ಉಡುಪಿ ಜಿಲ್ಲಾ ಅಪರಾಧ ಸುದ್ದಿಗಳು
Team Udayavani, Jun 16, 2022, 1:07 AM IST
ಲಾರಿ ಚಕ್ರ ಹರಿದು ಪಾದಚಾರಿ ಸಾವು
ಪಡುಬಿದ್ರಿ: ಕಾರ್ಕಳ – ಪಡುಬಿದ್ರಿ ಜಂಕ್ಷನ್‌ನಲ್ಲಿ ಬುಧವಾರ ಮಧ್ಯಾಹ್ನದ ವೇಳೆ ರಸ್ತೆ ದಾಟಲು ಹೆದ್ದಾರಿಯ ಪಶ್ಚಿಮ ಅಂಚಿನಲ್ಲಿ ನಿಂತಿದ್ದ ಸಾಂತೂರು ಗ್ರಾಮದ ನಿವಾಸಿ, ಬಡಗಿ ಕಾಯಕದ ಜಯರಾಮ ಆಚಾರ್ಯ (51) ಅವರ ಸೊಂಟದ ಮೇಲೆ ಲಾರಿ ಚಕ್ರವು ಹರಿದು ತೀವ್ರತರ ಗಾಯಗೊಂಡಿದ್ದಾರೆ. ತತ್‌ಕ್ಷಣ ಅವರನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಒಯ್ದರೂ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಲಾರಿಯ ಚಾಲಕ ಘಟನಾ ಸ್ಥಳದಿಂದ ಓಡಿ ಹೋಗಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ – ಬೈಕ್ ಢಿಕ್ಕಿ
ಕುಂದಾಪುರ: ಕಾಳಾವರ ಗ್ರಾಮದ ದಬ್ಬೆಕಟ್ಟೆ ಬಳಿ ಪ್ರಸನ್ನ ಅವರು ಲಾರಿಯನ್ನು ದಬ್ಬೆಕಟ್ಟೆ ಕಡೆಯಿಂದ ಬೇಳೂರು ಕಡೆಗೆ ಚಲಾಯಿಸುತ್ತಿದ್ದಾಗ ಕೊಟೇಶ್ವರ ಕಡೆಗೆ ಬರುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿದೆ.
ಗಣೇಶ ಬಡಾಬೆಟ್ಟು ಅವರು ಬೈಕಿನಲ್ಲಿ ಪ್ರವೀಣ್ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಅಪಘಾತವಾಗಿ ಇಬ್ಬರಿಗೂ ಗಾಯವಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಸೇವನೆ: ಇಬ್ಬರು
ವಿದ್ಯಾರ್ಥಿಗಳು ವಶಕ್ಕೆ
ಮಣಿಪಾಲ: ವಿದ್ಯಾರತ್ನ ನಗರದ ರಾಯಲ್ ಎಂಬೆಸಿ ಫ್ಲ್ಯಾಟ್‌ನಲ್ಲಿ ಜೂ. 13ರಂದು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ಬಲ್ಮಠ ನಿವಾಸಿಗಳಾದ ನಿಹಾಲ್ ಯುವನ್‌ಚಾರ್ಲ್ಸ್ ಗೋವಿಯಸ್ (20), ಕರಣ್ ಆರ್. ಕೆ. (21) ಎಂಬವರನ್ನು ಪೊಲೀಸರು ಪೊರೆನ್ಸಿಕ್ ವೈದ್ಯರಲ್ಲಿ ತಪಾಸಣೆಗೊಳಪಡಿಸಿದ್ದು, ಗಾಂಜಾ ಸೇವನೆ ದೃಢಪಟ್ಟಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಗಿದಲ್ಲಿಯೇ ಯುವಕ ಸಾವು
ಸಿದ್ದಾಪುರ: ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಆಟದ ಮೈದಾನದ ಬಳಿ ಕುಡಿದು ಮಲಗಿದ್ದ ರಾಣೆಬೆನ್ನೂರು ತಾಲೂಕಿನ ಉದ್ದಗಟ್ಟಿ ಗ್ರಾಮದ ಕೂಲಿ ಕಾರ್ಮಿಕ ಯಲ್ಲಪ್ಪ (32) ಅವರು ಮೃತಪಟ್ಟಿದ್ದಾರೆ. ಮದ್ಯದಿಂದಲೂ ಆಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರಬಹುದು ಎಂದು ಯಲ್ಲಪ್ಪ ಅವರ ಚಿಕ್ಕಪ್ಪ ಶಿವಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾಲದ ಹಣ ಪಾವತಿಗೆ ಹೇಳಿದ್ದಕ್ಕೆ ಹಲ್ಲೆ
ಗಂಗೊಳ್ಳಿ: ಸಂಘದಲ್ಲಿ ಪಡೆದ ಸಾಲದ ಹಣ ಮರುಪಾವತಿಗೆ ಹೇಳಿದ ಶೋಭಾ ಖಾರ್ವಿ ದೊಡ್ಡಹಿತ್ಲು ಅವರ ಮೇಲೆ ಹಲ್ಲೆ ನಡೆದಿದೆ. ರೇಖಾ ಖಾರ್ವಿ ಅವರು ಶೋಭಾ ಅವರ ಹೆಸರಿನಲ್ಲಿ 1 ಲಕ್ಷ ರೂ. ಸಾಲ ಪಡೆದಿದ್ದು ಸರಿಯಾಗಿ ಕಂತನ್ನು ಕಟ್ಟಿರಲಿಲ್ಲ. ಪಾವತಿಸಲು ಹೇಳಿದ್ದಕ್ಕೆ ರೇಖಾ ಖಾರ್ವಿ, ಅವರ ಗಂಡ ಲಕ್ಷ್ಮಣ, ಮಗ ನಿಖೀಲ್ ಖಾರ್ವಿ, ಮಗಳು ಮೀನಾಕ್ಷಿ ಹಾಗೂ ರೇಖಾ ಖಾರ್ವಿಯವರ ತಮ್ಮ ಅಜಿತ್ ಖಾರ್ವಿ ಅವರು ಹಲ್ಲೆ ನಡೆಸಿದ್ದಾರೆ. ಬಿಡಿಸಿಲು ಬಂದ ಶೋಭಾ ಅವರ ಪತಿ ಮೇಲೂ ಹಲ್ಲೆಯಾಗಿದ್ದು ಜೀವ ಬೆದರಿಕೆ ಹಾಕಲಾಗಿದೆ. ಚಿಕಿತ್ಸೆಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿ ಹಣಕಾಸಿನ ಅಭಾವದಿಂದ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡಕ: ಕ್ಲಿನಿಕ್‌ಗೆಂದು ತೆರಳಿದ ವ್ಯಕ್ತಿ ನಾಪತ್ತೆ
ಹೆಬ್ರಿ: ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಕೋಟ್ನಕಟ್ಟೆ ನಿವಾಸಿ ಬಿ. ಪ್ರಕಾಶ್ ಪೈ (67) ಜೂ. 13ರಂದು ಬೆಳಗ್ಗೆ 11.30ರ ಸುಮಾರಿಗೆ ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಕ್ಲಿನಿಕ್‌ಗೆ ಚಿಕಿತ್ಸೆಗೆಂದು ತೆರಳಿದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.
5 ಅಡಿ 10 ಇಂಚು ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.