Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Team Udayavani, Nov 5, 2024, 8:22 PM IST
ಉಡುಪಿ: ಉಡುಪಿಯ ಪರ್ಯಾಯ ಪುತ್ತಿಗೆ ಮಠದಲ್ಲಿ ನ. 9 ರಿಂದ 3 ದಿನ ಶ್ರೀ ವಿಜಯ ದಾಸರ ಆರಾಧನಾಂಗವಾಗಿ ಶ್ರೀನಿವಾಸ ಉತ್ಸವ ಬಳಗದವರಿಂದ ʼಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನʼ ನಡೆಯಲಿದೆ.
ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗ ಸಂಯುಕ್ತ ಆಶ್ರಯದಲ್ಲಿ ನ.9ರ ಶನಿವಾರದಿಂದ ನ. 11 ರವರೆಗೆ ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ, ಶ್ರೀನಿವಾಸ ಕಲ್ಯಾಣ ಮಹೋತ್ಸವ, ಸಹಸ್ರ ಕಂಠ ಗಾಯನ – ಭಜನಾ ಮಂಡಳಿಗಳ ಸಮಾವೇಶ, ಮಧ್ವ ಪುರಂದರ ಪ್ರಶಸ್ತಿ ಪ್ರದಾನ ಮೊದಲಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವಂಬರ್ 9 ಬೆಳಿಗ್ಗೆ 9:30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಮ್ಮೇಳನವನ್ನು ಉದ್ಘಾಟಿಸುವರು.
ಕಿರಿಯ ಪಟ್ಟ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ದಿಕ್ಸೂಚಿ ಭಾಷಣ ಮಾಡುವರು.
ಖ್ಯಾತ ದಾಸ ಸಾಹಿತ್ಯ ಸಂಶೋಧಕ ಡಾ. ಎ.ಬಿ. ಶ್ಯಾಮಾಚಾರ್ಯರು ಸಮ್ಮೇಳನದ ಅಧ್ಯಕ್ಷರಾಗಿ ಭಾಗವಹಿಸುವರು.
ಅವರು ರಚಿಸಿರುವ ‘ವಿಜಯ ಚಿಂತನಾಮೋದ’ ಹಾಗೂ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ ಗೋಪಾಲಾಚಾರ್ಯ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದಲ್ಲಿ ಸಮ್ಮೇಳನದಲ್ಲಿ ಮಂಡಿಸುವ ಪ್ರಬಂಧಗಳ ಸಂಕಲನ ‘ವಿಜಯ ವಿಠಲ’ ಕೃತಿಗಳು ಹಾಗೂ ಸರ್ವಜ್ಞ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಲೋಕಾರ್ಪಣೆಯಾಗಲಿದೆ.
ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ಯು.ಎಸ್.ಎ. ಸಂಶೋಧಕ ವಿದ್ವಾಂಸ ಕೇಶವ ರಾವ್ ತಾಡಪತ್ರಿ ಮತ್ತು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸೇಡಂನ ದಾಸಧೇನು ಟ್ರಸ್ಟ್ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ಭಾಷಣ ಮಾಡುವರು. ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಡಾ.ಮುದ್ದು ಮೋಹನ್ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ನಂತರ ಸಮ್ಮೇಳನದಲ್ಲಿ ನೊಂದಾಯಿಸಿಕೊಂಡ ಪ್ರತಿನಿಧಿಗಳಿಂದ ಪ್ರಬಂಧ ಮಂಡನೆ- ವಿಚಾರಗೋಷ್ಠಿ, ಸಂಜೆ ಶ್ರೀಶೈಲ ಪ್ರಭ ಕನ್ನಡ ವಿಭಾಗದ ವಿದ್ವಾನ್ ಗೊಗ್ಗಿ ಬಲರಾಮಚಾರ್ಯರಿಂದ ಮತ್ತು ಗುಂಡೂರು ಪವನ ಕುಮಾರ್ ಗಂಗಾವತಿ ರವರಿಂದ ವಿಜಯ ದಾಸರ ಕುರಿತು ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ.
ನವೆಂಬರ್ 10ರ ಭಾನುವಾರ ಬೆಳಿಗ್ಗೆ 9 ರಿಂದ ಕಲಿಯುಗದ ಆರಾಧ್ಯ ದೈವ ತಿರುಮಲ ಶ್ರೀನಿವಾಸನ ವೈಭವದ ಕಲ್ಯಾಣ ಮಹೋತ್ಸವ- ಶ್ರೀನಿವಾಸ ಉತ್ಸವ ಬಳಗದ ತಾಯಲೂರು ವಾದಿರಾಜ ನೇತೃತ್ವದಲ್ಲಿ ಡಾ. ಬಿ ಗೋಪಾಲಾಚಾರ್ಯರ ವ್ಯಾಖ್ಯಾನ,ವಿದ್ವಾನ್ ಡಾ.ರಾಯಚೂರು ಶೇಷಗಿರಿ ದಾಸ್ ಮತ್ತು ವಿದುಷಿ ಶುಭ ಸಂತೋಷ ರವರ ಗಾಯನದೊಂದಿಗೆ ನಡೆಯಲಿದೆ.
ಕಲಬುರ್ಗಿಯ ಉದ್ಯಮಿ ಸಂಜೀವ ಗುಪ್ತ, ದಾಸ ಸೌರಭದ ಪಾಂಡುರಂಗ ರಾವ್ ಕಂಪ್ಲಿ ಮತ್ತು ಕೆ.ಆರ್. ಗುರುರಾಜ ರಾವ್ ಕುಟುಂಬದವರು ವಿಶೇಷ ಸೇವಾಕರ್ತರಾಗಿರುತ್ತಾರೆ.
