ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರು


Team Udayavani, Nov 30, 2018, 1:45 AM IST

jilla-29-11.jpg

ಡಾ| ಕೆ. ನರೇಂದ್ರ ಪೈ (ಕೃಷಿ)

ಉಡುಪಿ:
ವೈದ್ಯ ವೃತ್ತಿಯಿಂದ ನಿವೃತ್ತಿ ಬಳಿಕ ಮಣಿಪಾಲದ 10 ಸೆಂಟ್ಸ್‌ ಗುಡ್ಡಪ್ರದೇಶದ ಒಣಭೂಮಿಯನ್ನು ಹಸಿರಾಗಿಸಿದ ಸಾಧಕ ಡಾ| ಕೆ.ನರೇಂದ್ರ ಪೈ ಅವರು. ವೈಜ್ಞಾನಿಕ ವಿಧಾನದ ಸಾವಯವ ಕೃಷಿ ಮಾಡುತ್ತಾ ಹಣ್ಣು ತರಕಾರಿಗಳನ್ನು ಬೆಳೆಸುತ್ತಿರುವ ಜತೆಗೆ ಇತರರಿಗೂ ಪ್ರೇರಣೆಯಾಗಿದ್ದಾರೆ. ಕೆಎಂಸಿ ಬಳಿಕ ಸಾಗರದಲ್ಲಿ 37 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಇವರು ನಿವೃತ್ತರಾಗಿದ್ದಾರೆ. ಮಣಿಪಾಲ ಈಶ್ವರನಗರದಲ್ಲಿ ವಾಸಿಸುತ್ತಿರುವ 82 ವರ್ಷದ ಪೈ ಅವರು ಕಳೆದ 10 ವರ್ಷಗಳಿಂದ ನಿರಂತರವಾಗಿ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಬ್ಟಾಳ ಕೃಷಿ ವಿಶ್ವವಿದ್ಯಾನಿಲಯದ ಅಂಚೆ ಶಿಕ್ಷಣದಿಂದ ತೋಟಗಾರಿಕೆಯ ಶಿಕ್ಷಣ ಪಡೆದು ಕೈತೋಟ ಮಾಡಿದ್ದಾರೆ. ಪ್ರಾತ್ಯಕ್ಷಿಕೆ, ಸಸಿ, ಬೀಜ ನೀಡಿ ತೋಟಗಾರಿಕೆ ನಡೆಸಲು ಪ್ರೇರೇಪಿಸಿದ್ದಾರೆ. ಲೇಖನಗಳ ಮೂಲಕ ಗಮನ ಸೆಳೆದಿದ್ದಾರೆ. ಇವರ ತೋಟ ನೋಡಲು ನೂರಾರು ಮಂದಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಾರೆ. ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೂಡ ಪೈ ಅವರನ್ನು ಆಹ್ವಾನಿಸಿ ಮಾಹಿತಿ ಪಡೆದುಕೊಂಡಿವೆ. ರಾಜ್ಯ ಸರಕಾರ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಿದೆ. ನಾನು ವೈದ್ಯನಿಗಿಂತಲೂ ಮಣ್ಣಿನ ಮಗ ಎಂದು ಹೇಳಿಕೊಳ್ಳಲು ಹೆಚ್ಚು ಖುಷಿ ಪಡುತ್ತೇನೆ’ ಎನ್ನುತ್ತಾರೆ ಡಾ| ಕೆ.ನರೇಂದ್ರ ಪೈ ಅವರು. 

ಗುರುರಾಜ್‌ (ಕ್ರೀಡೆ)

ಕುಂದಾಪುರ:
ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಸಾಧಕ ವಂಡ್ಸೆ ಸಮೀಪದ ಚಿತ್ತೂರಿನ ಗುರುರಾಜ್‌ ಪೂಜಾರಿ. ಮಹಾಬಲ ಪೂಜಾರಿ – ಪದ್ದು ದಂಪತಿಯ 6 ನೇ ಪುತ್ರನಾದ ಗುರುರಾಜ್‌ಗೆ ಕಳೆದ ಬಾರಿ ರಾಜ್ಯ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 56 ಕೆ.ಜಿ. ವಿಭಾಗದಲ್ಲಿ 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2017 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, 2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಇವರು, ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ 2015, 2016 ರಲ್ಲಿ ಚಿನ್ನ, 2014 ರಲ್ಲಿ ಬೆಳ್ಳಿ ಪದಕ, ಅಖಿಲ ಭಾರತೀಯ ಟೂರ್ನಿಯಲ್ಲಿ 2014 ಹಾಗೂ 2015ರಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 

ಗೋಕುಲ್‌ ದಾಸ್‌ ಪೈ (ಪತ್ರಿಕೋದ್ಯಮ)

