ಪಿಂಕಿಯ ಕಥೆ: ವನ್ಯಜೀವಿ ವಿಜ್ಞಾನದ ಅಸೂಯೆ, ರಾಜಕೀಯ
Team Udayavani, May 6, 2018, 6:00 AM IST
ಚಿರತೆಗೆ ರೇಡಿಯೋ ಕಾಲರ್, ಉರುಳು ಅಥವಾ ಇನ್ಯಾವುದೇ ವಸ್ತುವಿನಿಂದ ಉಸಿರುಕಟ್ಟಿದ್ದರೆ ಅದು ಬಿಡಿಸಿಕೊಳ್ಳಲು ಪ್ರಯತ್ನಪಟ್ಟ ಗುರುತುಗಳು ಸುಲಭವಾಗಿ ಕಾಣುತ್ತಿತ್ತು. ಚರ್ಮದ ಮೇಲೆ ಗಾಯಗಳಾಗಿರುತ್ತವೆ, ತುಪ್ಪಳದ ಮೇಲೆ ಕಿತ್ತು ಹೋಗಿರುವ ಕೂದಲು ಸಹ ಚಿರತೆ ಕಷ್ಟಪಟ್ಟ ಕುರುಹುಗಳನ್ನು ತೋರುತ್ತವೆ. ಇದ್ಯಾವುದೂ ಪ್ರಾಣಿಯ ಮೇಲಿಲ್ಲ…
ಬೆಂಕಿಗೆ ರೇಡಿಯೋ ಕಾಲರ್ ಅಳವಡಿಸಿ ಎರಡು ತಿಂಗಳಲ್ಲಿ, ಅಂದರೆ, ಮಾರ್ಚ್ 2014ರ ಅಂತ್ಯದಲ್ಲಿ ಮತ್ತೂಂದು ಚಿರತೆಗೆ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆಯಿಂದ ಸೂಚನೆ ಬಂದಿತು. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅನಘಟ್ಟಿ ಎಂಬ ಗ್ರಾಮದ ಹತ್ತಿರ ಹೆಣ್ಣು ಚಿರತೆ ಯೊಂದನ್ನು ಕಬ್ಬಿನಗದ್ದೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಸೆರೆಹಿಡಿಯಲಾಗಿತ್ತು. ಅದನ್ನು ಅಲ್ಲಿಂದ ಉತ್ತರದಲ್ಲಿರುವ ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಕಾಡಿನ ಪ್ರದೇಶದಲ್ಲಿ ಬಿಡಲು ಅರಣ್ಯ ಇಲಾಖೆ ನಿರ್ಧರಿಸಿತ್ತು.
ಅದೊಂದು ಒಣ, ಎಲೆ ಉದುರುವ ಕಾಡು ಮತ್ತು ನೀಲಗಿರಿ ನೆಡುತೋಪಿದ್ದ ಪ್ರದೇಶವಾಗಿತ್ತು. ನಿರ್ಧರಿತ ಸ್ಥಳವನ್ನು ನಾವು ತಲುಪಿದಾಗ ಮಧ್ಯಾಹ್ನವಾಗಿತ್ತು. ಪ್ರಾಣಿಯನ್ನು ಒಂದು ಟ್ರಾಕ್ಟರ್‌ಹಿಂಬದಿಯಲ್ಲಿ ಇಟ್ಟುಕೊಂಡು ತರಲಾಗಿತ್ತು. ಅದನ್ನೊಮ್ಮೆ ಪರೀಕ್ಷಿಸಿ, ನಮಗೆ ಸೂಕ್ತವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವ ಹಾಗೆ ವಾಹನ ನಿಲ್ಲಿಸಲು ತಿಳಿಸಿ ಪ್ರಾಥಮಿಕ ಕಾರ್ಯ ಪ್ರಾರಂಭಿಸಿದೆವು. ತಂಡದಲ್ಲಿದ್ದ ಹರೀಶ, ಪೂರ್ಣೇಶ, ರಶ್ಮಿ, ಅಪರ್ಣ, ಅರುಣ್ ಮತ್ತಿತರರಿಗೆ ಅದಾಗಲೇ ಕೆಲ ಚಿರತೆಗಳಿಗೆ ರೇಡಿಯೋ ಕಾಲರ್ ಹಾಕುವ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಾಗಿತ್ತು. ಹಾಗಾಗಿ ಎಲ್ಲವೂ ಸರಾಗವಾಗಿ ಯೋಜಿಸಿದ ಹಾಗೆ ನಡೆಯುತ್ತಿತ್ತು.