ಉಡುಪಿ ತಾಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಹಯೋಗದಲ್ಲಿ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಸಹಸ್ರ ಕಂಠ ಗಾಯನ ಮತ್ತು ಭಜನಾ ಮಂಡಳಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಖ್ಯಾತ ವೈದ್ಯ ಡಾ.ವೇಣುಗೋಪಾಲ್ ಮತ್ತು ಮುಂಬೈನ ಎನ್.ಆರ್. ರಾವ್ ವಿಶೇಷ ಆಹ್ವಾನಿತರಾಗಿರುವರು.
ಇದೇ ಸಂದರ್ಭದಲ್ಲಿ ಸಾಫಲ್ಯ ಮೂವೀಸ್ ನಿರ್ಮಾಣದ ಭಕ್ತಿ ಪ್ರಧಾನ ‘ಸಂಕೀರ್ತನ’ ಚಲನಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದೆ.
ಖ್ಯಾತ ಚಲನಚಿತ್ರ ನಟ ಶ್ರೀಧರ್, ನಿರ್ಮಾಪಕ ಪದ್ಮಕಲಾ ಗುಂಡು ರಾವ್, ನಿರ್ದೇಶಕ ಕಲಾ ಗಂಗೋತ್ರಿ ಮಂಜು, ಸಂಭಾಷಣಕಾರ ಜೆ.ಎಂ. ಪ್ರಹ್ಲಾದ್, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಹಾಗೂ ಚಿತ್ರ ತಂಡ ಭಾಗವಹಿಸಲಿದ್ದಾರೆ.
ನ.11ರ ಸೋಮವಾರ ಬೆಳಗ್ಗೆ 7 ಗಂಟೆಯಿಂದ ಶ್ರೀ ವಿಜಯ ದಾಸರ ಆರಾಧನಾ ಮಹೋತ್ಸವ -ನಗರ ಸಂಕೀರ್ತನೆ ಯಾಯೀವಾರ ನಡೆಯಲಿದೆ.
ಹುಬ್ಬಳ್ಳಿಯ ಲೆಕ್ಕಪರಿಶೋಧಕ ಸಿ.ಆರ್. ಢವಳಗಿ ಉಪಸ್ಥಿತಿಯಲ್ಲಿ ಇಂಗ್ಲೀಷಿನಲ್ಲಿ ಪ್ರಬಂಧ ಮಂಡನೆ, ಸಂಜೆ 5 ರಿಂದ ಪರ್ಯಾಯ ಶ್ರೀಪಾದದ್ವಯರ ದಿವ್ಯ ಉಪಸ್ಥಿತಿಯಲ್ಲಿ ರಥ ಬೀದಿಯಲ್ಲಿ ಶ್ರೀ ವಿಜಯದಾಸರ ಭಾವಚಿತ್ರದ ಶೋಭಾ ಯಾತ್ರೆ ನಡೆಯಲಿದೆ.
ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ, ಹಿರಿಯ ವೈದ್ಯ -ಕಲಾಪೋಷಕ ಡಾ. ಎಂ ಆರ್ ವಿ ಪ್ರಸಾದ್ ರವರಿಗೆ ಮಧ್ವ ಪುರಂದರ ಪ್ರಶಸ್ತಿ ಪ್ರದಾನ, ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗದ ಸಹ ನಿರ್ದೇಶಕ ಡಾ. ಬಿ ಎಸ್ ಅನಿಲ ಕುಮಾರ ಬೊಮ್ಮಘಟ್ಟ ರವರು ಸಮಾರೋಪ ಮಾತುಗಳನ್ನಾಡುವರು.
ಶ್ರೀವಾರಿ ಫೌಂಡೇಶನ್ ಅಧ್ಯಕ್ಷ ಎಸ್.ವೆಂಕಟೇಶಮೂರ್ತಿ, ಭಾರತ ವಿಕಾಸ ಸಂಗಮ ಮಹಿಳಾ ವಿಭಾಗದ ಹುಬ್ಬಳ್ಳಿಯ ರೂಪಾ ಢವಳಗಿ,ಹರಿದಾಸ ಸಂಪದ ಟ್ರಸ್ಟ್ ಕಾರ್ಯದರ್ಶಿ ಮಧುಸೂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಮೂರು ದಿನಗಳ ಸಮಾವೇಶದಲ್ಲಿ ವಿದ್ವಾಂಸರಾದ ಡಾ. ಎನ್.ಕೆ. ರಾಮಶೇಷನ್, ಪರಶುರಾಮ ಬೆಟಗೇರಿ, ವಾರುಣಿ ಜಯತೀರ್ಥ, ಲಕ್ಷ್ಮಿಕಾಂತ್ ಮೋಹರೀರ, ಚಿಪ್ಪಗಿರಿ ಮೋಹನ್ ಮೊದಲಾದರು ಭಾಗವಹಿಸುವರು.
ಪ್ರಣವ ಮೀಡಿಯಾ ಹೌಸ್ ಪ್ರಕಾಶನ, ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಭಾರತೀಯ ಸ್ಟೇಟ್ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ದಿವಾನರು ಮತ್ತು ಶ್ರೀನಿವಾಸ ಉತ್ಸವ ಬಳಗದ ಟಿ ವಾದಿರಾಜರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ 9886108550/9739369621 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.