Udupi: ಮೀನುಗಾರರ ಸಮಸ್ಯೆ: ರಾಜ್ಯದಲ್ಲಿ ಏಕರೂಪತೆಗೆ ಜಿಲ್ಲಾಧಿಕಾರಿ ಚಿಂತನೆ
Team Udayavani, Jan 16, 2025, 6:45 AM IST
ಉಡುಪಿ: ದೇಶಾದ್ಯಂತ ಮೀನುಗಾರಿಕೆಗೆ ಏಕರೂಪ ನೀತಿ ತರಬೇಕು ಎಂಬ ಬೇಡಿಕೆಯನ್ನು ಹಲವು ವರ್ಷಗಳಿಂದಲೂ ಕರಾವಳಿ ಮೀನುಗಾರರು ಸರಕಾರ ಹಾಗೂ ಜಿಲ್ಲಾಡಳಿತ ಮುಂದಿಡುತ್ತಿದ್ದಾರೆ. ಆದರೆ ಇನ್ನೂ ಈಡೇರಿಲ್ಲ. ಈಗ ಕರ್ನಾಟಕ ಕರಾವಳಿಗೆ ಅನ್ವಯಿಸುವಂತೆ ಏಕರೂಪತೆ ತರುವ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.
ನಾಡದೋಣಿ ಮೀನುಗಾರಿಕೆ ಉಡುಪಿ ಜಿಲ್ಲೆಯಲ್ಲಿ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಪ್ರಧಾನವಾಗಿದೆ. ಪರ್ಷಿನ್ ಹಾಗೂ ಡೀಪ್ ಫಿಶಿಂಗ್ ಬೋಟ್‌ಗಳು ಮಲ್ಪೆ, ಗಂಗೊಳ್ಳಿ, ಭಟ್ಕಳ ಹಾಗೂ ಮಂಗಳೂರಿನಲ್ಲಿ ಹೆಚ್ಚಿವೆ. ಮೂರು ಜಿಲ್ಲೆಗಳಲ್ಲಿ 3,456 ಯಾಂತ್ರಿಕೃತ ಬೋಟುಗಳು ಹಾಗೂ 8,657 ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳಿವೆ(ನಾಡದೋಣಿ). ಉಡುಪಿಯಲ್ಲೇ ನಾಡದೋಣಿ ಅಧಿಕ. ಬೈಂದೂರು ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 4,000 ಸಾವಿರಕ್ಕೂ ಅಧಿಕವಿದೆ.
ಮೀನುಗಾರಿಕೆ ವಿಧಾನ
ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳು ಕಡಲ ತೀರದಲ್ಲಿ ಭಾಗದಲ್ಲಿ ಮೀನುಗಾರಿಕೆ ಮಾಡುವುದಾಗಿದ್ದು, ಆಳ ಸಮುದ್ರಕ್ಕೆ ಹೋಗುವುದಿಲ್ಲ. ನಾಡದೋಣಿಯ ಬಳಿಕ ಪರ್ಷಿನ್ ಬೋಟ್ ಮೀನುಗಾರಿಕೆ ಇರುತ್ತದೆ. ಆಳ ಸಮುದ್ರದಲ್ಲಿ ಫಿಶಿಂಗ್ ಬೋಟ್ ಮೀನುಗಾರಿಕೆ ಇರಲಿದ್ದು, ಇವುಗಳು ಒಮ್ಮೆ ಸಮುದ್ರಕ್ಕೆ ಹೋದರೆ 10-12 ದಿನಗಳ ಬಳಿಕ ದಕ್ಕೆಗೆ ಮರಳುವುದು. ಉಳಿದೆರೆಡು ರೀತಿಯ ಮೀನುಗಾರಿಕೆ ಬೋಟುಗಳು ನಿತ್ಯ ಹೋಗಿ ಬರುವುದು.
ಏಕರೂಪತೆ ಯಾಕೆ?