ಉಡುಪಿ:
ಉಡುಪಿ ಬನ್ನಂಜೆಯ ನಿವಾಸಿಯಾಗಿರುವ ಗೋಕುಲ್‌ದಾಸ್‌ ಪೈ (70) ಅವರು ಕಳೆದ 18 ವರ್ಷಗಳಿಂದ ದೂರದರ್ಶನ ಸುದ್ದಿವಾಹಿನಿಯಲ್ಲಿ ಉಡುಪಿ ವರದಿಗಾರನಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ಕಾರ್ಕಳ ಐ. ಗೋಪಾಲ ಪೈ ಮತ್ತು ಸುಮಿತ್ರಾ ಬಾೖ ಅವರ ಪುತ್ರರಾಗಿರುವ ಗೋಕುಲ್‌ದಾಸ್‌ ಪೈ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಘದ ಕಟ್ಟಡದ ನಿರ್ಮಾಣ ಕಾಮಗಾರಿ ಇವರ ಅವಧಿಯಲ್ಲಿಯೇ ಆರಂಭಗೊಂಡಿತ್ತು. ಇದಕ್ಕೂ ಮೊದಲು ಪೊಟೋಗ್ರಫಿ, ವೀಡಿಯೋಗ್ರಫಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಸೌತ್‌ ಕೆನರಾ ಪೊಟೋಗ್ರಾಫ‌ರ್ ಅಸೋಸಿಯೇಷನ್‌ನ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಳೆಯ ಅಪರೂಪದ ವಾಹನಗಳನ್ನು ಸಂಗ್ರಹಿಸುವುದು ಇವರ ಇನ್ನೊಂದು ಹವ್ಯಾಸ. ಉಡುಪಿಯಲ್ಲಿ ಮೊದಲ ಬಾರಿಗೆ ಎಂಬಂತೆ 1976ರಲ್ಲೇ ಕಪ್ಪು ಬಿಳುಪಿನ ಪೊಟೋಗ್ರಫಿ ಕಾಲದಲ್ಲಿ ಪೊಟೋಗ್ರಫಿಗೆ ಬೇಕಾದ ಸಲಕರಣೆಗಳ ಡೀಲರ್‌ಶಿಪ್‌ ನ್ನು ಆರಂಭಿಸಿದ್ದರು. 82ರಲ್ಲೇ ಉಡುಪಿಯಲ್ಲಿ ವೀಡಿಯೋಗ್ರಫಿ ಆರಂಭಿಸಿದರು. ಗೋಕುಲ್‌ದಾಸ್‌ ಪೈ ಅವರು 1965ರಲ್ಲಿ ಮಂಗಳೂರು ಕೆಪಿಟಿಯಲ್ಲಿ ಡಿಪ್ಲೊಮಾ ಇನ್‌ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪೂರೈಸಿದ್ದಾರೆ.

ಮೃಣಾಲಿ ಸಚಿನ್‌ ಶೆಟ್ಟಿ  (ಕ್ರೀಡೆ)

ಬೆಳ್ಮಣ್‌:
ಅಂತಾರಾಷ್ಟ್ರೀಯ ಕರಾಟೆ ಪಟು ಮುಂಡ್ಕೂರು ಅಂಗಡಿಗುತ್ತು ಮೃಣಾಲಿ ಸಚಿನ್‌ ಶೆಟ್ಟಿ  ಕಳೆದ 18 ವರ್ಷಗಳಿಂದ ಕರಾಟೆ ಶಿಕ್ಷಕ ಸತೀಶ್‌ ಪೂಜಾರಿಯವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದು  ಉಡುಪಿ-ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ  60 ಚಿನ್ನ, 26 ಬೆಳ್ಳಿ ಹಾಗೂ 18 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಕಳೆದ 5 ವರ್ಷಗಳಿಂದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕರಾಟೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತೀರ್ಥಹಳ್ಳಿ ಗೋಪಾಲ ಆಚಾರ್ಯ (ಯಕ್ಷಗಾನ)

ಉಪ್ಪುಂದ:
ಕರಾವಳಿಯ ಗಂಡು ಕಲೆಯ ಸಿಡಿಲ ಮರಿ ಎಂದೇ ಖ್ಯಾತರಾದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರು ತಮ್ಮ 14ನೇ ವಯಸ್ಸಿನಲ್ಲಿಯೇ ಯಕ್ಷಗಾನ ಕೇತ್ರಕ್ಕೆ ಪಾದರ್ಪಣೆ ಗೈದು, ವಿವಿಧ ಮೇಳಗಳಲ್ಲಿ ಕಲಾ ಸೇವಕರಾಗಿ ಸೇವೆಸಲ್ಲಿಸಿರುತ್ತಾರೆ.  63ನೇ ವಯಸ್ಸಿನಲ್ಲಿಯೂ ಅತಿಥಿ ಕಲಾವಿದರಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ನಾಯ್ಕನಕಟ್ಟೆಯಲ್ಲಿ ನಲೆಸಿದ್ದಾರೆ.

ಹೇರಂಜಾಲು ಗೋಪಾಲ ಗಾಣಿಗ (ಯಕ್ಷಗಾನ)

ಉಪ್ಪುಂದ:
ಹೇರಂಜಾಲು ಗೋಪಾಲ ಗಾಣಿಗ ಯಕ್ಷಗಾನ ಭಾಗವಂತರಾಗಿ ಗುರುತಿಸಿಕೊಂಡಿರುವ ಇವರು ತಮ್ಮ ನಾಲ್ಕನೇ ತರಗತಿಯಲ್ಲಿ ಯಕ್ಷಗಾನದ ಗೀಳಿನಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದವರು. 1984ರಲ್ಲಿ ಯಕ್ಷಗಾನ ವೃತ್ತಿ ಪರ ಮೇಳದಲ್ಲಿ ಕಲಾವಿದರಾಗಿ ಪ್ರಸ್ತುತ ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೆರಂಜಾಲು ಯಕ್ಷಗಾನ ಪ್ರತಿಷ್ಠಾನ  ನಡೆಸುತ್ತಿರುವ ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನ ಕಲೆಯ ಆರಾಧಕರಾಗಿ ಯಕ್ಷ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರತರವಾಗಿರುವುದು ಪ್ರಶಂಶನೀಯವಾಗಿದೆ.

