ಎ. 1 ರಿಂದ 15,:ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Team Udayavani, Mar 24, 2022, 9:19 PM IST
ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ಸುಮಾರು 32 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ನವೀಕರಣಗೊಂಡಿದ್ದು ದೇವಾಲಯದಲ್ಲಿ ಶ್ರೀ ಪ್ರಸನ್ನ ಗಣಪತಿ, ಶ್ರೀ ಭದ್ರಕಾಳಿ, ಶ್ರೀ ನಾಗದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬ ಪುನರ್ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವಗಳನ್ನೊಳಗೊಂಡ ವೈಧಿಕ ವಿಧಿ ವಿಧಾನಗಳನ್ನು ಎಪ್ರಿಲ್ 1 ರಿಂದ ಎಪ್ರಿಲ್ 15 ರವರೆಗೆ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ಹಿರಿಯ ಅರ್ಚಕರಾದ ವೆಂಕಟನರಸಿಂಹ ಉಪಾಧ್ಯಾಯ ಮತ್ತು ರಾಘವೇಂದ್ರ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಮತ್ತು ಯತಿವರೇಣ್ಯರ ಶುಭಾಶೀರ್ವಾದಗಳೊಂದಿಗೆ ವೈಭವೋಪೇತವಾಗಿ ನಡೆಸಲು ಸಂಕಲ್ಪಿಸಲಾಗಿದೆ ಎಂದು ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಹೇಳಿದರು.
1957 ರಲ್ಲಿ ಮೊಗವೀರ ಕುಲಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲರವರ ನೇತೃತ್ವದಲ್ಲಿ ದಿವಂಗತ ಸದಿಯ ಸಾಹುಕಾರರು ದಾನವಾಗಿ ನೀಡಿದ ಜಾಗದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರು ಶ್ರೀ ಮಹಾಲಕ್ಷ್ಮೀ ದೇವಸ್ಥಾನವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ಹತ್ತಿರದಲ್ಲಿ ನೋಡಬೇಕೆನ್ನುವ ಹಂಬಲದೊಂದಿಗೆ ಸ್ಥಳೀಯ ಮತ್ತು ಮುಂಬಯಿಯ ಭಕ್ತಾಧಿಗಳು ಹಾಗೂ ಸಮಾಜದ ಮುಖಂಡರನ್ನು ಜೊತೆಗೂಡಿಸಿಕೊಂಡು ಮಹಾಜನ ಸಂಘದ ನೇತೃತ್ವದಲ್ಲಿ ಕೇರಳದ ಜ್ಯೋತಿಷ್ಯ ವಿದ್ವಾನ್ ಮಾಧವನ್ ಪೊದುವಾಳರ ಮೂಲಕ ಅಷ್ಟಮಂಗಲ ಪ್ರಶ್ನೆಯಲ್ಲಿ ವಿಚಾರ ವಿನಿಮಯ ಮಾಡಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಸ್ಥಾನದ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿ ಬಂದಿದ್ದು ಅವುಗಳಿಗೆಲ್ಲಾ ಪ್ರಾಯಶ್ಚಿತ್ತಾದಿ ಸತ್ಕರ್ಮಗಳನ್ನು ನೆರವೇರಿಸಿ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಳ್ಳುವುದೆಂದು ನಿರ್ಧರಿಸಲಾಗಿತ್ತು ಎಂದರು.
