ನೀರಿಗಾಗಿ ಕನ್ನಡಬೆಟ್ಟು ನಿವಾಸಿಗಳ ಕಣ್ಣೀರು
Team Udayavani, Jan 3, 2019, 8:35 PM IST
ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ರಿಯ ಪೊಸ್ರಾಲು ಸಮೀಪದ ಕನ್ನಡಬೆಟ್ಟು ನಿವಾಸಿಗಳು ಕುಡಿಯುವ ನೀರಿಗಾಗಿ ಹಲವು ದಶಕದಿಂದ ಕಣ್ಣೀರು ಹಾಕುತ್ತಿದ್ದಾರೆ. ನಿತ್ಯ ನೀರಿಗಾಗಿ ಪರದಾಟ ನಡೆಸುತ್ತಿದ್ದರೂ ಯಾವುದೇ ಇಲಾಖೆ ಅಥವಾ ಸ್ಥಳಿಯಾಡಳಿತ ಈ ಕಾಲನಿಯ ನೀರಿನ ಸಮಸ್ಯೆಗೆ ಪರಿಹಾರ ನೀಡಿಲ್ಲ.
ವರ್ಷದ ಎಲ್ಲಾ ದಿನವೂ ಸಮಸ್ಯೆ
ಬೇಸಿಗೆಯಲ್ಲಿ ನೀರಿನ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ ಆದರೆ ಈ ಕಾಲನಿಯಲ್ಲಿ ವರ್ಷದ ಎಲ್ಲಾ ದಿನಗಳಲ್ಲಿಯೂ ನೀರಿಗಾಗಿ ಪರದಾಡಬೇಕಾಗಿದೆ. ಈ ಕಾಲನಿಯ 5 ಮನೆಗಳಲ್ಲಿ ಸುಮಾರು 40 ಮಂದಿ ಜನರಿದ್ದು ಇವರ ನಿತ್ಯ ಉಪಯೋಗಕ್ಕೆ ನೀರಿಲ್ಲ. ನೀರಿಗಾಗಿ ಇವರು 1 ಕಿ.ಮೀ. ನಷ್ಟು ದೂರದ ನದಿಗೆ ತೆರಳಬೇಕಿದೆ. ಆದರೆ ಇತ್ತೀಚೆಗೆ ಆ ನದಿಯಲ್ಲಿ ಮೊಸಳೆಗಳು ಕಾಣಸಿಕ್ಕಿದ್ದು ಈ ಭಾಗದ ಜನ ನೀರಿಗೆ ಇಳಿಯಲೂ ಇದೀಗ ಭಯವುಂಟಾಗಿದೆ.
ಕಾಲನಿ ಜನರೇ ಬಾವಿ ತೋಡಿದರು
ನೀರಿಗಾಗಿ ಪರದಾಟ ನಡೆಸುವುದರಿಂದ ನೊಂದ ಕಾಲನಿ ಜನರೇ ಒಟ್ಟಾಗಿ ಒಂದು ಬಾವಿಯನ್ನು ನಿರ್ಮಿಸಿದ್ದಾರೆ. ಆದರೆ ಅದೂ ಈಗ ಬತ್ತುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ನಿವಾಸಿಗಳು ದೂರಕ್ಕೆ ಕ್ರಮಿಸಿ ಖಾಸಗಿ ಬಾವಿಗಳಿಂದ ನೀರು ತರಬೇಕಾಗಿದೆ ಅಥವಾ ಇಲ್ಲವೇ ನದಿ ನೀರನ್ನೇ ಆಶ್ರಯಿಸಬೇಕಾಗಿದೆ.
ಈ ಕಾಲನಿಗೆ ಪಂಚಾಯತ್ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲು ಸ್ಥಳಿಯ ಖಾಸಗಿ ಜಾಗದ ತೊಂದರೆ ಇರುವುದರಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಳ್ಳಿ ಅಲ್ಲದಿದ್ದರೂ ಬೋರ್‌ವೆಲ್ ಅಥವಾ ಬಾವಿಯನ್ನಾದರೂ ನಿರ್ಮಿಸಿ. ಅಥವಾ ಎರಡು ದಿನಕ್ಕೊಮ್ಮೆ ಟ್ಯಾಂಕರ್ ನೀರು ಒದಗಿಸಲು ಕ್ರಮಕೈಗೊಳ್ಳಲಿ ಎನ್ನುವುದು ಇಲ್ಲಿನವರ ಆಗ್ರಹ. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
ಮನವಿ ನೀಡಿದ್ದರೂ ಪ್ರಯೋಜನವಿಲ್ಲ
ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ, ತಾ.ಪಂ., ಜಿ.ಪಂ.ನಿಂದ ಹಿಡಿದು, ಶಾಸಕ ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಅನುದಾನ ನೀಡಲು ಸಿದ್ಧ
ಖಾಸಗಿ ಜಾಗದ ಸಮಸ್ಯೆ ಇರುವುದರಿಂದ ನಳ್ಳಿ ಸಂಪರ್ಕ ಸಾಧ್ಯವಾಗಿಲ್ಲ. ಪೈಪ್ ಲೈನ್ ಅಳವಡಿಸಲು ಸರಕಾರಿ ಅಥವಾ ಇತರ ಜಾಗದ ವ್ಯವಸ್ಥೆಯಾದಲ್ಲಿ ಅನುದಾನ ನೀಡಲು ಸಿದ್ಧವಿದ್ದೇವೆ.
– ರೇಶ್ಮಾ ಉದಯ್ ಶೆಟ್ಟಿ , ಜಿ.ಪಂ. ಸದಸ್ಯೆ
ನಿತ್ಯ ನರಕ ಯಾತನೆ
ಇದು ಹಲವು ದಶಕಗಳ ಸಮಸ್ಯೆಯಾಗಿದ್ದು ಎಲ್ಲರಿಗೂ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವರ್ಷದ ಆರು ತಿಂಗಳು ನೀರಿಗಾಗಿ ನಿತ್ಯ ನರಕ ಯಾತನೆಯನ್ನು ಪಡಬೇಕಾಗಿದೆ.
– ವಸಂತಿ, ಸ್ಥಳೀಯರು
— ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.