ಜೋಸೆಫ್‌ ರೆಬೆಲ್ಲೊ (ಸಮಾಜಸೇವೆ)

ಮಲ್ಪೆ:
ಉಡುಪಿ ಕಲ್ಯಾಣಪುರ ನೇಜಾರಿನ ಜೋಸೆಪ್‌ ಜಿ. ಎಂ. ರೆಬೆಲ್ಲೋ ಬಂಟಕಲ್‌ ಇಂಜಿನಿಯಂರಿಂಗ್‌ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರರು. ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಪರಿಶೋಧನಾ ತಂಡವನ್ನು ರಚನೆಯ ಪ್ರಮುಖ ರೂವಾರಿಯಾಗಿದ್ದರು. ನರೇಗ ಯೋಜನೆ, ಜಲಮಣಿ ಯೋಜನೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲಮರುಪೂರಣ ಕಾಮಗಾರಿ, ಸೋಲಾರ್‌ ದೀಪ, ಸ್ವಚ್ಛ ಭಾರತ್‌ ಅಭಿಯಾನ, ಶೌಚಾಲಯ ನಿರ್ಮಾಣದ ಸಾಮಾಜಿಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ತಾಲೂಕು, ಜಿಲ್ಲೆ ರಾಜ್ಯದಲ್ಲಿರುವ ನೀರಿನ ಸಮಸ್ಯೆಗಳನ್ನುಅರಿತು ರಾಜ್ಯದ ಜನತೆಗೆ ಜಲಕ್ಷಾಮ ಬಾರದಿರಲಿ ಎಂದು ರಾಜ್ಯದ ಹತ್ತು ಹಲವಾರು ಕಡೆಗಳಲ್ಲಿ ಮಳೆ ನೀರಿನೊಂದಿಗೆ ಅನುಸಂಧಾನ ಹಾಗೂ ಘನ, ದ್ರವ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯನಿರ್ವಹಣೆ ಎಂಬ ಪ್ರಭಾವಶಾಲಿಯಾಗಿ ತರಬೇತಿ ಮತ್ತು ಮಾಹಿತಿ, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡವರು. ತೆರೆದ ಬಾವಿಗೆ ಮತ್ತು ಜೀವಂತ ಹಾಗೂ ನಿರ್ಜೀವ ಕೊಳವೆ ಬಾವಿಗೆ ಮರು ಪೂರಣ ಮಾಡುವ ಸರಿಯಾದ ಕ್ರಮವನ್ನು ತೋರಿಸಿಕೊಟ್ಟವರು.

ರಾಮದಾಸ್‌ ಪಾಲನ್‌ (ಸಮಾಜಸೇವೆ)

ಕಟಪಾಡಿ:
 ಸಮಾಜ ಸೇವಕರಾಗಿ ಉದ್ಯಾವರ ಬೋಳಾರ್‌ ಗುಡ್ಡೆ ನಿವಾಸಿ ರಾಮದಾಸ ಪಾಲನ್‌ ಪ್ರಸಿದ್ಧರು. ಅಪಘಾತ, ತುರ್ತು ಸಂದರ್ಭದಲ್ಲಿ  ಸ್ವಂತ ಆ್ಯಂಬುಲೆನ್ಸ್‌ ಸೇವೆಯನ್ನು ಉಚಿತವಾಗಿ ನೀಡುವ ಮೂಲಕ ಮತ್ತು ಕ್ರೀಡಾಕೂಟ, ದೊಡ್ಡ ಮಟ್ಟದ ಸಭೆ ಸಮಾರಂಭಗಳಿಗೆ ಉಚಿತವಾಗಿ ಕುಡಿಯುವ ನೀರನ್ನು ಪೂರೈಸುವ ಮೂಲಕ ಅಲ್ಲದೆ ಸುಮಾರು 60 ರಷ್ಟು ಅನಾಥ ಶವ ಸಂಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದು, ಎರಡು ಅಂಬುಲೆನ್ಸ್‌, ಪಂಪ್‌ಸೆಟ್‌ಗಳ ಮೂಲಕ ವಿಶೇಷವಾಗಿ ತನ್ನದೇ ಆದ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ನಿಸ್ವಾರ್ಥ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರ ಈ ಫಲಾಪೇಕ್ಷೆ ಇಲ್ಲದ ಸೇವೆಯನ್ನು ಗುರುತಿಸಿ ಸಮ್ಮಾನಿಸಿದೆ.

ಮೊದಲು ಐದು ರಿಕ್ಷಾಗಳನ್ನು ಹೊಂದಿದ್ದು, ರಿಕ್ಷಾ ಚಾಲಕನಾಗಿ ದುಡಿಯುತ್ತಾ, ಕುಡಿತದ ದಾಸನಾಗಿದ್ದವರು ಬಳಿಕ ಮದ್ಯವರ್ಜನ ಶಿಬಿರದ ಮೂಲಕ ಹೊಸ ಬದುಕು ಕಂಡುಕೊಂಡಿದ್ದೂ ಅಲ್ಲದೇ, ಸಮಾಜದಲ್ಲಿ ಅತೀವ ಗೌರವಾದರಗಳನ್ನು ಸಂಪಾದಿಸಿಕೊಂಡಿದ್ದಾರೆ. ಪತ್ನಿ ಶಕುಂತಳಾ, ಪುತ್ರರಾದ ದಿನೇಶ್‌, ಮಹೇಶ್‌, ಸಂದೇಶ್‌ ರೊಂದಿಗೆ ಉದ್ಯಾವರದಲ್ಲಿ ವಾಸಿಸುತ್ತಿದ್ದಾರೆ.

