Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ
ಮಂಜೂರಾದ ಹುದ್ದೆ 407, ಭರ್ತಿ ಹುದ್ದೆ 295
Team Udayavani, Sep 30, 2024, 2:42 PM IST
ಉಡುಪಿ ತಾಲೂಕು ಆಫೀಸ್
ಉಡುಪಿ: ಸರಕಾರಿ ಇಲಾಖೆಗಳಿಗೆ ಮಾತೃ ಇಲಾಖೆಯಾಗಿ ಕಾರ್ಯನಿರ್ವಹಿಸುವ, ಹೆಚ್ಚು ಜನ ಸಂಪರ್ಕ ಹೊಂದಿರುವ ಕಂದಾಯ ಇಲಾಖೆಯನ್ನು ನಿಭಾಯಿಸುವ ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಅಧಿಕಾರಿ, ಸಿಬಂದಿ ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗದೆ ನೂರಾರು ಸಂಖ್ಯೆಯಲ್ಲಿ ಖಾಲಿ ಬಿದ್ದಿದೆ. ಇದರಲ್ಲಿ ಹೆಚ್ಚಾಗಿ ದ್ವಿತೀಯ ದರ್ಜೆ ಸಹಾಯಕರು, ಗ್ರಾಮ ಆಡಳಿತಾಧಿಕಾರಿ, ದತ್ತಾಂಶ ನಮೂದು ಸಹಾಯಕರು, ಗ್ರೂಪ್ ‘ಡಿ’ ಸಿಬಂದಿ ಹುದ್ದೆಗಳು ಖಾಲಿ ಇವೆ.
ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ತಾಲೂಕುಗಳಾದ ಬ್ರಹ್ಮಾವರ, ಹೆಬ್ರಿ, ಬೈಂದೂರು, ಕಾಪು ಸಹಿತ ಒಟ್ಟು 7 ತಾಲೂಕುಗಳ ಮಂಜೂರಾದ ಹುದ್ದೆಗಳು ಒಟ್ಟು 407 ಇದ್ದು, 295 ಹುದ್ದೆಗಳು ಭರ್ತಿಯಾಗಿರುವುದು ಬಿಟ್ಟರೆ 112 ವಿವಿಧ ಹುದ್ದೆಗಳು ಖಾಲಿಯಾಗಿಯೆ ಉಳಿದುಕೊಂಡಿವೆ. ಕಂದಾಯ ಇಲಾಖೆ ಅತ್ಯಂತ ದೊಡ್ಡ ಇಲಾಖೆಯಾಗಿದ್ದು, ಸರಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಂದಾಯ ಇಲಾಖೆಯದ್ದೇ ಸಿಂಹಪಾಲು.ಅಲ್ಲದೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಅನುಷ್ಠಾನ ಕಾರ್ಯದಲ್ಲೂ ಕಂದಾಯ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಜತೆಗೆ ಸಾರ್ವಜನಿಕರಿಗೆ ಜಾತಿ, ಆದಾಯ ಪ್ರಮಾಣ ಪತ್ರ ಕೊಡುವುದು, ಭೂ ವ್ಯಾಜ್ಯಗಳನ್ನು ಬಗೆಹರಿಸುವುದು ಸಹಿತ ಅನೇಕ ಕೆಲಸಗಳು ಈಗಿರುವ ಸಿಬಂದಿ, ಅಧಿಕಾರಿಗಳ ಮೇಲೆ ಒತ್ತಡ ಬೀಳುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸಾರ್ವಜನಿಕರ ಸಂಪರ್ಕ ಇರುವ ತಾಲೂಕು ಕಚೇರಿಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿ, ಸಿಬಂದಿ ಹುದ್ದೆಗಳು ಹಲವು ವರ್ಷಗಳಿಂದ ಭರ್ತಿಯಾಗದೆ ಜನ ಸಾಮಾನ್ಯರಿಗೂ ಸರಿಯಾದ ಸಮಯಕ್ಕೆ ಕಂದಾಯ ಸಂಬಂಧಿತ ಸೇವೆಗಳು ಲಭ್ಯವಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಜನತೆಗೆ ಸಕಾಲದಲ್ಲಿ ಸರಕಾರಿ ಸೇವೆಗಳನ್ನು ಒದಗಿಸುವುದು ಕೆಲವು ತಾಲೂಕು ಆಡಳಿತಗಳಿಗೆ ಸವಾಲಿನ ಕೆಲಸವಾಗಿದೆ. ಸರಕಾರ ಈ ಬಗ್ಗೆ ಗಮನಕೊಟ್ಟು ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಿ ಸಿಬಂದಿ ನೇಮಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಉಡುಪಿ, ಕುಂದಾಪುರದಲ್ಲಿ ಹೆಚ್ಚು
ಎರಡು ಪ್ರಮುಖ ತಾಲೂಕುಗಳಾದ ಉಡುಪಿ, ಕುಂದಾಪುರ ತಾಲೂಕು ಕಚೇರಿಗಳಲ್ಲಿ ಸಿಬಂದಿ ಕೊರತೆ ಹೆಚ್ಚಿದೆ. ಉಡುಪಿ ತಾಲೂಕು ಕಚೇರಿಯಲ್ಲಿ 78 ಮಂಜೂರಾತಿ ಹುದ್ದೆಯಲ್ಲಿ 48 ನೇಮಕವಾಗಿ 30 ಹುದ್ದೆ ಖಾಲಿ ಇದೆ. ಕುಂದಾಪುರ ತಾಲೂಕು ಕಚೇರಿಯಲ್ಲಿ 105 ಮಂಜೂರು ಹುದ್ದೆಯಲ್ಲಿ 67 ಭರ್ತಿಯಾಗಿ 38 ಖಾಲಿ ಇದೆ. ಕಾರ್ಕಳ ತಾಲೂಕು ಕಚೇರಿಯಲ್ಲಿ 24 ಹುದ್ದೆ ಖಾಲಿ ಇದೆ. ಹೊಸ ತಾಲೂಕು ಕಚೇರಿಗಳಲ್ಲಿ ಸದ್ಯಕ್ಕೆ ಸಿಬಂದಿ ಕೊರತೆ ಸಮಸ್ಯೆ ತೀವ್ರವಾಗಿಲ್ಲ. ಬ್ರಹ್ಮಾವರ 6, ಬೈಂದೂರು 13, ಕಾಪು 8, ಹೆಬ್ರಿ ತಲೂಕು ಕಚೇರಿಗಳಲ್ಲಿ 5 ಹುದ್ದೆಗಳು ಖಾಲಿ ಇದೆ ಎಂದು ಮೂಲಗಳು ತಿಳಿಸಿವೆ.