ಅಂದು ನಾನು ಮತ್ತು ಅರಣ್ಯ ಇಲಾಖೆಯ ವತಿಯಿಂದ ಬಂದಿದ್ದ ಪಶುವೈದ್ಯಾಧಿಕಾರಿ ಸನತ್ ಚಿರತೆಯನ್ನು ಇನ್ನೊಮ್ಮೆ ನೋಡಲು ಹೋದೆವು. ಸುಮಾರು ಮೂರರಿಂದ ನಾಲ್ಕು ವರ್ಷದ ಹೆಣ್ಣು ಚಿರತೆ. ನಾವು ಬೋನಿನ ಹತ್ತಿರ ಹೋದರೂ ಅದು ಗಲಿಬಿಲಿಗೊಳ್ಳುತ್ತಿರಲಿಲ್ಲ. ಶಾಂತವಾಗಿ ಕುಳಿತಿತ್ತು. ನಮ್ಮ ದಿಕ್ಕಿನಲ್ಲಿ ನಿರಾಸಕ್ತಿಯಿಂದ ಒಮ್ಮೆ ತಿರುಗಿ ನೋಡಿ ಬಹುಶಃ “ಅಯ್ಯೋ ನಿಮ್ಮಂಥವರನ್ನು ಸಾಕಷ್ಟು ನೋಡಿದ್ದೇನೆ’ ಅಂದುಕೊಂಡು ಮತ್ತೆ ಮುಂಚೆ ನೋಡುತ್ತಿದ್ದ ದಿಕ್ಕಿಗೆ ತಲೆ ಹಾಕಿ ಕುಳಿತಿತು. ಬೋನಿನ ಮುಂದೆ ಓಡಾಡಿದರೂ ಅದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರ ಸ್ವಭಾವ ಬೆಂಕಿಗೆ ತದ್ವಿರುದ್ಧವಾಗಿತ್ತು. ಈ ಚಿರತೆ ಶಾಂತತೆಯ ಪ್ರತೀಕದಂತಿತ್ತು.
ರೇಡಿಯೋ ಕಾಲರನ್ನು ಪರೀಕ್ಷಿಸಿ, ಇತರ ಎಲ್ಲಾ ಪ್ರಾಥಮಿಕ ಪ್ರಕ್ರಿಯೆಗಳನ್ನು ಮುಗಿಸಿ ಪ್ರಾಣಿಗೆ ಅರಿವಳಿಕೆ ಮದ್ದು ಕೊಟ್ಟಾಗ ಆಗಲೇ ಸಂಜೆ ಆರೂವರೆಯಾಗಿತ್ತು. ಕೇವಲ 33 ಕಿಲೋಗ್ರಾಮ್ ಇದ್ದ ಈ ಚಿರತೆ ಬೆಂಕಿಯ ತೂಕದಲ್ಲಿ ಅರ್ಧದಷ್ಟಿತ್ತು. ಮೊದಲು ಸ್ತನ ಗ್ರಂಥಿಗಳನ್ನು ಪರೀಕ್ಷಿಸಿದೆ. ಒಣಗಿತ್ತು, ಯಾವುದೇ ಮರಿಗಳಿಲ್ಲವೆಂದು ಖಾತ್ರಿಯಾಯಿತು. ಕೆಲಸ ಮುಂದುವರಿಸ ಬಹುದಿತ್ತು. ಸ್ತನಗ್ರಂಥಿಗಳ ಒತ್ತಿದಾಗ ಹಾಲು ಬಂದರೆ ಅದಕ್ಕೆ ಮರಿಗಳಿವೆಯೆಂದು ತಿಳಿಯುತ್ತದೆ ಮತ್ತು ಅಂತಹ ಪ್ರಾಣಿಯನ್ನು ಸ್ಥಳಾಂತರಿಸಲೇಬಾರದು. ಸ್ಥಳಾಂತರಿಸಿದರೆ ಅದರ ಮರಿಗಳು ಸಾಯುವುದು ಖಚಿತ.
