ತ್ಯಾಜ್ಯನೀರು ನೇರ ಪಂಚಗಂಗಾವಳಿಗೆ! ಚರಂಡಿ,ತೋಡಿಗೆ ಮುಚ್ಚಿಗೆ ಬೇಡಿಕೆ
Team Udayavani, Feb 17, 2020, 5:14 AM IST
ಕುಂದಾಪುರ: ಬಸ್‌ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತದೆ ಎಂದು 10 ನಿಮಿಷಕ್ಕಿಂತ ಹೆಚ್ಚು ಸಮಯಾವಕಾಶ ಇರುವ ಖಾಸಗಿ, ಸರಕಾರಿ ಬಸ್ಸುಗಳನ್ನು ಫೆರ್ರಿಪಾರ್ಕ್ ಬಳಿ ನಿಲ್ಲಿಸಲಾಗುತ್ತಿದೆ. ಹಂಚಿನ ಕಾರ್ಖಾನೆ, ಮರದ ಕಾರ್ಖಾನೆ ಎಂದು ಲಾರಿಗಳು ಓಡಾಡುತ್ತವೆ. ಹೀಗೆ ಘನ ವಾಹನಗಳು ಬಂದೂ ಬಂದೂ ಈ ಪ್ರದೇಶದ ಮನೆಗಳೆಲ್ಲ ಕೆಂಧೂಳಿನಿಂದ ಆವೃತವಾಗುತ್ತವೆ. ಒಣಗಲು ಹಾಕಿದ ಬಟ್ಟೆಗಳು ಕೆಂಬಣ್ಣಕ್ಕೆ ತಿರುಗುತ್ತವೆ. ಆಗಾಗ ಜನರಿಗೆ ಕೆಮ್ಮು ಕಾಡುತ್ತಿರುತ್ತದೆ. ಹಾಗಾಗಿ ಫೆರ್ರಿರಸ್ತೆಯ ನಂತರ ರಿಂಗ್‌ರೋಡ್‌ಗೆ ಡಾಮರು ಹಾಕಿ, ರಿಂಗ್‌ರೋಡ್ ಅಭಿವೃದ್ಧಿ ಮಾಡಿ ಎನ್ನುವುದು ಇಲ್ಲಿನ ಜನರ ಪ್ರಮುಖ ಬೇಡಿಕೆ.
“ಸುದಿನ ವಾರ್ಡ್ ಸುತ್ತಾಟ’ದಲ್ಲಿ ಫೆರ್ರಿ ವಾರ್ಡ್‌ನಲ್ಲಿ ಸಂಚರಿಸಿದಾಗ, ಜನರನ್ನು ಮಾತನಾಡಿಸಿದಾಗ ಹೆಚ್ಚಿನ ಜನರ ಬೇಡಿಕೆ ಇದ್ದುದು ರಿಂಗ್ ರೋಡ್ ಹಾಗೂ ಚರಂಡಿ ಕುರಿತು.
ಇಂಟರ್‌ಲಾಕ್ ಹಾಕಲಿ
ಬಸ್ ಪಾರ್ಕಿಂಗ್ ಇಲ್ಲಿ ಮಾಡಿದ ಕುರಿತು ಸಮಸ್ಯೆಯಿಲ್ಲ. ಪಾರ್ಕಿಂಗ್ ಜಾಗಕ್ಕೆ ಇಂಟರ್‌ಲಾಕ್ ಹಾಕಿಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು, ಇನ್ನೂ ಏನೂ ಸುದ್ದಿಯಿಲ್ಲ. ಮೂಲಸೌಕರ್ಯ ಒದಗಿಸಿದರೆ ಚಾಲಕ, ನಿರ್ವಾಹಕರಿಗೆ ಅನುಕೂಲವಾಗುತ್ತದೆ. ಎಲ್ಲೆಲ್ಲಿಂದಲೋ ತಂದು ಇಲ್ಲಿ ತ್ಯಾಜ್ಯ ಸುರಿವ ಮಂದಿಯನ್ನು ಹಿಡಿದು ಶಿಕ್ಷೆ ನೀಡಬೇಕಿದೆ. ಇಲ್ಲದಿದ್ದರೆ ಇಲ್ಲಿರುವ ನಮಗೆ ಏನಾದರೂ ಖಾಯಿಲೆ ಬರಬಹುದು ಎನ್ನುತ್ತಾರೆ ಬಸ್ ಚಾಲಕರು.
ತೋಡಿಗೆ ಸ್ಲಾಬ್
ನರ್ಸಿಂಗ್ ಹೋಮ್ ಬದಿ ತೋಡು ಶುಚಿಗೊಳಿಸಬೇಕಿದೆ. ಫೆರ್ರಿ ರಸ್ತೆ, ಪೊಲೀಸ್ ಕ್ವಾರ್ಟರ್ಸ್ ರಸ್ತೆ, ಮದ್ದುಗುಡ್ಡೆ ರಸ್ತೆಯ ಫೆರ್ರಿವಾರ್ಡ್‌ಗೆ ಸಂಬಂಧಿಸಿದ ಚರಂಡಿಗೆ ಸ್ಲಾಬ್ ಹಾಕಬೇಕಿದೆ. ಇಲ್ಲದಿದ್ದರೆ ಕೊಳಚೆ ನೀರು ಹರಿವ ವಾಸನೆ, ಉತ್ಪತ್ತಿಯಾಗುವ ಸೊಳ್ಳೆಗಳ ಕಾಟದಿಂದ ಇಲ್ಲಿನ ಜನತೆಗೆ ಮುಕ್ತಿ ದೊರೆಯುವುದಿಲ್ಲ.
