ಮತದಾನದ ಜಾಗೃತಿಗೆ ಯಕ್ಷಗಾನ ಪ್ರದರ್ಶನ
Team Udayavani, Apr 30, 2018, 7:20 AM IST
ಕುಂದಾಪುರ: ಯಕ್ಷಗಾನ ಎಲ್ಲರಿಗೂ ಪ್ರಿಯವಾದ ಕಲೆ. ಅದರಲ್ಲೂ ಕರಾವಳಿ ಭಾಗದ ಜನರಿಗೆ ವೇಗವಾಗಿ ತಟ್ಟುವ ವಿಧಾನವೇ ಯಕ್ಷಗಾನ. ಅದಕ್ಕಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಸ್ವೀಪ್ ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯಾದ್ಯಂತ ಬಡಗುತಿಟ್ಟಿನ ಯಕ್ಷಗಾನದ ಮೂಲಕ ಮತಜಾಗೃತಿ ಮೂಡಿಸುವ ಕಾರ್ಯಕ್ರಮ ಅಲ್ಲಲ್ಲಿ ನಡೆಯುತ್ತಿದೆ.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ರವಿವಾರ ಸ್ವೀಪ್ ಸಮಿತಿ, ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ಕಲ್ಪಿತಾ ಕೋಟ ಸಂಸ್ಥೆಯ ವತಿಯಿಂದ ಮೇ 12 ರಂದು ನಡೆಯುವ ಮತದಾನದಲ್ಲಿ ಎಲ್ಲರೂ ತಪ್ಪದೇ, ನಿರ್ಭೀತಿಯಿಂದ, ಮುಕ್ತವಾಗಿ ಮತದಾನ ಮಾಡುವಂತೆ ಅರಿವು ಮೂಡಿಸುವ ಸಲುವಾಗಿ ‘ಮತ ಮಹಿಮಾಮೃತ’ ಎನ್ನುವ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಮೃದ್ಧಿಪುರ ಎನ್ನುವ ಊರಿನ ರಾಜ ರತ್ನಸೇನ. ಆತನಿಗೆ ಪುತ್ರನಿಲ್ಲದೆ, ಮುಂದಿನ ಉತ್ತರಾಧಿಕಾರಿಯನ್ನು ಚುನಾವಣೆ ಮೂಲಕ ಆಯ್ಕೆ ಮಾಡಿಕೊಳ್ಳಲು ರಾಜ ಮುಂದಾಗುತ್ತಾನೆ. ಇಲ್ಲಿ ರಾಜಾಡಳಿತವನ್ನು ಬದಿಗೆ ಸರಿಸಿ, ಪ್ರಜಾಪ್ರಭುತ್ವ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ತಮ್ಮ ವಾರಸುದಾರನ ಆಯ್ಕೆಯ ಅಧಿಕಾರವನ್ನು ಪ್ರಜೆಗಳ ಕೈಗೆ ನೀಡುತ್ತಾನೆ ಎನ್ನುವುದನ್ನು ಯಕ್ಷಗಾನದ ಅರ್ಥಗಾರಿಕೆ ಮೂಲಕ ಜನರಿಗೆ ತಿಳಿಸಲಾಗುತ್ತಿದೆ.
ಸಂದೇಶವೂ ಇದೆ..
ಹಣ, ಹೆಂಡ, ಆಮಿಷಗಳಿಗೆ ಬಲಿಯಾಗದೇ ನಾಡಿನ ಆಶೋತ್ತರಗಳನ್ನು ಈಡೇರಿಸಬಲ್ಲ ನಾಯಕನನ್ನು ಆಯ್ಕೆ ಮಾಡಿ ಎನ್ನುವ ಸಂದೇಶವು ಇಲ್ಲಿದೆ. ಮತದಾನ ಹೇಗೆ ಮಾಡಬೇಕು ಎನ್ನುವ ಮಾಹಿತಿಯನ್ನು ನೀಡಲಾಗುತ್ತಿದೆ. ಪಿಂಕ್ ಮತಗಟ್ಟೆ, ವಿವಿಪ್ಯಾಟ್, ಹೀಗೆ ಉಡುಪಿ ಜಿಲ್ಲಾಡಳಿತವು ಕೈಗೊಂಡಿರುವ ಆಕರ್ಷಕ ಕ್ರಮಗಳ ಕುರಿತ ವಿವರವೂ ನೀಡಲಾಗುತ್ತಿದೆ.
ಹಿತವಾದ ಭಾಗವತಿಕೆ
‘ಧರೆಯ ಭಾಗ್ಯವ ಕೆಡಿಸಬೇಡಿ, ಸುರೆಯು ಧನದ ಆಮಿಷಕ್ಕೆ ಬಗ್ಗದೇ, ಸುರುಪುರದ ನಿಜ ಮತವ ನೀಡಿ ಹರುಷರಾಗಿ’ ಎಂದು ಭಾಗವತ ಸತೀಶ್ ಕೆದ್ಲಾಯ ಅವರ ಕಂಠದಲ್ಲಿ ಮೂಡಿಬರುವ ಹಾಡಿನಲ್ಲಿ ಹಣ, ಆಮಿಷಕ್ಕೆ ಬಲಿಯಾಗಿ ಈ ನಾಡಿನ ಹಿತವನ್ನು, ಅಭಿವೃದ್ಧಿ ಮಾರಿಕೊಳ್ಳಬೇಡಿ ಎನ್ನುವ ಮಹತ್ವದ ಅರಿವು ವ್ಯಕ್ತವಾಗಿದೆ. 45 ನಿಮಿಷದ ಈ ಪ್ರಸಂಗವನ್ನು ಬರೆದವರು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್. ನಿರ್ದೇಶಿಸಿದವರು ನರಸಿಂಹ ತುಂಗ. ಚೆಂಡೆಯಲ್ಲಿ ಸುದೀಪ್, ಕಲಾವಿದರಾಗಿ ವಿಷ್ಣುದಾಸ್, ವಿಠಲ, ಅಭಿನವ ಸಹಕರಿಸಿದ್ದಾರೆ.
ರವಿವಾರ ನಡೆದ ಪ್ರದರ್ಶನದ ವೇಳೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೆಕರ್, ಉಪ ನಿರೀಕ್ಷಕರ ಕಚೇರಿಯ ವಿಷಯ ಪರಿವೀಕ್ಷಕ ನಾಗರಾಜ್, ಪುರಸಭೆಯ ಇಂಜಿನಿಯರ್ ದಿನೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಮತದಾರರು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.