ಉಡುಪಿ: 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ
Team Udayavani, Aug 13, 2021, 6:55 AM IST
ಉಡುಪಿ: ಸರಕಾರಿ ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ಪಿಪಿಪಿ ಯೋಜನೆಯಡಿ ಕಾಲೇಜುಗಳನ್ನು ಆರಂಭಿಸ ಲಾಗುವುದು. ಈ ಪಟ್ಟಿಯಲ್ಲಿ ಮೊದಲ ಹೆಸರು ಉಡುಪಿ ಇರಲಿದ್ದು, ನಾನೇ ಶಿಲಾನ್ಯಾಸ ಮಾಡಲಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ಸ್ವಂತ ಆಸ್ಪತ್ರೆ ಅತ್ಯಗತ್ಯ ಎಂದರು.
ಮೂಲ ಸೌಕರ್ಯ ಹೆಚ್ಚಳ :
ರಾಜ್ಯದಲ್ಲಿ ವರ್ಷದ ಅವಧಿಯಲ್ಲಿ 25 ಸಾವಿರ ಆಕ್ಸಿಜನ್ ಬೆಡ್, 6 ಸಾವಿರ ವೆಂಟಿಲೇಟರ್ ಬೆಡ್ ಸಹಿತ ಆಸ್ಪತ್ರೆಗಳಲ್ಲಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಿ ಜನರ ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಬಿಆರ್‌ಎಸ್ ಆಸ್ಪತ್ರೆ: ತಾಂತ್ರಿಕ ಒಪ್ಪಿಗೆ :
ಬಿಆರ್‌ಎಸ್ ಆಸ್ಪತ್ರೆಯನ್ನು ಸರಕಾರವೇ ಮುನ್ನಡೆಸಲು ತಾಂತ್ರಿಕ ಒಪ್ಪಿಗೆ ನೀಡಲಾಗಿದೆ. ಇದ್ದು ಮುಂದಿನ ವಾರದಿಂದ ಜಾರಿಗೆ ಬರಲಿದೆ ಎಂದರು.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಲಾಲಾಜಿ ಮೆಂಡನ್, ರಾಘವೇಂದ್ರ ಕಿಣಿ, ಸುಮಿತ್ರಾ ನಾಯಕ್, ಡಿ.ಸಿ. ಜಗದೀಶ್, ಡಾ| ತ್ರಿಲೋಕಚಂದ್ರ ಕೆ.ವಿ., ಸಿ. ಮಂಜಪ್ಪ, ಜಿ.ಪಂ.ಸಿಇಒ ಡಾ| ನವೀನ್ ಭಟ್ ವೈ., ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಎಸ್‌ಪಿ ಎನ್.ವಿಷ್ಣುವರ್ಧನ್, ಜಿಲ್ಲಾ ಸರ್ಜನ್ ಡಾ| ಮಧುಸೂಧನ್ ನಾಯಕ್, ಡಿಎಚ್‌ಒ ಡಾ| ನಾಗಭೂಷಣ ಉಡುಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀಕೃಷ್ಣನ ದರ್ಶನಕ್ಕಷ್ಟೇ ಬರುತ್ತಿದ್ದೆ! :
ಈ ಹಿಂದೆ ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆಂದು ಬರುತ್ತಿದ್ದೆ. ಈ ನಡುವೆ ಸಚಿವನಾಗುವ ಯೋಗ ಬಂತು. ಬಳಿಕ ಸಿಎಂ ಆದೆ. ಉಡುಪಿಯ ಜನರು ಹೃದಯ ವೈಶಾಲ್ಯವಿರುವವರು ಎಂದು ಸಿಎಂ ಹೇಳಿದರು.
ಯುಜಿಡಿ ಪ್ರಕ್ರಿಯೆಗೆ ಶೀಘ್ರ ಅನುಮೋದನೆ :
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವರ್ಣಾ ನದಿಯ ಮೂಲಕ ಮಣ್ಣಪಳ್ಳಕ್ಕೆ ಏತನೀರಾವರಿ ಮಾಡುವ ಬಗ್ಗೆ ಹಾಗೂ ನಗರದ ಯುಜಿಡಿ ಸರಿಪಡಿಸಲು 280 ಕೋ.ರೂ.ಡಿಪಿಆರ್ ಮಾಡಿ ನೀಡಲಾಗಿದೆ. ಶೀಘ್ರ ಇದನ್ನು ಮಂಜೂರು ಮಾಡಬೇಕು ಎಂದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಮುಂದಿನ ಸಭೆಯಲ್ಲಿಯೇ ಉಡುಪಿ ನಗರದ ಯುಜಿಡಿ ಪ್ರಕ್ರಿಯೆಗೆ ಅನುಮೋದನೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.