ಸರಕಾರಕ್ಕೆ ಮನವಿ ಸಲ್ಲಿಕೆ
ಸಿಬಂದಿ ಕೊರತೆ ಇರುವ ತಾಲೂಕು ಕಚೇರಿಗಳಲ್ಲಿ ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ನಿಯೋಜಿಸಿ ಒತ್ತಡ ತಗ್ಗಿಸಲಾಗುತ್ತಿದೆ. ಎಲ್ಲ ತಾಲೂಕು ಕಚೇರಿಗಳಲ್ಲಿ ಕಂದಾಯ ಸೇವೆ ವ್ಯತ್ಯಯವಾಗದಂತೆ ಸಿಬಂದಿ, ಅಧಿಕಾರಿ ವರ್ಗ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ತಾಲೂಕು ಕಚೇರಿಗಳಲ್ಲಿಯೂ ಅಗತ್ಯ ಸಿಬಂದಿ ನೇಮಕಗೊಳಿಸಲಾಗಿದೆ. ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆ ಸಿಬಂದಿ ಕೊರತೆ ಹಾಗೂ ನೇಮಕಗೊಳಿಸುವ ಬಗ್ಗೆ ಸರಕಾರಕ್ಕೆ ಈಗಾಗಲೆ ವರದಿ ಮುಖೇನ ಮನವಿ ಸಲ್ಲಿಸಿದ್ದೇವೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿಗಳು, ಉಡುಪಿ
ಎಸ್‌ಡಿಎ, ಎಫ್ಡಿಎ ಕೆಲಸಕ್ಕೆ ವಿಎಗಳ ಬಳಕೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭೂ ಪರಿವರ್ತನೆ ಕೆಲಸಗಳು, ಜನನ ಮತ್ತು ಮರಣ ಪ್ರಮಾಣ ಪತ್ರ, ಪಿಂಚಣಿ ಸೇವೆ ಪಡೆಯಲು ಜನರು ಗ್ರಾಮ ಆಡಳಿತಾಧಿಕಾರಿಗಳನ್ನು(ವಿಎ) ಸಂಪರ್ಕಿಸಬೇಕು. ಆದರೆ ವಿಎ ಹುದ್ದೆ ಸಾಕಷ್ಟು ಸಂಖ್ಯೆಯಲ್ಲಿ ಖಾಲಿ ಇರುವುದರಿಂದ ಜನರಿಗೆ ಸಕಾಲದಲ್ಲಿ ಸೇವೆ ನೀಡಲು ಕಂದಾಯ ಇಲಾಖೆ ಸುಸ್ತಾಗುತ್ತಿದೆ. ಜಿಲ್ಲೆಯಲ್ಲಿ 215 ಮಂಜೂರಾತಿ ಹುದ್ದೆಗಳಿದ್ದು, 174 ವಿಎ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 41 ವಿಎ ಹುದ್ದೆ ಖಾಲಿ ಇದೆ. ಸದ್ಯ ಇರುವ 174 ವಿಎ ಅವರಲ್ಲಿ ಕೆಲವರನ್ನು ಫೀಲ್ಡ್ ಡ್ನೂಟಿ ಹೊರತುಪಡಿಸಿ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಸಿಬಂದಿ ಕೊರತೆ ಇರುವುದರಿಂದ ಎಸ್‌ಡಿಎ, ಎಫ್ಡಿಎ ಮಾಡುವ ಕಚೇರಿ ಕೆಲಸದ ಬಳಕೆಗೆ ನಿಯೋಜನೆಯಾಗಿದ್ದಾರೆ. ಬೆರಳಣಿಕೆಯಲ್ಲಿರುವ ಫೀಲ್ಡ್ ವಿಎಗಳು ಎರಡು ಮೂರು ಗ್ರಾಮವನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುವ ಜತೆಗೆ ವಿವಿಧ ಇಲಾಖೆಯ ಕೆಲಸ ಕಾರ್ಯಕ್ಕೂ ಪೂರಕವಾಗಿ ಸ್ಪಂದಿಸಬೇಕಿದೆ. ಇವರ ಒತ್ತಡದ ಕಾರ್ಯನಿರ್ವಹಣೆಯಲ್ಲಿ ಜನರಿಗೂ ಸಮರ್ಪಕ ಕಂದಾಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.