ಉಡುಪಿ ಪರ್ಯಾಯ: ಪ್ಯಾಚ್‌ವರ್ಕ್,ಡಾಮರು ಆರಂಭ
Team Udayavani, Dec 27, 2021, 3:47 AM IST
ಉಡುಪಿ: ಸಾಕಷ್ಟು ವಿಳಂಬದ ಅನಂತರ ನಗರದ ರಸ್ತೆ ದುರಸ್ತಿ, ಸ್ವಚ್ಛತಾ ಕೆಲಸಕ್ಕೆ ಕೊನೆಗೂ ವೇಗ ದೊರೆತಿದೆ. ಕೃಷ್ಣಾಪುರ ಮಠದ ಪರ್ಯಾಯಕ್ಕೆ ಇನ್ನೂ 23 ದಿನಗಳು ಬಾಕಿ ಇದ್ದು, ಶೀಘ್ರ ಕಾಮಗಾರಿ ಮುಗಿಸುವ ಯೋಜನೆಯಲ್ಲಿ ಕೆಲಸ, ಕಾರ್ಯ ಭರದಿಂದ ಸಾಗುತ್ತಿದೆ.
ಪ್ರಸ್ತುತ ಅಜ್ಜರಕಾಡು-ಬ್ರಹ್ಮಗಿರಿ ರಸ್ತೆ ಡಾಮರು ಕೆಲಸ ನಡೆಯುತ್ತಿದೆ, ಬಿಆರ್‌ಎಸ್ ಆಸ್ಪತ್ರೆ ಬಳಿ ರಸ್ತೆ ವಿಸ್ತರಣೆ ತಯಾರಿ ನಡೆಸಲಾಗುತ್ತಿದೆ. ಅಂಬಲ ಪಾಡಿ, ಕಲ್ಮಾಡಿ ಭಾಗದಲ್ಲಿ ಸ್ವತ್ಛತೆ ಕೆಲಸ ನಡೆಯುತ್ತಿದ್ದು, ಸೋಮವಾರದಿಂದ ಕೆಲಸ ಆರಂಭಗೊಂಡಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಹಾಳಾದ ರಸ್ತೆಗಳ ಡಾಮಾರು ವರ್ಕ್, ಪ್ಯಾಚ್ ವರ್ಕ್‌ಗೆ ತಲಾ 4ರಿಂದ 4.90 ಲಕ್ಷ ರೂ.,ವರೆಗಿನ ಅಂದಾಜು ಮೊತ್ತದಲ್ಲಿ 3.20 ಲಕ್ಷ ರೂ.ನಿಂದ 4.40 ಲಕ್ಷ ರೂ.ವರೆಗೆ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಒಳಕಾಡು, ಕಿನ್ನಿಮೂಲ್ಕಿ, ಶಿರಿಬೀಡು ವಾರ್ಡ್‌ಗೆ ಟೆಂಡರ್ ಬಂದಿಲ್ಲ. ನಗರಸಭೆ ಸುತ್ತಮುತ್ತ ಪಾದಚಾರಿ ಮಾರ್ಗ, ವಿಭಾಜಕಗಳಿಗೆ 7.80 ಲ.ರೂ. ವೆಚ್ಚದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿದೆ, ತೆಂಕಪೇಟೆ ವುಡ್‌ಲ್ಯಾಂಡ್ಸ್ ಹೊಟೇಲ್‌ನಿಂದ ರಾಜಾಂಗಣ ರಸ್ತೆ, ಚಿತ್ತರಂಜನ್ ಸರ್ಕಲ್‌ನಿಂದ ವುಡ್‌ಲ್ಯಾಂಡ್ ಹೊಟೇಲ್‌ವರೆಗೆ, ತೆಂಕಪೇಟೆ ಕ್ರಾಸ್ ರಸ್ತೆ ಮರು ಡಾಮರು 16.84 ಲ.ರೂ, 18.71 ಲ.ರೂ, ಅನುದಾನದಲ್ಲಿ ನಡೆಯಲಿದ್ದು, ಈ ಭಾಗದಲ್ಲಿ ರಸ್ತೆ ಬದಿಯಲ್ಲಿ ಜಲ್ಲಿಕಲ್ಲು ಹಾಕಲಾಗಿದ್ದು, ಕಾಮಗಾರಿ ಇನ್ನಷ್ಟೇ ವೇಗ ಪಡೆಯ ಬೇಕಿದೆ.
