದಿನ ಹಂತದಲ್ಲಿ ಎ. 7ರಂದು ಬೆಂಗಳೂರಿನಲ್ಲಿ ಪ್ರತೀ ಮಂಡಲದ ಪದಾಧಿಕಾರಿಗಳು ಮತ್ತು ಜಿಲ್ಲಾ ಧ್ಯಕ್ಷರುಗಳ ಸಭೆ ನಡೆಸಲಿದ್ದಾರೆ. ಎ. 10ರಂದು ಬಿಜೆಪಿ ಪ್ರಥಮ ಹಂತದ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.
ವಿಧಾನಸಭೆಗೆ ಚುನಾವಣೆ ಘೋಷಣೆಯಾಗುವ ಮೊದಲೇ ಕಾಪು ಕ್ಷೇತ್ರಾದ್ಯಂತ ಪಕ್ಷ ಸಂಘಟನೆ ಮಾಡಲಾರಂಭಿಸಿದ್ದ ಬಿಜೆಪಿ, ಚುನಾವಣೆ ಘೋಷಣೆಯಾದ ಬಳಿಕ ತನ್ನ ತಂತ್ರಗಾರಿಕೆಯನ್ನು ಬದಲಿಸಿದೆ. ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಕನಿಷ್ಠ ಕುರುಹು ಕೂಡ ದೊರಕದೇ ಇರುವುದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಇನ್ನೂ ಚುನಾವಣಾ ಕಾವು ಹೆಚ್ಚಿದಂತೆ ತೋರುತ್ತಿಲ್ಲ. ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯ ವರೆಗೂ ಇದೇ ತಂತ್ರಗಾರಿಕೆಯನ್ನು ಮುಂದು ವರಿಸುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.
ಪಕ್ಷದ ಆದ್ಯತೆಯೇನು?
ಕಾಪು ಕ್ಷೇತ್ರದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವೇ ಆಧಿಪತ್ಯವನ್ನು ಸಾಧಿಸಿಕೊಂಡು ಬಂದಿತ್ತು. 2004 ಮತ್ತು 2009ರಲ್ಲಿ ಮಾತ್ರ ಇಲ್ಲಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು, 2013ರಲ್ಲಿ ಅಲ್ಪ ಮತಗಳ ಅಂತರದಲ್ಲಿ ಮತ್ತೆ ಕಾಂಗ್ರೆಸ್‌ಗೆ ಗೆಲುವಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ಬಳಿಕದ ಎಲ್ಲ ಚುನಾವಣೆಗಳಲ್ಲೂ ಕಾಪು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೇ ಜನಬೆಂಬಲ ದೊರಕಿದೆ. ಆ ಜನಬೆಂಬಲವನ್ನು ಉಳಿಸಿಕೊಂಡು, ಹೊಸ ಮತದಾರರನ್ನು ಸೆಳೆಯುವ ಸಾಮರ್ಥ್ಯವುಳ್ಳ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪಕ್ಷ ಚಿಂತನೆ ನಡೆಸಿದೆ ಎನ್ನುವುದನ್ನು ಪಕ್ಷದ ಮೂಲಗಳು ತಿಳಿಸಿವೆ.
— ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.