Udayavani Campaign: ಉಡುಪಿ-ನಗರದ ನಡುವಲ್ಲೇ ಡ್ರಾಪ್‌ಗೆ ಕೈ ಚಾಚುವ ವಿದ್ಯಾರ್ಥಿಗಳು!
Team Udayavani, Jun 18, 2024, 3:43 PM IST
![Udayavani Campaign: ಉಡುಪಿ-ನಗರದ ನಡುವಲ್ಲೇ ಡ್ರಾಪ್‌ಗೆ ಕೈ ಚಾಚುವ ವಿದ್ಯಾರ್ಥಿಗಳು!](https://www.udayavani.com/wp-content/uploads/2024/06/Kalsanka-620x317.jpg)
![Udayavani Campaign: ಉಡುಪಿ-ನಗರದ ನಡುವಲ್ಲೇ ಡ್ರಾಪ್‌ಗೆ ಕೈ ಚಾಚುವ ವಿದ್ಯಾರ್ಥಿಗಳು!](https://www.udayavani.com/wp-content/uploads/2024/06/Kalsanka-620x317.jpg)
ಉಡುಪಿ: ಈ ವಿಷಯವನ್ನು ಹೊರಗಿನ ವರು ಕೇಳಿದರೆ ಖಂಡಿತವಾಗಿಯೂ ಬೆಚ್ಚಿ ಬೀಳು ತ್ತಾರೆ. ಇದು ನಿಜವೇ ಎಂದು ಉದ್ಘರಿಸುತ್ತಾರೆ. ಉಡುಪಿಯ ಇತರ ಭಾಗದ ಜನರಿಗೂ ಹೌದಾ ಎನ್ನುವ ಪ್ರಶ್ನೆ ಎದ್ದೇಳಬಹುದು. ಯಾಕೆಂದರೆ, ಇದು ಅತೀ ಹೆಚ್ಚು ಬಸ್ ಗಳ ಆಡುಂಬೊಲ ವಾಗಿರುವ ಉಡುಪಿಯ ನಗರದ ಹೃದಯದಲ್ಲೇ ವಿದ್ಯಾರ್ಥಿಗಳು ಬಸ್ ಸಂಪರ್ಕವಿಲ್ಲದೆ ಕಂಡ ಕಂಡವರ ಮುಂದೆ ಕೈ ಚಾಚುವ, ಅಂಗಲಾಚುವ ದೈನೇಸಿ ಸ್ಥಿತಿಯಲ್ಲಿರುವ ಆತಂಕಕಾರಿ ಕಥೆ.
ಉಡುಪಿಯ ಸಿಟಿ ಬಸ್ ನಿಲ್ದಾಣದಿಂದ ಕೂಗಳತೆ ದೂರದಲ್ಲಿದೆ ಕಲ್ಸಂಕ. ಅಲ್ಲಿಂದ ಸುಮಾರು 3 ಕಿ.ಮೀ. ದೂರದಲ್ಲಿರುವುದು ಅಂಬಾಗಿಲು. ಅಂಬಾಗಿಲಿನಲ್ಲಿ ಉಡುಪಿ-ಕುಂದಾಪುರ ಹೆದ್ದಾರಿ ಕನೆಕ್ಟ್ ಆಗುತ್ತದೆ. ಅಂಬಾಗಿಲಿನಿಂದ ಬಲಕ್ಕೆ ತಿರುಗಿದರೆ ಸಂತೋಷ್ ನಗರ, ಪೆರಂಪಳ್ಳಿ ಮೂಲಕ ಮಣಿಪಾಲಕ್ಕೆ ಅತ್ಯಂತ ಹತ್ತಿರದ ಡಬಲ್ ರೋಡ್ ರಸ್ತೆ ಇದೆ. ಅಂಬಾಗಿಲು ಭಾಗದಿಂದ ಮಣಿಪಾಲಕ್ಕೆ ಸಾವಿರಾರು ವಿದ್ಯಾರ್ಥಿಗಳು ಹೋಗುತ್ತಾರೆ. ಅದಕ್ಕಿಂತಲೂ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳು, ಕಾರ್ಮಿಕರು ಮಣಿಪಾಲವನ್ನು ಆಶ್ರಯಿಸಿದ್ದಾರೆ.
