Udupi; ಬಾಲರಾಮನ ಪ್ರತಿಷ್ಠಾಪನ -ಸಂತ ಸಮಾಜಕ್ಕೆ ಕೃಷ್ಣಾರ್ಪಣ
ಶ್ರೀಕೃಷ್ಣ ಮಠದಲ್ಲಿ ಅಭಿನಂದನೆ ಸ್ವೀಕರಿಸಿ ಪೇಜಾವರ ಶ್ರೀಗಳು ; ಜೋಡುಕಟ್ಟೆಯಲ್ಲಿ ಅದ್ದೂರಿ ಸ್ವಾಗತ
Team Udayavani, Mar 18, 2024, 1:18 AM IST
ಉಡುಪಿ: ವಿಶಾಲ ಭಕ್ತರ ಪರಿಶ್ರಮದಿಂದ ನಿರ್ಮಾಣಗೊಂಡ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರತಿಷ್ಠಾಪನೆಯನ್ನು ನಮ್ಮ ಗುರುಗಳೂ ಸಹಿತ ಸರ್ವಸಂತರ ಪರವಾಗಿ ನೆರವೇರಿಸಿದ್ದೇನಷ್ಟೆ. ಆದ್ದರಿಂದ ಇದರ ಕೀರ್ತಿ ಸಂತ ಸಮಾಜಕ್ಕೆ ಸಲ್ಲುತ್ತದೆ. ಭರತಖಂಡದಲ್ಲಿ ಹಿಂದೂ ಗಳು ಬಹುಸಂಖ್ಯಾಕರಾಗಿದ್ದಷ್ಟು ಕಾಲ ರಾಮಮಂದಿರ ಉಳಿಯಲು ಸಾಧ್ಯ. ಮುಂದಿನ ಪೀಳಿಗೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಪೇಜಾವರ ಶ್ರೀಗಳ ಸ್ವಾಗತ ಮತ್ತು ಅಭಿನಂದನ ಸಮಿತಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಅಭಿನಂದನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯಿಂದಲೇ ಸಂಸ್ಕೃತಿ, ಸಂಸ್ಕಾರದ ಪರಿಚಯ ತಿಳಿಸಬೇಕು. ಸಾಹಿತ್ಯದಲ್ಲಿಯೂ ಸಂಸ್ಕೃತಿಯ ಆಳ ಅಧ್ಯಯನವಿದೆ. ಪಾಶ್ಚಾತ್ಯ ಪ್ರಭಾವದಿಂದಾಗಿ ಇತ್ತೀಚೆಗೆ 2-3 ಅಕ್ಷರಗಳ ಹೆಸರು ಟ್ರೆಂಡ್ ಆಗುತ್ತಿದೆ. ನಮ್ಮ ಪುರಾಣ, ಕಾವ್ಯ ಗಳು, ಮಹಾಭಾರತ, ರಾಮಾಯಣಗಳಲ್ಲಿರುವ ಹೆಸರುಗಳ ಪೈಕಿ ಕೆಲವೊಂದನ್ನು ಆಯ್ಕೆ ಮಾಡಿ ಕೊಳ್ಳಬೇಕು. ಆವಾಗ ಮಗು ತನ್ನ ಹೆಸರಿನ ಹಿನ್ನೆಲೆ ತಿಳಿದುಕೊಳ್ಳುತ್ತದೆ. ಈ ಮೂಲಕ ಅವರಿಗೆ ಸಂಸ್ಕೃತಿಯ ಪರಿಚಯವಾಗಲು ಸಾಧ್ಯವಿದೆ. ಪುನರ್‌ನಾಮಕರಣಕ್ಕೂ ಕಾನೂನಿನಲ್ಲಿ ಅವಕಾಶವಿದೆ ಎಂದರು.
