ಕುಸಿದ ರಸ್ತೆಯಲ್ಲಿಯೇ ವಾಹನಗಳ ಸಂಚಾರ
Team Udayavani, Aug 8, 2021, 3:40 AM IST
ಗ್ರಾಮಗಳ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗ, ಜನಪ್ರತಿನಿಧಿಗಳ ಗಮನ ಸೆಳೆಯಲು “ಉದಯವಾಣಿ ಸುದಿನ’ವು “ಒಂದು ಊರು- ಹಲವು ದೂರು’ ಎಂಬ ಹೊಸ ಸರಣಿಯನ್ನು ಆರಂಭಿಸಿದೆ. ರಸ್ತೆ ಸಮಸ್ಯೆ ಪಡುಕುದ್ರು ಗ್ರಾಮವನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ ಈ ಸರಣಿಯಲ್ಲಿದೆ.
ಮಲ್ಪೆ: ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕುದ್ರುವಿಗೆ ಸಂಪರ್ಕ ಕಲ್ಪಿಸುವ ನದಿತೀರದ ಏಕೈಕ ಮುಖ್ಯ ರಸ್ತೆ ಕುಸಿಯುತ್ತಿರುವ ಪರಿಣಾಮ ಸಂಚಾರ ಸುರಕ್ಷತೆಯ ಆತಂಕದ ಜತೆಗೆ ಪಡುಕುದ್ರು ಪ್ರದೇಶ ಕೆಮ್ಮಣ್ಣುವಿನಿಂದ ಸಂಪರ್ಕ ಕಳೆದುಕೊಳ್ಳಲಿದೆ ಎಂಬ ಭೀತಿ ಈ ಭಾಗದ ನಾಗರಿಕರಲ್ಲಿದೆ.
ನದಿ ಕೊರೆತ: ರಸ್ತೆ ಹೊಳೆ ಪಾಲು:
ಕೆಮ್ಮಣ್ಣು ಮುಖ್ಯರಸ್ತೆಯಿಂದ ಸೇತುವೆ ದಾಟಿ ಮುಂದಕ್ಕೆ ಸುಮಾರು 200 ಮೀಟರ್ ದೂರ ಸಾಗಿದಾಗ ಸಿಗುವ ಸುವರ್ಣ ನದಿಗೆ ತಾಗಿಕೊಂಡಿರುವ ರಸ್ತೆಯ ಒಂದು ಬದಿ ಸುಮಾರು 50 ಮೀಟರ್ ಉದ್ದಕ್ಕೆ ಕುಸಿದು ಹೋಗಿದ್ದು ರಸ್ತೆಯ ಅಡಿ ಭಾಗದ ಮಣ್ಣು ನೀರಿನ ಸೆಳೆತಕ್ಕೆ ಕೊರೆಯಲಾರಂಭಿಸುತ್ತಿದೆ. ರಸ್ತೆ ಬದಿಗೆ ಹಾಕಲಾದ ಕಬ್ಬಿಣದ ಪಟ್ಟಿಯ ತಡೆಗೋಡೆಯೂ ರಸ್ತೆ ಕುಸಿದ ಕಾರಣ ರಸ್ತೆ ಬದಿಯಿಂದ ಒಂದೂವರೆ ಅಡಿ ದೂರ ಸರಿದು ಹೊಳೆಗೆ ವಾಲಿಕೊಂಡು ನಿಂತಿದೆ. ರಾತ್ರಿ ವೇಳೆ ವಾಹನಗಳು ರಸ್ತೆ ಬದಿಗೆ ಸರಿದರೆ ತಡೆಗೋಡೆ ಇಲ್ಲದ ಕಾರಣ ಹೊಳೆಗೆ ಬೀಳುವ ಸಾಧ್ಯತೆಯೇ ಹೆಚ್ಚು.
ಒಂದು ಭಾಗದಲ್ಲಿ ಅರ್ಧ ರಸ್ತೆ ವೃತ್ತಾಕಾರದಲ್ಲಿ ಕುಸಿದ ಕಾರಣ ವಾಹನಗಳು ನಿಯಂತ್ರಣ ಕಳೆದುಕೊಳ್ಳುವುದು ಸಾಮಾನ್ಯ. ಶಾಲೆಗೆ ಹೋಗುವ ಮಕ್ಕಳಿಗೂ ಈ ಪ್ರದೇಶ ಅಪಾಯಕಾರಿ. ಆರೇಳು ತಿಂಗಳ ಹಿಂದೆ ಸುಮಾರು 20ಅಡಿಗಳಷ್ಟು ಉದ್ದಕ್ಕೆ ಮಾತ್ರ ನದಿ ದಂಡೆ ಕಟ್ಟಲಾಗಿದೆ.