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬುಲ್‌ಟ್ರಾಲ್ ಹಾಗೂ ರಾತ್ರಿ ವೇಳೆ ಹೆಚ್ಚುವರಿ ಲೈಟ್ ಬಳಸಿ ಮೀನು ಹಿಡಿಯುವುದನ್ನು (ಅಸ್ವಾಭಾವಿಕ ಮೀನುಗಾರಿಕೆ) ನಿಷೇಧಿಸಿದೆ. ನಾಡದೋಣಿ ಮೀನುಗಾರರ ಒತ್ತಡ ಹಾಗೂ ವಿವಿಧ ಮೀನುಗಾರಿಕೆ ಸಂಘಗಳ ನಿರಂತರ ಬೇಡಿಕೆ, ಸಭೆಯ ಫಲವಾಗಿ ಈ ವರ್ಷ ಬುಲ್‌ಟ್ರಾಲ್ ಮೀನುಗಾರಿಕೆ ಬಹುಪಾಲು ನಿಂತಿದೆ. ಆದರೆ ಲೈಟ್ ಹಾಕಿ ಮೀನು ಹಿಡಿಯುವುದು ನಡೆಯುತ್ತಿದೆ. ಇದು ನಾಡದೋಣಿ ಮೀನುಗಾರಿಕೆ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವುದರಿಂದ ನಿಷೇಧಿತ ಅಸ್ವಾಭಾವಿಕ ಮೀನುಗಾರಿಕೆ ಪದ್ಧತಿಯನ್ನು ರದ್ದು ಮಾಡಬೇಕು ಎಂಬುದು ನಾಡದೋಣಿ ಮೀನುಗಾರರ ಆಗ್ರಹವಾಗಿದೆ. ಅದರಂತೆ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ಕೆಲವು ದಿನಗಳಲ್ಲಿ ಮೀನುಗಾರಿಕೆ ಸಚಿವರನ್ನು ಒಳಗೊಂಡ ಸಭೆ ನಡೆಯುವ ಸಾಧ್ಯತೆಯಿದೆ.
ಸಮಸ್ಯೆಯೇನು?
ಒಂದು ಜಿಲ್ಲೆಯ ಮೀನುಗಾರಿಕೆ ದೋಣಿಗಳ ಸಂಘದವರು ನಿರ್ಣಯಿಸಿ ಬುಲ್‌ಟ್ರಾಲ್ ನಿಲ್ಲಿಸಿದರೆ ಉಳಿದೆರೆದು ಜಿಲ್ಲೆಗಳಲ್ಲೂ ಬುಲ್‌ಟ್ರಾಲ್ ನಿಲ್ಲಿಸಬೇಕಾಗುತ್ತದೆ. ರಾಜ್ಯದೊಳಗೆ ಗಡಿ ಇಲ್ಲದೆ ಇರುವುದರಿಂದ ಅಲ್ಲಿನವರು ಇಲ್ಲಿಗೆ, ಇಲ್ಲಿನವರು ಅಲ್ಲಿಗೆ ಹೋಗುವುದು ನಡೆಯುತ್ತದೆ. ಇದೇ ಮಾದರಿಯಲ್ಲಿ ಲೈಟ್ ಹಾಕಿ ಮೀನು ಹಿಡಿಯುವುದು ನಡೆಯುತ್ತದೆ. ಇದರಿಂದ ನಿಯಮ ಜಾರಿಮಾಡಿಕೊಂಡ ಜಿಲ್ಲೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಕನಿಷ್ಠ ನಮ್ಮ ರಾಜ್ಯದ ಮೂರು ಜಿಲ್ಲೆಗಳಿಗೆ ಅನ್ವಯವಾಗುವಂತೆ ಏಕರೂಪತೆ ಬರಲೇ ಬೇಕಾಗುತ್ತದೆ. ಆ ಏಕರೂಪತೆ ಈಗ ಇಲ್ಲದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.
ಮೀನುಗಾರಿಕೆಯಲ್ಲಿ ಏಕ ರೂಪತೆ ರಾಷ್ಟ್ರಮಟ್ಟದಲ್ಲೇ ಅಗತ್ಯ ವಿದೆ. ಎಲ್ಲ ರಾಜ್ಯಗಳು ಒಂದೇ ರೀತಿಯ ಕಾನೂನು ಅನುಸರಿಸಿದಾಗ ಸಮಸ್ಯೆ ಉದ್ಭವಿಸುವುದಿಲ್ಲ.
– ಮಂಕಾಳ ವೈದ್ಯ,
ರಾಜ್ಯ ಮೀನುಗಾರಿಕೆ ಸಚಿವರು.
ಮೂರು ಜಿಲ್ಲೆಗಳಿಗೆ ಏಕರೂಪತೆ ತರುವ ನಿಟ್ಟಿನಲ್ಲಿ ಉಳಿದೆರೆಡು ಜಿಲ್ಲೆಗಳ ಜಿಲ್ಲಾಧಿಕಾರಿ ಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರವೇ ಈ ಬಗ್ಗೆ ಉನ್ನತಮಟ್ಟದ ಸಭೆಯೂ ನಡೆಯಲಿದೆ.
-ಡಾ| ಕೆ.ವಿದ್ಯಾಕುಮಾರಿ,
ಜಿಲ್ಲಾಧಿಕಾರಿ ಉಡುಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.