ಬಾಲಕೃಷ್ಣ ವೈದ್ಯ ಮುದ್ದೂರು (ಧಾರ್ಮಿಕ)

ಬ್ರಹ್ಮಾವರ:
ನಾಗಾರಾಧನೆ, ನಾಗಕನ್ನಿಕೆ ನೃತ್ಯ ಸೇವೆಯಲ್ಲಿ 30 ವರ್ಷಗಳ ಅನುಭವ ಹೊಂದಿರುವ ಮುದ್ದೂರಿನ ಎನ್‌. ಬಾಲಕೃಷ್ಣ ವೈದ್ಯ ಧಾರ್ಮಿಕ ಕ್ಷೇತ್ರದಲ್ಲಿ ಪ್ರಸಿದ್ಧರು. ತುಳುನಾಡಿನ ನಾಗಾರಾಧನೆ, ಕಲಾರಾಧನೆ ಮತ್ತು 5 ಸಾವಿರಕ್ಕೂ ಅಧಿಕ ಮಂಡಲ ಸೇವೆಯಲ್ಲಿ ನಾಗ ಕನ್ನಿಕೆಯಾಗಿ ಪಾಲ್ಗೊಂಡಿದ್ದಾರೆ. ನಾಗಾರಾಧನೆಯಲ್ಲಿನ ಸಾಧನೆಗೆ ಅವರಿಗೆ ಜರ್ಮನಿಯ ಅಂತಾರಾಷ್ಟ್ರೀಯ ಶಾಂತಿ ವಿ.ವಿ. ಗೌರವ ಡಾಕ್ಟರೇಟ್‌ ಲಭಿಸಿದೆ. ಕರಾವಳಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ನಡೆದ ನಾಗಮಂಡಲಗಳಲ್ಲಿ ನಾಗಪಾತ್ರಿಯೊಂದಿಗೆ ನಾಗಕನ್ನಿಕೆ ನರ್ತನ ಸೇವೆ ನಡೆಸಿದ ಹಿರಿಮೆ ಹೊಂದಿದ್ದಾರೆ. ಸುಮಾರು 5 ಸಾವಿರ ನಾಗಮಂಡಲ ಸೇವೆ ಸಲ್ಲಿಸಿದ ಹಿರಿಮೆ ಅವರದ್ದು. ತುಳುನಾಡಿನ ನಾಗಾರಾಧನೆಯ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ವಿಷಯ ಮಂಡನೆ, ಚರ್ಚಾಕೂಟಗಳಲ್ಲಿ ಭಾಗಿಯಾಗಿದ್ದಾರೆ.  ನಾಲ್ಕೂರು ನೇತಾಜಿ ಸೇವಾ ವೇದಿಕೆ, ನಾಲ್ಕೂರು ಸರಕಾರಿ ಪ್ರೌಢ ಶಾಲೆಯ ಶಾಲಾಭಿವೃದ್ದಿ ಸಮಿತಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಮಾರಾಳಿ ಶ್ರೀ ಮಹಾಗಣಪತಿ 
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಜಲ್‌ (ಕಲೆ)

ಉಡುಪಿ:
ರಂಗಭೂಮಿ ಕಲಾವಿದೆ ಯಾಗಿರುವ ಮಂಗಳಮುಖಿ ಕಾಜಲ್‌ ಅವರು ಕರಾವಳಿ ಕರ್ನಾಟಕದ ಮೊದಲನೆಯ ಮಂಗಳಮುಖೀ ರೇಡಿಯೋ ಜಾಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ‘ಐಸಿಯು – ನೋಡುವೆ ನಿನ್ನನ್ನೆ’ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾಜಲ್‌ ಅನಂತರ ‘ಲವ್‌ ಬಾಬಾ’ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಎನ್‌ಜಿಒ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಶಾಶ್ವತ ಉದ್ಯೋಗ ಮಾಡುವ, ಸಂಸ್ಥೆ ರಚಿಸಿ ಮಕ್ಕಳು, ಮಹಿಳೆಯರು, ಎಚ್‌ಐ ಪೀಡಿತರು, ಶಿಕ್ಷಣ ವಂಚಿತರು, ವೃದ್ಧರ ಸೇವೆ ಮಾಡುವ ಇಚ್ಛೆ ಕಾಜಲ್‌ ಅವರದ್ದು. ಕಾಜಲ್‌ ಪ್ರಸ್ತುತ ಬ್ರಹ್ಮಾವರದಲ್ಲಿ ನೆಲೆಸಿದ್ದಾರೆ.

ತನ್ನಂತೆ ಇರುವ ಇತರ ಮಂಗಳಮುಖಿಯರ ಏಳಿಗೆಗಾಗಿ ಕೆಲಸ ಮಾಡುತ್ತಾ ಅವರಿಗೆ ಸರಕಾರದಿಂದ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ತಿರಸ್ಕೃತಗೊಂಡಿರುವ ಮಂಗಳಮುಖಿಯರ ಪಾಲಿಗೆ ಆಶಾಕಿರಣವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಕೆ ಉತ್ತಮ ನೃತ್ಯಪಟುವೂ ಹೌದು.

