ಯೋಜನೆ ಸಮರ್ಪಕ ಕಾರ್ಯಗತವಾಗುವಲ್ಲಿ ನಿಗಾ ವಹಿಸಿ: ಶಾಸಕ ಭಟ್
Team Udayavani, Jun 22, 2018, 2:45 AM IST
ಉಡುಪಿ: ಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಾದ ‘ವಾರಾಹಿ ಕುಡಿಯುವ ನೀರಿನ ಯೋಜನೆ’ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ನನ್ನ ಉದ್ದೇಶ. ಯೋಜನೆ ಉತ್ತಮ ರೀತಿಯಲ್ಲಿ ಕಾರ್ಯಗತವಾಗುವ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ನಗರಸಭೆ ಸಭಾಂಗಣದಲ್ಲಿ ಜೂ.20 ರಂದು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರ ಉಪಸ್ಥಿತಿಯಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಿದ ಶಾಸಕರು ಅಮೃತ್ ಯೋಜನೆ (ಅಟಲ್ ಮಿಷನ್ ಫಾರ್ ರಿಜುವಿನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್) ಮತ್ತು ಎಡಿಬಿ ನೆರವಿನಲ್ಲಿ ನಡೆಯಲಿರುವ ವಾರಾಹಿ ಕುಡಿಯುವ ನೀರಿನ ಯೋಜನೆ, ಮಣಿಪಾಲದಲ್ಲಿ ಒಳಚರಂಡಿ ಕಾಮಗಾರಿ, ತ್ಯಾಜ್ಯ ವಿಲೇವಾರಿ, ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ಪಡೆದು ಚರ್ಚೆ ನಡೆಸಿದರು.
270 ಕೋ.ರೂ. ಯೋಜನೆ
ವಾರಾಹಿಯಿಂದ ಉಡುಪಿಗೆ ನೀರು ತರುವ ಒಟ್ಟು 270 ಕೋ.ರೂ. ವೆಚ್ಚದ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಟೆಂಡರ್ ನಡೆದಿದೆ. ಉಡುಪಿ ನಗರಸಭೆಗೆ ‘ಅಮೃತ್’ ಯೋಜನೆಯಡಿ 132 ಕೋ.ರೂ. ಹಾಗೂ ಎಡಿಬಿಯಿಂದ 207 ಕೋ.ರೂ. ಸೇರಿದಂತೆ ಒಟ್ಟು 338.63 ಕೋ.ರೂ. ಮಂಜೂರಾಗಿದೆ. ಇದರಲ್ಲಿ 290 ಕೋ.ರೂ.ಗಳನ್ನು ಕುಡಿಯುವ ನೀರು ಮತ್ತು 38 ಕೋ.ರೂ.ಗಳನ್ನು ಒಳಚರಂಡಿ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಭಟ್ ಅವರು ‘ವಾರಾಹಿ ಹೊರತುಪಡಿಸಿದರೆ ಉಡುಪಿಗೆ ಬೇರೆ ನೀರಿನ ಮೂಲಗಳಿಲ್ಲ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈ ಯೋಜನೆ ಅನಿವಾರ್ಯ. ಆದರೆ ಅಲ್ಲಿಂದ ಉಡುಪಿಗೆ 38 ಕಿ.ಮೀ. ಉದ್ದದ ಪೈಪ್ ಗಳನ್ನು ರಸ್ತೆಯಲ್ಲಿ ಹಾಕುವಾಗ ರಸ್ತೆ ಅಗೆಯುವ ಸಮಸ್ಯೆ ಎದುರಾಗಬಹುದು. ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಮಾಡಿ ಕಾರಿಡಾರ್ ನಿರ್ಮಾಣ ಮಾಡಿದರೆ ಸುರಕ್ಷಿತ ಮತ್ತು ಸೂಕ್ತವಾಗಿರುತ್ತದೆ’ ಎಂದರು.
ಮಣಿಪಾಲಕ್ಕೆ ಒಳಚರಂಡಿ
ಮಣಿಪಾಲ ಭಾಗದ ಒಳಚರಂಡಿ ಸಮಸ್ಯೆಗೆ ಪರಿಹಾರವಾಗಿ ಮಣಿಪಾಲದಲ್ಲಿ ಮಾಹೆಯವರ ಒಳಚರಂಡಿ ಶುದ್ಧೀಕರಣ ಘಟಕದ ಜತೆಯಲ್ಲಿಯೇ ನಗರಸಭೆ ಕೂಡ ಶುದ್ಧೀಕರಣ ಪ್ರಕ್ರಿಯೆ ಮಾಡುವ ಕುರಿತು ಮಾಹೆಯವರ ಜತೆಗೆ ಮಾತುಕತೆ ನಡೆಸಿದ್ದೇನೆ. ಈ ಬಗ್ಗೆ ಅಂತಿಮ ತೀರ್ಮಾನ ಆಗಬೇಕಾಗಿದೆ ಎಂದು ಭಟ್ ಹೇಳಿದರು. ಆಯುಕ್ತ ಜನಾರ್ದನ್, ನಗರಸಭೆ ಇಂಜಿನಿಯರ್ ಗಣೇಶ್ ಪಾಲ್ಗೊಂಡಿದ್ದರು.