ಮಂದಿರ ಉಳಿಸಲು ಶ್ರಮಿಸಿ
ಕಟ್ಟಿರುವ ಮಂದಿರವನ್ನು ಉಳಿಸುವ ಕೆಲಸವಾಗಬೇಕು. ರಾಮರಾಜ್ಯಕ್ಕಾಗಿ ರಾಮಮಂದಿರ ಬೇಕು. ರಾಮದೇವರು ಸಂತೋಷ ಪಡುವಂತೆ ಆರಾಧಿಸಬೇಕು. ರಾಮಮಂದಿರದಂತೆ ರಾಮರಾಜ್ಯ ನಿರ್ಮಾಣಕ್ಕೆ ಕೈಜೋಡಿಸಬೇಕು. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು ಎಂದರು.
ಶ್ರೀ ಪೇಜಾವರ ಶ್ರೀಗಳ ಸ್ವಾಗತ ಮತ್ತು ಅಭಿನಂದನ ಸಮಿತಿ ವತಿಯಿಂದ ಶಾಸಕ ಯಶ್‌ಪಾಲ್ ಎ. ಸುವರ್ಣ ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್ ಮಾಲಾರ್ಪಣೆಗೈದು ಅಯೋಧ್ಯಾ ರಾಮಪ್ರಾಣಪ್ರತಿಷ್ಠಾಪನೆಗೈಯುವ ಸಂದರ್ಭದ ಬೃಹತ್ ಛಾಯಾಚಿತ್ರ ಸ್ಮರಣಿಕೆ ನೀಡಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವೇದಿಕೆಯಲ್ಲಿದ್ದರು. ವಿದ್ವಾನ್ ರಾಮನಾಥ ಆಚಾರ್ಯ ಅಭಿನಂದನೆ ಪತ್ರ ವಾಚಿಸಿದರು. ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಪ್ರಸ್ತಾವನೆಗೈದರು. ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸ್ವಾಗತಿಸಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪುತ್ತಿಗೆ ಮಠದ ದಿವಾನ್ ಮುರಳೀಧರ ಆಚಾರ್ಯ, ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು, ಕಾಪು ವಾಸುದೇವ ಶೆಟ್ಟಿ, ಭುವನೇಂದ್ರ ಕಿದಿಯೂರು, ಗೋವಿಂದರಾಜ ಭಟ್, ಡಾ| ಹರಿಶ್ಚಂದ್ರ, ಮುರಳಿ ಕಡೆಕಾರ್, ಪೊ›| ಸದಾಶಿವ ರಾವ್, ಮಹೇಶ ಠಾಕೂರ್, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.
ಅಭಿನವ ಆಂಜನೇಯ: ಪುತ್ತಿಗೆ ಶ್ರೀ ಬಣ್ಣನೆ
ಅಯೋಧ್ಯೆಯ ನೂತನ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾನೆ ಹಾಗೂ ಮಂಡಲ ಪರ್ಯಂತ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು “ಅಭಿನವ ಆಂಜನೇಯ’ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಣ್ಣಿಸಿದರು.
ದಕ್ಷಿಣೋತ್ತರದ ಸೇತು
ಅಯೋಧ್ಯೆ ಉತ್ತರಭಾರತದಲ್ಲಿದ್ದರೂ ಶಿಲ್ಪ ನಿರ್ಮಾಣ ಮಾಡಿದವರು ಹಾಗೂ ಪ್ರಾಣಪ್ರತಿಷ್ಠೆ ಮಾಡಿದವರು ನಮ್ಮ ರಾಜ್ಯದವರು ಹಾಗಾಗಿ ಉತ್ತರ-ದಕ್ಷಿಣದ ಬೆಸುಗೆ ಪೇಜಾವರ ಶ್ರೀಗಳ ಮುಖಾಂತರ ನಡೆದಿದೆ. ಈ ಮೂಲಕ ಅಯೋಧ್ಯೆಯಲ್ಲೂ ಸ್ನೇಹ ಸೇತು ಸ್ಥಾಪಿಸಿದ್ದಾರೆ. ಪೇಜಾವರ ಶ್ರೀವಿಶ್ವೇಶತೀರ್ಥರು ಮಾಡಿದ ಸತ್ಕಾರ್ಯವನ್ನು ಶ್ರೀವಿಶ್ವಪ್ರಸನ್ನತೀರ್ಥರು ಮುಂದುವರಿಸಿದ್ದಾರೆ. ಮಂಗಳೂರಿನಿಂದ ಅಯೋಧ್ಯೆಗೆ ವಿಮಾನಸಂಪರ್ಕ ಕಲ್ಪಿಸಿದರೆ ಈ ಸಂಬಂಧ ಮತ್ತಷ್ಟು ಶಾಶ್ವತವಾಗಲಿದೆ ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು.
ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ಸಂಕಲ್ಪಿಸಿರುವ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡುವ ಯೋಜನೆಗೆ ಪೂರಕವಾಗಿ ಪುತ್ತಿಗೆ ಮಠದ ಪರ್ಯಾಯದ ಅವಧಿಯಲ್ಲಿ ಮತ್ತು ಅನಂತರವೂ ಅರ್ಹ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಚಿಂತನೆ ನಡೆಸಲಾಗಿದೆ. ಇದು ಶ್ರೀ ರಾಮ ದೇವರ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಪರ್ಯಾಯ ಮಠದ ವತಿಯಿಂದ ಪೇಜಾವರ ಶ್ರೀಗಳಿಗೆ ಪುತ್ತಿಗೆ ಶ್ರೀಗಳು ಹಾರ, ಶಾಲು, ಫಲಪುಷ್ಪ, ಪುಷ್ಪ ಕಿರೀಟ ಧಾರಣೆ, ಬೃಹತ್ ಕಡಗೋಲು ನೀಡಿ ಪುಷ್ಪಾರ್ಚನೆಗೈದು ರಜತಫಲಕ ಅಭಿನಂದನ ಪತ್ರವಿತ್ತು ಸತ್ಕರಿಸಿದರು.
ಬಜಪೆಯಿಂದ ಉಡುಪಿಗೆ ಭವ್ಯ ಸ್ವಾಗತ
ಅಯೋಧ್ಯೆಯಿಂದ ಆಗಮಿಸಿದ ಪೇಜಾವರ ಶ್ರೀಗಳನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಬಳಿಕ ಬಜಪೆಯ ಶ್ರೀ ರಾಮಮಂದಿರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಹೆಜಮಾಡಿ ಟೋಲ್‌ಗೇಟ್ ಬಳಿ, ಕಾಪು ಹೊಸಮಾರಿಗುಡಿ ಬಳಿ, ಕಟಪಾಡಿ, ಉಡುಪಿಯ ಜೋಡುಕಟ್ಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಜೋಡುಕಟ್ಟೆಯಿಂದ ಐವತ್ತಕ್ಕೂ ಅಧಿಕ ಬೈಕ್ ಗಳ ಜಾಥಾ ದೊಂದಿಗೆ ಸಂಸ್ಕೃತ ಕಾಲೇಜಿಗೆ ತೆರೆದ ವಾಹನದಲ್ಲಿ ಶ್ರೀಗಳು ಆಗಮಿಸಿದರು. ಈ ಸಂದರ್ಭ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಗೌರವಾರ್ಪಣೆ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಪ್ರಸನ್ನ ಆಚಾರ್ಯ ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರಮುಖ ನಾಗರಿಕರು ಸ್ವಾಗತಿಸಿದರು. ಶ್ರೀಮಠದ ಸಾಂಪ್ರದಾಯಿಕ ಬಿರುದಾವಳಿ, ಚೆಂಡೆ ವಾದ್ಯ ಭಜನೆಯೊಂದಿಗೆ ಕಾಲ್ನಡಿಗೆಯಲ್ಲಿ ರಥಬೀದಿಗೆ ಬಂದು ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವರ ದರ್ಶನ ಪಡೆದ ಬಳಿಕ ಶ್ರೀಕೃಷ್ಣ ಮಠಕ್ಕೆ ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪರ್ಯಾಯ ಪುತ್ತಿಗೆ ಶ್ರೀಗಳು ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿಸಿದರು. ಚಂದ್ರಶಾಲೆಯಲ್ಲಿ ಮಠದ ಸಾಂಪ್ರದಾಯಿಕ ಗಂಧಾದ್ಯುಪಚಾರ ಫಲ-ಪುಷ್ಪ ಸಹಿತ ಮಾಲಿಕೆ ಮಂಗಳಾರತಿ ಅರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.