![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 21, 2019, 6:10 AM IST
ಉಡುಪಿ: ಉಡುಪಿ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿದರೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗಿಲ್ಲ. ಆದರೆ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣುತ್ತಿರುವುದರಿಂದ ಇದರ ಪರಿಣಾಮ ಜಾನುವಾರುಗಳಿಗೂ ಆಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 2.34 ಲಕ್ಷ ಜಾನುವಾರುಗಳಿವೆ. ಇವುಗಳಲ್ಲಿ ಮೇವು ಅವಲಂಬಿತ ಜಾನುವಾರುಗಳ ಸಂಖ್ಯೆ 1.95 ಲಕ್ಷ. ಉಳಿದ ಜಾನುವಾರುಗಳೆಂದರೆ ಆಡು, ಕುರಿ, ಸಣ್ಣ ಕರುಗಳು.
21 ವಾರಕ್ಕೆ ಸಾಕಾಗುವಷ್ಟು ಮೇವಿದೆ
ಪಶು ಸಂಗೋಪನ ಇಲಾಖೆಯವರು ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 21 ವಾರಗಳವರೆಗೆ ಬೇಕಾಗುವಷ್ಟು ಮೇವು ದಾಸ್ತಾನು ಇದೆ. ಒಂದು ಜಾನುವಾರಿಗೆ ದಿನಕ್ಕೆ ಕನಿಷ್ಠ ಐದು ಕೆ.ಜಿ. ಮೇವು (ಹುಲ್ಲು) ಅಗತ್ಯ ಎನ್ನುವುದು ಇಲಾಖೆಯ ಲೆಕ್ಕಾಚಾರ. ಕನಿಷ್ಠ 15 ವಾರಗಳವರೆಗಂತೂ ಯಾವುದೇ ಮೇವಿನ ತೊಂದರೆಯಾಗದು. ಅಷ್ಟರೊಳಗೆ ಮಳೆ ಬಂದು ಸಮಸ್ಯೆ ನೀಗುತ್ತದೆ ಎಂಬ ವಿಶ್ವಾಸ ಇಲಾಖೆಯವರಿಗೆ ಇದೆ.
ಸಮಸ್ಯೆ ಆಗಿಲ್ಲ
ಈ ಕಾರಣದಿಂದ ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಆರಂಭಿಸಿಲ್ಲ. ಸರಕಾರದ ವತಿಯಿಂದ ಗೋಶಾಲೆಯನ್ನೂ ನಿರ್ಮಿಸಿಲ್ಲ. ಜಿಲ್ಲೆಯಲ್ಲಿ ನೀಲಾವರ, ಕಾರ್ಕಳ, ಬೈಂದೂರು ಶಿರೂರು ಹೀಗೆ ಮೂರು ಕಡೆ ನೋಂದಾಯಿತ ಗೋಶಾಲೆಗಳಿವೆ. ಇವು ಹೊರತುಪಡಿಸಿ ನೋಂದಣಿ ಮಾಡಿಸದ ಗೋಶಾಲೆಗಳೂ ಇವೆ. ನೀರು, ಮೇವಿನ ಕೊರತೆಯಿಂದ ದನಕರುಗಳನ್ನು ಗೋಶಾಲೆಗೆ ತಂದು ಬಿಡುವ ಸ್ಥಿತಿ ಬಂದಿಲ್ಲ ಎನ್ನುತ್ತಾರೆ ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಹೊಂದಿರುವ ನೀಲಾವರ ಗೋಶಾಲೆಯ ವಿಶ್ವಸ್ತ ಬಾಲಾಜಿ ರಾಘವೇಂದ್ರ ಆಚಾರ್ಯ.
ಸಾಕು ದನಗಳಿಗೆ ಮೇವು, ನೀರಿನ ಕೊರತೆ ಕಾಣದಿದ್ದರೂ ಬಯಲಿಗೆ ಬಿಡುವ ಜಾನುವಾರುಗಳು ಮೇವಿನ ಜತೆ ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಇವುಗಳೆಲ್ಲ ಸರಕಾರಿ ಇಲಾಖೆಗಳ ಲೆಕ್ಕಕ್ಕೆ ಸಿಗುತ್ತಿಲ್ಲ ಎನ್ನಬಹುದು. ಇವುಗಳು ಅಲ್ಲಲ್ಲಿ ಇರುವ ಒಣಗಿದ ಹುಲ್ಲನ್ನು ತಿಂದು ಬದುಕುತ್ತವೆಯಾದರೂ ನೀರಿಗಾಗಿ ಬಹಳ ದೂರ ಸಾಗುವ ಸನ್ನಿವೇಶ ಕಂಡುಬರುತ್ತಿದೆ.
