Toll fee ಪ್ರತೀ ವರ್ಷ ಹೆಚ್ಚಳ: ಮೂಲಸೌಕರ್ಯಗಳು ಇನ್ನೂ ಮರೀಚಿಕೆ
Team Udayavani, Mar 31, 2024, 6:40 AM IST
ಕೋಟ: ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಸೋಮವಾರ (ಎ. 1)ದಿಂದ ಮತ್ತೆ ದರ ಹೆಚ್ಚಳವಾಗುತ್ತಿದೆ. ಆದರೆ ಮೂಲಸೌಕರ್ಯಗಳ ಕೊರತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಇರುತ್ತದೆ.
ಟೋಲ್ ದರ ಪರಿಷ್ಕರಣೆ ಮಾಡುವ ಟೋಲ್ ನಿರ್ವಹಣೆ ಕಂಪೆನಿಗಳು ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಬೇ ಕೆಂಬುದು ನಿಯಮ. ಆದರೆ ಅದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಟೋಲ್ ನಿರ್ವಹಿಸುತ್ತಿರುವ ಕಂಪೆನಿಗೆ ಅನ್ವಯಿಸದು ಎಂಬ ದೂರು ಹೆದ್ದಾರಿ ಬಳಕೆದಾರರಿಂದ ವ್ಯಕ್ತವಾಗಿದೆ.
ಪ್ರತೀ ಟೋಲ್‌ಗಳಲ್ಲೂ ರಸ್ತೆಯ ಎರಡೂ ಬದಿಯಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಶೌಚಾಲಯ ವ್ಯವಸ್ಥೆ ಅಳವಡಿಸಬೇಕು ಎಂಬ ನಿಯಮವಿದೆ. ಇದಕ್ಕೆ ವ್ಯತಿರಿಕ್ತವಾಗಿ ಉಡುಪಿ ದ.ಕ. ಜಿಲ್ಲೆಯ ಟೋಲ್‌ಗಳಲ್ಲಿ ಹೆಚ್ಚಿನ ಕಡೆ ಇರುವುದು ಒಂದೇ ಶೌಚಾಲಯ. ಅದನ್ನೇ ಅಲ್ಲಿನ ಸಿಬಂದಿ ಹಾಗೂ ಹೆದ್ದಾರಿ ಬಳಕೆದಾರರು ಬಳಸಬೇಕಾದ ಸ್ಥಿತಿಯೂ ಇದೆ. ಅದರೊಂದಿಗೆ ಸ್ವತ್ಛತೆಗೆ ಆದ್ಯತೆ ಬಹಳ ಕಡಿಮೆ ಇದೆ ಎಂಬುದು ಬಳಕೆದಾರರ ದೂರು.
ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ಚಿಕಿತ್ಸಾ ಕೊಠಡಿ ಇದ್ದು, ಆರೋಗ್ಯ ಸೇವಕರು, ನರ್ಸ್‌ಗಳ ಸೇವೆ ಲಭ್ಯವಿರಬೇಕು. ತುರ್ತು ಚಿಕಿತ್ಸೆಗೆ ಬೇಕಾದ ಔಷಧಗಳೂ ಇರಬೇಕು. ಸಣ್ಣ-ಪುಟ್ಟ ಅಪಘಾತಗಳು ಸಂಭವಿಸಿದಾಗ ಚಿಕಿತ್ಸೆ ನೀಡುವಂತಿರಬೇಕು ಎನ್ನುವ ನಿಯಮವಿದೆ. ಆದರೆ ಈ ವ್ಯವಸ್ಥೆ ಯಾವ ಟೋಲ್‌ಗಳಲ್ಲೂ ಸಮಗ್ರವಾಗಿಲ್ಲ. ಸಣ್ಣ ಪುಟ್ಟ ಅಪಘಾತ ಸಂಭವಿಸಿದರೂ ಹತ್ತಿರದ ಆಸ್ಪತ್ರೆಯೇ ಗತಿ ಎಂಬಂತಾಗಿದೆ. ಇರುವ ಒಂದೇ ಆ್ಯಂಬುಲೆನ್ಸ್ ಇಡೀ ಜಿಲ್ಲೆಯ ಹೆದ್ದಾರಿ ಉದ್ದಕ್ಕೂ ಸೇವೆ ನೀಡುವಂಥ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಚುವರಿ ಆ್ಯಂಬುಲೆನ್ಸ್‌ಗಳನ್ನು ಒದಗಿಸಬೇಕೆಂಬುದು ಪ್ರಯಾಣಿಕರ ಆಗ್ರಹ. ಇದಲ್ಲದೇ ಪ್ರಯಾಣಿಕರಿಗೆ ಅವಶ್ಯ ವಾದ ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳು ಹಲವೆಡೆ ಇಲ್ಲ. ಅದನ್ನೂ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಟ್ರಕ್ ವೇ ಸೌಲಭ್ಯ ಸರಿಯಾಗಿಲ್ಲ
ಟ್ರಕ್‌ಗಳನ್ನು ರಸ್ತೆಯಲ್ಲಿ ಎಲ್ಲೆಂದ ರಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವಂತಿಲ್ಲ. ಇದಕ್ಕಾಗಿ ಪ್ರತ್ಯೇಕ ಬೇ ನಿರ್ಮಿಸಬೇಕು. ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಶೌಚಾಲಯ, ಕ್ಯಾಂಟೀನ್ ಇತ್ಯಾದಿ ಸೌಲಭ್ಯ ಇರಬೇಕು. ಇವೆಲ್ಲವೂ ನಿಯಮದಲ್ಲಷ್ಟೆ ಇದ್ದು, ಎಲ್ಲ ಕಡೆಗಳಲ್ಲೂ ಟೋಲ್‌ನ ಪಕ್ಕದಲ್ಲೇ ರಸ್ತೆಗೆ ಅಡ್ಡಲಾಗಿ ಟ್ರಕ್, ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕಲ್ಯಾಣಪುರ ಬಳಿ ಹೆಸರಿಗಷ್ಟೇ ಟ್ರಕ್ ಬೇ ಇದ್ದು, ಯಾವುದೇ ಮೂಲ ಸೌಕರ್ಯಗಳಿಲ್ಲ. ಕೆಲವೊಮ್ಮೆ ದಾರಿ ದೀಪವೂ ಉರಿಯುವುದಿಲ್ಲ. ಸ್ನಾನ ಇತ್ಯಾದಿಗೆ ಟ್ರಕ್ ಚಾಲಕರು, ನಿರ್ವಾಹಕರು ಹತ್ತಿರದ ಹೊಳೆಗೆ ಹೋಗ ಬೇಕಾದ ಪರಿಸ್ಥಿತಿ ಇದೆ.
ಅಪಘಾತ ತಡೆಗೆ ವ್ಯವಸ್ಥೆ ಇಲ್ಲ
ಅಪಘಾತಗಳು ಹೆಚ್ಚು ನಡೆಯುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಪ್ರಯಾಣಿಕರ ಸುರಕ್ಷಾ ವ್ಯವಸ್ಥೆ ಹಾಗೂ ಅಪಘಾತ ತಡೆಗೆ ಕ್ರಮಗಳನ್ನು ಕೈಗೊಳ್ಳಬೇಕು. ಕಪ್ಪು ಪಟ್ಟಿಗೆ ಸೇರಿದ ಸ್ಥಳಗಳಲ್ಲಿ ಸಂಚಾರದಟ್ಟಣೆ ತಡೆ, ಅಪಘಾತಕ್ಕೆ ಪರಿಹಾರ ಕುರಿತು ಯೋಜನೆ ರೂಪಿಸಬೇಕು. ಆದರೆ ಕಂಪೆನಿ ಇದುವರೆಗೆ ಈ ಕುರಿತು
ಗಮನ ಹರಿಸಿಯೇ ಇಲ್ಲ. ಆದ ಕಾರಣ ಹೆದ್ದಾರಿ ಉದ್ದಕ್ಕೂ ಕೆಲವು ತಿರುವು, ಸರ್ಕಲ್‌ಗಳಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಇವೆಲ್ಲದಕ್ಕೂ ಗಮನ ಹರಿಸುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆ.