ಪೆರಂಪಳ್ಳಿ ಭಾಗದಿಂದ ತೆಂಕ ನಿಡಿಯೂರಿನ ಸರಕಾರಿ ಕಾಲೇಜಿಗೆ ಹೋಗುವ, ಮಣಿಪಾಲದ ಎಂಐಟಿ ಸೇರಿದಂತೆ ನಾನಾ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ನೂರಾರು ಮಕ್ಕಳಿದ್ದಾರೆ. ಆದರೆ, ನಂಬಿದರೆ ನಂಬಿ ಬಿಟ್ಟರೆ ಬಿಡಿ, ರೂಟಿನಲ್ಲಿ ವಿದ್ಯಾರ್ಥಗಳಿಗೆ, ಉದ್ಯೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ಸೇ ಇಲ್ಲ! ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಬಸ್‌ನ ಆಸೆಯನ್ನೇ ಬಿಟ್ಟಿದ್ದಾರೆ. ಕೆಲವರು ಆಟೋದಲ್ಲಿ ಹೋಗುತ್ತಾರೆ. ಆದರೆ, ಹೆಚ್ಚಿನವರು ಈ ಭಾಗದಲ್ಲಿ ಹೋಗುವ ದ್ವಿಚಕ್ರ ವಾಹನಗಳು, ಕಾರುಗಳಿಗೆ ಕೈಹಿಡಿಯುತ್ತಾ, ನಡೆಯುತ್ತಾ ಸಾಗುತ್ತಿರುತ್ತಾರೆ. ಪುಟ್ಟ ಪುಟ್ಟ ಮಕ್ಕಳು ಕಂಡವರ ಕೈಗೆ ಕೈ ಹಿಡಿದು ಅಂಗಲಾಚುವ ದೃಶ್ಯಗಳನ್ನು ನೋಡಿದರೆ ಕರುಳು ಚುರುಕ್ ಎನ್ನುತ್ತದೆ. ಆದರೆ ಇದೆಲ್ಲ ಇಲ್ಲಿ ಮಾಮೂಲಾಗಿಬಿಟ್ಟಿದೆ!
ಎಲ್ಲೆಲ್ಲಿ ತೊಂದರೆಯಾಗುತ್ತಿದೆ?
* ಕರಂಬಳ್ಳಿ ವಾರ್ಡ್‌ನ ಸಂತೋಷ ನಗರ, ಕಕ್ಕುಂಜೆ, ಶ್ಯಾಮ್ ಸರ್ಕಲ್‌ನಲ್ಲಿ ದಿನನಿತ್ಯ ವಿದ್ಯಾಥಿಗಳು, ವಯೋವೃದ್ಧರು, ನೌಕರರು, ಮಹಿಳೆಯರು ಕಾಯುತ್ತಿರುತ್ತಾರೆ. ಅವರು ಉಡುಪಿ ಅಥವಾ ಮಣಿಪಾಲಕ್ಕೆ ಹೋಗಬೇಕಾದರೆ ದ್ವಿಚಕ್ರ ವಾಹನ ಅಥವಾ ಆಟೋ ರಿಕ್ಷಾವನ್ನೇ ಅವಲಂಬಿಸಬೇಕಿದೆ.
*ಕಲ್ಸಂಕದಿಂದ ಗುಂಡಿ ಬೈಲು ಮೂಲಕ ಅಂಬಾಗಿಲಿಗೆ ಬರುವವರಿಗೆ ಬಸ್ಸೇ ಇಲ್ಲ.
*ಅಂಬಾಗಿಲು, ಸಂತೋಷ್ ನಗರದಿಂದ ಮಣಿಪಾಲಕ್ಕೆ ಬರುವ ನೂರಾರು ವಿದ್ಯಾರ್ಥಿಗಳಿಗೆ ಬಸ್ ಮರೀಚಿಕೆ.
