Udupi 2ನೇ ಪಟ್ಟಿಯಲ್ಲೂ ಬರ ತಾಲೂಕು ಘೋಷಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Sep 22, 2023, 10:35 PM IST
ಉಡುಪಿ: ಬರಪೀಡಿತ ತಾಲೂಕುಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಒಂದು ತಾಲೂಕು ಮಾತ್ರ ಘೋಷಣೆಯಾಗಿದೆ. ಬೆಳಗಾವಿಯ 14 ತಾಲೂಕುಗಳಲ್ಲಿ ನನ್ನ ಮತಕ್ಷೇತ್ರದ ತಾಲೂಕು ಹೊರತುಪಡಿಸಿ ಉಳಿದೆಲ್ಲವೂ ಘೋಷಣೆಯಾಗಿದೆ.
ಬರ ಪೀಡಿತ ಪಟ್ಟಿ ಘೋಷಣೆಯಲ್ಲಿ ಯಾವುದೇ ರಾಜಕೀಯವಿಲ್ಲ. ಮಳೆ ಪ್ರಮಾಣ ಹಾಗೂ ವಿವಿಧ ಅಂಶಗಳನ್ನು ಗಮನಿಸಿ 2ನೇ ಪಟ್ಟಿಯಲ್ಲಿ ಕೆಲವು ಬರ ತಾಲೂಕು ಘೋಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾವೇರಿ ನೀರು ರಾಜ್ಯದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತವಾಗಿ ಸಂಬಂಧಪಟ್ಟ ಸಚಿವರು ದಿಲ್ಲಿಯಲ್ಲಿದ್ದಾರೆ. ಯಾರು ಕೈಕಟ್ಟಿ ಕುಳಿತಿಲ್ಲ. ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಎಲ್ಲ ರೀತಿಯ ಹೋರಾಟ ನಡೆಸುತ್ತಿದೆ. ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಆದೇಶವನ್ನು ಗಮಿಸುತ್ತಿದ್ದೇವೆ. ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗದಂತೆ ಕ್ರಮವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಮಸೂದೆಗೆ ಸ್ವಾಗತ
ಕೇಂದ್ರ ಸರಕಾರ ತಂದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಮಹಿಳೆಯರ ಪರವಾಗಿ ಕೆಲಸ ಮಾಡುತ್ತ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಬಹಳ ಶಕ್ತಿ ಬೇಕಾಗುತ್ತದೆ. ಇಂದಿರಾ ಗಾಂಧಿಯವರು ಉಳುವವನೇ ಭೂಮಿ ಒಡೆಯ ಕಾನೂನು ತಂದಿದ್ದು, ರಾಜೀವ್‌ಗಾಂಧಿಯವರು 18 ವರ್ಷ ವಯಸ್ಕರಿಗೆ ಮತದಾನದ ಹಕ್ಕು ನೀಡಿರುವುದು ಮತ್ತು ಈಗ ಪ್ರಧಾನಿ ಮೋದಿಯವರು ತಂದಿರುವ ಮಹಿಳಾ ಮೀಸಲಾತಿ ಮಸೂದೆಯು ಕ್ರಾಂತಿಕಾರಕ ನಿಲುವಾಗಿದೆ ಎಂದರು.
ಪರಶುರಾಮ ಥೀಮ್‌ಪಾರ್ಕ್‌ಗೆ ಭೇಟಿ
ಶನಿವಾರ ಬೆಳಗ್ಗೆ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ನಿರ್ಮಿಸಿರುವ ಪರಶುರಾಮ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಯಾವುದೇ ನೈತಿಕ ಪೊಲೀಸ್ ಗಿರಿಯನ್ನು ಸಹಿಸುವುದಿಲ್ಲ. ಕಾನೂನಿಗೆ ಎಲ್ಲರೂ ತಲೆ ಬಾಗಲೇ ಬೇಕು ಮತ್ತು ಕಾನೂನು ಪಾಲನೆ ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ತಿಂಗಳಲ್ಲಿ 4 ದಿನ ಜಿಲ್ಲೆಯಲ್ಲಿ ವಾಸ್ತವ್ಯ
ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೂ ಉಡುಪಿ ಜಿಲ್ಲೆಯಲ್ಲಿ ನೆಲಕಚ್ಚಿತ್ತು. ಪಕ್ಷದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಮುಂದಿನ ದಿನಗಳಲ್ಲಿ ಸಮರ್ಥವಾಗಿ ಪಕ್ಷ ಕಟ್ಟೋಣ. ಜಿಲ್ಲೆಯ ಶೇ.95 ಮಂದಿ ಸರಕಾರದ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಮಹಿಳೆಯರು ಸರಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಇದರ ಲಾಭ ಸರಕಾರಕ್ಕೆ ಸಿಗುವಂತೆ ಮಾಡಬೇಕು. ಇನ್ನು ಮುಂದೆ ತಿಂಗಳಲ್ಲಿ 4 ದಿನ ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದು, ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸುವುದರ ಜತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮುಖ್ಯಮಂತ್ರಿಯಾಗುವ ಕನಸು ಇಲ್ಲ : ಹೆಬ್ಬಾಳ್ಕರ್
ಕಾಪು: ಮಹಿಳಾ ಮುಖ್ಯಮಂತ್ರಿಯ ಕನಸು ನನ್ನದಲ್ಲ. ನನಗೆ ಅಂತಹ ಯಾವುದೇ ಆಕಾಂಕ್ಷೆಗಳಿಲ್ಲ. ಭವಿಷ್ಯದ ಕನ್ನಡಿಯಲ್ಲಿ ಏನಿದೆ ಎನ್ನುವುದರ ಬಗ್ಗೆ ಯೋಚನೆಯಿಲ್ಲ. ಹಾಗಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪಡುಕುತ್ಯಾರು ಆನೆಗುಂದಿ ಮಹಾಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಜನಪರ ಕೆಲಸ ಮಾಡಿ ರಾಜ್ಯದ ಜನತೆಯ ವಿಶ್ವಾಸ ಗಳಿಸುತ್ತೇವೆ. ನನ್ನ ಖಾತೆಗೆ ನ್ಯಾಯವೊದಗಿಸುವುದಷ್ಟೇ ನನ್ನ ಗುರಿಯಾಗಿದೆ ಎಂದವರು ತಿಳಿಸಿದರು.
ಡಯಾಲಿಸಿಸ್ ಯಂತ್ರಗಳ ಕೊರತೆ ನೀಗಿಸಲು ಕ್ರಮ
ಜಿಲ್ಲೆಯಲ್ಲಿ ಡಯಾಲಿಸಿಸ್ ಯಂತ್ರಗಳ ಕೊರತೆ ಬಗ್ಗೆ ಜಿಲ್ಲಾಧಿಕಾರಿಯವರು ನನ್ನ ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಬಗ್ಗೆ ಆರೋಗ್ಯ ಇಲಾಖೆ ಸಚಿವರಿಗೂ ಮನವರಿಕೆ ಮಾಡಿದ್ದೇವೆ. ಸರಕಾರ ಶೀಘ್ರ ಈ ಸಮಸ್ಯೆಯನ್ನು ನಿವಾರಿಸುವ ವಿಶ್ವಾಸವಿದೆ ಎಂದರು.
ಮುಖಂಡರಾದ ಮಿಥುನ್ ರೈ ಮಂಗಳೂರು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ವಸಂತ್ ಬರ್ನಾಡ್ ಹಳೆಯಂಗಡಿ, ನವೀನ್‌ಚಂದ್ರ ಶೆಟ್ಟಿ ಪಡುಬಿದ್ರಿ, ಪ್ರಭಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.