ಶ್ಲಾಘ ಸಾಲಿಗ್ರಾಮ (ಸಿನೆಮಾ)

ಕೋಟ:
ಕನ್ನಡದ ಕಟಕ ಚಿತ್ರದಲ್ಲಿ ಬಾಲನಟಿಯಾಗಿ ಶ್ಲಾಘ ಸಾಲಿಗ್ರಾಮ ಹೆಸರು ಮಾಡಿದವರು. ಸಾಲಿಗ್ರಾಮದ ನಿವಾಸಿ ಕುಂದಾಪುರದ ಕೆ. ರಾಘವೇಂದ್ರ  ಆಚಾರ್‌ ಮತ್ತು ಮಾಲಾ ಆರ್‌. ಆಚಾರ್‌ ದಂಪತಿಗಳ ಪುತ್ರಿಯಾಗಿ 7-8-2011ರಲ್ಲಿ ಜನಿಸಿದ ಈಕೆ ಚಿಕ್ಕಂದಿನಿಂದ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಳು. 4ನೇ ವಯಸ್ಸಿನಲ್ಲಿ ‘ಅಮ್ಮ’ ಆಲ್ಬಮ್‌ ಸಾಂಗ್‌ನಲ್ಲಿ ಪ್ರಥಮವಾಗಿ ನಟಿಸಿ  ಮೆಚ್ಚುಗೆ ಪಾತ್ರಳಾಗಿದ್ದಳು. ಅನಂತರ ರವಿ ಬಸ್ರೂರ್‌ ನಿರ್ದೇಶನದ ‘ಕಟಕ’ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಕರ್ನಾಟಕದಾದ್ಯಂತ ಅಪಾರ ಜನಪ್ರಿಯತೆಗೆ ಪಾತ್ರಳಾಗಿದ್ದಾಳೆ. ಇದೀಗ ಗಿರ್ಮಿಟ್‌, ಮಮಧರ್ಮ, ಮೌನ ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಳೆ. ಪ್ರಸ್ತುತ ಈಕೆ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,  ಪ್ರತಿಷ್ಠಿತ ಸೌತ್‌ ಇಂಡಿಯನ್‌ ಅಂತಾರಾಷ್ಟ್ರೀಯ ಚಲನಚಿತ್ರ (ಸೀಮಾ) ಪ್ರಶಸ್ತಿ, ತುಳು ಸಾಹಿತ್ಯ ಸಮ್ಮೇಳನದ  ಕರ್ನಾಟಕ ಪ್ರತಿಭಾ ರತ್ನ  ಪ್ರಶಸ್ತಿ ಹಾಗೂ ಹಲವಾರು ಸಂಘ-ಸಂಸ್ಥೆಗಳು ಸಮ್ಮಾನಕ್ಕೆ ಪಾತ್ರವಾಗಿದ್ದಾಳೆ.​​​​​​​

ಜಯರಾಂ ನೀಲಾವರ (ರಂಗಭೂಮಿ)

ಮಲ್ಪೆ:
ರಂಗಭೂಮಿಯ ಸಾಧಕರು ಜಯರಾಂ ನೀಲಾವರ. ರಂಗ ನಿರ್ದೇಶಕರಾಗಿ ಹೆಸರು ಮಾಡಿದವರು. 1960ರಲ್ಲಿ ನೀಲಾವರದ ನಂದನಕುದ್ರುವಿನಲ್ಲಿ ಜನಿಸಿದ ಜಯರಾಂ ನೀಲಾವರ ಅವರು ಬಾಲ್ಯದಿಂದಲೇ ರಂಗಾಸಕ್ತಿಯನ್ನು ಬೆಳೆಸಿಕೊಂಡವರು. 1987ರಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣ ಪಡೆದು ಮುಂದೆ ಹೆಸರಾಂತ ರಂಗನಿರ್ದೇಶಕ ಚಿದಂಬರ ರಾವ್‌ ಜಿಂಬೆ, ಪ್ರಸನ್ನ, ಅಕ್ಷರ, ಜಯತೀರ್ಥ ಜೋಷಿ ಮೊದಲಾದವರ ಒಡನಾಡಿಯಾಗಿ ರಂಗದ ಅನುಭವಗಳನ್ನು ವಿಸ್ತರಿಸಿಕೊಂಡವರು. ಉಡುಪಿಯಲ್ಲಿ ರಥಬೀದಿ ಗೆಳೆಯರು ತಂಡದೊಂದಿಗೆ ಗುರುತಿಸಿಕೊಂಡು ಹಲವಾರು ರಂಗ ಪ್ರಯೋಗಗಳನ್ನು ಮಾಡಿದ್ದಾರೆ. ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ ಇವರ ನಾಟಕಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನವನ್ನು ಗಳಿಸಿದೆ. ಹಲವಾರು ರಾಜ್ಯಮಟ್ಟದ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ದುಡಿದ ಇವರು ರಂಗಭೂಮಿ ಸಾಧನೆಯ ಗೌರವಕ್ಕೆ ಪಾತ್ರರಾಗಿದ್ದಾರೆ.​​​​​​​