ಹೆಣ್ಣು ಮಕ್ಕಳು ಡ್ರಾಪ್ ಕೇಳುವುದೂ ಡೇಂಜರ್
ಕಲ್ಸಂಕ, ಗುಂಡಿಬೈಲು, ಪೆರಂಪಳ್ಳಿ, ಉಪೇಂದ್ರಪೈ ವೃತ್ತ(ಜಿಲ್ಲಾಧಿಕಾರಿ ಕಚೇರಿ ಸಮೀಪ) ರಸ್ತೆ ಬದಿಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಡ್ರಾಪ್ ಕೇಳುವ ದೃಶ್ಯಗಳನ್ನು ಕಾಣಬಹುದು. ಕೆಲವರು ಡ್ರಾಪ್ ಕೊಡುತ್ತಾರೆ. ಕೆಲವರು ಸೀದಾ ಹೋಗುತ್ತಾರೆ. ಗಂಡು ಮಕ್ಕಳೇನೋ ಕಂಡವರಿಗೆ ಕೈಚಾಚಿ ಹೋಗಬಹುದು. ಆದರೆ, ಹುಡುಗಿಯರಿಗೆ ಅದೂ ಡೇಂಜರ್. ಹೀಗಾಗಿ ಗುಂಪು ಮಾಡಿ ಕೊಂಡು ನಡೆದೇ ಹೋಗುತ್ತಾರೆ. ಕೆಲವರು ಕತ್ತಲಾದರೆ ಮನೆಯಿಂದ ಯಾರನ್ನಾದರೂ ಕರೆಸಿಕೊಳ್ಳುವ ಪರಿಸ್ಥಿತಿಯಿದೆ. ಕೆಲವು ಯುವಕರು ಡ್ರಾಪ್ ನೆಪದಲ್ಲಿ ಹುಡುಗಿಯರಿಗೆ ಕಿರುಕುಳ ನೀಡಿದ್ದೂ ಇದೆ.
ಅಂಬಡೆ ಬೆಟ್ಟಿನ ಜನರಿಗೆ ಸಂಕಷ್ಟ
ಉಡುಪಿಯಿಂದ ಪೆರಂಪಳ್ಳಿ ಚರ್ಚ್ ವರೆಗೆ ಮಾತ್ರ ಬಸ್ ವ್ಯವಸ್ಥೆ ಇದೆ. ಆದರೆ ಮಣಿಪಾಲ-ಅಂಬಾಗಿಲು ರಸ್ತೆಗೆ ಸಂಪರ್ಕಿಸುವ
ಅಂಬಡೆಬೆಟ್ಟು ಮಾರ್ಗಕ್ಕೆ ಬಸ್ ಇಲ್ಲ. ಬಸ್ ಸ್ಟಾಂಡ್ ವರೆಗೆ ಹೋಗಬೇಕಾದರೆ ಸುಮಾರು 2-3 ಕಿ.ಮೀ. ನಡೆಯಬೇಕು. ವೃದ್ಧರು, ಅಶಕ್ತರು, ರೋಗಿಗಳು, ಶಾಲಾ ಮಕ್ಕಳು ರಿಕ್ಷಾವನ್ನೇ ಅವಲಂಬಿಸಬೇಕು.
*ಗುರುಪ್ರಸಾದ್ ಉಪಾಧ್ಯ, ಶೀಂಬ್ರಮಠ
ಬಸ್ ಬಾರದೆ ವರ್ಷಗಳೇ ಆಯ್ತು!
ಮಲ್ಪೆ, ಸಂತೆಕಟ್ಟೆ, ಅಂಬಾಗಿಲು, ಪೆರಂಪಳ್ಳಿ ಈ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಬಾರದೆ ವರ್ಷಗಳೇ ಆದವು. ಹಾಗೇ ಇನ್ನೊಂದು ಎಂಬ ಬಸ್ ಬೆಳಗ್ಗೆ ಸಂಜೆ ಎರಡು ಟ್ರಿಪ್ ಬರುತ್ತಿತ್ತು. ಈಗ ಅದೂ ಇಲ್ಲ.
