ವಿಶ್ರಾಂತಿ ಇಲ್ಲದೆ ಒತ್ತಡವೇ ಹೆಚ್ಚಿರುವ ಬದುಕಿಗೆ ಯೋಗವೇ ಬೇಕು
Team Udayavani, Jun 22, 2019, 11:10 AM IST
ಬದುಕಿನಲ್ಲಿ ಯೋಗ-ಭಾಗ್ಯ ಒಟ್ಟಿಗೆ ಸಾಗಬೇಕೆಂದರೆ “ಯೋಗ’ ಇರಲೇಬೇಕು. “ಯೋಗ ಜೀವನ ‘ ಅಂಕಣ ಇಂದಿನಿಂದ ಆರಂಭ. ಒಂದು ತಿಂಗಳ ಕಾಲ ಹಲವಾರು ಯೋಗ ಗುರುಗಳು ಇಂದಿನ ಬದುಕಿಗೆ ಯೋಗದ ಅಗತ್ಯವನ್ನು ಇಲ್ಲಿ ವಿವರಿಸುವರು.
ಉಡುಪಿ: ಈಗ ಮಹಿಳೆಯರಿಗೆ ಮನೆ ಕೆಲಸದ ಜತೆ ಉದ್ಯೋಗದ ಧಾವಂತವೂ ಇದೆ. ಮಹಿಳೆಯರಿಗೆ ರೆಸ್ಟ್ ಇಲ್ಲವಾಗಿದೆ, ಸ್ಟ್ರೆಸ್ ಹೆಚ್ಚಿಗೆಯಾಗಿದೆ. ಆದ್ದರಿಂದ ಮಹಿಳೆಯರಿಗೆ ಯೋಗಾಸನ ಅತ್ಯಗತ್ಯ ಎನ್ನುತ್ತಾರೆ ಯೋಗ ಪಟು, “ಯೋಗಾಚಾರ್ಯ’ ಬಿ.ಕೆ.ಎಸ್. ಅಯ್ಯಂಗಾರರ ಶಿಷ್ಯೆ ಶೋಭಾ ಶೆಟ್ಟಿ.
* ಮಹಿಳೆಯರಿಗೆ ಯೋಗಾಸನ ಬೇಕೆ?
ಖಂಡಿತವಾಗಿ. ಮಹಿಳೆಯರು ಕುಟುಂಬ ವನ್ನು ಸಲಹುವ ಜತೆಗೆ ಉದ್ಯೋಗವನ್ನು ನಿಭಾಯಿಸಬೇಕಿದೆ. ಈ ಕಾಲದಲ್ಲಿ ಮಹಿಳೆಯ ರಿಗೆ ವಿಶ್ರಾಂತಿ ಎಂಬುದಿಲ್ಲ. ಇರುವುದು ಸ್ಟ್ರೆಸ್ ಮಾತ್ರ. ಕೆಲಸಕ್ಕೆ ಹೋಗುವುದರಿಂದ ಕುಳಿತು ಕೊಂಡು ಕೆಲಸ ಮಾಡಿ ಬೆನ್ನು ನೋವು, ಕಾಲು ನೋವು ಬರುತ್ತದೆ. ಇದೆಲ್ಲದರ ಒತ್ತಡ ಕಡಿಮೆ ಮಾಡಲು ಯೋಗಾಸನಕ್ಕೆ ಶರಣಾಗಬೇಕು.
* ಯಾವ ಯಾವ ಆಸನಗಳು ಸೂಕ್ತ?
ಎಲ್ಲ ಆಸನಗಳನ್ನೂ ಮಾಡಬಹುದು. ಒಂದೊಂದು ಆಸನಗಳ ಲಾಭ ಒಂದೊಂದು ಬಗೆ. ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಸೇತುಬಂಧ ಸರ್ವಾಂಗಾಸನ, ವಿಪರೀತ ಕರಣಿ-ಈ 5 ಆಸನಗಳನ್ನು ಎಲ್ಲರೂ ಮಾಡ ಬೇಕು. ಇದರಿಂದ ಹಾರ್ಮೋನ್ ಸಿಸ್ಟಮ್ ಸರಿಯಾಗುತ್ತದೆ ಎಂದು ಗುರೂಜಿ ಬಿ.ಕೆ.ಎಸ್. ಅಯ್ಯಂಗಾರ್ ಹೇಳುತ್ತಿದ್ದರು.
