ಮಣಿಪಾಲದಲ್ಲಿ ಉಪೇಂದ್ರ ಪೈ ಸ್ಮಾರಕ ಕಲಾಕೃತಿ
Team Udayavani, Feb 25, 2018, 8:29 PM IST
ಉಡುಪಿ: ಆಧುನಿಕ ಮಣಿಪಾಲವನ್ನು ನಿರ್ಮಿಸುವಲ್ಲಿ ತೆರೆಯ ಮರೆಯಲ್ಲಿ ಕಾರ್ಯನಿರ್ವಹಿಸಿದ್ದ ತೋನ್ಸೆ ಉಪೇಂದ್ರ ಪೈಯವರ ಸ್ಮರಣಾರ್ಥ ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸ್ಯೂಟ್ಸ್ ಹೊಟೇಲ್ ಸಮೀಪದ ಉಪೇಂದ್ರ ಪೈ ಸ್ಮಾರಕ ವೃತ್ತದಲ್ಲಿ ನಾಣ್ಯಗಳ ಮೂಲಕ ಇತಿಹಾಸ ಸಾರುವ “ಕಾಯಿನ್ ಏಜ್’ ಶಿಲ್ಪ ಕಲಾಕೃತಿಯನ್ನು ನಿರ್ಮಿಸಲಾಗಿದೆ. ದಿ ಮಣಿಪಾಲ್ ಗ್ರೂಪ್ ಸಂಸ್ಥೆಯು ಹೆಸರಾಂತ ಕಲಾವಿದ ಎಲ್.ಎನ್. ತಲ್ಲೂರು ಅವರ ಸಹಕಾರದಲ್ಲಿ ಕಲಾಕೃತಿಯನ್ನು ನಿರ್ಮಿಸಿದೆ. “ಕಾಯಿನ್ ಏಜ್’ ಕಲಾಕೃತಿಯು ಪರಿಸರದಲ್ಲಿ ಕಾಲಕಾಲಕ್ಕೆ ಉಂಟಾದ ವಿಕಾಸವನ್ನು ಸಂಕೇತಿಸುತ್ತಿದೆ.
ಈ ಕಲಾಕೃತಿ ನಾಣ್ಯಗಳ ಮೂಲಕ ಇತಿಹಾಸ, ಆರ್ಥಿಕತೆ, ತಂತ್ರಜ್ಞಾನ, ವ್ಯಕ್ತಿ ಪರಿಚಯ, ಭೌಗೋಳಿಕ, ಸಂಸ್ಕೃತಿಯನ್ನು ಕಟ್ಟಿಕೊಡುತ್ತಿದೆ. ಮೂಲತಃ ಕುಂದಾಪುರ ತಾಲೂಕಿನ ಲಕ್ಷ್ಮೀನಾರಾಯಣ ತಲ್ಲೂರು ಅವರು ಅಪರೂಪದ ಮಿಲ್ಲಿಂಗ್ ತಂತ್ರಜ್ಞಾನದಲ್ಲಿ ಕಲಾಕೃತಿಯನ್ನು ರಚಿಸಿದ್ದಾರೆ. ಕಲಾಕೃತಿಯನ್ನು ಪ್ರಾಚೀನ ನಾಣ್ಯಗಳ ಆಕಾರದಲ್ಲಿ ರಚಿಸಲಾಗಿದೆ. ಕಲಾಕೃತಿ ಒಟ್ಟು 6.5 ಟನ್ ಭಾರ, 27 ಅಡಿ ಎತ್ತರ, ವ್ಯಾಸ (ತಳಮಟ್ಟ) 20 ಅಡಿ ಇದೆ. ಇದರಲ್ಲಿ ಏಳು ವಿವಿಧ ಶಿಲ್ಪಗಳನ್ನು ಬಳಸಿಕೊಳ್ಳಲಾಗಿದೆ. ರಾಜಸ್ಥಾನದ ಸ್ಯಾಂಡ್‌ಸ್ಟೋನ್, ತಮಿಳುನಾಡಿನ ಮಹಾಬಲಿಪುರಂ ಶಿಲೆ, ಯೆರ್‌ಕಾಡ್ ಬ್ಲೂ ಸ್ಟೋನ್, ಟರ್ಕಿ ಮಾರ್ಬಲ್, ಕಾರ್ಕಳದ ಶಿಲೆಕಲ್ಲು ಹಾಗೂ ಬೆಂಗಳೂರಿನ ಕಪ್ಪು ಶಿಲೆಗಳಲ್ಲಿ ನಾಣ್ಯಗಳ ಆಕಾರದಲ್ಲಿ ಕಲಾಕೃತಿಗಳನ್ನು ಕೆತ್ತಲಾಗಿದೆ.
