![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 6, 2020, 6:30 AM IST
ಸಾಸ್ತಾನ ಟೋಲ್‌ಪ್ಲಾಜಾದಲ್ಲಿ ಕ್ಯಾಶ್‌ಲೈನ್‌ನಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು.
ಫಾಸ್ಟ್ಯಾಗ್ ಅಳವಡಿಕೆಗೆ ಸ್ಥಳೀಯರ ಹಿಂದೇಟು
ನಕಲಿ ದಾಖಲೆ ಸೃಷ್ಟಿಸಿ ಶುಲ್ಕ ಉಳಿಸುವ ತಂತ್ರ ನಿಯಮ ಸಡಿಲಿಕೆ ನಿರೀಕ್ಷೆಯಲ್ಲಿ ಸ್ಥಳೀಯರು
ಕೋಟ: ಪ್ರಸ್ತುತ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 5 ಟೋಲ್‌ಗಳಲ್ಲಿ ಶೇ. 50ಕ್ಕಿಂತ ಹೆಚ್ಚು ವಾಹನಗಳು ಫಾಸ್ಟ್ಯಾಗ್‌ನಲ್ಲಿ ಸಂಚರಿಸುತ್ತಿವೆ. ಆದರೂ ಸ್ಥಳೀಯ ವಾಹನಗಳು ಟ್ಯಾಗ್ ಅಳವಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದರಿಂದ ಕ್ಯಾಶ್‌ಲೈನ್‌ನಲ್ಲಿ ಪ್ರತಿದಿನ ಸರತಿ ಸಾಲು ಕಂಡುಬರುತ್ತಿದೆ. ಇದು ಹಲವು ಸಮಸ್ಯೆಗಳಿಗೂ ಕಾರಣವಾಗಿದೆ.
ಪ್ರಸ್ತುತ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಶೇ. 67, ಸುರತ್ಕಲ್ ಶೇ. 55, ಹೆಜಮಾಡಿ ಶೇ. 50, ಸಾಸ್ತಾನ
ಶೇ. 50, ತಲಪಾಡಿಯಲ್ಲಿ ಶೇ.50ರಷ್ಟು ವಾಹನಗಳು ಫಾಸ್ಟ್ಯಾಗ್‌ನಲ್ಲಿ ಸಂಚರಿ ಸುತ್ತಿವೆ. ಫಾಸ್ಟ್ಯಾಗ್ ಇಲ್ಲದ ಸ್ಥಳೀಯ ವಾಹನಗಳ ಸಂಖ್ಯೆಯೇ ದೊಡ್ಡದು. ಫಾಸ್ಟ್ಯಾಗ್ ಇನ್ನೂ ಸಂಪೂರ್ಣ ಕಡ್ಡಾಯವಾಗಿಲ್ಲ ಹಾಗೂ ಮುಂದೆ ಏನಾದರು ಬದಲಾವಣೆ ಆಗಬಹುದು ಎನ್ನುವ ನಿರೀಕ್ಷೆ ಸ್ಥಳೀಯರು ಟ್ಯಾಗ್ ಅಳವಡಿಸಿಕೊಳ್ಳದಿರಲು ಕಾರಣ ಎನ್ನಲಾಗಿದೆ.
ಶುಲ್ಕ ರಿಯಾಯಿತಿ ವಾಹನಗಳ ಹೊರತು ಫಾಸ್ಟ್ಯಾಗ್ ರಹಿತ ವಾಹನಗಳು ಕ್ಯಾಶ್‌ಲೈನ್‌ನಲ್ಲೇ ಸಂಚರಿಸಬೇಕಾಗಿರುವುದುದರಿಂದ ಹಾಗೂ ನಗದು ಸ್ವೀಕಾರಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುವು ದರಿಂದ ಪ್ರತಿದಿನ ಕ್ಯಾಶ್‌ಲೈನ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ರವಿವಾರ, ಶುಭ ಸಮಾರಂಭ
ಗಳು ಹೆಚ್ಚು ಇರುವಾಗ, ಹಬ್ಬಹರಿದಿನದಂದು ವಾಹನಗಳ ಸಾಲು ಇನ್ನಷ್ಟು ಬೆಳೆಯುತ್ತದೆ.