ಒಳಚರಂಡಿ: ಸದಸ್ಯರ ಆಗ್ರಹ
ಮಣಿಪಾಲದ ಒಳಚರಂಡಿ ಸಮಸ್ಯೆ ಕುರಿತು ಪ್ರಸ್ತಾವವಾದಾಗ ಉಡುಪಿಯ ವಿವಿಧೆಡೆ ಉಂಟಾಗಿರುವ ಒಳಚರಂಡಿ ಸಮಸ್ಯೆಯ ಬಗ್ಗೆ ಹಲವಾರು ಮಂದಿ ನಗರಸಭೆ ಸದಸ್ಯರು ಶಾಸಕರ ಗಮನ ಸೆಳೆದರು. ‘ಹಲವೆಡೆ ವೆಟ್ ವೆಲ್ ಗಳು ಸರಿಯಿಲ್ಲ. ಕೊಳಚೆ ನೀರನ್ನು ಕಲ್ಸಂಕ ತೋಡಿಗೆ ಬಿಡಲಾಗುತ್ತಿದೆ’ ಎಂದು ಹರೀಶ್‌ರಾಮ್ ಬನ್ನಂಜೆ ಹೇಳಿದರು. ದಿನಕರ ಶೆಟ್ಟಿ ಹೆರ್ಗ, ಅಮೃತಾ ಕೃಷ್ಣಮೂರ್ತಿ, ಜನಾರ್ದನ ಭಂಡಾರ್‌ಕರ್ ಮೊದಲಾದವರು ‘ವೆಟ್ ವೆಲ್ ಗಳನ್ನು ಶೀಘ್ರ ಸರಿಪಡಿಸಬೇಕಾಗಿದೆ’ ಎಂದರು. ಕೊಡವೂರು ಪ್ರದೇಶಗಳಲ್ಲಿ ಕೊಳಚೆ ನೀರು ಹರಿಯುತ್ತಿರುವ ಕುರಿತು ಶಾಸಕರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ‘ಕೊಳಚೆ ಶುದ್ಧೀಕರಣ ಘಟಕದಿಂದ ಕೊಳಚೆ ನೀರು ಹೊರಗೆ ಬರುತ್ತಿಲ್ಲ. ಆದರೆ ಕೆಲವು ವೆಟ್ ವೆಲ್ ಗಳಲ್ಲಿ ಪಂಪಿಂಗ್ ಸಮಸ್ಯೆ ಆದಾಗ ಕಲ್ಸಂಕ ತೋಡಿಗೆ ಕೊಳಚೆ ನೀರು ಬರುತ್ತಿದೆ’ ಎಂದರು.
‘ಶೀಘ್ರದಲ್ಲೇ ಕೊಳಚೆ ನೀರು ಸಮಸ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಒಳಚರಂಡಿ ಕಾಮಗಾರಿಗೆ ಹಣ ಹೊಂದಿಸಿಕೊಳ್ಳಲು ಕಷ್ಟವಾಗದು’ ಎಂದು ಶಾಸಕರು ಹೇಳಿದರು. ಕಸವಿಲೇವಾರಿ, ದಾರಿದೀಪ ನಿರ್ವಹಣೆಯೂ ಸೂಕ್ತ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಲು ಶಾಸಕರು ಸೂಚಿಸಿದರು.
ಉಡುಪಿ, ಮಣಿಪಾಲಕ್ಕೆ ಬಸ್ ನಿಲ್ದಾಣ
ಡಲ್ಟ್ (ಡೈರೆಕ್ಟೊರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್ ಫಾರ್ಮೇಷನ್) ವತಿಯಿಂದ ಉಡುಪಿ, ಮಣಿಪಾಲ ಮತ್ತು ಮಲ್ಪೆಯಲ್ಲಿ ಬಸ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಮಲ್ಪೆಯಲ್ಲಿ ಸ್ಥಳ ಆಯ್ಕೆ ಅಂತಿಮ ವಾಗಿಲ್ಲ. ಮಣಿಪಾಲದಲ್ಲಿ ಈಗ ಇರುವ ನಿಲ್ದಾಣದ ಸ್ಥಳ ದಲ್ಲಿ 3.45 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗು ವುದು. ಉಡುಪಿ ಸಿಟಿ ಬಸ್ ನಿಲ್ದಾಣದಲ್ಲೇ ಹೊಸ ಬಸ್ ನಿಲ್ದಾಣವನ್ನು 5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ‘ಬಸ್ ನಿಲ್ದಾಣಗಳಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್‌ಗೂ ಅವಕಾಶ ನೀಡಬೇಕು. ಈ ಕುರಿತಾದ ಯೋಜನೆಯ ನೀಲನಕಾಶೆ ಕೂಡಲೆ ನೀಡಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.