ಸ್ವಾತಂತ್ರ್ಯಪೂರ್ವದ ಸೂರ್ಯ- ಚಂದ್ರರ ಸಂಕೇತವಿರುವ ಅರ್ಧ ಆಣೆಯನ್ನು ರೂಪಿಸಲಾಗಿದೆ. ಏಳು ನಾಣ್ಯ ಕಲಾಕೃತಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಇಡಲಾಗಿದೆ. ಕಲಾಕೃತಿಯ ಮೇಲು¤ದಿಯಿಂದ ಒಟ್ಟೆ ಪಾವಲಿ, ಅಳುಪರ ಕಾಲದಲ್ಲಿ ಬಾರಕೂರಿನ ಟಂಕಸಾಲೆಯಲ್ಲಿ ಮುದ್ರಿಸಿದ ನಾಣ್ಯ, ಮೂರು ಪೈಸೆ ನಾಣ್ಯ, ತೆರಿಗೆ ಇಲಾಖೆಯ 150ನೇ ವರ್ಷಾಚರಣೆಯ ಪ್ರಯುಕ್ತ ಹೊರತರಲಾದ 50 ರೂ. ನಾಣ್ಯ, ಐದು ಪೈಸೆ ನಾಣ್ಯ, ಅಳುಪರ ಲಾಂಛನ, ಒಂದು ರೂ. ನಾಣ್ಯಗಳ ಪರಿಕಲ್ಪನೆ ಇದೆ.
ವಿಜಯನಗರದ ಕಾಲದಲ್ಲಿ ಬಳಕೆ ಮಾಡಿರುವ ಕನ್ನಡ ಅಕ್ಷರ, ಮೀನು ಮತ್ತು ದೇವರ ಛತ್ರಿ, 1934ರಲ್ಲಿ ಗಾಂಧೀಜಿ ಉಡುಪಿ ಭೇಟಿ, ಚಾಣಕ್ಯ, ಭತ್ತದ ತೆನೆ, ಕೃಷಿ ಸಲಕರಣೆ, ಕೋಣ, ಭರತನಾಟ್ಯದ ಪ್ರಶ್ನಾ ಮುದ್ರೆ,ಪಿಂಗಾರ, ಕವಡೆ ಚಿತ್ರಗಳು ಇವೆ. ಸಿಂಡಿಕೇಟ್ ಬ್ಯಾಂಕ್ ಸ್ಥಾಪಕರಲ್ಲಿ ಒಬ್ಬರಾಗಿ ಪಿಗ್ಮಿ ಪದ್ಧತಿ, ಆ ಮೂಲಕ ಉಳಿತಾಯ ಪ್ರವೃತ್ತಿಯನ್ನು ಮೊತ್ತಮೊದಲ ಬಾರಿಗೆ ಪ್ರೇರೇಪಿಸಿದ ಉಪೇಂದ್ರ ಪೈ ಅವರ ವ್ಯಕ್ತಿತ್ವದ ಪರಿಚಯವನ್ನು ಈ ಕಲಾಕೃತಿ ಮಾಡಿಕೊಡುತ್ತದೆ.
ಇಂದು ಉದ್ಘಾಟನೆ
ಅನಾವರಣಗೊಳ್ಳಲಿರುವ ಕಲಾಕೃತಿಯು ನೈಸರ್ಗಿಕ ಬಣ್ಣ ಹೊಂದಿದೆ, ಕೃತಕ ಬಣ್ಣಗಳನ್ನು ಬಳಸಿಲ್ಲ. ಮಣಿಪಾಲ ಟೆಕ್ನಾಲಜೀಸ್ ಪ್ರಾಯೋಜಕತ್ವದ ಸುಮಾರು ಒಂದೂವರೆ ವರ್ಷಗಳ ಯೋಜನೆ ಇದಾಗಿದೆ. ಕಲಾಕೃತಿಯು ಫೆ. 25ರ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಗೊಂಡು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುತ್ತದೆ. ಸಚಿವ ಪ್ರಮೋದ್ ಮಧ್ವರಾಜ್ ಸ್ಮಾರಕವನ್ನು ಅನಾವರಣಗೊಳಿಸಲಿದ್ದು, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಮಣಿಪಾಲ್ ಟೆಕ್ನಾಲಜೀಸ್ ಲಿ. ಅಧ್ಯಕ್ಷ ಟಿ. ಸತೀಶ್ ಯು. ಪೈ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ, ಮಣಿಪಾಲ್ ಟೆಕ್ನಾಲಜೀಸ್ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ, ವನಿತಾ ಪೈ, ಪೌರಾಯುಕ್ತ ಮಂಜುನಾಥಯ್ಯ, ನಗರಸಭಾ ಸದಸ್ಯ ಪ್ರಶಾಂತ್ ಭಟ್ ಭಾಗವಹಿಸುವರು.