ಯಾವುದೇ ಪ್ರಾಣಿ ಸತ್ತರೂ ವಿಲೇ ಮಾಡಬೇಕು
ಹೆದ್ದಾರಿ ನಿಯಮದಂತೆ ಟೋಲ್ ವೇಗಳ ರಸ್ತೆಯಲ್ಲಿ ಯಾವುದೇ ಪ್ರಾಣಿ ಸತ್ತು ಬಿದ್ದು ಸಂಚಾರಕ್ಕೆ ಅಡಚಣೆಯಾದರೆ ಹೆದ್ದಾರಿಯಲ್ಲಿ ಸಂಚರಿಸುವವರು ಟೋಲ್‌ಗೆ ವಿಷಯ ಮುಟ್ಟಿಸಬೇಕು. ಅಲ್ಲಿನ ಸಿಬಂದಿ ಬಂದು ಸತ್ತ ಪ್ರಾಣಿಯ ದೇಹವನ್ನು ವಿಲೇ ಮಾಡಬೇಕು. ಇದಾವುದೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಟೋಲ್‌ನವರು ಹೆದ್ದಾರಿ ಬಳಕೆದಾರರಿಗೆ ಯಾವುದೇ ಸೌಕರ್ಯ ನೀಡುವಲ್ಲಿ ತಪ್ಪಿದರೆ, ಟೋಲ್‌ನವರ ನಿರ್ಲಕ್ಷéದಿಂದ ಅಪಘಾತ ಸಂಭವಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎನ್ನುತ್ತಾರೆ ವಕೀಲರೊಬ್ಬರು. ಆದರೆ ಇಲ್ಲಿನ ಹೆದ್ದಾರಿಗಳಲ್ಲಿ ಪ್ರಾಣಿಗಳು ಸತ್ತುಬಿದ್ದು ದಿನಗಳಾದರೂ ಅವುಗಳ ವಿಲೇಗೆ ಗಮನಹರಿಸುವುದಿಲ್ಲ ಎಂಬುದು ಹಲವರ ಅಭಿಪ್ರಾಯ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಕಲ್ಪಿಸಲು ಬಾಕಿ ಇದ್ದು ಇದರಿಂದ ಹೆದ್ದಾರಿ ಬಳಕೆದಾರರಿಗೆ ಸಮಸ್ಯೆ ಇದೆ. ಇಲಾಖೆ ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕು.
– ಪ್ರತಾಪ್ ಶೆಟ್ಟಿ ಸಾಸ್ತಾನ, ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು
ಹೆದ್ದಾರಿ ದೀಪಗಳಿಗೆ ಕತ್ತರಿ, ಗೊಡವೆಯೇ ಇಲ್ಲದ ಕಂಪೆನಿ!
ಪಡುಬಿದ್ರಿ: ಹೆದ್ದಾರಿ ದಾರಿ ದೀಪಗಳನ್ನು ಯಾರು ಸರಿಪಡಿಸಬೇಕು? ಇಂಥದೊಂದು ಪ್ರಶ್ನೆಗೆ ಪಡುಬಿದ್ರಿಯಲ್ಲಷ್ಟೇ ಅಲ್ಲ, ಹೆದ್ದಾರಿಯದ್ದಕ್ಕೂ ಉತ್ತರದ ಬದಲು ಬರೀ ಪ್ರಶ್ನೆ ಸಿಗುತ್ತದೆ. ಪ್ರಸ್ತುತ ಎನ್‌ಎಚ್ 66ರ ಟೋಲ್ ಸಂಗ್ರಹವನ್ನು ನೂತನ ಉಡುಪಿ ಟೋಲ್‌ವೇ ಪ್ರೈ ಲಿ., (ಮುಂಬಯಿ ಮೂಲದ ಕೆಕೆಆರ್) ಕಂಪೆನಿ ವಹಿಸಿಕೊಂಡಿದೆ.