194 ಸೆಂಟಿಮೀಟರ್ ಉದ್ದವಿದ್ದ ಚಿರತೆಯ ಕುತ್ತಿಗೆ ಸಣ್ಣಗಿದ್ದರಿಂದ ರೇಡಿಯೋ ಕಾಲರ್‌ನ ಚರ್ಮದ ಪಟ್ಟಿಯನ್ನು ಸಾಕಷ್ಟು ಕಡಿಮೆ ಮಾಡಬೇಕಿತ್ತು. ಅದರ ಕೊರಳಿಗೆ ಕಾಲರ್ ಹೊಂದಿಸಲು ಸ್ವಲ್ಪ$ಸಮಯವೇ ಹಿಡಿಯಿತು. ಆಗಲೇ ಕತ್ತ ಲಾಗಿತ್ತು, ಹಣೆಗೆ ಟಾರ್ಚ್ ಕಟ್ಟಿಕೊಂಡು ಅದರ ಬೆಳಕಿನಲ್ಲಿ ಕೆಲಸ ಮಾಡಬೇಕಿತ್ತು. ಆನೆಗಳಿರುವ ಜಾಗ ಬೇರೆ. ಯಾವುದಾದರೂ ಆನೆ ಹಿಂಡು ಬಂದರೆ, ಊಹಿಸಲಾಗದಷ್ಟು ಅವಾಂತರವಾಗುವ ಸಾಧ್ಯತೆ. ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ ಮುಗಿಸಬೇಕಾಗಿತ್ತು. ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳನ್ನು ಸುತ್ತಮುತ್ತಲು ಕಣ್ಣಿಡಲು ನಿಯೋಜಿಸಲಾಯಿತು.
ಚಿರತೆಯ ಹಲ್ಲು ಸಹ ಸ್ವಲ್ಪ ಹಳದಿಯಾಗಲು ಪ್ರಾರಂಭವಾಗಿತ್ತು. ಅದರ ಮೇಲೆ ಉಣ್ಣೆ ಹಾಗೂ ಹೇನು ಎರಡೂ ಇದ್ದವು. ರೇಡಿಯೋ ಕಾಲರ್ ಅಳವಡಿಸುವ ಹಾಗೂ ಅರಣ್ಯ ಇಲಾಖೆಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಪ್ರಾಣಿಯನ್ನು ಬಿಡುಗಡೆ ಗೊಳಿಸಿದಾಗ ರಾತ್ರಿ ಒಂಬತ್ತು ಗಂಟೆ ಐದು ನಿಮಿಷ. ನನಗೆ ಅದನ್ನು ಬಿಟ್ಟ ಸ್ಥಳದ ಬಗ್ಗೆ ಅಷ್ಟು ಸಮಾಧಾನವಿರಲಿಲ್ಲ. ಏಕೆಂದರೆ ಆ ಸ್ಥಳ ಕಾಡಿನ ಅಂಚಿನಲ್ಲಿತ್ತು. ಆದರೆ ಆ ನಿರ್ಧಾರ ನನ್ನ ಕೈಯಲ್ಲಿರಲಿಲ್ಲ.
ಬೆಳಿಗ್ಗೆ ಬಿಟ್ಟ ಸ್ಥಳಕ್ಕೆ ಹಿಂದಿರುಗಿ ರಿಸೀವರ್ ಮತ್ತು ಆಂಟೆನಾ ಮೂಲಕ ಪರೀಕ್ಷಿಸಿದರೆ ಪ್ರಾಣಿ ಈ ಜಾಗದ ಸುತ್ತಮುತ್ತಲೇ ಇತ್ತು, ಆದರೆ ಸಕ್ರಿಯವಾಗಿತ್ತು. ಅದರ ಸುರಕ್ಷತೆಯ ಬಗ್ಗೆ ಖಚಿತ ಪಡಿಸಿಕೊಂಡು ಹಿಂದಿರುಗಿದೆವು. ಈ ಚಿರತೆಗೆ ಇತರ ಯೋಚನೆಗಳಿದ್ದವು. ಬಿಡುಗಡೆಗೊಳಿಸಿದ ಸುಮಾರು 55 ಗಂಟೆಗಳಲ್ಲಿ ಚಿರತೆಯು ಆನೆಚೌಕೂರು ಕಾಡನ್ನು ಬಿಟ್ಟು ಆಚೆ ಬಂದಿತ್ತು. ಹತ್ತಿರದ ಪುಟ್ಟ ಬೆಟ್ಟಗುಡ್ಡಗಳಲ್ಲಿ ಕಾಲ ಕಳೆಯಲು ಪ್ರಾರಂಭಿಸಿತು ಹಾಗೂ ಬಿಟ್ಟ ಸ್ಥಳದಿಂದ ಈಶಾನ್ಯ ದಿಕ್ಕಿನಲ್ಲಿ ಪಯಣಿಸಲು ಆರಂಭಿಸಿತ್ತು. ಎಂಟು ದಿನಗಳಲ್ಲಿ ಸುಮಾರು 55 ಕಿಲೋಮೀಟರು ನಡೆದು ಮೈಸೂರು ನಗರದ ಅಂಚು ಸೇರಿತ್ತು. ಸ್ಥಳದಲ್ಲಿ ಹೋಗಿ ನೋಡಿದರೆ ಮೈಸೂರು ನಗರದಿಂದ ಮಾನಂದ ವಾಡಿಗೆ ಹೋಗುವ ರಸ್ತೆಯಲ್ಲಿರುವ ಪರಸಯ್ಯನ ಹುಂಡಿಯ ಆಸುಪಾಸಿನಲ್ಲಿರುವ ಚಿಕ್ಕ ಕುರುಚುಲು ಕಾಡಿನಲ್ಲಿತ್ತು ಚಿರತೆ. ಅಲ್ಲಿದ್ದ ಒಂದು ದೊಡ್ಡ ಬಿಳಿ ಜಾಲಿ ಮರದ ಬೊಡ್ಡೆಯ ಮೇಲೆ, ಚಿರತೆಗಳು ತಮ್ಮ ಪಂಜಗಳಿಂದ ಕೆರೆದು ಮಾಡುವ ಉದ್ದದ ತಾಜಾ ಗುರುತುಗಳು ಚಿರತೆ ಅಲ್ಲಿರುವುದನ್ನು ದೃಢೀಕರಿಸಿತು. ಆದರೆ ಒಂದೂವರೆ ದಿನ ಅಲ್ಲಿದ್ದು ತನ್ನ ಪ್ರಯಾಣ ಮುಂದುವರೆಸಿತು.
ಮನೆಗೆ ಹಿಂದುರಿಗಿದ ನಾನು, ಮತ್ತೆ ನನ್ನ ಮಗ ನಿನಾದನಿಗೆ ನಮ್ಮ ರೇಡಿಯೋ ಕಾಲರಿಂಗ್ ಕಥೆ ಹೇಳಬೇಕಾಗಿತ್ತು, ಎಲ್ಲಾ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ತೋರಿಸಬೇಕಾಗಿತ್ತು. ಅವನಿಂದ ಆ ಚಿರತೆಗೆ ತಕ್ಷಣ ನಾಮಕರಣವಾಗುತಿತ್ತು. ಇದಕ್ಕೆ ವಿಚಿತ್ರವಾಗಿ “ಪಿಂಕಿ’ ಎಂಬ ಆಂಗ್ಲ ಹೆಸರಿಟ್ಟುಬಿಟ್ಟಿದ್ದ. ಬಹುಶಃ ತಿಂಗಳ ಹಿಂದೆ ನಾನು ರೇಡಿಯೋ ಕಾಲರ್ ಮಾಡಿದ ಇನ್ನೊಂದು ಚಿರತೆಗೆ ಅವನಿಟ್ಟಿದ್ದ “ವೆಂಕಿ’ ಎಂಬ ಹೆಸರಿಗೆ ಪ್ರಾಸಬದ್ಧವಾಗಿ ಇದಕ್ಕೆ “ಪಿಂಕಿ’ ಎಂಬ ಹೆಸರಿಟ್ಟಿದ್ದ ಅಂತ ಕಾಣುತ್ತದೆ.