ಮನೋಹರ್‌ ಎಸ್‌. ಶೆಟ್ಟಿ (ಸಮಾಜ ಸೇವೆ)

ಉಡುಪಿ:
ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಕಾಪು ಉಳಿಯಾರಗೋಳಿಯ ಮನೋಹರ್‌ ಎಸ್‌.ಶೆಟ್ಟಿ ಅವರು ಕರಾವಳಿಯ ಪ್ರವಾಸೋದ್ಯಮ ಬೆಳವಣಿಗೆಗಾಗಿ ಶ್ರಮಿಸಿದವರು. 12 ವರ್ಷಗಳಿಂದ ‘ಆ್ಯಕ್ಟ್’ನ (ಅಸೋಸಿಯೇಷನ್‌ ಆಫ್ ಕೋಸ್ಟಲ್‌ ಟೂರಿಸಂ) ಅಧ್ಯಕ್ಷರಾಗಿದ್ದಾರೆ. ಪಡುಬಿದ್ರಿ ಬೀಚ್‌ ‘ಬ್ಲೂ ಫ್ಲಾಗ್‌ ಬೀಚ್‌’ ಮಾನ್ಯತೆ ಪಡೆಯಲು ಮಹತ್ತರ ಕೊಡುಗೆ ನೀಡಿದ್ದಾರೆ. ತುಳುನಾಡಿನ ಪಾರಂಪರಿಕ ಮನೆಗಳ ಸಂಗ್ರಹ, ಪುನರ್‌ನಿರ್ಮಾಣ ಮಾಡಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳು, ಅಶಕ್ತರಿಗೆ ನೆರವು ನೀಡುತ್ತಿದ್ದಾರೆ. 

ಹೊಸ ಕೃಷಿ ಪ್ರಯೋಗ ಅಪರೂಪದ ಗೋತಳಿಗಳ ಸಂರಕ್ಷಣೆ ಕಾರ್ಯ ಕೂಡ ನಡೆಸುತ್ತಿದ್ದಾರೆ. ಮೂರು ದಶಕಗಳ ಹಿಂದೆಯೇ ಉಡುಪಿಯಲ್ಲಿ ಬೃಹತ್‌ ಔಷಧ ಮಾರಾಟ ಮಳಿಗೆ ಸ್ಥಾಪನೆ,  ಉಡುಪಿ, ಮಂಗಳೂರಿನಲ್ಲಿ 24 ಗಂಟೆಗಳ ನಿರಂತರ ಸೇವೆ ಒದಗಿಸುವ ಔಷಧ ಮಾರಾಟ ಕೇಂದ್ರಗಳ ಸ್ಥಾಪನೆ ಮಾಡಿದ್ದಾರೆ. 900ಕ್ಕೂ ಅಧಿಕ ಮಂದಿಗೆ ಖಾಯಂ ಉದ್ಯೋಗ ಒದಗಿಸಿದ್ದಾರೆ. ಉಡುಪಿ ಕೆಮಿಸ್ಟ್ಸ್ ಆ್ಯಂಡ್‌ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ, ಉಡುಪಿ ಕ್ರೆಡಾಯ್‌ ಉಪಾಧ್ಯಕ್ಷ, ರಂಗಸ್ಥಳ ಸಾಂಸ್ಕೃತಿಕ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷರಾಗಿದ್ದಾರೆ.

ಇಸ್ಮಾಯಿಲ್‌ ಸಾಹೇಬ್‌ ತೋನ್ಸೆ (ಶೈಕ್ಷಣಿಕ)

ಮಲ್ಪೆ:
ತೋನ್ಸೆ ಹೂಡೆಯ ಎಂ. ಇಸ್ಮಾಯಿಲ್‌ ಸಾಹೇಬ್‌ ಆವರು ಪಡುತೋನ್ಸೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದನ್ನು ಮನಗಂಡು, ಶಿಕ್ಷಣ ಪ್ರೇಮಿಗಳೊಂದಿಗೆ ಜತೆಗೂಡಿ ಹೂಡೆಯಲ್ಲಿ ಸಾಲಿಹಾತ್‌ ಸಮೂಹ ಶಿಕ್ಷಣ ಸ್ಥಾಪಿಸಿದರು. 1971ರಲ್ಲಿ ಸಣ್ಣ ಮಟ್ಟದ ಶಿಕ್ಷಣ ಕೇಂದ್ರ ಆರಂಭಿಸಿ, 1984ರಲ್ಲಿ ನರ್ಸರಿ ಶಿಕ್ಷಣ, 1994ರಲ್ಲಿ ಅರೇಬಿಕ್‌ ಕಾಲೇಜು, 1996ರಲ್ಲಿ ಬಾಲಕಿಯರ ಕನ್ನಡ ಮಾಧ್ಯಮ ಪ್ರೌಢಶಾಲೆ. 1997ರಲ್ಲಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ, 2009ರಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜು, 2016ರಲ್ಲಿ ಮಹಿಳಾ ಪದವಿ ಕಾಲೇಜುಗಳನ್ನು ಆರಂಭಿಸಿದ ಅವರು ಸಾಲಿಹಾತ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೂಡೆ ತೋನ್ಸೆಯಲ್ಲಿ ವಾಸವಾಗಿರುವ ಅವರು ಧಾರ್ಮಿಕ, ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿದ್ದು ದೀನ ದುರ್ಬಲರಿಗೆ, ನೆರವಿನ ಹಸ್ತವನ್ನು ನೀಡುತ್ತಿದ್ದಾರೆ. ಮತ್ಸ್ಯೋದ್ಯಮಿಯಾಗಿರುವ ಅವರು ಗೋವಾದಲ್ಲಿ ಸೀಹತ್‌ ಕ್ಯಾನಿಂಗ್‌ ಕಂಪೆ‌ನಿಯ ಮಾಲಕರಾಗಿದ್ದಾರೆ.​​​​​​​

