Udupi ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಮೊರೆ ಹೋದ ಪಾಕ್ ಮೂಲದ ಕುಟುಂಬ
ಯೂಟ್ಯೂಬ್ ನೋಡಿ ಆಗಮಿಸಿ ಪುತ್ರನ ಆರೋಗ್ಯಕ್ಕಾಗಿ ಪ್ರಾರ್ಥನೆ
Team Udayavani, Jul 15, 2024, 7:25 AM IST
ಮಲ್ಪೆ: ಆದಿಉಡುಪಿ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಪಾಕಿಸ್ಥಾನ ಮೂಲದ, ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಕುಟುಂಬವೊಂದು ಶನಿವಾರ ಆಗಮಿಸಿ ದರ್ಶನ ಸೇವೆಯಲ್ಲಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದೆ.
ಯೂಟ್ಯೂಬ್‌ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಇಲ್ಲಿಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪಾಕಿಸ್ಥಾನ ಮೂಲದ ಆದಿತ್ಯ ಸಿಂಗಾನಿಯ ಅವರ ಕುಟುಂಬ 35 ವರ್ಷಗಳ ಹಿಂದೆ ಭಾರತಕ್ಕೆ ಬಂದು ರಾಜಸ್ಥಾನದಲ್ಲಿ ನೆಲೆಸಿತ್ತು. 7 ವರ್ಷಗಳಿಂದ ಅದಿತ್ಯ ಸಿಂಗಾನಿಯ ಅವರು ಪತ್ನಿ ಮತ್ತು ಪುತ್ರ ಜೈಸಿಂಗಾನಿಯ ಜತೆಗೆ ಮುಂಬ ಯಿಯ ಉಲ್ಲಾಸ್‌ನಗರದಲ್ಲಿ ನೆಲೆಸಿದ್ದಾರೆ. ಪುತ್ರ ಜೈಸಿಂಗಾನಿಯಾ ಎಂಬಿಎ ಪದವೀಧರನಾಗಿದ್ದು, ಯಾವುದೋ ಕಾಯಿಲೆಯಿಂದಾಗಿ ದೈಹಿಕ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಆತನಿಗೆ ತನ್ನ ಫ್ಲ್ಯಾಟ್‌ನಲ್ಲಿ ಯಾವುದೋ ಶಕ್ತಿ ಆಕರ್ಷಣೆಯಾಗಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆಯವರು ಬಹುತೇಕ ಎಲ್ಲ ದೈವ ದೇವರಿಗೆ ಹರಕೆ ಹೊತ್ತಿದ್ದರು. ಮಾನಸಿಕ ವೈದ್ಯರ ಬಳಿ ಸಲಹೆ ಚಿಕಿತ್ಸೆ ಕೊಡಿಸಿದ್ದರೂ ಪ್ರಯೋಜನವಾಗಿಲ್ಲ.
ವಾರದ ಹಿಂದೆ ಕುಟುಂಬ ದೈವಸ್ಥಾನಕ್ಕೆ ಬಂದು ಸಮಸ್ಯೆಯನ್ನು ನಿವೇದಿಸಿಕೊಂಡಿದ್ದರು. ಆಗ ಅವರಿಗೆ ದೈವದ ದರ್ಶನದಲ್ಲಿ ಕೇಳುವಂತೆ ಸಲಹೆ ನೀಡಿ ಶನಿವಾರ ಬರುವಂತೆ ತಿಳಿಸಲಾಗಿತ್ತು. ಅದರಂತೆ ಶನಿವಾರ ದೈವಸ್ಥಾನಕ್ಕೆ ಬಂದು ದರ್ಶನ ಸೇವೆಯ ಮೂಲಕ ಸಂಕಷ್ಟ ಪರಿಹಾರಕ್ಕಾಗಿ ದೈವಕ್ಕೆ ಮೊರೆ ಇಟ್ಟಿದ್ದಾರೆ. ದರ್ಶನದಲ್ಲಿ ದೈವ ಅಭಯ ವಾಕ್ಯನೀಡಿದೆ. ಈತನಿಗೆ ಆಕರ್ಷಿತವಾದ ಶಕ್ತಿಯನ್ನು ಉಚ್ಚಾಟಿಸಲಾಯಿತು. 48 ಶುಕ್ರವಾರ ದೇವಿಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವಂತೆಯೂ, ಕಾಯಿಲೆ ನಿವಾರಣೆಗೆ ಪೂಜೆಯ ಜತೆಗೆ ಸೂಕ್ತ ಚಿಕಿತ್ಸೆ ಪಡೆಯುವಂತೆಯೂ ಸಲಹೆ ನೀಡಿದೆ.
ಈ ಕುಟುಂಬ ಯೂಟ್ಯೂಬ್‌ನಲ್ಲಿ ದೈವಸ್ಥಾನದ ಮಹತ್ವವನ್ನು ಅರಿತು ಇಲ್ಲಿಗೆ ಬಂದಿದೆ. ದರ್ಶನ ಸೇವೆ ನಡೆದ ಬಳಿಕ ಯುವಕ ನಿಧಾನವಾಗಿ ಸಹಜ ಸ್ಥಿತಿಗೆ ಬಂದಂತೆ ಕಾಣುತ್ತಿತ್ತು. ಪೂರ್ತಿ ಗುಣಮುಖವಾದರೆ ಮುಂದೆ ದೊಡ್ಡ ಸೇವೆ ಕೊಡುತ್ತೇವೆ ಎಂದು ಹರಕೆ ಹೊತ್ತು ಕೊಂಡಿದ್ದಾರೆ ಸ್ಥಳೀಯರಾದ ಸುರೇಶ್ ಶೆಟ್ಟಿ ಮೂಡುಬೆಟ್ಟು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.