ಪಡುಕುದ್ರು ಪ್ರವಾಸಿಗರಿಗೆ ಮತ್ತಷ್ಟು ಅಪಾಯ :
ಈ ರಸ್ತೆಯಿಂದ ಮುಂದಕ್ಕೆ ಸಾಗಿದಾಗ ತಿಮ್ಮಣ್ಣಕುದ್ರು ತೂಗು ಸೇತುವೆ ಸಿಗುತ್ತದೆ. ಇಲ್ಲಿನ ವಾಟರ್ ನ್ಪೋರ್ಟ್ಸ್, ವಿಹಾರ ತಾಣಗಳು ಆರಂಭಗೊಂಡಿದ್ದು, ಪ್ರವಾಸಿಗರು ಸೇರಿದಂತೆ ಹೊರ ಪ್ರದೇಶದ ಮಂದಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವೀಕೆಂಡ್‌ನಲ್ಲಂತೂ ಜನ ನಿಭಿಡತೆ ಮತ್ತಷ್ಟು ಹೆಚ್ಚು. ಇಲ್ಲಿಗೆ ಬರುವವರಿಗೆ ಪಕ್ಕನೆ ರಸ್ತೆ ಕುಸಿದಿರುವುದು ಅರಿವಿಗೆ ಬಾರದೆ ಈ ಭಾಗದಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ.
ಇತರ ಸಮಸ್ಯೆಗಳೇನು? :
- ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸಿಗೂ ಸಮಸ್ಯೆ
- ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಕೆಲವೆಡೆ ವ್ಯವಸ್ಥಿತ ನಾಲೆಗಳು ಇಲ್ಲದೆ ಕೃತಕ ನೆರೆ
- ಪಡುಕುದ್ರು ಮುಖ್ಯ ರಸ್ತೆಯಿಂದ ಮುಂದೆ ಸಾಗಿದಾಗ ಗಣಪತಿ ದೇವಸ್ಥಾನದ ಸಮೀಪ ಎರಡು ಕಡೆ ರಸ್ತೆ ತಿರುವಿನಲ್ಲಿ ನೀರಿನ ಹೊಂಡಗಳಿದ್ದು ನಿಯಂತ್ರಣ ತಪ್ಪಿ ಬೈಕ್‌ಗಳು ಈ ಹೊಂಡಕ್ಕೆ ಬೀಳುವ ಸಾಧ್ಯತೆಗಳಿವೆ.
- ಬೇಸಗೆಯಲ್ಲಿ ಸಮುದ್ರದ ಉಪ್ಪು ನೀರು ಮೇಲೆ ಬರುವುದರಿಂದ ಬಹಳಷ್ಟು ಸಮಸ್ಯೆ
- ಈ ಭಾಗದಲ್ಲಿ ಒಂದೇ ಊರು ಆಗಿರುವುದರಿಂದ ಬಸ್ ಸೌಕರ್ಯವಿಲ್ಲ. ವಾಹನಗಳನ್ನು ಬಾಡಿಗೆ ಮಾಡಿಕೊಂಡು ಹೋಗಬೇಕು.
- ಇಲ್ಲಿನ ಮುಖ್ಯರಸ್ತೆಯ ಎರಡು ಬದಿಯಲ್ಲಿ ಪೊದೆಗಳು ಬೆಳೆದಿದ್ದರಿಂದ ರಾತ್ರಿ ಹಗಲು ವಿಷಪೂರಿತ ಹಾವುಗಳ ಕಾಟವೂ ಇದೆ.
ರಸ್ತೆ ಕುಸಿಯುವ ಸಾಧ್ಯತೆ :
ಹೊರಗಿನಿಂದ ಬರುವ ದ್ವಿಚಕ್ರ ಸವಾರರು ರಸ್ತೆಯಲ್ಲಿ ಸಂಚರಿಸು ವಾಗ ನಿಯಂತ್ರಣ ತಪ್ಪಿ ಹೊಳೆಗೆ, ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಗಾಯಗೊಂಡಿರುವ ಹಲ ವಾರು ನಿದರ್ಶನಗಳಿವೆ. ರಸ್ತೆಯಲ್ಲಿ ಈಗಾ ಗಲೇ ಅಲ್ಲಲ್ಲಿ ದೊಡ್ಡ ಬಿರುಕುಗಳು ಕಾಣಿಸಿ ಕೊಂಡಿವೆ. ಘನ ವಾಹನಗಳು ಈ ರಸ್ತೆಯಲ್ಲಿ ನಿತ್ಯ ಚಲಿಸುವುದರಿಂದ ರಸ್ತೆ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ನದಿದಂಡೆ ಕಟ್ಟುವ ಮತ್ತು ರಸ್ತೆ ವಿಸ್ತರಣೆಗೆ ಮುಂದಾದರೆ ಉತ್ತಮ.– ಸಾಧು ಪಡುಕುದ್ರು, ಸ್ಥಳೀಯ ನಿವಾಸಿ
ಅನುದಾನ ಇಲ್ಲ :
ಇಲ್ಲಿನ ಕಾಮಗಾರಿಗೆ ಬೇಕಾಗುವಷ್ಟು ಅನುದಾನ ಗ್ರಾ.ಪಂ.ನಿಂದ ಇರು ವು ದಿಲ್ಲ. ತಾ.ಪಂ. ಅನುದಾನದಲ್ಲಿ ಈಗಾಗಲೇ ಅರ್ಧ ಕಾಮಗಾರಿ ನಡೆಸಲಾಗಿದೆ. ಜಿ.ಪಂ. ನಿಂದಲೂ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.– ದಿನಕರ್, ಕಾರ್ಯದರ್ಶಿ, ತೋನ್ಸೆ ಗ್ರಾ. ಪಂ.
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.