ಲಾರೆನ್‌ ಪಿಂಟೋ ಇನ್ನಾ ( ಕಲೆ)

ಬೆಳ್ಮಣ್‌:
ಕ್ಲೇ ಮಾಡಲಿಂಗ್‌ನಲ್ಲಿ ಅದ್ಬುತ ಸಾಧನೆ ತೋರಿರುವ ಬೆಳ್ಮಣ್‌ ಲಕ್ಷ್ಮೀಜನಾರ್ದನ ಇಂಟರ್‌ನ್ಯಾಷನಲ್‌ ಸ್ಕೂಲ್‌ನ  8ನೇ ತರಗತಿಯ ವಿದ್ಯಾರ್ಥಿ ಲಾರೆನ್‌ ಪಿಂಟೋ ಕಲೆ ಮತ್ತು ಶಿಲ್ಪಕಲೆ ವಿಭಾಗದಲ್ಲಿ 2018ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಾರೆ. ಇನ್ನಾದ ಜ್ಯೋತಿ ಮತ್ತು ಲಿಗೋರಿ ಪಿಂಟೋರ ಪುತ್ರರಾಗಿರುವ ಇವರು ಡ್ರಾಯಿಂಗ್‌, ಕರಾಟೆ, ನೃತ್ಯ ಮತ್ತು ಛದ್ಮ ವೇಷಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿ (ಸಾಮಾಜಿಕ ಕಾರ್ಯ)
ಬ್ರಹ್ಮಾವರ:
ಮಹಿಳೆಯರು ಸಂಘಟಿತರಾಗುವ ಉದ್ದೇಶದಿಂದ 1978ರಲ್ಲಿ ಚೇರ್ಕಾಡಿ ಸಮೃದ್ಧಿ ಮಹಿಳಾ ಮಂಡಳಿ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಭಜನೆ, ಹೊಲಿಗೆ ತರಬೇತಿ ಆಯೋಜಿಸಲಾಯಿತು. ಅನಂತರದ ದಿನಗಳಲ್ಲಿ ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌, ಡ್ರಾಯಿಂಗ್‌, ಡ್ಯಾನ್ಸ್‌ ತರಬೇತಿ, ಸೋಪ್‌, ಫಿನಾಯಿಲ್‌ ತಯಾರಿ ತರಬೇತಿ, ಆಭರಣ ತಯಾರಿ, ಮೆಹಂದಿ ಕ್ಲಾಸ್‌, ಬ್ಯೂಟಿಶಿಯನ್‌ ಕ್ಲಾಸ್‌, ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸಲಾಯಿತು. ಕಳೆದ 10 ವರ್ಷಗಳಿಂದ ಮಾ.8ರ ಮಹಿಳಾ ದಿನಾಚರಣೆಯಂದು ಗ್ರಾಮದ ಓರ್ವರನ್ನು ಮಾದರಿ ಮಹಿಳೆ ಎಂದು ಗುರುತಿಸಲಾಗುತ್ತಿದೆ. ದಾನಿಗಳ ಸಹಾಯದಿಂದ ರಚಿಸಿದ ಸಮೃದ್ಧಿ ನಿಧಿಯಿಂದ ಆರ್ಥಿಕವಾಗಿ ಹಿಂದುಳಿದ ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅತೀ ಹಿಂದುಳಿದವರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡಲಾಗುತ್ತಿದೆ. 2014-15ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಮಹಿಳಾ ಮಂಡಳಿ ಪ್ರಶಸ್ತಿಯಿಂದ ಪುರಸ್ಕೃತವಾಗಿದೆ. ಸ್ವತ್ಛ ಭಾರತ್‌ ಸಮ್ಮರ್‌ ಇಂಟರ್‌ಶಿಪ್‌ ಅಂಗವಾಗಿ ಕಳೆದ ಮೇ 1ರಿಂದ ಜು.31ರವರೆಗೆ 23 ಸದಸ್ಯೆಯರು ನಡೆಸಿದ 108 ಗಂಟೆಗಳ ಶ್ರಮದಾನ, ಸ್ವಚ್ಛತೆ, ಜಾಗೃತಿ ಕಾರ್ಯಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪ್ರಸ್ತುತ 40 ಸದಸ್ಯರನ್ನು ಹೊಂದಿದೆ.

