Udupi ಆರೋಪಿಗೆ 20 ವರ್ಷಗಳ ಕಠಿನ ಶಿಕ್ಷೆ
ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ
Team Udayavani, Jun 12, 2024, 11:57 PM IST
ಉಡುಪಿ: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ಜುಲೈ ತಿಂಗಳಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೋ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು 20ವರ್ಷಗಳ ಕಠಿನ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ
ಬೈಂದೂರು ನಿವಾಸಿ ಮಧುಕರ ಮರಾಠಿ (24) ಶಿಕ್ಷೆಗೆ ಗುರಿಯಾದ ಆರೋಪಿ. ನೊಂದ ಬಾಲಕಿಯು ಆರೋಪಿಯ ಸಂಬಂಧಿಕನಾಗಿದ್ದು, ತನ್ನ ಮನೆಗೆ ಬಂದ ನೊಂದ ಬಾಲಕಿಯನ್ನು ಮಧುಕರ ಮರಾಠಿ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ವಿಚಾರ ಬೇರೆಯವರಲ್ಲಿ ಹೇಳಿದರೆ ನಿನ್ನ ಬಗ್ಗೆ ಅಪ್ರಚಾರ ಮಾಡುವುದಾಗಿ ಆತ ಬಾಲಕಿಗೆ ಬೆದರಿಕೆಯೊಡ್ಡಿದ್ದ.
ಅನಂತರ ಮಧುಕರ, ಯಾರು ಇಲ್ಲದ ಸಮಯ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಚಾರ ಯಾರಲ್ಲಿಯೂ ಹೇಳದಂತೆ ಬೆದರಿಕೆಯೊಡ್ಡಿದ್ದನು ಎಂದು ದೂರಲಾಗಿದೆ. ಅನಂತರ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮನೆಯವರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವ ಬಗ್ಗೆ ತಿಳಿದುಬಂತು.
ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಮಾಹಿತಿ ನೀಡಿದ್ದರು. ಅದರಂತೆ ವಿಚಾರ ತಿಳಿದುಕೊಂಡ ಬಾಲಕಿಯ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತೃ ತೇಜ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯವು ಒಟ್ಟು 30 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದೆ. ನೊಂದ ಬಾಲಕಿಯ ಸಾಕ್ಷಿ ಮತ್ತು ಡಿಎನ್‌ಎ ವರದಿಯಲ್ಲಿ ಆರೋಪಿಯು ನೊಂದ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಪೂರಕ ಸಾಕ್ಷಿ ಯನ್ನು ಪರಿಗಣಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರೋಪಿಗೆ 20 ವರ್ಷ ಕಠಿನ ಜೈಲುಶಿಕ್ಷೆ, 31 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡದಲ್ಲಿ 11 ಸಾವಿರ ರೂ. ಸರಕಾರಕ್ಕೆ ಮತ್ತು 20 ಸಾವಿರ ರೂ. ಸಂತ್ರಸ್ತ ಬಾಲಕಿಗೆ ಮತ್ತು ಸರಕಾರದಿಂದ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು. 2023ರ ಸಪ್ಟೆಂಬರ್‌ನಲ್ಲಿ ಪ್ರಕರಣದ ದೋಷಾರೋಪಣ ಪಟ್ಟಿ ಸಲ್ಲಿಸಿದ ಒಂದೇ ವರ್ಷದೊಳಗೆ ನ್ಯಾಯಾಲಯ ತೀರ್ಪು ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.