ನಕಲಿ ದಾಖಲೆ ಹಾವಳಿ
ಘನ ವಾಹನಗಳಿಗೆ ಲಘು ವಾಹನದ ಫಾಸ್ಟ್ಯಾಗ್ ಅಳವಡಿಸಿಕೊಂಡ ಕಡಿಮೆ ಟೋಲ್ ಪಾವತಿಸುವುದು, ಸ್ಥಳೀಯ ಹೆಸರುಗಳಲ್ಲಿ ನಕಲಿ ಆಧಾರ್ ಕಾರ್ಡ್, ಚಾಲನೆ ಪರವಾನಿಗೆ ಸೃಷ್ಟಿಸಿಕೊಂಡು ಉಚಿತವಾಗಿ ಸಂಚರಿಸುವವರ ಸಂಖ್ಯೆ ಕೂಡ ದೊಡ್ಡದಿದೆ. ಆದರೆ ಇವುಗಳನ್ನು ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಸಾಕಷ್ಟು ಸಮಯ ಬೇಕಾಗುವುದರಿಂದ ಹಾಗೂ ಎನ್‌ಎಚ್‌ಎಐ ಮೂಲಕ ಕಟ್ಟುನಿಟ್ಟಿನ ಆದೇಶ
ವಿಲ್ಲದಿರುವುದರಿಂದ ಸಿಬಂದಿ ಕೈಕಟ್ಟಿ ಕುಳಿತಿದ್ದಾರೆ.
ಕಡ್ಡಾಯ ಯಾವುದು?
ಫಾಸ್ಟ್ಯಾಗ್ ಪ್ರಾಯೋಗಿಕ ಹಂತದಲ್ಲಿದ್ದರೂ ಟ್ಯಾಗ್ ಇಲ್ಲದ ವಾಹನಗಳಿಂದ ಕೇವಲ ಏಕಮುಖ ಸಂಚಾರದ ಶುಲ್ಕ ಪಡೆಯಲಾಗುತ್ತಿದೆ ಹಾಗೂ ಈ ಮೊದಲು ದ್ವಿಮುಖ ಸಂಚಾರಕ್ಕೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಲಾಗಿದೆ. ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಲೈನ್ ಪ್ರವೇಶಿಸಿದಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಸ್ಥಳೀಯ ವಾಹನಗಳಿಗೆ ಮೀಸಲಿರುವ ಗೇಟ್‌ಗಳಲ್ಲಿ ಹೊರಗಿನ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ದೂರು ದಾಖಲಿಸಲು ಅವಕಾಶ
ಬೇರೆ ಬೇರೆ ಉಪಾಯ ಹೂಡಿ ಉಚಿತವಾಗಿ ಸಂಚರಿಸುವ ಅಕ್ರಮ ವ್ಯವಹಾರಗಳು ತಲಪಾಡಿ, ಸಾಸ್ತಾನ, ಹೆಜಮಾಡಿ ಗೇಟುಗಳಲ್ಲಿ ಕಂಡು ಬಂದಿವೆ. ಕೆಲವು ವಾಹನಗಳನ್ನು ತಡೆದು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದೇವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎನ್‌ಎಚ್‌ಎಐಗೆ ಮನವಿ ಮಾಡಿದ್ದೇವೆ. ಸ್ಥಳೀಯರು ಟ್ಯಾಗ್ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಕ್ಯಾಶ್‌ಲೈನ್‌ನಲ್ಲಿ ವಾಹನದ ಸಾಲು ಬೆಳೆಯುತ್ತಿದೆ. ಟ್ಯಾಗ್ ಅಳವಡಿಸಿಕೊಂಡರೆ ಅರಾಮವಾಗಿ ಸಂಚರಿಸಬಹುದು.
– ಶಿವಪ್ರಸಾದ್‌ರೈ, ನವಯುಗ ಟೋಲ್‌ಗಳ ಮುಖ್ಯಸ್ಥ
– ರಾಜೇಶ್ ಗಾಣಿಗ ಅಚ್ಲಾಡಿ
You seem to have an Ad Blocker on.
To continue reading, please turn it off or whitelist Udayavani.