ನೀರು ಸಾಲುತ್ತಿಲ್ಲ
ಅಂತಾರಾಷ್ಟ್ರೀಯ ನಗರ ಮಣಿಪಾಲ ಸಮೀಪದಲ್ಲಿರುವ ಸರಳೆಬೆಟ್ಟಿನ ಮೀನಾಕ್ಷಿಯವರ ಅಳಲು ನೋಡಿದರೆ ಜಾನುವಾರುಗಳು ಎದುರಿಸುತ್ತಿರುವ ನೀರಿನ ಸಮಸ್ಯೆಯ ಗಂಭೀರತೆ ಅರ್ಥವಾಗದೆ ಇರದು. “ನಮ್ಮಲ್ಲಿ ನಾಲ್ಕು ದನಗಳಿವೆ. ಮೂರು ಬಕೆಟ್‌ನಂತೆ ನೀರು ಕೊಡಬೇಕು. ಈಗ ನಾಲ್ಕು ದಿನಗಳಿಗೊಮ್ಮೆ ಬರುವ ನೀರಿನಲ್ಲಿ ಎರಡು ಬಕೆಟ್ ಮಾತ್ರ ಕೊಡುತ್ತಿದ್ದೇವೆ. ಹೀಗೆ ಆದರೆ ಮುಂದೇನು ಎಂಬ ಚಿಂತೆ ಇದೆ’ ಎಂದು ಮೀನಾಕ್ಷಿ ಕಳವಳ ವ್ಯಕ್ತಪಡಿಸುತ್ತಾರೆ.
ಮಿಶ್ರ ತಳಿ ದನಗಳಿಗೆ ನಿತ್ರಾಣ, ದೇಹದ ಉಷ್ಣಾಂಶ ಏರಿಕೆಯಂತಹ ಸಮಸ್ಯೆಗಳು ಕಂಡುಬರುತ್ತವೆ. ಒದ್ದೆ ಮಾಡಿದ ಗೋಣಿ/ ಬಟ್ಟೆಯನ್ನು ಮೈಮೇಲೆ ಹಾಕಿದರೆ ಸರಿಯಾಗುತ್ತದೆ ಎನ್ನುತ್ತಾರೆ ಪಶು ಸಂಗೋಪನ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ| ಸರ್ವೋತ್ತಮ ಉಡುಪ. ಆದರೆ ಈ ಸಮಸ್ಯೆ ದೇಸೀ ತಳಿ ದನಗಳಿಗೆ ಅಷ್ಟೊಂದು ಅನ್ವಯವಾಗುವುದಿಲ್ಲ. ಇವುಗಳಲ್ಲಿ ರೋಗನಿರೋಧಕ ಶಕ್ತಿ ಇರುವುದೇ ಇದಕ್ಕೆ ಕಾರಣ.
ಸದ್ಯ ಚಿಂತೆ ಇಲ್ಲ
ಜಾನುವಾರುಗಳಿಗೆ ಮೇವು ಮೂರ್‍ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಇದೆ ಎಂದು ಪಶು ಸಂಗೋಪನ ಇಲಾಖೆಯವರು ವರದಿ ಕೊಟ್ಟಿದ್ದು ಸದ್ಯ ಇದರ ಚಿಂತೆ ಇಲ್ಲ.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ
ಮೇವಿನ ಬರ ಉಂಟಾಗದು
ಉಡುಪಿ ಜಿಲ್ಲೆಯಲ್ಲಿ ಇನ್ನು 21 ವಾರಗಳಿಗೆ ಆಗುವಷ್ಟು ಮೇವಿನ (ಹುಲ್ಲು) ದಾಸ್ತಾನು ಇದೆ. ಅಷ್ಟರೊಳಗೆ ಮಳೆ ಬರುವ ಕಾರಣ ಮೇವಿನ ಬರ ಉಂಟಾಗದು.
-ಡಾ| ಸರ್ವೋತ್ತಮ ಉಡುಪ, ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ
You seem to have an Ad Blocker on.
To continue reading, please turn it off or whitelist Udayavani.