ಉಡುಪಿ ನಗರಸಭೆ: ಹೆಚ್ಚಲಿದೆ ಮಹಿಳಾ ಪ್ರಾಬಲ್ಯ?
Team Udayavani, Jun 19, 2018, 6:15 AM IST
ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಾವಧಿ ಇನ್ನೆರಡು ತಿಂಗಳಲ್ಲಿ ಮುಗಿಯುತ್ತದೆ. ವಾರ್ಡ್‌ವಾರು ಸ್ಪರ್ಧಿಸುವ ಅಭ್ಯರ್ಥಿಗಳ ಕರಡು ಮೀಸಲಾತಿ ಪಟ್ಟಿಯನ್ನು ಸರಕಾರ ಬಿಡುಗಡೆಗೊಳಿಸಿದ್ದು, ಈ ಪ್ರಕಾರ ನೋಡುವಾಗ ಉಡುಪಿ ನಗರಸಭೆಯಲ್ಲಿ ಮಹಿಳೆಯರ ಪ್ರಾಬಲ್ಯ ಹೆಚ್ಚಲಿದೆ.
ನಗರಸಭೆಯಲ್ಲಿ 35 ವಾರ್ಡ್‌ಗಳಿದೆ. ಈಗ ಬಂದಿರುವ ಪಟ್ಟಿಯ ಪ್ರಕಾರ ಮಹಿಳೆಯರಿಗೆ ಹೆಚ್ಚಿನ ಸ್ಥಾನ ದೊರೆಯುವ ಸಾಧ್ಯತೆ ಇದೆ. ಸಾಮಾನ್ಯ ಮಹಿಳೆ-9, ಹಿಂ.ವರ್ಗ (ಎ) ಮಹಿಳೆ-5, ಹಿಂ.ವರ್ಗ (ಬಿ) ಮಹಿಳೆ-1, ಪ.ಜಾತಿ, ಪಂಗಡ ಮಹಿಳೆ ತಲಾ 1 ಹೀಗೆ ಒಟ್ಟು 17 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆೆ. ಇದರೊಂದಿಗೆ 10 ಕಡೆಯಲ್ಲಿ ಸಾಮಾನ್ಯ ಮೀಸಲು ಇದ್ದು, ಇದರಲ್ಲೂ ಮಹಿಳೆಗೆ ಸ್ಪರ್ಧಿಸಲು ಅವಕಾಶಗಳಿದೆ. ಹಾಗಾಗಿ ಮಹಿಳೆಯರ ಪ್ರಾಬಲ್ಯ ಸಾಮಾನ್ಯವಾಗಿ ಏರಿಕೆಯಾಗಲಿದೆ. ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್-10, ಬಿಜೆಪಿ-4 ಮಹಿಳಾ ಸದಸ್ಯರು ಇದ್ದಾರೆ.
ಸಜ್ಜುಗೊಳ್ಳುತ್ತಿರುವ ಪಕ್ಷಗಳು
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪೂರ್ವಭಾವಿ ಸಭೆಗಳನ್ನು ನಡೆಸಲು ಪ್ರಾರಂಭಿಸಿವೆೆ. ವಾರ್ಡ್‌ವಾರು ಸಭೆಗಳೂ ನಡೆಯುತ್ತಲಿದೆ. ವಿಧಾನಸಭೆ ಚುನಾವಣೆ ಸಂದರ್ಭ 35 ವಾರ್ಡ್‌ಗಳ ಪೈಕಿ 30ರಲ್ಲಿ ಬಿಜೆಪಿಗೆ ಲೀಡ್ ಮತಗಳು ಬಿದ್ದಿವೆ. ಇದು ನಗರಸಭೆ ಚುನಾವಣೆಯಲ್ಲಿ ನಮಗೆ ಆಶಾದಾಯಕ ಸ್ಥಿತಿಯನ್ನು ಒದಗಿಸುತ್ತದೆ ಎಂದು ಬಿಜೆಪಿ ಹೇಳುತ್ತದೆ. ಆದರೆ ನಗರಸಭೆ ಚುನಾವಣೆಯಲ್ಲಿ ಈ ರೀತಿಯಾಗದು. ನಮಗೇ ಹೆಚ್ಚಿನ ಮತ ಬರುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಉಡುಪಿ ನಗರಸಭೆ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿದೆ. 35 ಸ್ಥಾನಗಳ ಪೈಕಿ ಕಾಂಗ್ರೆಸ್-22, ಬಿಜೆಪಿ-13 ಸ್ಥಾನಗಳನ್ನು ಕಳೆದ ಬಾರಿ ಪಡೆದಿತ್ತು.