*ಗಿರೀಶ್, ಪೆರಂಪಳ್ಳಿ
ಎಂಜಿಎಂನಿಂದ ಚಕ್ರತೀರ್ಥ ಮೂಲಕ ದೊಡ್ಡಣಗುಡ್ಡೆಗೆ ಬಸ್ ಬೇಕು
ಪೆರಂಪಳ್ಳಿ-ದೊಡ್ಡಣ ಗುಡ್ಡೆ ಭಾಗದಿಂದ ಸಾಕಷ್ಟು ವಿದ್ಯಾರ್ಥಿಗಳು ಎಂಜಿಎಂ ಕಾಲೇಜು, ಲಾ ಕಾಲೇಜಿಗೆ ಬರುತ್ತಾರೆ, ಉದ್ಯೋಗಿಗಳೂ ಇದ್ದಾರೆ. ಇಲ್ಲಿಗೆ ಚಕ್ರತೀರ್ಥ ಮಾರ್ಗವಾಗಿ ಬಸ್ ಬೇಕು. ಈಗ ಬಸ್ ಇಲ್ಲದೆ ಎರಡು ಕಿ.ಮೀ. ನಡೆಯಬೇಕು. ಲೇಟ್ ಆದರೆ ದುಬಾರಿ ಬಾಡಿಗೆ ಕೊಟ್ಟು ರಿಕ್ಷಾದಲ್ಲಿ ಹೋಗಬೇಕು. ಗುಂಡಿಬೈಲಿಗೆ ಹೋಗುವವರಿಗೂ ಇದೇ ಸಮಸ್ಯೆ.
– ಸಾರ್ವಜನಿಕರು
ಕಲ್ಸಂಕ-ಅಂಬಾಗಿಲು-ಮಣಿಪಾಲ: ಎಷ್ಟು ಬಸ್ ಇದೆ?
ಉಡುಪಿಯಿಂದ ಪೆರಂಪಳ್ಳಿ ಮೂಲಕ ಸೀಮಿತ ಸಂಖ್ಯೆಯಲ್ಲಿ ಬಸ್ಸಿದೆ. ಬೆಳಗ್ಗೆ 6.45ಕ್ಕೆ, 7.30ಕ್ಕೆ ಮತ್ತು 8.30ಕ್ಕೆ ಉಡುಪಿಯಿಂದ ಹೊರಡುವ ಬಸ್ ಗಳೇ ಆಧಾರ. ಇನ್ನೊಂದು ಬಸ್ ಸಂತೆಕ ಟ್ಟೆಯಿಂದ ಬರುತ್ತದೆ. ಇನ್ನು ಸಂಜೆ ಕೆಲವು ಟ್ರಿಪ್ ಇದೆ. ಈ ರೂಟಲ್ಲಿ ಮಣಿಪಾಲಕ್ಕೆ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹೋಗುವವರು ಸಾವಿರಾರು ಜನರಿದ್ದಾರೆ. ಅವರೆಲ್ಲ ಪರ್ಯಾಯ ದಾರಿಗ ಳನ್ನೇ ನೋಡಬೇಕು.
ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣ
ಅಂಬಾಗಿಲು-ಪೆರಂಪಳ್ಳಿ- ಮಣಿಪಾಲ ರೂಟ್‌ನಲ್ಲಿ ಸೀಮಿತ ಸಂಖ್ಯೆಯಲ್ಲಿ ಬಸ್‌ಗಳಿದ್ದರೂ ಬಸ್ ನಿಲ್ದಾಣಗಳು ಬೇಕಾದಷ್ಟು ಇವೆ. ಆದರೆ ಅದು ಜನರಿಲ್ಲದೆ ಬಿಕೋ ಎನ್ನುತ್ತವೆ. ಬಸ್ಸಿಲ್ಲದ ವೇಳೆ ಪೆರಂಪಳ್ಳಿ, ಗುಂಡಿಬೈಲು ಭಾಗದಲ್ಲಿ ರಿಕ್ಷಾಗಳು ಆಸರೆಯಾಗುತ್ತವೆ. 10 ರೂ. ಚಾರ್ಜ್‌ಗೆ ಕರೆದುಕೊಂಡು ಹೋಗುತ್ತಾರೆ.
*ಅವಿನ್ ಶೆಟ್ಟಿ