ಕೋವಿಡ್ ಸೋಂಕು: ಪಿಲಾರುವಿನ 1 ಹಾಗೂ ಶಿರ್ವದ 5 ಮನೆಗಳು ಸೀಲ್ ಡೌನ್
Team Udayavani, Jun 5, 2020, 7:30 PM IST
ಉಡುಪಿ: ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರೆಂಟೈನ್ ನಲ್ಲಿದ್ದ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ 8 ಮಂದಿ ಮತ್ತು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂವರಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ಅವರು ವಾಸವಾಗಿದ್ದ ಒಟ್ಟು 6 ಮನೆಗಳನ್ನು ಉಡುಪಿ ಜಿಲ್ಲಾಡಳಿತವು ಶುಕ್ರವಾರದಂದು ಸೀಲ್ ಡೌನ್ ಮಾಡಿದೆ.
ಮುಂಜಾಗರೂಕತಾ ಕ್ರಮವಾಗಿ ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಹಾಗೂ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಈ ಮನೆಗಳನ್ನು ಸೀಲ್ ಡೌನ್ ಮಾಡಿದ್ದಾರೆ.
ಶಿರ್ವ ಸೊರ್ಪು ತುಂಡುಬಲ್ಲೆಯ 30 ವರ್ಷದ ವ್ಯಕ್ತಿ, ನಾಯ್ದಡ್ಡುವಿನ 38 ವರ್ಷದ ವ್ಯಕ್ತಿ, ಮಟ್ಟಾರು ಮಾಣಿಬೆಟ್ಟು ಪೊಡಿಕಂಬಳದ ಒಂದೇ ಮನೆಯ 48 ವರ್ಷದ ಮಹಿಳೆ, 59 ವರ್ಷದ ಪುರುಷ, 55 ವರ್ಷದ ಮಹಿಳೆ ಹಾಗೂ 8 ವರ್ಷದ ಮಗು, ಅಟ್ಟಿಂಜೆ ಗುಡ್ಡೆಮಾರಿನ 55 ವರ್ಷದ ಮಹಿಳೆ ಮತ್ತು ಎಡ್ಮೇರ್ ಮೇಲ್ ಬೆಳಂಜಾಲೆಯ 49 ವರ್ಷದ ವ್ಯಕ್ತಿ ಸೇರಿದಂತೆ ಇವರಲ್ಲಿ ಕೋವಿಡ್ ಸೋಂಕು ಪಾಸಿಟಿವ್ ಪತ್ತೆಯಾದ ಕಾರಣ ಇವರಿದ್ದ ಮನೆಗಳನ್ನು ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಗಿದೆ.
ಮುದರಂಗಡಿ ಗ್ರಾಪ ಪಂಚಾಯತ್ ವ್ಯಾಪ್ತಿಯ ಪಿಲಾರು ಹಲಸಿನ ಕಟ್ಟೆಯ 39 ವರ್ಷದ ಪುರುಷ, 26 ವರ್ಷದ ಮಹಿಳೆ ಹಾಗೂ 3 ವರ್ಷದ ಮಗುವಿಗೆ ಕೋವಿಡ್ ಸೋಂಕು ತಗಲಿದ್ದು ಇಲ್ಲಿನ ಒಂದು ಮನೆಯನ್ನು ಕಂಟೈನ್ಮೆಂಟ್ ಪ್ರದೇಶ ಎಂದು ಘೋಷಿಸಲಾಗಿದೆ.
ಶಿರ್ವ ಹಾಗೂ ಮುದರಂಗಡಿ ಗ್ರಾಮವನ್ನು ಸಂಪೂರ್ಣ ಬಫರ್ ಝೋನ್ ಎಂದು ಘೋಷಿಸಲಾಗಿದ್ದು ಇಲ್ಲಿನ ಗ್ರಾಮಸ್ಥರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ಕಾಪು ಕಂದಾಯ ಪರಿವೀಕ್ಷಕ ರವಿಶಂಕರ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಬೈಲೂರು, ಶಿರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲ ಮುರಗೋಡ, ಗ್ರಾಮ ಕರಣಿಕ ವಿಜಯ್, ಮುದರಂಗಡಿ ಪಿಡಿಒ, ಆರೋಗ್ಯ ಸಹಾಯಕಿ ಕಲ್ಪನಾ ಹಾಗೂ ಸಂಬಂಧಿತ ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.