ವಾಸ್ತುತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಕ್ಷೇತ್ರ ತಂತ್ರಿಗಳಾದ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆಯವರ ಮಾರ್ಗದರ್ಶನದಲ್ಲಿ ಮಹಾಲಕ್ಷ್ಮೀ ತಾಯಿಯ ಶಿಲಾಮಯ ಗರ್ಭ ಗುಡಿ, ಭದ್ರಕಾಳಿ ಮತ್ತು ಪ್ರಸನ್ನ ಗಣಪತಿ ಶಿಲಾಮಯ ಗರ್ಭಗುಡಿ ಗುಡಿ, ನಾಗದೇವರ ಗುಡಿ, ಸುತ್ತು ಪೌಳಿ, ಗುರುಪೀಠ, ರಾಜಗೋಪುರ, ಯಾಗ ಶಾಲೆ, ವಸಂತ ಮಂಟಪ , ರಥ ಬೀದಿ, ಸುತ್ತು ಆವರಣ ಗೋಡೆ, ಬಯಲು ರಂಗ ಮಂಟಪ, ಒಳಚರಂಡಿ ವ್ಯವಸ್ಥೆ, ನೆಲಹಾಸು (ಇಂಟರ್‌ಲಾಕ್) ಅಳವಡಿಕೆ ಹಾಗೂ ಪುಷ್ಕರಣಿಗಳನ್ನೊಳಗೊಂಡು 32 ಕೋಟಿ ಮೊತ್ತದ ಸಮಗ್ರ ಜೀರ್ಣೋದ್ಧಾರ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದರು.
ಮಾ. 27ರಿಂದ ಹೊರೆಕಾಣಿಕೆ : ಬ್ರಹ್ಮಕಲಶೋತ್ಸವ ಪುಣ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ 2 ರಿಂದ 3 ಲಕ್ಷದಷ್ಟು ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದ್ದು ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ದಿನಂಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಮಾರ್ಚ್ 27 ರಂದು ಅವಿಭಜಿತ ದ. ಕ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಂದ ಪ್ರಸಾದದ ರೂಪದಲ್ಲಿ ಹೊರೆಕಾಣಿಕೆಯು ಕ್ಷೇತ್ರವನ್ನು ತಲುಪಲಿದೆ. ಹೈದರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೊರೆಕಾಣಿಕೆಗಳು ದೇವಸ್ಥಾನಕ್ಕೆ ತಲುಪಿದೆ. ಕರಾವಳಿ ಭಾಗದ ಭಕ್ತಾಧಿಗಳ ಹೊರಕಾಣಿಕೆಯು 2000 ಕ್ಕೂ ಮಿಕ್ಕಿದ ವಾಹನಗಳ ಮೂಲಕ ದೇವಸ್ಥಾನದ ಉತ್ತರ ಭಾಗದ ಮೆರವಣಿಗೆಯು ಮೂಳೂರಿನಿಂದ ಹಾಗೂ ದಕ್ಷಿಣ ಭಾಗದ ಮೆರವಣಿಗೆಯು ತೆಂಕ ಎರ್ಮಾಳ್‌ನಿಂದ ಹೊರಟು ವಿವಿಧ ರೀತಿಯ ಟ್ಯಾಬ್ಲೋ, ಚೆಂಡೆ, ಭಜನಾ ಕುಣಿತ ಮುಂತಾದ ಬಿರುದಾವಳಿಗಳೊಂದಿಗೆ ದೇವಸ್ಥಾನ ತಲುಪಲಿದೆ.
ಎ.1 ರಿಂದ 15ರವರೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮ : ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಾಜಗೋಪುರ ಹಾಗೂ ಸರಕಾರದ ಅನುದಾನದೊಂದಿಗೆ ನಿರ್ಮಾಣಗೊಂಡ ಲಕ್ಷ್ಮೀ ತೀರ್ಥ ಕೆರೆಯು ಎಪ್ರಿಲ್ ೧ರ ಸಂಜೆ ೫ ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಎಪ್ರಿಲ್ 2ರಿಂದ ಎಪ್ರಿಲ್ 15 ರ ತನಕ ಪ್ರತೀದಿನ ಸಂಜೆ ಗಂಟೆ 4 ರಿಂದ 5ರವರೆಗೆ ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಎಪ್ರಿಲ್ 6ರಂದು ಮಹಾಲಕ್ಷ್ಮೀ ದೇವಿಯ ಬಿಂಬ ಪ್ರತಿಷ್ಠೆ , ಸ್ವರ್ಣಕಲಶ ಪ್ರತಿಷ್ಠೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ಎಪ್ರಿಲ್ 13ರಂದು ವರ್ಷಂಪ್ರತಿ ನಡೆಯುವ ಶ್ರೀ ಮಹಾಲಕ್ಷ್ಮೀ ರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆಯು ನಡೆಯಲಿದೆ. ಎಪ್ರಿಲ್ 15ರ ರಾತ್ರಿ ಗಂಟೆ 8.0 0ಕ್ಕೆ ಹಾಲಿಟ್ಟು ಸೇವೆ ರಾತ್ರಿ 9.00 ರಿಂದ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎಪ್ರಿಲ್ 16 ರ ಬೆಳಗ್ಗೆ ಸಂಪೋಕ್ಷಣೆ, ಮಂತ್ರಾಕ್ಷತೆಯೊಂದಿಗೆ ಪುನಃ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳು ಶುಭಾಂತ್ಯವಾಗಲಿದೆ.
