ಪರ್ಯಾಯ ಮಹೋತ್ಸವಕ್ಕೆ ಕೃಷ್ಣನ ನಗರಿ ಸರ್ವಸನ್ನದ್ಧ
Team Udayavani, Jan 17, 2020, 7:00 AM IST
ಉಡುಪಿ: ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನ ಪೂಜೆಗಾಗಿ ಜ. 18ರಂದು ಸರ್ವಜ್ಞ ಪೀಠಾರೋಹಣಗೈಯಲಿದ್ದು, ಈ ಪರ್ಯಾಯ ಮಹೋತ್ಸವಕ್ಕೆ ಶ್ರೀಕೃಷ್ಣ ನಗರ ಸಂಪೂರ್ಣ ಸಜ್ಜುಗೊಂಡಿದೆ. ಜ. 8ರಂದು ಪುರಪ್ರವೇಶ ಮಾಡಿದ ಅನಂತರ ಉಡುಪಿ ಪೂರ್ಣ ಪರ್ಯಾಯಕ್ಕೆ ತಯಾರಾಗಿದೆ. ಜ.18ರಂದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿಯವರು ಪರ್ಯಾಯ ಪೀಠಾರೋಹಣಗೈಯಲಿದ್ದಾರೆ. ಅಂದು ಮುಂಜಾವ ಪೂಜೆಯ ಅಧಿಕಾರವನ್ನು ಅಕ್ಷಯ ಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿಕೈ ನೀಡಿ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಹಸ್ತಾಂತರಿಸಲಾಗುತ್ತದೆ.
ಪರಿಸರಸ್ನೇಹಿ ಪರ್ಯಾಯ
ಅದಮಾರು ಪರ್ಯಾಯ ಹಲವಾರು ವೈಶಿಷ್ಟéಗಳನ್ನು ಹೊಂದಿದೆ. ಪರಿಸರದ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶ್ರೀಗಳು ಈ ಬಾರಿಯ ಪರ್ಯಾಯದಲ್ಲಿ ಪರಿಸರ ಸ್ನೇಹಿ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪರ್ಯಾಯ ಮಹೋತ್ಸವ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಲಿದೆ. ಶುಭ ಕೋರಲು ವಸ್ತ್ರದ ಬ್ಯಾನರ್‌ಗಳನ್ನು ಬಳಸಲಾಗಿದೆ. ಬೃಹತ್ ಅಕರ್ಷಕ ಕಟೌಟ್‌ಗಳು, ಸ್ವಾಗತ ಕಮಾನುಗಳು ಕೂಡ ವಸ್ತ್ರದಿಂದಲೇ ನಿರ್ಮಾಣವಾಗಿವೆ.
ವೈವಿಧ್ಯಮಯ ಕಲಾತಂಡಗಳು
ಮೆರವಣಿಗೆಗೆ ಇಂಬು ನೀಡಲು ಟ್ಯಾಬ್ಲೋಗಳ ಜತೆಗೆ ವಿವಿಧ ಕಲಾತಂಡಗಳು ಕೂಡ ಸಾಥ್ ನೀಡಲಿವೆ. ಪೂರ್ಣಕುಂಭ, ಬಿರುದಾವಳಿ, 4 ಗೊಂಬೆ ತಂಡಗಳು, 7 ಚೆಂಡೆ ಬಳಗ, 1 ಪಂಚವಾದ್ಯ, 20 ಜನರ ಕೊಂಬು ವಾದನ ತಂಡ, ದೇವಸ್ಥಾನದ ಪಂಚವಾದ್ಯಗಳು, ನಾಗಸ್ವರ ತಂಡ, ಸ್ಯಾಕ್ಸೋಫೋನ್ ತಂಡ, ಚೆಂಡೆ ಮತ್ತು ಕೋಲಾಟ ತಂಡ, ತಮಟೆ ಮತ್ತು ನಗಾರಿ ತಂಡ, ತಾಲೀಮು, ಮರಕಾಲು ಕುಣಿತ, ಭಾರತ ಸೇವಾದಳ, ರೇಂಜರ್-ರೋವರ್, ಭಜನ ತಂಡಗಳು, ಬಣ್ಣದ ಕೊಡೆಗಳು ಸಹಿತ ಹಲವಾರು ಬಗೆಯ ಕಲಾಪ್ರಕಾರಗಳು ಮನೋರಂಜನೆ ನೀಡಲಿವೆ.