ಸಾಮಾಜಿಕ ಕಳಕಳಿಯ ಹರಿಕಾರ ಉಪೇಂದ್ರ ಪೈ
ತೋನ್ಸೆ ಉಪೇಂದ್ರ ಪೈಯವರು (1895-1956) ಕೈಮಗ್ಗ ನೇಕಾರಿಕೆ ಉದ್ಯಮವನ್ನು ಪುನಶ್ಚೇತನಗೊಳಿಸಲು ತಮ್ಮ ಸಹೋದರ ಡಾ| ಟಿ.ಎಂ.ಎ. ಪೈಯವರ ಜತೆ ಯತ್ನಿಸಿದವರು. ಈ ಆಸಕ್ತಿಯೇ ದಿ ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಬ್ಯಾಂಕಿಂಗ್ ಸಿಂಡಿಕೇಟ್ ಲಿ. (ಸಿಂಡಿಕೇಟ್ ಬ್ಯಾಂಕ್‌ನ ಪೂರ್ವ ರೂಪ) ಸ್ಥಾಪಿಸಲು ಕಾರಣವಾಯಿತು. ಇದರಲ್ಲಿರುವ ಇಂಡಸ್ಟ್ರಿಯಲ್ ಶಬ್ದ ಕೈಮಗ್ಗ ಉದ್ಯಮವನ್ನು ಸೂಚಿಸುತ್ತದೆ.
ಪೈಯವರು ಉಡುಪಿ, ಮಂಗಳೂರು, ಕುಮಟಾ, ಪುಣೆ, ಬರೋಡಗಳಲ್ಲಿ ಏಳರಿಂದ ಸೀನಿಯರ್ ಇಂಟರ್‌ಮೀಡಿಯಟ್ ವರೆಗೆ ಶಿಕ್ಷಣ ಪಡೆದು ಬಳಿಕ ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದರು. ಸ್ವದೇಶೀ ಆಂದೋಲನಕ್ಕೆ ಬೆಂಬಲ ನೀಡಿದ ಪೈಯವರು ಆಗ ಖಾದಿ ಬಟ್ಟೆ ಧರಿಸಲು ಆರಂಭಿಸಿದರು. ಕೊನೆಯವರೆಗೂ ಖಾದಿಧಾರಿಗಳಾಗಿದ್ದರು. ಪೈಯವರು ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದರು. ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಬಡಗಿ ಇತ್ಯಾದಿ ವರ್ಗಕ್ಕೆ ಪ್ರೋತ್ಸಾಹ ಕೊಟ್ಟರು, ನಿರುದ್ಯೋಗ ಸಮಸ್ಯೆ ನಿವಾರಣೋಪಾಯ ಇದರ ಹಿಂದಿತ್ತು. ಇದರಲ್ಲಿಯೂ ಸ್ಥಳೀಯ ಪರಿಕರಗಳ ಬಳಕೆಯ ಮೂಲಕ ಸ್ವಾವಲಂಬನೆಗೆ ಒತ್ತುಕೊಟ್ಟರು. 1932ರಲ್ಲಿ ರಾಮಕೃಷ್ಣ ಥಿಯೇಟರ್ ತೆರೆಯುವುದರ ಹಿಂದೆ ಕಲಾ ಪ್ರೇಮವೂ ಇತ್ತು. 1934ರಲ್ಲಿ ಮಣಿಪಾಲವನ್ನು ಕಾರ್ಯ ಕ್ಷೇತ್ರವನ್ನಾಗಿ ಉಪೇಂದ್ರ ಪೈ ಮಾಡಿಕೊಂಡರು. ಅವರ ಸಾರ್ವಜನಿಕ ಕಾಳಜಿ ಮಹತ್ತರವಾದುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.