ಗ್ರಾಮೀಣ ಸಮಸ್ಯೆ ತಿಳಿಯಲು ಅವಕಾಶ: ಡಿಸಿ ಕೂರ್ಮಾರಾವ್
ಹಾರ್ದಳ್ಳಿ - ಮಂಡಳ್ಳಿ: ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ
Team Udayavani, Dec 17, 2022, 10:24 PM IST
ಕುಂದಾಪುರ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಗ್ರಾಮಸ್ಥರ ಅಹವಾಲುಗಳನ್ನು ಪಡೆದು, ಬಗೆಹರಿಸುವ ಜತೆಗೆ ಗ್ರಾಮೀಣ ಭಾಗದ ಹತ್ತಾರು ಸಮಸ್ಯೆಗಳು, ಅಲ್ಲಿನ ವಿಶೇಷತೆಗಳು, ಕೃಷಿ ಬೆಳೆಗಳ ಪ್ರಯೋಗಗಳನ್ನು ಅರಿತುಕೊಳ್ಳಲು ಅವಕಾಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.
ಅವರು ಶನಿವಾರ ಹಾರ್ದಳ್ಳಿ – ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಹಾಲಾಡಿಯ ಅನಂತರ ಕುಂದಾಪುರ ತಾ|ನಲ್ಲಿ ಇದು ನನ್ನ ಎರಡನೇ ಗ್ರಾಮವಾಸ್ತವ್ಯವಾಗಿದ್ದು, ಈ ಕಾರ್ಯಕ್ರಮದಿಂದ ಡಿಸಿ, ಎಸಿ ಸಹಿತ ಎಲ್ಲ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರ ಬಳಿಗೆ ಬರುವುದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆಯುಷ್ಮಾನ್ ಭಾರತ್ ಕಾರ್ಡ್, ನರೇಗಾದಂತಹ ವಿವಿಧ ಇಲಾಖೆಗಳಿಂದ ಸಿಗುವಂತಹ ಸೌಲಭ್ಯ, ಮಾಹಿತಿಗಳನ್ನು ಸಹ ಪಡೆದುಕೊಳ್ಳಬಹುದು ಎಂದವರು ಹೇಳಿದರು.
18 ಮಂದಿಗೆ ಹಕ್ಕುಪತ್ರ ವಿತರಣೆ
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 18 ಮಂದಿ 94 ಸಿಯಡಿ ಹಕ್ಕುಪತ್ರಗಳನ್ನು ವಿತರಿಸಿದರು. ಇದೇ ವೇಳೆ 26 ಮಂದಿ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಸವಲತ್ತುಗಳನ್ನು ಹಸ್ತಾಂತರಿಸಲಾಯಿತು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ತೆಂಗು, ಅಡಿಕೆ ಗಿಡ ನೆಡಲು, ಗುಂಡಿ ತೆಗೆಯಲು ನರೇಗಾದಡಿ ಅವಕಾಶವಿದೆ. ಇದೆಲ್ಲದಕ್ಕೂ ಉದ್ಯೋಗ ಚೀಟಿ ಆವಶ್ಯಕವಾಗಿದೆ. ಜಿಲ್ಲೆಯಲ್ಲಿ 70 ತೆಂಗು ಬೆಳೆಗಾರರ ಸಮಿತಿಯಿದ್ದು, ಅದರಲ್ಲಿ ಗರಿಷ್ಠ 34 ಕುಂದಾಪುರದಲ್ಲಿದೆ. ತೆಂಗು ಕೃಷಿ ಕಾರ್ಮಿಕರಿಗೂ ವಿಮಾ ಸೌಲಭ್ಯವಿದ್ದು, ಬಿದ್ದು ಗಾಯಗೊಂಡರೆ, ಸಾವು-ನೋವು ಸಂಭವಿಸಿದರೆ ಪರಿಹಾರ ಸಿಗಲಿದೆ. ಈ ವಿಮೆಯನ್ನು ನೋಂದಾಯಿಸಿಕೊಳ್ಳಬಹುದು, ಹನಿ ನೀರಾವರಿ, ತೆಂಗು ಪುನಶ್ಚೇತನಕ್ಕೂ ಸಹಾಯಧನವನ್ನು ರೈತರು ಪಡೆದುಕೊಳ್ಳಬಹುದು ಎಂದವರು ಮಾಹಿತಿ ನೀಡಿದರು.