ಈ ಬಾರಿ ನಿನಾದ ಸ್ವಲ್ಪ ಮುನ್ನಡೆದಿದ್ದ. ಒಮ್ಮೆ ನನ್ನ ಓದುವ ಕೋಣೆಗೆ ಹೋದರೆ ನಿನಾದ ಬಹು ಮಗ್ನನಾಗಿ ಯಾವುದೋ ಕಾರ್ಯದಲ್ಲಿ ತೊಡಗಿದ್ದ. ಯಾರೋ ಕೊಡಿಸಿದ್ದ ಚಿರತೆಯಾಕಾರದ ದೊಡ್ಡ ಬಲೂನನ್ನು ನೆಲದ ಮೇಲೆ ಇಟ್ಟು, ಅದರ ಮೇಲೆ ಚಿಕ್ಕ ಬಟ್ಟೆಯೊಂದನ್ನು ಹೊದಿಸಿದ್ದ. ಪಕ್ಕದಲ್ಲಿ ಪುಟ್ಟ ಬಟ್ಟಲಿನಲ್ಲಿ ನೀರಿತ್ತು, ಅಳತೆ ಮಾಡುವ ಟೇಪು, ಸೂð ಡ್ರೈವರ್ ಇನ್ನಿತರ ಸಾಮಗ್ರಿಗಳು ಬಲೂನು ಚಿರತೆಯ ಸುತ್ತಮುತ್ತಲಿದ್ದವು. ಒಂದು ಬಿಳಿ ಹಾಳೆಯ ಮೇಲೆ ಏನೋ ಬರೆದುಕೊಳ್ಳುತ್ತಿದ್ದ. ನಾವು ಚಿರತೆಗೆ ರೇಡಿಯೋ ಕಾಲರ್ ಹಾಕುವ ಚಿತ್ರಗಳು, ವಿಡಿಯೋಗಳು ಅವನ ಮೇಲೆ ಪರಿಣಾಮ ಬೀರಿದ ಹಾಗಿತ್ತು.
ಮೈಸೂರು ನಗರದ ಅಂಚು ಬಿಟ್ಟ ಚಿರತೆ, ದಕ್ಷಿಣಪೂರ್ವ ದಿಕ್ಕಿನತ್ತ ಪಯಣಿಸಿ ಅಲ್ಲಿಂದ ಸುಮಾರು ಹನ್ನೊಂದು ಕಿಲೋ ಮೀಟರು ದೂರದಲ್ಲಿದ್ದ ಚಿಕ್ಕನಳ್ಳಿ ಎಂಬ ಕಾಡು ಪ್ರದೇಶವನ್ನು ಹದಿನಾಲ್ಕು ದಿನಗಳಲ್ಲಿ ಸೇರಿತು. ಸುಮಾರು 4,500 ಎಕರೆ ಪ್ರದೇಶದ ಚಿಕ್ಕನಹಳ್ಳಿ ಪ್ರದೇಶ ಕುರುಚುಲು ಕಾಡಾಗಿತ್ತು ಮತ್ತು ಚಿರತೆಗಳಿಗೆ ಹೇಳಿ ಮಾಡಿಸಿದಂತಹ ಪ್ರಶಸ್ತ ಸ್ಥಳವಾಗಿತ್ತು. ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಚಿಕ್ಕನಳ್ಳಿ ಕಾಡು ಸೇರಿದ ಚಿರತೆ ಜೂನ್ ಮಧ್ಯಭಾಗದವರೆಗೆ ಪ್ರತಿದಿನವೂ ನಮಗೆ ತನ್ನ ಮಾಹಿತಿ ಕೊಡುತಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಕಾಲರ್‌ನ ಜಿಪಿಎಸ್ ಕೆಲಸ ಮಾಡುವುದು ನಿಲ್ಲಿಸಿ ನಮಗೆ ಅದಿರುವ ಜಾಗದ ಬಗ್ಗೆ ಎರಡು ಗಂಟೆಗೊಮ್ಮೆ ಸಿಗುತ್ತಿದ್ದ ಮಾಹಿತಿ ನಿಂತುಹೋಯಿತು. ಈ ಬಗ್ಗೆ ತಕ್ಷಣವೇ ಅರಣ್ಯ ಇಲಾಖೆಗೆ ತಿಳಿಸಿದೆವು.
