ಮಹಿಳೆ ಕೊಲೆ, ಸುಲಿಗೆ: ಜೀವಾವಧಿ ಸಜೆ
Team Udayavani, May 25, 2017, 2:35 PM IST
ಉಡುಪಿ: ಆರು ವರ್ಷದ ಹಿಂದೆ ಹೇರೂರು ಗ್ರಾಮದಲ್ಲಿನ ಮಹಿಳೆಯ ಕೊಲೆಗೈದು ಚಿನ್ನಾಭರಣಗಳನ್ನು ಸುಲಿಗೆಗೈದ ಆರೋಪಿ ಬ್ರಹ್ಮಾವರ 52ನೇ ಹೇರೂರು ಗ್ರಾಮದ ಯೋಗೀಶ (34) ಅವರಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೇ 24ರಂದು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಐಪಿಸಿ ಸೆಕ್ಷನ್ 302ಕ್ಕೆ ಜೀವಾವಧಿ ಶಿಕ್ಷೆ, ಕಲಂ 397ಕ್ಕೆ 7 ವರ್ಷ ಜೈಲು ಮತ್ತು 25,000 ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಆದೇಶ ಪ್ರಕಟಿಸಿದ್ದಾರೆ.
ಘಟನೆಯ ಹಿನ್ನೆಲೆ: ಆರೋಪಿ ಯೋಗೀಶ ಹೇರೂರು ಗ್ರಾಮದಲ್ಲಿ ಜನರಲ್ ಸ್ಟೋರ್ ಅಂಗಡಿಯನ್ನು ತೆರೆದಿದ್ದರು.ಅಂಗಡಿ ಪ್ರಾರಂಭಿಸುವ ವೇಳೆಗೆ ಅವರು ವಿವಿಧ ಬ್ಯಾಂಕುಗಳಲ್ಲಿ ತುಂಬಾ ಸಾಲ ಮಾಡಿದ್ದರು. ದಿನಕಳೆದಂತೆ ವ್ಯಾಪಾರದಲ್ಲಿ ನಷ್ಟವಾಗಿರುತ್ತದೆ. ಬ್ಯಾಂಕುಗಳಿಗೆ ಸಾಲದ ಹಣ ಮರು ಪಾವತಿಸದೇ ಇದ್ದ ಕಾರಣ ಕೋರ್ಟ್ ನೋಟಿಸ್ ಆಗಿದ್ದು, ತುಂಬಾ ಹಣದ ಅಡಚಣೆಯಲ್ಲಿದ್ದರು.
ಈ ವೇಳೆಯಲ್ಲಿ ತನ್ನ ಮನೆಯ ಸಮೀಪವೇ ವಾಸ್ತವ್ಯವಿದ್ದ ಜ್ಞಾನವಸಂತ ಶೆಟ್ಟಿಯವರ ಅತ್ತೆ ಸುನಂದಾ ಎ. ಶೆಟ್ಟಿಯವರು ಕುತ್ತಿಗೆಯಲ್ಲಿ ಹೆಚ್ಚಿನ ಚಿನ್ನಾಭರಣ ಧರಿಸಿಕೊಂಡು ತಿರುಗುವುದನ್ನು ಕಂಡಿದ್ದರು.
ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಅವರನ್ನು ಕೊಲೆ ಮಾಡಿ ಅವರ ಮೈಮೇಲಿನ ಚಿನ್ನಾಭರಣವನ್ನು ಸುಲಿಗೆ ಮಾಡುವ ಉದ್ದೇಶದಿಂದ 2010ರ ಡಿ. 20ರ ಸಂಜೆ 7 ಗಂಟೆಯ ಸುಮಾರಿಗೆ ಆಗಮಿಸಿದ್ದ ಆರೋಪಿಯು 7.30ರ ಸುಮಾರಿಗೆ ಮನೆಯಲ್ಲಿ ನೆಲ ಒರೆಸುತ್ತಿದ್ದ ಸುನಂದಾ ಶೆಟ್ಟಿಯವರ ಕುತ್ತಿಗೆಯನ್ನು ಒತ್ತಿ ಕೊಲೆ ಮಾಡಿದ್ದ. ಆಮೇಲೆ ಮೈಮೇಲಿದ್ದ 1,80,000 ರೂ. ಮೌಲ್ಯದ ಒಟ್ಟು 120.600 ಗ್ರಾಂ ತೂಕದ ಚಿನ್ನಾಭರಣಗಳಾದ ಕರಿಮಣಿ ಸರ, 4 ಬಳೆ, 1 ಜೊತೆ ಬೆಂಡೋಲೆ, ಕಿವಿಯ ಚೈನು ಮತ್ತು ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ ಎಂದು ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಇನ್ಸ್‌ಪೆಕ್ಟರ್ ಜಿ. ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸಾಕ್ಷಿಗಳನ್ನು ವಿಚಾರಣೆ ನಡೆಸಿ ಹಾಗೂ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಬುಧವಾರ ಶಿಕ್ಷೆಯ ತೀರ್ಪು ಪ್ರಕಟಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಅಂದಿನ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್. ಜಿತೂರಿ ಪ್ರಕರಣದಲ್ಲಿ ಪ್ರಾಥಮಿಕ ವಾದವನ್ನು ಮಂಡಿಸಿದ್ದರು.
ಆನಂತರದಲ್ಲಿ ಸರಕಾರಿ ಅಭಿಯೋಜಕಿ ಉಡುಪಿ ಶಾಂತಿ ಬಾಯಿ ಅವರು ಸಾಕ್ಷಿ ವಿಚಾರಣೆ ಮತ್ತು ವಾದವನ್ನು ಮಂಡಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.