Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ
Team Udayavani, Jun 16, 2024, 10:53 AM IST
ಉಡುಪಿ: ದೇಶ ಮಟ್ಟದಲ್ಲಿ ಗುರುತಿಸಲ್ಪಟ್ಟ ಹಿರಿಯ ನರಶಸ್ತ್ರಚಿಕಿತ್ಸಕ ಪ್ರೊ| ಡಾ| ಎ. ರಾಜಾ (73) ಜೂ. 16ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಮೂಲತಃ ತಮಿಳುನಾಡಿನವರಾದ ಡಾ| ರಾಜಾ ಅವರು ತಮ್ಮ ಬಹು ಅಮೂಲ್ಯ ಸೇವೆಯನ್ನು ಉಡುಪಿ ಜಿಲ್ಲೆಯಲ್ಲಿ ಸಲ್ಲಿಸಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್, ನರಶಸ್ತ್ರಚಿಕಿತ್ಸೆಯಲ್ಲಿ ಎಂಎಸ್ ಪದವಿಯನ್ನು ಪಡೆದರು. ಮದ್ರಾಸ್ ವಿ.ವಿ.ಯ ನರಶಸ್ತ್ರಚಿಕಿತ್ಸೆಯ ಮೊದಲ ಎಂಎಸ್ ತಂಡದ ವಿದ್ಯಾರ್ಥಿ ಇವರು. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ (ಕೆಎಂಸಿ) 1979ರಲ್ಲಿ ವೃತ್ತಿ ಜೀವನ ಅರಂಭಿಸಿದ ಇವರು ಉಪನ್ಯಾಸಕ, ಪ್ರಾಧ್ಯಾಪಕ, ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ 2010ರ ವರೆಗೆ ಸೇವೆ ಸಲ್ಲಿಸಿದ್ದರು.
1992ರಲ್ಲಿ ಕೆಎಂಸಿಯಲ್ಲಿ ಎಂಸಿಎಚ್ ನ್ಯೂರೋಸರ್ಜರಿ ಕಾರ್ಯಕ್ರಮ ಆರಂಭಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಹಲವರು ಸಂಶೋಧನೆಗಳನ್ನು ಕೈಗೊಂಡು ಸಂಶೋಧನ ಪ್ರಬಂಧ ಮಂಡಿಸಿದ್ದಾರೆ. ಏಮ್ಸ್, ಎಸ್‌ಸಿಐಎಂಸಿಟಿ ಸಹಿತ ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಿಗೆ ಪರೀಕ್ಷಾ ಪರಿವೀಕ್ಷಕರಾಗಿಯೂ ಸೇವೆ ಒದಗಿಸಿದ್ದಾರೆ.
2010ರಿಂದ ಅವರು ಆದರ್ಶ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಸಮಲೋಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮಣಿಪಾಲದ ರಾಷ್ಟ್ರೀಯ ನರವಿಜ್ಞಾನ ಮಿಷನ್‌ನ ಅಧ್ಯಕ್ಷರಾಗಿದ್ದರು. ನ್ಯೂರೋಲಾ ಜಿಕಲ್ ಸೊಸೈಟಿ ಆಫ್ ಇಂಡಿಯಾದ ಆಜೀವ ಸದಸ್ಯರಾಗಿದ್ದರು. ಐಎಸ್ಸಿವಿಎಸ್ ಮತ್ತು ಎನ್‌ಎಸ್‌ಐನ ಕರಾವಳಿ ಅಧ್ಯಾಯವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2004ರಲ್ಲಿ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಡಾ| ಮುರಳೀಧರ ಪೈ ಅವರೊಂದಿಗೆ ಭಾರತದ ಮೊದಲ ಕ್ರಾನಿಯೊಫಾಗಸ್ ಅವಳಿ ಬೇರ್ಪಡಿಕೆ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದರು.
ಉಡುಪಿ ಮತ್ತು ದ.ಕ.ದಲ್ಲಿ ಸೂಕ್ಷ್ಮದರ್ಶಕದ ಬಳಕೆಯನ್ನು ಪರಿಚಯಿಸಿದ ಮೊದಲ ನರಶಸ್ತ್ರಚಿಕಿತ್ಸಕರಾಗಿದ್ದರು. ಈ ಪ್ರದೇಶದಲ್ಲಿ ನರಶಸ್ತ್ರಚಿಕಿತ್ಸೆಯ ಕ್ಷೇತ್ರವನ್ನು ಗಮನಾರ್ಹವಾಗಿ ಮುನ್ನಡೆಸಿದರು. ವೈದ್ಯಕೀಯ ಸಾಹಿತ್ಯಕ್ಕೆ ಅವರ ಕೊಡುಗೆಗಳು ಅಪಾರ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಇವರ ಹಲವು ಲೇಖನಗಳು ಪ್ರಕಟವಾಗಿವೆ.
ಇವರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಅವರು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.