* ಮಹಿಳೆಯರಿಗೆ ಕೆಲಸದ ಒತ್ತಡದ ಜತೆಗೆ ಯೋಗಾಭ್ಯಾಸ ಕಷ್ಟವಲ್ಲವೆ?
ಏನಾದರೂ ಸಮಯ ಹೊಂದಾಣಿಕೆ ಮಾಡಿ ಕೊಂಡು ಯೋಗಾಭ್ಯಾಸ ಮಾಡಬೇಕು. ಉದಾಹರಣೆಗೆ, ಬೆಳಗ್ಗೆ ಸ್ವಲ್ಪ ಹೊತ್ತು, ಸಂಜೆ ಸ್ವಲ್ಪ ಹೊತ್ತು ಯೋಗಾಭ್ಯಾಸ ಮಾಡಬಹುದು. ಸುಸ್ತಾಗಿ ಬಂದು ಮಲಗಿದಾಗಲೇ ಸುಪ್ತ ಪಾದಾಂಗುಷ್ಠಾಸನವನ್ನು ಮಾಡಬಹುದು. ದಿಂಬಿನ ಮೇಲೆ ಅಂಗಾತ ಮಲಗಿ ಸುಪ್ತಬದ್ಧ ಕೋನಾಸನವನ್ನು ಮಾಡಬಹುದು. ಇದೆಲ್ಲ ದೇಹವನ್ನು ರೀಚಾರ್ಜ್ ಮಾಡುತ್ತದೆ. ಸುಮ್ಮನೆ ನಿಂತುಕೊಂಡು ಮಾಡುವ ಆಸನಗಳೂ ಇವೆ.
* ಗರ್ಭಿಣಿಯರಿಗೆ ಯೋಗಾಸನ ಸೂಕ್ತವೆ?
ಹೌದು. ಆದರೆ ಗರ್ಭಿಣಿಯರಾದಾಗಲೇ ಯೋಗಾಸನವನ್ನು ಶುರು ಮಾಡಬಾರದು. ಮೊದಲೇ ಯೋಗಾಭ್ಯಾಸ ಮಾಡುತ್ತಿದ್ದು, ಗರ್ಭಿಣಿಯರಾದ ಬಳಿಕ ಮುಂದುವರಿಸಿದರೆ ಉತ್ತಮ.
ಕಾರ್ಕಳ ತಾಲೂಕು ನೀರೆಯವರಾದ ಶೋಭಾ ಶೆಟ್ಟಿಯವರು ಹುಟ್ಟಿದ್ದು ಬೆಳೆದದ್ದು ಪುಣೆಯಲ್ಲಿ. 1979ರಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿದಾಗ ಪುಣೆಯ ಬಿ.ಕೆ.ಎಸ್. ಅಯ್ಯಂಗಾರರ ಸಂಸ್ಥೆಗೆ ಸೇರಿದರು. ಅಲ್ಲಿ ಬಿಎ ಪದವಿ ಓದಿದ ಶೋಭಾ ಅನಂತರ ಯೋಗ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿದರು. 1985ರಲ್ಲಿ ಉಡುಪಿಗೆ ಮದುವೆಯಾಗಿ ಬಂದ ಬಳಿಕ ಉಡುಪಿ ಮಿಶನ್ ಕಂಪೌಂಡ್‌ನಲ್ಲಿರುವ ಮನೆಯಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಮಂದಬುದ್ಧಿಯವರಿಗೂ ಯೋಗಾಸನದ ಮೂಲಕ ಚುರುಕು ಬುದ್ಧಿ ಬರುವಂತೆ ಮಾಡಿದ ಉದಾಹರಣೆಗಳೂ, ಸಹಜ ಹೆರಿಗೆಗೆ ಬೇಕಾದ ಯೋಗಾಸನಗಳನ್ನು ಕಲಿಸಿಕೊಟ್ಟ ಉದಾಹರಣೆಗಳೂ ಇವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.