ಆಕ್ಷೇಪಣೆ ಸಲ್ಲಿಕೆ
ಈಗ ಪ್ರಕಟಗೊಂಡಿರುವ ಮೀಸಲಾತಿ ಪಟ್ಟಿಗೆ ಪ್ರಮುಖ ವಿವಿಧ ಪಕ್ಷಗಳ ಕಾರ್ಯಕರ್ತರು, ವಾರ್ಡ್‌ಗಳ ಸಾರ್ವಜನಿಕರಿಂದ ಹಲವಾರು ಆಕ್ಷೇಪಣೆಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ಪ್ರಮುಖವಾಗಿ ಕೆಲ ವಾರ್ಡ್‌ನಲ್ಲಿ ಮೂರ್‍ನಾಲ್ಕು ಬಾರಿಯಿಂದಲೂ ಸಾಮಾನ್ಯ ಮತ್ತು ಮಹಿಳಾ ಮೀಸಲಾಗಿ ಬರುತ್ತಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಕೆಯಾಗಿದೆ. ಮೀಸಲಾತಿ ಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದಾದ ಸಾಧ್ಯತೆಗಳಿವೆೆ.
ಎಲ್ಲ ಸ್ಥಾನಗಳನ್ನು ಗೆಲ್ಲುವ ಭರವಸೆ
ನಗರಸಭೆ ಚುನಾವಣಾ ತಯಾರಿಯಲ್ಲೇ ಇದ್ದೇವೆ. ಸಭೆಗಳನ್ನು ನಡೆಸುತ್ತಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ 35 ವಾರ್ಡ್‌ಗಳ ಪೈಕಿ 31ರಲ್ಲಿ ಬಿಜೆಪಿ ಲೀಡ್ ಬಂದಿದೆ. ಉಳಿದ 4ರ ಪೈಕಿ 3ರಲ್ಲಿ ಈ ಹಿಂದೆ ಗೆದ್ದಂತಹ ವಾರ್ಡ್‌ಗಳೇ ಆಗಿವೆೆ. ಹಾಗಾಗಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೇವೆ. ಕಾಂಗ್ರೆಸ್‌ನ ದುರಾಡಳಿತ ಜನಕ್ಕೆ ತಿಳಿದಿದೆ. ಬಿಜೆಪಿ ಶಾಸಕರಿರುವಾಗ ನಗರಸಭೆಯೂ ಬಿಜೆಪಿ ಆಡಳಿತಕ್ಕೆ ಬಂದರೆ ನಗರದ ಅಭಿವೃದ್ಧಿಗೆ ವೇಗ ಸಿಗುತ್ತದೆ.
– ಕೆ. ರಘುಪತಿ ಭಟ್, ಶಾಸಕರು
ನಗರಸಭೆ ಉತ್ತಮ ಸಾಧನೆ
ವಾರ್ಡ್‌ವಾರು ಸಭೆಗಳನ್ನು ನಡೆಸಲಿದ್ದೇವೆ. ನಗರಸಭೆ ಆಡಳಿತದಲ್ಲಿ ಉತ್ತಮ ಸಾಧನೆಯನ್ನು ಈ ಬಾರಿ ಮಾಡಿದೆ. ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಆಡಳಿತ ಖಚಿತ.
– ಮೀನಾಕ್ಷಿ ಮಾಧವ ಬನ್ನಂಜೆ,
ನಗರಸಭೆ ಅಧ್ಯಕ್ಷರು
– ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.