ರಾಜ್ಯದಲ್ಲಿಯೂ ಮಹಿಳೆಯರ ಶೌರ್ಯದಳ
Team Udayavani, Mar 6, 2018, 1:45 PM IST
ಉಡುಪಿ: ಹೆಣ್ಮಕ್ಕಳಲ್ಲಿ ಸ್ಥೈರ್ಯ ತುಂಬುವ ಸ್ವಯಂಸೇವಾ ಮಹಿಳಾ ಪೊಲೀಸ್ “ಶೌರ್ಯ ದಳ’
(ಮಹಿಳಾ ಪೊಲೀಸ್ ವಾಲಂಟಿಯರ್) ರಾಜ್ಯದಲ್ಲೂ ಆರಂಭವಾಗಲಿ ಎಂದು ಕೇಂದ್ರ ಮಹಿಳಾ, ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದರು.
ಉಡುಪಿ ನಿಟ್ಟೂರಿನ ಸ್ಟೇಟ್‌ಹೋಂ ಆವರಣದಲ್ಲಿ ನಿರ್ಮಾಣಗೊಂಡಿರುವ ಸಖೀ ವನ್ ಸ್ಟಾಪ್ ಸೆಂಟರನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ನೆರವಿಗೆ ಒಂದೇ ಕೇಂದ್ರ
ನಮ್ಮ ದೇಶದಲ್ಲಿ ಮಹಿಳೆಯರು ತಮ್ಮ ಮೇಲೆ ಯಾವುದೇ ದೌರ್ಜನ್ಯ ನಡೆದರೆ ಪೊಲೀಸರ ಬಳಿಗೆ ತೆರಳುತ್ತಾರೆ. ಆದರೆ ಕೆಲವೊಮ್ಮೆ ಪೊಲೀಸರು ನೊಂದ ಮಹಿಳೆಗೆ ಮತ್ತಷ್ಟು ನೋವಾಗುವ ರೀತಿಯಲ್ಲಿ ಅಸಂಬದ್ಧವಾಗಿ ಪ್ರಶ್ನಿಸುತ್ತಾರೆ. ಉ. ಭಾರತದ ಪೊಲೀಸರಲ್ಲಿ ಇಂತಹ ವರ್ತನೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಗೆ ಸೂಕ್ತ ಸ್ಪಂದನೆ, ನ್ಯಾಯ ದೊರೆಯುವುದು ಸಾಧ್ಯವಿಲ್ಲ. ಹಾಗಾಗಿ ಸಖೀ ವನ್ ಸ್ಟಾಪ್ ಸೆಂಟರ್ ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿತು.
ನಿರ್ಭಯಾ ಪ್ರಕರಣದ ಹಿನ್ನೆಲೆಯೂ ಇದಕ್ಕೆ ಪ್ರೇರಣೆ ಯಾಯಿತು. ಕಳೆದ 3 ವರ್ಷಗಳಲ್ಲಿ ದೇಶಾದ್ಯಂತ 171 ಸಖೀ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಹಲವಾರು ಮಹಿಳೆಯರಿಗೆ ನೆರವು ದೊರೆತಿದೆ. ಕರ್ನಾಟಕದ ಮೊದಲ ಕೇಂದ್ರವನ್ನು ಉಡುಪಿಯಲ್ಲಿ ಆರಂಭಿಸಲಾಗುತ್ತಿದ್ದು, ಧಾರವಾಡ, ಚಾಮರಾಜನಗರ, ಚಿತ್ರದುರ್ಗ, ತುಮಕೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಸಖೀ ಕೇಂದ್ರ ಆರಂಭಗೊಳ್ಳಲಿದೆ. 181ಕ್ಕೆ ಕರೆ ಮಾಡುವ ಮೂಲಕ ಮಹಿಳೆಯರು ಇದರ ನೆರವು ಪಡೆದುಕೊಳ್ಳಬಹುದು ಎಂದು ಮೇನಕಾ ಹೇಳಿದರು.
ಅಕ್ರಮ ಸಾಗಾಟ – ಕಠಿನ ಕಾಯಿದೆ
ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಟ ತಡೆಗೆ ಕೇಂದ್ರ ಸರಕಾರ ಕಠಿನ ಕಾಯಿದೆ ತರಲಿದ್ದು, ಶೀಘ್ರದಲ್ಲಿಯೇ ಮಸೂದೆ ಮಂಡನೆಯಾಗಲಿದೆ. ಇದು ವಿಶ್ವದಲ್ಲೇ ಅತ್ಯಂತ ಬಲಿಷ್ಠವಾದ ಕಾಯಿದೆಯಾಗಲಿದೆ ಎಂದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನನ್ನ ತಾಯಿ ಮನೋರಮಾ ಸಚಿವೆಯಾಗಿದ್ದಾಗ ಇಲ್ಲಿ ಅನಾಥ ಮಹಿಳೆಯರಿಗಾಗಿ ಸ್ಟೇಟ್ ಹೋಂ ಆರಂಭಿಸಿದ್ದರು. ಈಗ ಇದೇ ಕೇಂದ್ರದ ಆವರಣದಲ್ಲಿ ಸಖೀ ಕೇಂದ್ರಕ್ಕೆ ಸ್ಥಳ ದೊರೆಯುವಂತಾಗಿದೆ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿ.ಪಂ.ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ ಇನ್ನಾ,ಶಿಲ್ಪಾ ಜಿ. ಸುವರ್ಣ,ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿ ಅಧ್ಯಕ್ಷೆ ಟಿ. ವೆಂಕಟಲಕ್ಷ್ಮೀ ಬಸವಲಿಂಗರಾಜು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ| ವನಿತಾ ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ,ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎಲ್.ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.ವೀಣಾ ಕಾರ್ಯಕ್ರಮ ನಿರ್ವಹಿಸಿದರು.
ಶೋಭಾ, ಪ್ರಮೋದ್‌ಗೆ ಶ್ಲಾಘನೆ
ರಾಜ್ಯದ ಎಲ್ಲ ಶಾಸಕರಿಗಿಂತ ಉಡುಪಿಯ ಪ್ರಮೋದ್ ಮಧ್ವರಾಜ್ ಉತ್ತಮ ಶಾಸಕರು ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದು ಖುಷಿಯ ವಿಚಾರ. ಸಂಸದೆ ಶೋಭಾ ಕರಂದ್ಲಾಜೆ ಕೂಡ ದಕ್ಷತೆ ಮತ್ತು ವೃತ್ತಿಪರತೆಯಂದ ಕೆಲಸ ಮಾಡುವವರು. ಇಂಧನ ಸಚಿವೆಯಾಗಿರುವಾಗಲೂ ಉತ್ತಮ ಕೆಲಸ ಮಾಡಿದ್ದರು. ಸಖೀ ಕೇಂದ್ರಕ್ಕಾಗಿ ಕಳೆದ 4 ವರ್ಷಗಳಿಂದ ನನ್ನ ಬೆನ್ನು ಹಿಡಿದಿದ್ದರು. ಪಕ್ಷ ಸಂಘಟನೆ ಅಥವಾ ಯಾವುದೇ ಸವಾಲು ಕೊಟ್ಟರೂ ಶೋಭಾ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಮೇನಕಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.