Udupi ಪ್ರವಾಸೋದ್ಯಮ: ನಿನ್ನೆ, ಇಂದು, ನಾಳೆ ವಿಚಾರಗೋಷ್ಠಿ
Team Udayavani, Jul 21, 2024, 1:59 AM IST
ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ಕರಾವಳಿ ಪ್ರವಾಸೋದ್ಯಮ ಸಂಘಟನೆ, ಟೂರ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಶನ್, ಜಿಲ್ಲಾ ಸಣ್ಣ ವರ್ತಕರ ಸಂಘ, ಹೊಟೇಲ್, ಹೋಮ್ ಸ್ಟೇ ಮಾಲಕರ ಸಂಘದ ಸಹಕಾರದಲ್ಲಿ ಕಿದಿಯೂರು ಹೊಟೇಲ್‌ನ ಕೃಷ್ಣ ಸಭಾಭವನದಲ್ಲಿ ಪ್ರವಾಸೋದ್ಯಮದ ಕುರಿತು “ಉಡುಪಿ ಪ್ರವಾಸೋದ್ಯಮ: ನಿನ್ನೆ, ಇಂದು ಮತ್ತು ನಾಳೆ’ ವಿಚಾರಗೋಷ್ಠಿ ಶನಿವಾರ ನಡೆಯಿತು.
ಶಾಸಕ ಯಶ್‌ಪಾಲ್ ಎ. ಸುವರ್ಣ ಉದ್ಘಾಟಿಸಿ, ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ. ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಭಾವನೆ ಗಳಿಗೆ ಧಕ್ಕೆ ಬಾರದಂತೆ ಸ್ಥಳೀಯರನ್ನು ವಿಶ್ವಾಸಕ್ಕೆ
ತೆಗೆದುಕೊಂಡು ಪ್ರವಾಸೋದ್ಯಮವನ್ನು ಬೆಳೆಸಬೇಕು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಜತೆಗೆ ಕೆಲವು ನಿಯಮಗಳನ್ನು ಸರಳಗೊಳಿಸಬೇಕು ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಪ್ರವಾಸೋದ್ಯಮ ಬೆಳೆಯಲು ಹಲವು ಯೋಜನೆಗಳನ್ನು ಜಾರಿಗೊಳಿಸಬೇಕು.ಈ ಮೂಲಕ ಸ್ಥಳೀಯ ಆಚಾರ-ವಿಚಾರಗಳನ್ನು ಹೊರಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೆ ವಿಸ್ತರಿಸುವಂತಾಗಬೇಕು ಎಂದರು.
ಮಣಿಪಾಲ ಆಸ್ಪತ್ರೆಯ ಶಲ್ಯ ವಿಭಾಗದ ಮುಖ್ಯಸ್ಥ ಡಾ| ಕಿರಣ್ ಆಚಾರ್ಯ ಮಾತನಾಡಿ, ಬೇರೆ ದೇಶದ ವರು ನಮ್ಮ ದೇಶಕ್ಕೆ ಬರಬೇಕು. ನಮ್ಮ ರಾಜ್ಯದವರು ಮತ್ತೂಂದು ರಾಜ್ಯಕ್ಕೆ ಹೋಗಬೇಕು. ಹೀಗಾದರೆ ಮಾತ್ರ ಟೂರಿಸಂನ ಅಭಿವೃದ್ಧಿ ಸಾಧ್ಯ. ಮೂಲಸೌಕರ್ಯ ಒದಗಿಸಲೂ ಗಮನ ನೀಡಬೇಕು ಎಂದರು.
ಜಿಲ್ಲಾ ಅಟೋಮೊಬೈಲ್ ಅಸೋಸಿಯೇಶನ್ ಪ್ರತಿನಿಧಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ದೇಶದ ಶೇ.40 ರಷ್ಟು ಪ್ರವಾಸೋದ್ಯಮ ಜಿಡಿಪಿ ಮೂಲಕ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಸಾಧ್ಯ. ಪ್ರಸ್ತುತ ನಮ್ಮ ದೇಶದಲ್ಲಿ ಶೇ.8ರಷ್ಟು ಪ್ರವಾಸೋದ್ಯಮ ಅಭಿವೃದ್ಧಿ ಹೊಂದಿದೆ. ಆ ಸಂಖ್ಯೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬೇಕು. ಸರಕಾರ ಇದಕ್ಕೆ ಪೂರಕವಾದ ನೀತಿಗಳನ್ನು ರೂಪಿಸಬೇಕು ಎಂದರು.
ಪ್ರತ್ಯೇಕ ಆ್ಯಪ್
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು. ಮಾತನಾಡಿ, ಜಿಲ್ಲೆಯಲ್ಲಿ 48 ಪ್ರವಾಸಿ ತಾಣಗಳಿವೆ. ಹೆಚ್ಚುವರಿಯಾಗಿ 15ರಿಂದ 20 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕಾಗಿ ಪ್ರತ್ಯೇಕ ಆ್ಯಪ್ ಮಾಡುವ ಚಿಂತನೆಯಿದೆ. ಸುಮಾರು 165 ಕೋ.ರೂ.ಅಭಿವೃದ್ಧಿ ಕಾರ್ಯ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ, ಜಿಲ್ಲಾ ಟೂರ್ ಟ್ರಾವೆಲ್ಸ್ ಸಂಘಟನೆ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಟಾರ್, ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಕೆ. ನಟರಾಜ್ ಪ್ರಭು, ಕೋಶಾಧಿಕಾರಿ ಮೊಹಮ್ಮದ್ ಮೌಲ, ಗೌರವ ಕಾರ್ಯದರ್ಶಿ ಲಕ್ಷ್ಮೀಕಾಂತ ಬೆಸೂVರ್, ಕಾರ್ಯಕ್ರಮ ಸಂಯೋಜಕ ವಾಲ್ಟರ್ ಸಲ್ಡಾನ್ಹಾ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ತಲ್ಲೂರು, ಜಿಲ್ಲಾ ಟೂರ್ ಆ್ಯಂಡ್ ಟ್ರಾವೆಲ್ಸ್ ಅಸೋಸಿಯೇಶನ್ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ್ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ| ವಿಜಯೇಂದ್ರ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.