ಕಾಲರ್‌ನಲ್ಲಿರುವ ಜಿಪಿಎಸ್ ಮೂಲಕ ನಿಗದಿತ ಸಮಯಕ್ಕೆ ಪ್ರಾಣಿಯ ಸ್ಥಳದ ಬಗ್ಗೆ ಮಾಹಿತಿ ಕಂಡುಕೊಳ್ಳಬಹುದು (ಗಂಟೆಗೊಮ್ಮೆ, ಆರು ಗಂಟೆಗೊಮ್ಮೆ ಅಥವಾ ದಿನಕ್ಕೆ ಒಂದು ಬಾರಿ ಹೀಗೆ). ಆದರೆ ಗಳಿಗೆ ಗಳಿಗೆಗೂ ಪ್ರಾಣಿಯ ಸ್ಥಳದ ಮಾಹಿತಿ ಸಿಗುವುದಿಲ್ಲ. ಕಾಲರ್‌ನ ಜಿಪಿಎಸ್ ಕೆಲಸ ಮಾಡುವುದು ನಿಲ್ಲಿಸಿದ ಕಾರಣ ಇಂತಹ ಸನ್ನಿವೇಶಗಳಿಗಾಗಿಯೇ ಕಾಲರ್‌ನಲ್ಲಿ ಪರ್ಯಾಯವಾಗಿ ಇದ್ದ “ವಿಹೆಚ್‌ಎಫ್’ ತರಂಗಗಳ ಮೂಲಕ ಅಂಟೆನಾ ಹಿಡಿದು ಪ್ರಾಣಿಯ ಪತ್ತೆ ಹಚ್ಚುವ ತಂತ್ರಜ್ಞಾನ ಉಪಯೋಗಿಸಿಕೊಂಡು ಹಿಂಬಾಲಿಸಿಲು ಪ್ರಾರಂಭಿಸಿದೆವು. ಚಿರತೆಯು ಚಿಕ್ಕನಹಳ್ಳಿ ಕಾಡಿನ ಮಧ್ಯದಲ್ಲಿದ್ದ ಮಲ್ಲೇಶ್ವರ ಬೆಟ್ಟದಲ್ಲಿ ಠಿಕಾಣಿ ಹೂಡಿತ್ತು. ವಿಹೆಚ್‌ಎಫ್ ಆಂಟೆನಾ ಮೂಲಕ ಪ್ರಾಣಿಗಳ ಮಾಹಿತಿ ಸಿಗುವುದು ಕಡಿಮೆ. ಪ್ರಾಣಿ ತಾನು ಸಾಮಾನ್ಯವಾಗಿ ಇರುವ ಪ್ರದೇಶದಿಂದ ದೂರ ಹೋದರೆ ಅದರ ಸ್ಥಳದ ಬಗ್ಗೆ ಸಂಕೇತ ಸಿಗುವುದಕ್ಕೆ ಬಹು ದಿನಗಳೇ ಹಿಡಿಯಬಹುದು ಅಥವಾ ಆ ಭಾಗದಿಂದ ಬಹು ದೂರ ಹೋದರೆ ಸಂಕೇತ ಸಿಗುವುದು ನಿಂತೇ ಹೋಗಬಹುದು. ವಿಹೆಚ್‌ಎಫ್ ಆಂಟೆನಾ ಉಪಯೋಗಿಸಿ ವನ್ಯಜೀವಿಗಳನ್ನು ಅಧ್ಯಯನಿಸುವಾಗ ಹಲವಾರು ಬಾರಿ ವಿಜ್ಞಾನಿಗಳಿಗೆ ಪ್ರಾಣಿಗಳು ಎಲ್ಲಿ ಹೋದವೆಂದು ಗೊತ್ತೇ ಆಗದೆ ಅಧ್ಯಯನ ಅರ್ಧಕ್ಕೇ ನಿಂತಿರುವ ಹಲವಾರು ಉದಾಹರಣೆ ಗಳಿವೆ.
ಸೆಪ್ಟೆಂಬರ್ 12, 2014ರಲ್ಲಿ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ದೂರವಾಣಿಯ ಮೂಲಕ “ಎಚ್.ಡಿ.ಕೋಟೆ ರಸ್ತೆಯಲ್ಲಿನ ಎಸ್. ಕಲ್ಲಹಳ್ಳಿಯ ಹತ್ತಿರ ಒಂದು ಸತ್ತಿರುವ ಚಿರತೆ ಸಿಕ್ಕಿದೆ, ಅದಕ್ಕೆ ರೇಡಿಯೋ ಕಾಲರ್ ಇದೆ, ಬರುತ್ತೀರಾ?’ ಎಂದರು. ಒಡನೆ ಎಲ್ಲಾ ಕೆಲಸಗಳನ್ನು ಬಿಟ್ಟು ಮೈಸೂರು ಕಡೆಗೆ ಹೊರಟೆ. ದಾರಿಯಲ್ಲಿ ಚಿರತೆ ಮೃತಪಟ್ಟಿರುವುದಕ್ಕೆ ಕಾರಣಗಳ ಬಗ್ಗೆ, ಹಲವಾರು ಸನ್ನಿವೇಶಗಳ ಬಗ್ಗೆ ಯೋಚಿಸಿದೆ. ಒಂದೆಡೆ ಚಿರತೆ ಮೃತಪಟ್ಟಿರುವ ಬಗ್ಗೆ ಬೇಜಾರು, ಇನ್ನೊಂದೆಡೆ ಕಾರಣಗಳ ಬಗ್ಗೆ ತಲೆಯಲ್ಲಿ ಹಲವಾರು ಯೋಚನೆ.