ಪಾರ್ಕ್ ದೊಡ್ಡದಾಗಲಿ
ಫೆರ್ರಿಪಾರ್ಕ್ ಸದ್ಯದ ಮಟ್ಟಿಗೆ ಇಲ್ಲಿನ ಜನರ ಸಮಯ ಕಳೆಯಲು ಇರುವ ನೆಚ್ಚಿನ ತಾಣ. ಆದರೆ ಇಲ್ಲಿ ಅನೇಕ ಕೊರತೆಗಳೂ ಇವೆ. ಪಾರ್ಕ್ ಇನ್ನಷ್ಟು ದೊಡ್ಡದಾಗಬೇಕೆಂಬ ಬೇಡಿಕೆ ಇದೆ. ಇಲ್ಲಿ ವಾಕಿಂಗ್ ಪಾಥ್ ನಿರ್ಮಿಸಿದರೆ ಸಂಜೆ ವೇಳೆ ನಡೆದಾಡಲು ಬರುವವರಿಗೆ ಅನುಕೂಲವಾಗಲಿದೆ. ಪಾರ್ಕ್‌ನ ಸುತ್ತಮುತ್ತ ಕಿಡಿಗೇಡಿಗಳ, ಪುಂಡಪೋಕರಿಗಳ ದುಶ್ಚಟ ಕೇಂದ್ರವಾಗದಂತೆ ಕ್ರಮವಹಿಸಬೇಕಿದೆ. ಕುಡಿದು ತಂದು ಹಾಕಿದ ಬಾಟಲಿಗಳ ರಾಶಿ ಖಾಲಿ ಮಾಡುವುದೇ ದೊಡ್ಡ ಕೆಲಸವಾಗುತ್ತದೆ.
ಮಳೆನೀರು ಹೋಗದು
ಫೆರ್ರಿ ಪಾರ್ಕ್ ಬಳಿಯ ಜಂಕ್ಷನ್‌ನಲ್ಲಿ ತೆರೆದ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿ ಇರುವ ಕಾರಣ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಸುತ್ತಲಿನ ಮನೆಗಳಿಗೂ ಪ್ರವೇಶಿಸುತ್ತದೆ. ರಸ್ತೆಯ ಒಂದು ಮಗ್ಗುಲಿನಿಂದ ಇನ್ನೊಂದು ಮಗ್ಗುಲಿಗೆ ಮಳೆನೀರು ಹರಿಯುವುದಿಲ್ಲ. ಇದರ ದುರಸ್ತಿ ಕಾರ್ಯವೂ ನಡೆಯಬೇಕಿದೆ.
ಮೆಡಿಕಲ್ ಕ್ಯಾಂಪ್
ವಾರ್ಡ್‌ನಲ್ಲಿ 6 ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಮಾಡಬೇಕೆಂದು ಈ ಭಾಗದ ಜನತೆ ಬೇಡಿಕೆಯಿಟ್ಟಿದ್ದಾರೆ. ಎಲ್ಲರಿಗೂ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಪುರಸಭೆಯವರು ಯಾವುದಾದರೂ ಸಂಘಸಂಸ್ಥೆಗಳ, ಆಸ್ಪತ್ರೆಗಳ ಸಹಕಾರದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಬೇಕು ಎಂಬ ಬೇಡಿಕೆಯೂ ಇದೆ. ಜತೆಗೆ ಈ ಸಂದರ್ಭದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳ ಮಾಹಿತಿ, ಜನ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಲಿ ಎನ್ನುತ್ತಾರೆ.
ಒಳಚರಂಡಿ ಬೇಕು
ಒಳಚರಂಡಿ ಕಾಮಗಾರಿ ಬಾಕಿಯಿದೆ. ಹಾಗಾಗಿ ಚರಂಡಿಯಲ್ಲಿ ಯಾರ್ಯಾರ ಮನೆ ಕೊಳಚೆ ನೀರು ತೆರೆದ ಚರಂಡಿಯ ಸ್ಥಿತಿಯಲ್ಲಿಯೇ ಹರಿಯುತ್ತದೆ. ಕೆಲವೆಡೆ ಹೊಳೆ ಸೇರುವುದೂ ಉಂಟು. ಯುಜಿಡಿ ಆದಷ್ಟು ಶೀಘ್ರ ಆರಂಭವಾಗಲಿ ಎಂದು ಇಲ್ಲಿನ ಜನ ಬೇಡಿಕೆಯಿಡುತ್ತಿದ್ದಾರೆ.
