ಕೊಚ್ಚಿ ಹೋದ ಸೇತುವೆ : ಸಂಪರ್ಕ ಕಳೆದುಕೊಂಡ 9 ಕುಗ್ರಾಮಗಳು
Team Udayavani, Jul 22, 2021, 10:17 PM IST
ಅಂಕೋಲಾ: ಕಳೆದ ಕೆಲ ದಿನಗಳಿಂದ ತಾಲೂಕಿನ್ನೆಲ್ಲೆಡೆ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಹಳ್ಳದ ರಭಸಕ್ಕೆ ಹಟ್ಟಿಕೇರಿಯಿಂದ ಕುಗ್ರಾಮಕ್ಕೆ ಸಂಪರ್ಕಿಸುವ ಬಿದಿರಿನ ಸೇತುವೆ ಕೊಚ್ಚಿಹೋಗಿದ್ದು, 9 ಕುಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಗೂಳೆ, ಕೆಂದಗಿ, ಲಕ್ಕೆಗುಳಿ, ಸಿಕಳಿ, ತುರ್ಲಿ, ಮಲಗದ್ದೆ, ಹೀರೆಮನೆ, ಕೋಟೆಬಾವಿ, ಮನ್ನಾಣಿ ಗ್ರಾಮಗಳು ಅಕ್ಷರಶಃ ಸಂಪರ್ಕ ಕಳೆದುಕೊಂಡಿವೆ. ಈ ಎಲ್ಲಾ ಗ್ರಾಮಗಳಲ್ಲಿ 400 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಿದಿರಿನ ಸೇತುವೆ ಕೊಚ್ಚಿ ಹೋದ ಪರಿಣಾಮ ಈ ಗ್ರಾಮದ ನಾಗರಿಕರು ದಿಗ್ಬಂಧನಕ್ಕೊಳಗಾದಂತಾಗಿದೆ. ಮಳೆಗಾಲ ಆರಂಭವಾಗುತ್ತಲೇ ಹಟ್ಟಿಕೇರಿಯಿಂದ ಈ 9 ಗ್ರಾಮಗಳ ಸಂಪರ್ಕಕ್ಕೆ ಸೇರುವ ಮಧ್ಯೆ ಇದ್ದ ಹಳ್ಳ ತುಂಬಿ ಹರಿಯುತ್ತದೆ. ಇಲ್ಲಿ ಗ್ರಾಮಸ್ಥರೆ ಕೂಡಿಕೊಂಡು ಬೀದರಿನ ಸೇತುವೆ ತಾತ್ಕಾಲಿಕವಾಗಿ ನಿರ್ಮಿಸಿಕೊಂಡು ಮೂಲಭೂತ ಅವಶ್ಯಕತೆಗೆ ಹಟ್ಟಿಕೇರಿಗೆ ಹೋಗಿ ಬರುತ್ತಿದ್ದರು. ಆದರೆ ಭಾರಿ ಮಳೆಯಿಂದಾಗಿ ಸೇತುವೆ ಕೊಚ್ಚಿ ಹೋಗಿದ್ದು 9 ಕುಗ್ರಾಮಗಳಲ್ಲಿ ಭಯದ ಕಾರ್ಮೋಡ ಕವಿದಿದೆ.
ಈ ಗ್ರಾಮಗಳಿಗೆ ಸಾಗಲು ಪ್ರಮುಖವಾಗಿ 5 ಸೇತುವೆಗಳ ಅವಶ್ಯಕತೆ ಇದೆ. ಈಗಾಗಲೇ ಶಾಸಕಿ ರೂಪಾಲಿ ನಾಯ್ಕ ಅವರು ಬೊಕಳೆ ಹಳ್ಳಕ್ಕೆ 20 ಲಕ್ಷ ರೂ. ಹಾಗೂ ದೊಡ್ಡಹಳ್ಳದ ಕಾಲು ಸಂಕಕ್ಕೆ 10 ಲಕ್ಷ ರೂ. ಅನುದಾನಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ಇನ್ನುಳಿದ 3 ಕಾಲು ಸಂಕವು ಆಗಬೇಕಿದೆ. ದಟ್ಟಕಾಡಿನ ಮಧ್ಯೆ ಇರುವ ಈ 9 ಕುಗ್ರಾಮಗಳ ಜನರು ಯಾವುದೇ ಮೂಲಭೂತ ಅವಶ್ಯಕತೆಗಾಗಿ ಹಟ್ಟಿಕೇರಿಗೆ ಬರಬೇಕು. ರೇಷನ್, ಆಸ್ಪತ್ರೆಗಳಿಗೂ ಹಟ್ಟಿಕೇರಿಯೇ ಇವರಿಗೆ ಆಧಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.