ಗಣ್ಯರ ಉಪಸ್ಥಿತಿ : ನಿರಂತರ 15ದಿನಗಳ ಪರ್ಯಂತ ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ವಿವಿಧ ಮಠಾಧಿಶರುಗಳು ಮತ್ತು ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ರಾಜ್ಯದ ಹಾಲಿ ಹಾಗೂ ಮಾಜಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ರಸದೌತಣ : ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರ ಪ್ರಸ್ತುತ ಪಡಿಸುವ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರ ತಾಂಜವೂರು ಇವರು ಸಾದರ ಪಡಿಸುವ 20 ರಾಜ್ಯಗಳ ಕಲಾವಿದರುಗಳ ಸಾಂಸ್ಕ್ರತಿಕ ಉತ್ಸವ ಏರ್ಪಡಿಸಲಾಗಿದೆ. ರಾಜ್ಯದ ಹಾಗೂ ಸ್ಥಳೀಯ ಕಲಾವಿದರುಗಳಿಂದ ಪ್ರತೀ ದಿನ ಸಂಜೆ ನೃತ್ಯ ವೈವಿಧ್ಯ, ಯಕ್ಷಗಾನ , ನಾಟಕ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಮತ್ತು ಖ್ಯಾತ ಗಾಯಕರೂ, ಸಂಗೀತ ನಿರ್ದೇಶಕರೂ ಆದ ಗಾನಗಂಧರ್ವ ವಿಜಯ ಪ್ರಕಾಶ್ ಅವರಿಂದ ಸಾಂಸ್ಕ್ರತಿಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತೀ ದಿನ ಪೂರ್ವಾಹ್ನ ಗಂಟೆ 11.30 ರಿಂದ ರಾಜ್ಯದ ಖ್ಯಾತ ಕಲಾವಿದರುಗಳಿಂದ ಭಕ್ತಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅನ್ನ ಛತ್ರ ಹಾಗೂ ಪಾರ್ಕಿಂಗ್ : ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ನೂಕು ನುಗ್ಗಲಾಗದಂತೆ ನೋಡಿಕೊಂಡು ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಅನ್ನಛತ್ರದ ಚಪ್ಪರ ನಿರ್ಮಿಸಿ ಎಲೆ ಊಟ ಮತ್ತು ಬಫೆ ಊಟಕ್ಕೆ ಅನುಕೂಲವಾಗುವಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹಾಗೂ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ಬೇಕಾಗುವಷ್ಟು ಪಾರ್ಕಿಂಗ್ ಜಾಗದ ಸಿದ್ದತೆ ಮಾಡಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕುಂದರ್, ದ. ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಕೋಶಾಧಿಕಾರಿ ಭರತ್ ಎರ್ಮಾಳ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶಂಕರ್ ಸಾಲ್ಯಾನ್, ಕೋಶಾಧಿಕಾರಿ ವಿನಯ್ ಕರ್ಕೇರ, ಮೋಹನ್ ಕರ್ಕೇರ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.