ಗಮನಿಸುತ್ತಾರೆ
ಮೊದಲು ತೀರಾ ಹಿಂದುಳಿದ, ನಿರ್ಲಕ್ಷ್ಯಕ್ಕೆ ಒಳಗಾದ ವಾರ್ಡ್ ಆಗಿದ್ದ ಫೆರ್ರಿವಾರ್ಡ್ ಈಚಿನ ಕೆಲ ವರ್ಷಗಳಲ್ಲಿ ಪುರಸಭೆಯವರು ಗಮನಿಸುವ ಹಂತಕ್ಕೆ ಬಂದಿದೆ. ಏನಾದರೂ ಸಮಸ್ಯೆ ಹೇಳಿದರೆ ಸ್ಪಂದಿಸುತ್ತಾರೆ. ಪರಿಹಾರಕ್ಕೆ ಪ್ರಯತ್ನಿಸುತ್ತಾರೆ ಎನ್ನುತ್ತಾರೆ ಈ ಭಾಗದ ಜನ. ಆಡಳಿತ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ, ಅನುದಾನದ ಕೊರತೆಯಿದೆ ಎಂಬಂತಹ ವಿವೇಚನೆಯಿದ್ದು ಇಲ್ಲಿನ ಸಮಸ್ಯೆಗಳನ್ನು ವಿವರಿಸುತ್ತಾರೆ.
ಆಗಬೇಕಾದ್ದೇನು?
ಫೆರ್ರಿ ಪಾರ್ಕ್ ವಿಸ್ತಾರಗೊಳಿಸಬೇಕು.
ರಿಂಗ್ ರೋಡ್ ಅಭಿವೃದ್ಧಿಯಾಗಬೇಕು.
ಒಳಚರಂಡಿ ಕಾಮಗಾರಿಯಾಗಬೇಕು.
ಡಾಮರು ಹಾಕಲಿ
ರಸ್ತೆಯಲ್ಲಿ ಪ್ರತಿ ಗಳಿಗೆಯೂ ಘನವಾಹನಗಳ ಓಡಾಟದಿಂದ ಧೂಳು ಆವರಿಸು ತ್ತದೆ. ರಸ್ತೆಯಿಂದ ನೂರಿನ್ನೂರು ಮೀ. ದೂರದ ಮನೆಗಳೂ ಧೂಳು ತುಂಬಿಕೊಂಡಿರುತ್ತವೆ. ಇದರಿಂದಲೇ ಶ್ವಾಸಕೋಶ ಸಂಬಂಧಿ ಖಾಯಿಲೆ ಬಂದರೂ ಬರಬಹುದು. ಹಾಗಾಗಿ ಇಲ್ಲಿನ ರಸ್ತೆಗೆ ಡಾಮರು ಹಾಕಬೇಕಿದೆ.
-ನಂದಕಿಶೋರ್,ಕ್ಯಾಂಟಿನ್ ಮಾಲಕರು
ಚರಂಡಿ ಮಾಡಲಿ
ಬಯಲುಶೌಚ ಮುಕ್ತ ಪ್ರದೇಶ ಎಂದು ಘೋಷಣೆಯಾಗಿ ದ್ದರೂ ಮನೆಮನೆ ಗಳ ಪರಿಸರದಲ್ಲಿ ಮಾಡಿದ ಶೌಚ, ತ್ಯಾಜ್ಯ ಪಂಚಗಂಗಾವಳಿ ಹೊಳೆ ಒಡಲನ್ನು ರಾಜಾರೋಷವಾಗಿ ಸೇರುತ್ತಿದೆ. ಚರಂಡಿ ವ್ಯವಸ್ಥೆಯಾಗದಿದ್ದರೆ ಈ ಅವ್ಯವಸ್ಥೆ ಮುಂದುವರಿಯುತ್ತದೆ.
-ಕಿಶೋರ್ ಕುಮಾರ್,ಫೆರ್ರಿ ವಾರ್ಡ್
ಕಾಮಗಾರಿ ಆಗುತ್ತಿದೆ
ಬ್ಲೂವಾಟರ್ ಹೋಟೆಲ್ ಬಳಿ ರಿಂಗ್ ರೋಡ್ ಸೇರುವಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಮಿನಿವಿಧಾನಸೌಧ ಎದುರು ಪಾರ್ಕಿಂಗ್‌ಗೆ ಇಂಟರ್‌ಲಾಕ್ ಹಾಕಿ ಸುವ್ಯವಸ್ಥಿತ ಮಾಡಲಾಗಿದೆ. ಫೆರ್ರಿ ಪಾರ್ಕ್ ಬಳಿ ಬಸ್ ಪಾರ್ಕಿಂಗ್ ಆರಂಭಿಸಲಾಗಿದ್ದು ಒಂದಷ್ಟು ಸೌಕರ್ಯಗಳಾಗಬೇಕಿವೆ. ಒಳಚರಂಡಿ ಹಾಗೂ ರಾಜಾ ಕಾಲುವೆಗೆ ಮುಚ್ಚಿಗೆ ಹಾಕುವ ಬೇಡಿಕೆಯಿದೆ.
-ಅಬ್ಬು ಮಹಮ್ಮದ್,
ಸದಸ್ಯರು, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.