ಹುಭಾಶಿಕ ಕೊರಗರ ಯುವ ಕಲಾ ವೇದಿಕೆ (ಜಾನಪದ)
ಬ್ರಹ್ಮಾವರ:
ಶಿಕ್ಷಣ, ಆರೋಗ್ಯ, ಜಾಗೃತಿ ಉದ್ದೇಶದಿಂದ ಹುಭಾಶಿಕ ಕೊರಗರ ಯುವ ಕಲಾ ವೇದಿಕೆ 2009ರಲ್ಲಿ ವೇದಿಕೆ ಆರಂಭಗೊಂಡಿತು. ಕೊರಗ ಸಮುದಾಯದ ಕಲಾ ಪ್ರಕಾರಗಳಿಗೆ ಸರಿಯಾದ ವೇದಿಕೆ, ಮಾನ್ಯತೆ ಕಲ್ಪಿಸುವುದು ಮುಖ್ಯ ಉದ್ದೇಶವಾಯಿತು. ಕೊರಗ ಸಮುದಾಯದ ಸಂಸ್ಕೃತಿ, ಭಾಷೆ, ಆಚಾರ ವಿಚಾರ, ಕಟ್ಟುಪಾಡುಗಳನ್ನು ಉಳಿಸುವ ಪ್ರಯತ್ನ. ಅತಿ ಮುಖ್ಯವಾಗಿ ಸಮಾಜದ  ಜನರನ್ನು ದುಶ್ಚಟಗಳಿಂದ ಮುಕ್ತರಾಗಿಸಿ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಲಾಯಿತು. ಸಂಘಟಿತರಾಗಿ ಸಮುದಾಯ ಬೆಳೆಸುವ ಯೋಜನೆ ಹಾಕಿಕೊಳ್ಳಲಾಯಿತು. ಪರಿಣಾಮವಾಗಿ ಕಲೆಗೆ ಸೂಕ್ತವಾದ ವೇದಿಕೆ, ಗೌರವ, ಸಂಭಾವನೆ ದೊರೆಯುತ್ತಿದೆ. ವಲಯ ಮಟ್ಟದ ಕಲಾ ವೇದಿಕೆ ರಚಿಸಿ ಮೂಲಭೂತ ಸೌಕರ್ಯ ಪಡೆಯುವಲ್ಲಿಯೂ ಪ್ರಯತ್ನಿಸಲಾಗುತ್ತಿದೆ ವಿಶಿಷ್ಟವಾದ ಕೊರಗ ಭಾಷೆ, ಪ್ರಕೃತಿ ದತ್ತವಾದ ಆಚಾರ ವಿಚಾರ ಉಳಿವಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕುಂಭಾಶಿಯ ಮಕ್ಕಳ ಮನೆಯಲ್ಲಿ ತರಬೇತಿ, ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಸ್ತುತ 25 ಸದಸ್ಯರನ್ನು ಹೊಂದಿದೆ. ವೇದಿಕೆಯ ಚಟುವಟಿಕೆಗಳಿಗೆ ಜಿಲ್ಲಾಡಳಿತ, ಇಲಾಖೆ, ಸಾರ್ವಜನಿಕರ ಸ್ಪಂದನೆ ದೊರೆತಿದೆ. 

ಕೀಳಂಜೆ ಜಲದುರ್ಗಾ ಮಹಿಳಾ ಸಂಘ (ಸಾಮಾಜಿಕ ಕಾರ್ಯ)
ಬ್ರಹ್ಮಾವರ:
ಹಾವಂಜೆ ಗ್ರಾಮದ ಜನರ ಸೇವೆಯ ಉದ್ದೇಶದಿಂದ ಹತ್ತಾರು ಮಹಿಳೆಯರಿಂದ ಕೀಳಂಜೆಯಲ್ಲಿ ಜಲದುರ್ಗಾ ಮಹಿಳಾ ಸಂಘ 2006ರಲ್ಲಿ ಪ್ರಾರಂಭಗೊಂಡಿತು. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ ವಿತರಣೆ, ಶಾಲಾ ಶುಲ್ಕಕ್ಕೆ ಧನ ಸಹಾಯ, ಅಂಗವಿಕಲರಿಗೆ ಸಹಾಯ, ಅಶಕ್ತರ ಮನೆ ನಿರ್ಮಾಣಕ್ಕೆ ಸಹಾಯ, ಉಚಿತ ಕನ್ನಡಕ ವಿತರಣೆ, ವೈದ್ಯಕೀಯ ಚಿಕಿತ್ಸೆಗೆ ನೆರವು, ದೈವಸ್ಥಾನದ ಅಭಿವೃದ್ದಿಗೆ ಸಹಾಯಧನವನ್ನು ನೀಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದೆ, ಜತೆಗೆ ಪ್ರತಿಭಾ ಪುರಸ್ಕಾರ, ಮಹಿಳಾ ದಿನಾಚರಣೆ, ಆಟಿದ ಅಟ್ಟಿಲ್‌, ವೈವಿಧ್ಯಮಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಹಿರಿಮೆಯನ್ನು ಹೊಂದಿದೆ. ಆಸ್ಪತ್ರೆಯ ರೋಗಿಗಳಿಗೆ ಕೊಡುಗೆ, ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಿದೆ. ನೀರಿನ ವ್ಯವಸ್ಥೆಗೆ ಸಹಾಯವನ್ನೂ ಮಾಡಿದೆ. ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ತುಳುನಾಡ ವೈಭವ, ತುಳು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವೈಶಿಷ್ಟ್ಯಪೂರ್ಣ ವೇದಿಕೆ ಕಲ್ಪಿಸಿದೆ. ದಾನಿಗಳ, ಗ್ರಾಮಸ್ಥರ ನೆರವಿನಿಂದ ಸಂಘಟಿತವಾಗಿ ಮುನ್ನಡೆಯುತ್ತಿದೆ.

ಟಾಪ್ ನ್ಯೂಸ್

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

8

Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ

7(1

Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.