ಜೆಇ ಲಸಿಕೆ : ಶೇ.80 ಪೂರ್ಣ
ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆಯಾಗಿದ್ದು, ಈ ನಿಟ್ಟಿನಲ್ಲಿ 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಶಾಲೆ, ಅಂಗನವಾಡಿ ಹಾಗೂ ಹೊರಗುಳಿದ ಹೀಗೆ 3 ಹಂತಗಳಲ್ಲಿ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಶೇ. 80 ರಷ್ಟು ಪೂರ್ಣಗೊಂಡಿದೆ. ಯಾರೆಲ್ಲ ಲಸಿಕೆ ಪಡೆದಿಲ್ಲವೋ ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮನವಿ ಮಾಡಿಕೊಂಡರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮೊಹಮ್ಮದ್ ಇಸಾಕ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ| ಶಂಕರ್ ಶೆಟ್ಟಿ ತಮ್ಮ ಇಲಾಖೆಯ ಕುರಿತಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಾರ್ದಳ್ಳಿ – ಮಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಶೆಟ್ಟಿ ಚಿಟ್ಟೆಬೈಲು, ಉಪಾಧ್ಯಕ್ಷೆ ರೇಖಾ ಮೊಗವೀರ, ಭೂ ದಾಖಲೆಗಳ ಇಲಾಖಾ ಉಪನಿರ್ದೇಶಕ ರವೀಂದ್ರ, ಕುಂದಾಪುರ ತಾ.ಪಂ. ಇಒ ಮಹೇಶ ಹೊಳ್ಳ, ಪ್ರಾಂಶುಪಾಲ ವಿಘ್ನೇಶ್ವರ ಭಟ್, ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಪ್ರಸ್ತಾವಿಸಿ, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ವಂದಿಸಿದರು.
ಹತ್ತಾರು ಸಮಸ್ಯೆ ಪ್ರಸ್ತಾವ
ವಾರಾಹಿ ಕಾಮಗಾರಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸಿವೆ, ಜನ್ನಾಡಿ ಸಂಪರ್ಕ ರಸ್ತೆ, ಬೀದಿ ದೀಪ ಇಲ್ಲದಿರುವ, ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗುತ್ತಿರುವ, ಮಣ್ಣಿನ ರಸ್ತೆ ಅಭಿವೃದ್ಧಿ, ಅರ್ಜಿ ಸಲ್ಲಿಸಿದರೂ ಹಕ್ಕುಪತ್ರ ಸಿಗದಿರುವ ಬಗ್ಗೆ, ತೆರಿಗೆ ಪಾವತಿ ಗೊಂದಲ ಸೇರಿದಂತೆ ವಿವಿಧ ಅಹವಾಲುಗಳನ್ನು ಡಿಸಿಯವರಿಗೆ ಸಲ್ಲಿಸಿ, ಕೆಲವೊಂದಕ್ಕೆ ಅಲ್ಲಿಯೇ ಪರಿಹಾರ ಕಂಡು ಕೊಂಡರೆ, ಮತ್ತೆ ಕೆಲವು ಸಮಸ್ಯೆಗಳಿಗೆ ಆದ್ಯತೆ ನೆಲೆಯಲ್ಲಿ ಬಗೆಹರಿಸುವಂತೆ ಸೂಚಿಸಿದರು.
ಆರೋಗ್ಯ ಶಿಬಿರ
ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಬಿದ್ಕಲ್‌ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಆರೋಗ್ಯ ಶಿಬಿರವನ್ನು ಸಹ ಆಯೋಜಿಸಲಾಗಿದ್ದು, ಗ್ರಾಮಸ್ಥರ ಆರೋಗ್ಯವನ್ನು ತಪಾಸಣೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.