ಕಲ್ಸಂಕದಿಂದ ರಾಜಾಂಗಣಕ್ಕೆ ಹೋಗುವ ರಸ್ತೆ ಮರು ಡಾಮರು ಕೆಲಸ 8.30 ಲ.ರೂ. ವೆಚ್ಚದಲ್ಲಿ ತೆಂಕಪೇಟೆ ಮೂಲಕ ಸಂಸ್ಕೃತ ಕಾಲೇಜು, ಮಿತ್ರ ನರ್ಸಿಂಗ್ ಹೋಂ, ಕುಂಜಿಬೆಟ್ಟು ವಾದಿರಾಜ ಮಾರ್ಗ, ತಲಾ 11, 12, 13, 15 ಲಕ್ಷ ರೂ. ವೆಚ್ಚದಲ್ಲಿ ಡಾಮನೆ ಕಾಮಗಾರಿ ನಡೆಯಬೇಕಿದೆ.
ವಿಳಂಬ ಯಾಕೆ ? :
ಸಾರ್ವಜನಿಕ ವಲಯದಲ್ಲಿ ನಗರದಲ್ಲಿ ದುಃಸ್ಥಿತಿಯಲ್ಲಿದ್ದ ರಸ್ತೆಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಉದಯವಾಣಿ ಸುದಿನ ಈ ಸಮಸ್ಯೆ ಬಗ್ಗೆ ಸಂಪಾದಕೀಯ, ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು. ನಗರದ ಮುಖ್ಯ ರಸ್ತೆಗಳೆಲ್ಲವೂ ಹೊಂಡ, ರಸ್ತೆಯ ಎರಡೂ ಬದಿಯಲ್ಲಿ ಇಂಟರ್‌ಲಾಕ್ ಮೇಲಕ್ಕೆದ್ದು ನಗರದ ಅಂದಗೆಡಿಸುತ್ತಿವೆ. ಗುಂಡಿಬೈಲು- ಅಂಬಾಗಿಲು ರಸ್ತೆ ಗುಂಡಿಗಳಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ವರ್ಷ ಮಳೆ, ಚುನಾವಣೆ ನೀತಿ ಸಂಹಿತೆಯಿಂದ ಕೆಲಸ ತಡವಾಗಿ ಆರಂಭಿಸಬೇಕಾಯಿತು, ಈಗ ಎಲ್ಲೆಡೆ ಕಾಮಗಾರಿ ಆರಂಭಗೊಂಡಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ನಗರಸಭೆ ಭರವಸೆ ನೀಡಿದೆ.
ರಾಜ್ಯ ಸರಕಾರದ ವಿಶೇಷ ಅನುದಾನವಿಲ್ಲ : ಈ ಬಾರಿಯ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆಯಿಂದ ಪರ್ಯಾಯ ಉತ್ಸವಕ್ಕೆ ರಾಜ್ಯ ಸರಕಾರ ವಿಶೇಷ ಅನುದಾನ ದೊರೆತಿಲ್ಲ ಎಂದು ನಗರಸಭೆ ಜನಪ್ರತಿನಿಧಿಗಳು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಪರ್ಯಾಯಕ್ಕೆ, ನಗರದ ಮೂಲ ಸೌಕರ್ಯ ದುರಸ್ತಿ ಕಾರ್ಯ, ಅಂದಚೆಂದ ಹೆಚ್ಚಿಸಲು ವಿಶೇಷ ಅನುದಾನ ಒದಗಿಸುತ್ತಿತ್ತು. ನಗರಸಭೆ ನಿಧಿಯಿಂದಲೇ 7 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಇರಿಸಿ ಟೆಂಡರ್ ಕರೆಯಲಾಗಿದೆ.
ಪರ್ಯಾಯ ಉತ್ಸವಕ್ಕೆ ನಗರದ ರಸ್ತೆ ಸಹಿತ ಎಲ್ಲ ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸುತ್ತಿದ್ದೇವೆ. ನಗರದ ಸ್ವತ್ಛತೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸ ಭರದಿಂದ ಸಾಗುತ್ತಿದೆ. ಈ ವರ್ಷ ಕೊನೆವರೆಗೂ ಸುರಿದ ಮಳೆಯಿಂದ ಸ್ವಲ್ಪ ವಿಳಂಬವಾಗಿದೆ. ಕಳೆದ ಸೋಮವಾರದಿಂದ ನಗರದ ಬಹುತೇಕ ಕಡೆಗಳಲ್ಲಿ ಪರ್ಯಾಯ ಸಂಬಂಧಿತ ಕಾಮಗಾರಿಯಾದ ರಸ್ತೆ ಡಾಮರು, ಪ್ಯಾಚ್‌ವರ್ಕ್ ನಿರಂತರ ನಡೆಯುತ್ತಿದೆ. ಜ.10ರೊಳಗೆ ಎಲ್ಲ ಕಾಮಗಾರಿಗಳು ಮುಗಿಯಲಿವೆ.–ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.