ಹೆದ್ದಾರಿ ದೀಪಗಳು ಎಲ್ಲೆಡೆ ರಾತ್ರಿ ವೇಳೆಯಲ್ಲಿ ಉರಿಯುತ್ತಿಲ್ಲ. ಕೆಲವೆಡೆ ಉರಿ ದರೂ, ಬೆಳಗ್ಗೆ ಆಗುವುದರೊಳಗೆ ಆರುತ್ತವೆ. ಹೀಗಾಗಿ ಹೆದ್ದಾರಿ ಬದಿಯ ಸರ್ವೀಸ್ ರಸ್ತೆಯಲ್ಲಿ ಆಯಾಯ ಗ್ರಾ.ಪಂ.ಗಳೇ ಅಳವಡಿಸಿರುವ ಬೀದಿ ದೀಪ ಗಳ ಬೆಳಕು ಹಾಗೂ ಸಂಚರಿಸುವ ವಾಹನಗಳ ಬೆಳಕೇ ಸಾರ್ವಜನಿಕರಿಗೆ ಆಶ್ರಯ.
ಕೆಲವು ದೀಪಗಳನ್ನೂ ಮುಂಜಾನೆ ಸೂರ್ಯನ ಬೆಳಕು ಹರಿಯುವವರೆಗೂ ಕಾಯದೇ ಆರಿಸುತ್ತಾರೆಂಬ ದೂರೂ ಇದೆ. ಇದರಿಂದ ಪಾದಚಾರಿಗಳಿಗೆ, ಮುಂಜಾನೆ ಬೇಗ ರಸ್ತೆ ದಾಟುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತದ ಆತಂಕವೂ ಹೆಚ್ಚು. ಈ ಸಮಸ್ಯೆ ಸರಿಪಡಿಸುವಂತೆ ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ಅವರು ಹೆಜಮಾಡಿ ಟೋಲ್ ಮುಖ್ಯಸ್ಥರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಈ ಹೆದ್ದಾರಿ ದೀಪಗಳ ಅವ್ಯವಸ್ಥೆ ಬರೀ ಪಡುಬಿದ್ರಿಗಷ್ಟೇ ಸೀಮಿತವಲ್ಲ, ಹೆಜಮಾಡಿ ಮಾತ್ರವಲ್ಲದೇ ಜಿಲ್ಲೆಯ ಕುಂದಾಪುರ ಸಹಿತ ಬೇರೆಡೆಯೂ ಇದೆ. ಈ ಕುರಿತಾಗಿ ಹೆಜಮಾಡಿ ಟೋಲ್ ಪ್ರಬಂಧಕ ತಿಮ್ಮಯ್ಯ ಉದಯವಾಣಿಗೆ ತಿಳಿಸುವಂತೆ, ದಾರಿ ದೀಪಗಳಿಗೆ ಟೈಮರ್ ಅಳವಡಿಸಿದ್ದು, ಅದು ಬೆಳಗ್ಗೆವರೆಗೆ ಉರಿಯುತ್ತವೆ. ಬೇಗನೇ ಆರುತ್ತಿರುವ ಬಗ್ಗೆ ಗಮನಹರಿಸಲಾಗುತ್ತದೆ. ಕೆಕೆಆರ್ ನಿಯಂತ್ರಣದ ಟೋಲ್ ಪ್ಲಾಝಾ ವ್ಯಾಪ್ತಿಯಲ್ಲಿ ಎರಡು ತಿಂಗಳೊಳಗೆ ಎಲ್‌ಇಡಿ ದೀಪ ಅಳವಡಿಸಲಾಗುವುದು.ಹಾಗೆಯೇ ಮುಂದಿನ ಮಳೆಗಾಲದ ಒಳಗಾಗಿ ನಂತೂರು – ತಲಪಾಡಿಯೂ ಸೇರಿದಂತೆ ಜಿಲ್ಲೆಯ ಟೋಲ್ ರಸ್ತೆಗಳಿಗೆ ಮರು ಡಾಮರು ಹಾಕಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.