Udupi; ಸೆ.17- ಅ.2 ರವರೆಗೆ ಜಿಲ್ಲಾ ಬಿಜೆಪಿಯಿಂದ ‘ಸೇವಾ ಪಾಕ್ಷಿಕ ಅಭಿಯಾನ’
Team Udayavani, Sep 14, 2023, 8:41 PM IST
ಉಡುಪಿ: ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯಿಂದ ಮೊದಲ್ಗೊಂಡು ಅ.2 ಗಾಂಧಿ ಜಯಂತಿ ಆಚರಣೆಯ ವರೆಗೆ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಸೇವಾ ಪಾಕ್ಷಿಕ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ನಿಟ್ಟಿನಲ್ಲಿ ನಡೆಯುವ ನಡೆಯುವ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಅಭಿಯಾನ, ಆಯುಷ್ಮಾನ್ ಭವ ಕಾರ್ಯಕ್ರಮಗಳ ಸಹಿತ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ಸೆ.25ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮದಿನ ಹಾಗೂ ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಪ್ರತೀ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಆಚರಿಸಲಾಗುವುದು ಎಂದರು.
ಸೆ.16ರ ಮಧ್ಯಾಹ್ನ 3.30ಕ್ಕೆ ಜಿಲ್ಲಾ ಕಚೇರಿಯಲ್ಲಿ ನಡೆಯುವ ನೈಋತ್ಯ ಶಿಕ್ಷಕ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಮುಖಂಡ ಸಿ.ಟಿ. ರವಿ ಭಾಗವಹಿಸಲಿದ್ದಾರೆ. ಸೆ.17ರ ಸಂಜೆ 5.30ಕ್ಕೆ ಜಿಲ್ಲಾ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯ ಪ್ರದರ್ಶಿನಿ ಉದ್ಘಾಟನೆಗೊಳ್ಳಲಿದೆ. ಸೆ.26, 27 ಮತ್ತು 28ರಂದು ಜಿಲ್ಲೆಯ ಎಲ್ಲ 6 ಮಂಡಲಗಳ 265 ಶಕ್ತಿ ಕೇಂದ್ರಗಳಲ್ಲಿ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೂತ್ ಸಶಸ್ತೀಕರಣ ಸಭೆಗಳು ನಡೆಯಲಿವೆ. ಮತದಾರ ಪಟ್ಟಿ ಪರಿಷ್ಕರಣೆ, ಬಿಎಲ್ಎ-2 ನೇಮಕ, ಜಿಲ್ಲಾ ಕಾರ್ಯಾಲಯ ವ್ಯವಸ್ಥೆ ಪರಿಷ್ಕರಣೆ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ನನ್ನ ಮಣ್ಣು ನನ್ನ ದೇಶ ಮುಂತಾದ ಕಾರ್ಯಕ್ರಮಗಳ ಜೊತೆಗೆ ಸೇವಾ ಪಾಕ್ಷಿಕ ಅಭಿಯಾನವನ್ನು ಸಂಘಟಿತ ಪ್ರಯತ್ನದ ಮೂಲಕ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ ವಿವಿಧ ಕಾರ್ಯಕ್ರಮಗಳ ಜವಾಬ್ದಾರಿ ನಿರ್ವಹಣೆಯ ತಂಡಗಳ ವಿವರಗಳನ್ನು ನೀಡಿ ಮಾತನಾಡಿ, ಕಳೆದ 8 ವರ್ಷಗಳಿಂದ ಸೇವಾ ಪಾಕ್ಷಿಕ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದು ಬಂದಿದೆ. ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕ್ರಾಂತಿಕಾರಿ ಹೆಜ್ಜೆಗಳೊಂದಿಗೆ ಹೆಚ್ಚಿನ ಒತ್ತನ್ನು ನೀಡಿದೆ. ನೂರಾರು ಜನಪರ ಯೋಜನೆಗಳ ಸಹಿತ ವಿಶ್ವ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹೆಚ್ಚಿಸಿರುವ ಪ್ರಧಾನಿ ಮೋದಿ ಆಡಳಿತ ವೈಖರಿ ಜನಮಾನಸದಲ್ಲಿ ಹೊಸ ಭರವಸೆ ಮೂಡಿಸಿದೆ. ಈ ನಿಟ್ಟಿನಲ್ಲಿ ಸೆ.17ರಿಂದ ಅ.2ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಸವಿತಾ ಎಸ್. ಕೋಟ್ಯಾನ್, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.