ಪರಿಸರ ಸ್ನೇಹಿ ದರ್ಬಾರ್ ಪಾಸ್!
ಪರ್ಯಾಯ ಮಹೋತ್ಸವ ವೀಕ್ಷಿಸಲು ಬರುವವರಿಗೆ ಶ್ರೀಕೃಷ್ಣ ಸೇವಾ ಬಳಗದಿಂದ ಹೊಸ ಪರಿಕಲ್ಪನೆಯ ಪರಿಸರಸ್ನೇಹಿ ಪ್ಲಾಸ್ಟಿಕ್ ಮುಕ್ತ ದರ್ಬಾರು ಪಾಸ್‌ಗಳನ್ನು ನೀಡಲಾಗುತ್ತದೆ. ಈ ಪಾಸ್‌ಗಳಲ್ಲಿ ತುಳಸಿ ಬೀಜಗಳನ್ನು ಅಳವಡಿಸಲಾಗಿದ್ದು, ಮನೆಗೆ ಹೋದ ಅನಂತರ ನೀರಿಗೆ ಹಾಕಬಹುದು. ಬೀಜಗಳು ಚಿಗುರೊಡೆಯಲಿದ್ದು, ಪರಿಸರ ಸ್ನೇಹಕ್ಕೆ ಆದ್ಯತೆ ನೀಡಲಾಗಿದೆ.
ಜ. 17ರ ಮಧ್ಯರಾತ್ರಿ ಬಳಿಕ ಜ. 18ರ ಮುಂಜಾವ ಪರ್ಯಾಯೋತ್ಸವ ಈ ತೆರನಾಗಿ ನಡೆಯಲಿದೆ.
ತಡರಾತ್ರಿ 1.20ಕ್ಕೆ ಕಾಪು ದಂಡತೀರ್ಥದಲ್ಲಿ ಪವಿತ್ರ ಸ್ನಾನ
1.50ಕ್ಕೆ ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರ ಪೂಜೆ, ಪರ್ಯಾಯ ಮೆರವಣಿಗೆ ಆರಂಭ
ಮುಂಜಾವ 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣದರ್ಶನ, ಚಂದ್ರ ಮೌಳೀಶ್ವರ, ಅನಂತೇಶ್ವರ ದರ್ಶನ 5.30ಕ್ಕೆ ಶ್ರೀಕೃಷ್ಣ ಮಠ ಪ್ರವೇಶ
5.57ಕ್ಕೆ ಅಕ್ಷಯಪಾತ್ರೆ ಸ್ವೀಕಾರ, ಸರ್ವಜ್ಞ ಪೀಠಾರೋಹಣ
10ಕ್ಕೆ ಮಹಾಪೂಜೆ
11ರ ಬಳಿಕ ಅನ್ನಸಂತರ್ಪಣೆ
ಅಪರಾಹ್ನ 2.30ಕ್ಕೆ ಪರ್ಯಾಯ ದರ್ಬಾರ್ ಸಭೆ
ಸಂಜೆ 7.30ಕ್ಕೆ ರಥೋತ್ಸವ
10 ಲಕ್ಷಕ್ಕೂ ಅಧಿಕ ಮಿನಿಯೇಚರ್
ಕಿನ್ನಿಮೂಲ್ಕಿಯಿಂದ ರಥಬೀದಿಯವರೆಗೆ ಸಾವಿರಕ್ಕೂ ಅಧಿಕ ಹಳೆ ಶೈಲಿಯ ಗೂಡುದೀಪಗಳು ಮತ್ತು 10 ಲಕ್ಷಕ್ಕೂ ಅಧಿಕ ಮಿನಿಯೇಚರ್ ಲೈಟ್‌ಗಳನ್ನು ಹಾಕಲಾಗಿದೆ. ರಾತ್ರಿ ವೇಳೆಯೂ ಈ ಪರಿಸರ ಹಗಲಿನಂತೆ ಕಂಗೊಳಿಸುತ್ತಿದೆ. ಇದೇ ಮೊದಲ ಬಾರಿಗೆ ರಥಬೀದಿ ತುಂಬಾ ಆರ್‌ಜಿಬಿ ಲೈಟ್‌ಗಳನ್ನು ಹಾಕಲಾಗಿದೆ. ಒಂದೇ ಬಲ್ಬ್ ಮೂಲಕ 7 ಬಣ್ಣಗಳು ಕಂಗೊಳಿಸುವುದು ಇದರ ವೈಶಿಷ್ಟéವಾಗಿದೆ. ಪರ್ಯಾಯ ವೈಭವಕ್ಕೆ ಮತ್ತಷ್ಟು ರಂಗು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಜಾನಪದ ತಂಡಗಳು ಉಡುಪಿಗೆ ಆಗಮಿಸಲಿವೆ. ಮೆರವಣಿಗೆಯಲ್ಲೂ ಪೌರಾಣಿಕ ಮತ್ತು ಐತಿಹಾಸಿಕ ಸಂದೇಶಗಳನ್ನು ಸಾರುವ ಟ್ಯಾಬ್ಲೋಗಳಿಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ನಗರಸಭೆ, ಕೃಷಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿ.ಪಂ.ನಿಂದ ವಿಶೇಷ ಟ್ಯಾಬ್ಲೋಗಳು ಇರಲಿವೆ. ಶ್ರೀಕೃಷ್ಣ ಸೇವಾ ಬಳಗದ ಉಸ್ತುವಾರಿಯಲ್ಲಿಯೂ ಹಲವಾರು ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿವೆ.
ಇಂದು ಪಲಿಮಾರು ಶ್ರೀಗಳಿಗೆ ಅಭಿನಂದನೆ
ಜ. 17ರಂದು ಸಾಯಂಕಾಲ 7 ಗಂಟೆಗೆ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಗೌರವಿಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ ನಿರ್ಗಮನ ಪರ್ಯಾಯ ಪಲಿಮಾರು ಮಠದಿಂದ ನಡೆಯಲಿದೆ. ರಾತ್ರಿ 7 ಗಂಟೆಗೆ ನಿರ್ಗಮನ ಪರ್ಯಾಯ ಶ್ರೀಗಳಿಗೆ ಅಭಿನಂದನ ಕಾರ್ಯಕ್ರಮ ರಥಬೀದಿಯಲ್ಲಿ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಅದಮಾರು ಮಠದಿಂದ ಜರಗಲಿದೆ.
ಸಿದ್ಧಗೊಂಡಿದೆ ಬರ್ಫಿ, ಅಕ್ಕಿ ವಡೆ
ಶ್ರೀಕೃಷ್ಣ ಮಠ ಪಾರ್ಕಿಂಗ್ ಏರಿಯಾ ಬಳಿಯ ಬೈಲಕೆರೆ ಸೇರಿಗಾರ ಕುಟುಂಬಸ್ಥರ ಸುಮಾರು ಒಂದೂವರೆ ಎಕರೆ ಸ್ಥಳದಲ್ಲಿ ಪ್ರಸಾದ ತಯಾರಿ ಮತ್ತು ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ಯಾಯೋತ್ಸವದಲ್ಲಿ ಅನ್ನಸಂತರ್ಪಣೆಗಾಗಿ 100ಕ್ಕೂ ಅಧಿಕ ಬಾಣಸಿಗರಿಂದ ಭೋಜನದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಬೆಲ್ಲದ ಪಾಕದಿಂದ ತಲಾ 60 ಸಾವಿರ ಕಾಳು ಲಾಡು, ಗೋಧಿ ಹಿಟ್ಟಿನ ಬರ್ಫಿ, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.