ಮೈಸೂರು ತಲುಪುವ ಹೊತ್ತಿಗೆ ಪ್ರಾಣಿಯ ಕಳೇಬರವನ್ನು ಅರಣ್ಯ ಭವನಕ್ಕೆ ತಂದಿದ್ದರು. ಅರಣ್ಯ ಭವನದ ಹಿಂದೆ ಚಪ್ಪಡಿಯೊಂದರ ಮೇಲೆ ಮಲಗಿಸಿದ್ದ ಚಿರತೆಯ ಕಳೇಬರವನ್ನು ನೋಡಿ ನೆಲವೇ ಕುಸಿದ ಹಾಗಾಯಿತು. ಅದು ನಾವು ರೇಡಿಯೋ ಕಾಲರ್ ಹಾಕಿ ಆನೆಚೌಕೂರಿನಲ್ಲಿ ಬಿಟ್ಟಿದ್ದ ಚಿರತೆಯಾಗಿತ್ತು. ಮೊದಲು ಚಿರತೆಯ ಮೇಲಿದ್ದ ರೇಡಿಯೋ ಕಾಲರನ್ನು ಪರೀಕ್ಷಿಸಿದೆ. ಕಾಲರ್ ಹೆಚ್ಚು ಸಡಿಲವಾಗಲಿ ಅಥವಾ ಬಿಗಿಯಾಗಿ ಇರಲಿಲ್ಲ, ಎಷ್ಟು ಬೇಕೋ ಅಷ್ಟಿತ್ತು. ರೇಡಿಯೋ ಕಾಲರ್ ಮತ್ತು ಪ್ರಾಣಿಯ ಕುತ್ತಿಗೆಯ ಮಧ್ಯೆ ಸುಮಾರು ಎರಡು ಬೆರಳುಗಳನ್ನು ಸರಾಗವಾಗಿ ಹಾಕುವಷ್ಟು ಅಂತರವಿರಬೇಕು. ಅಂತರ್ ರಾಷ್ಟ್ರೀಯ ವಾಗಿ ಎಲ್ಲಾ ತಜ್ಞರು ಇದೇ ಮಾಪನವನ್ನು ಪಾಲಿಸುತ್ತಾರೆ. ರೇಡಿಯೋ ಕಾಲರ್‌ನಿಂದ ಯಾವುದೇ ತೊಂದರೆ ಕಂಡುಬರಲಿಲ್ಲ. ಚಿರತೆ ಒದ್ದಾಡಿದ ಯಾವುದೇ ಕುರುಹುಗಳಿಲ್ಲ. ಚಿರತೆಗೆ ರೇಡಿಯೋ ಕಾಲರ್, ಉರುಳು ಅಥವಾ ಇನ್ಯಾವುದೇ ವಸ್ತುವಿನಿಂದ ಉಸಿರುಕಟ್ಟಿದ್ದರೆ ಅದು ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟ ಗುರುತುಗಳು ಸುಲಭವಾಗಿ ಕಾಣುತ್ತಿತ್ತು. ಚರ್ಮದ ಮೇಲೆ ಗಾಯಗಳಾಗಿರುತ್ತವೆ, ತುಪ್ಪಳದ ಮೇಲೆ ಕಿತ್ತು ಹೋಗಿರುವ ಕೂದಲು ಸಹ ಚಿರತೆ ಕಷ್ಟಪಟ್ಟ ಕುರುಹುಗಳನ್ನು ತೋರುತ್ತವೆ. ಇದ್ಯಾವುದೂ ಪ್ರಾಣಿಯ ಮೇಲಿಲ್ಲ. ಮೈ ಮೇಲೆ ಯಾವುದೇ ತರಹದ ಗಾಯದ ಗುರುತುಗಳಿಲ್ಲ, ಚರ್ಮವೂ ಸಹಜ ಸ್ಥಿತಿಯಲ್ಲಿತ್ತು. ನನಗೆ ವಿಚಿತ್ರವೆನಿಸಿತು…
(ಮುಂದುವರಿಯುವುದು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.