ಉಡುಪಿ: ನೀರು ತುಟ್ಟಿಯ ದಿನ ಇಂದು ಆರಂಭ
Team Udayavani, Mar 23, 2017, 2:17 PM IST
ಉಡುಪಿ: ಉಡುಪಿ ನಗರದಲ್ಲಿ ನೀರು ತುಟ್ಟಿಯ ದಿನ ಗುರುವಾರದಿಂದ ಅಧಿಕೃತವಾಗಿ ಆರಂಭವಾಗಲಿದೆ. ಗುರುವಾರದಿಂದ ಎರಡು ದಿನಗಳಿಗೊಮ್ಮೆ ನೀರು ಪೂರೈಸಲು ನಗರಸಭೆ ನಿರ್ಧರಿಸಿದೆ. ನಗರವನ್ನು 2 ಭಾಗಗಳಾಗಿ ಮಾಡಿ ದಿನ ಬಿಟ್ಟು ದಿನ ಸರಬರಾಜು ಮಾಡಲಾಗುತ್ತದೆ. ಆಯಾ ದಿನ ನಿರ್ದಿಷ್ಟ ವಾರ್ಡುಗಳಲ್ಲಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಮಾತ್ರ ಸರಬರಾಜು ಆಗದ ಮನೆಗಳಿಗೆ ಟ್ಯಾಂಕರ್ ಮೂಲಕ ತಲಾ 500 ಲೀ. ನೀರು ಪೂರೈಸಲಾಗುವುದು.
ನೀರಿನ ಮಟ್ಟ ಕುಸಿತ
ಬಜೆ ಅಣೆಕಟ್ಟು ಸ್ಥಾವರದಲ್ಲಿ ಮಾ. 22ರಂದು 3.66 ಮೀ. ನೀರು ಇದೆ. ಇದು ಕಳೆದ ವರ್ಷ ಇದೇ ದಿನ 4.82 ಮೀ. ಇತ್ತು. ಈ ಬಾರಿ 1.16 ಮೀ. ನೀರು ಸಂಗ್ರಹ ಕಡಿಮೆ ಇದೆ. ಇದು ನಾಗರಿಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಇನ್ನು ದಿನ ಕಳೆದಂತೆ ಆವಿಯಾಗಿ ಹೋಗುವುದರಿಂದ ಒಂದೇ ಸಮನೆ ನೀರಿನ ಮಟ್ಟ ಕುಸಿಯುತ್ತದೆ. ಈಗಿನ ಅಂದಾಜು ಪ್ರಕಾರ ಸಾಮಾನ್ಯವಾಗಿ ಎ. 15-20ರ ವರೆಗೆ ನೀರು ಸರಬರಾಜು ಸಾಧ್ಯವಾದರೂ ಬಜೆ ಅಣೆಕಟ್ಟಿನ ಪೂರ್ವದಲ್ಲಿರುವ ಗುಂಡಿಗಳಿಂದ ನೀರು ಎತ್ತಿ ಮತ್ತೆ ಕೆಲವು ದಿನ ಮುಂದುವರಿಸಬಹುದು. ಆದರೂ ನೀರಿನ ಸಮಸ್ಯೆ ಈ ಬಾರಿ ಕಗ್ಗಂಟಾಗಿ ಪರಿಣಮಿಸುವ ಎಲ್ಲ ಸಾಧ್ಯತೆಗಳೂ ಇವೆ.
ಮಿತ ಬಳಕೆ: ಎಚ್ಚರಿಕೆ
ಈಗಿಂದೀಗಲೇ ನೀರು ಬಳಕೆಯನ್ನು ಮಿತವಾಗಿ ಬಳಸಬೇಕಾಗಿರುವುದು ಅನಿವಾರ್ಯವಾಗಿದೆ. ಈಗಾಗಲೇ ಹೊಟೇಲ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈಗಿನ್ನೂ ಮಾರ್ಚ್ ಕೊನೆಯ ಹಂತದಲ್ಲಿದ್ದು ಇನ್ನೂ ಕಠಿನವಾದ ಎರಡು ತಿಂಗಳ ಬೇಸಗೆಯನ್ನು ನಿರ್ವಹಿಸಬೇಕಾಗಿದೆ. ಗಾರ್ಡನ್, ತೋಟಗಳಿಗೆ ನೀರು ಹಾಯಿಸುವುದು, ವಾಹನಗಳನ್ನು ತೊಳೆಯಲು ನೀರು ಬಳಸುವುದನ್ನು ಮಳೆಗಾಲ ಆರಂಭವಾಗುವವರೆಗೆ ನಿಲ್ಲಿಸಬೇಕು. ಇದಕ್ಕಾಗಿ ನಗರಸಭೆಯಲ್ಲಿ ವಿಶೇಷ ದಳವನ್ನು ರಚಿಸಲಾಗುತ್ತಿದೆ. ನೀರು ಪೋಲು ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.