ಕಾರವಾರದಲ್ಲಿ ತಳಮಟ್ಟದಲ್ಲಿ ಹಾರಾಡಿದ ಯುದ್ಧ ವಿಮಾನ
Team Udayavani, May 12, 2019, 5:06 PM IST
ಕಾರವಾರ: ಕಾರವಾರ ನಗರದ ಜನರಿಗೆ ಮತ್ತು ಮಕ್ಕಳಿಗೆ ಶನಿವಾರ ಬೆಳಗ್ಗೆ ಅಪರೂಪದ ಯುದ್ಧ ವಿಮಾನ ಹಾರಾಟದ ದೃಶ್ಯಗಳು ಕಂಡು ಬಂದವು. ಭಾರತದ ಮಿಗ್ -29ಕೆ ಹಾಗೂ ರಫೆಲ್ ಯುದ್ಧ ವಿಮಾನಗಳ ಹಾರಾಟದಂತಹ ಅಪರೂಪದ ದೃಶ್ಯಗಳನ್ನು ಮಕ್ಕಳು ಕಣ್ತುಂಬಿಕೊಂಡರು.
ಯುದ್ಧ ವಿಮಾನಗಳು ಕೆಳ ಹಂತದಲ್ಲಿ ಹಾರಾಡಿದ್ದರಿಂದ ರೋಮಾಂಚಕ ಸನ್ನಿವೇಶ ಕೆಲ ನಿಮಿಷಗಳ ಕಾಲ ನಗರದಲ್ಲಿತ್ತು. ದ ಬ್ಲಾಕ್ ಪ್ಯಾಂಥರ್ ಸ್ಕ್ವಾರ್ಡನ್ ಪಡೆಯ ಮಿಗ್ 29ಕೆ ಯುದ್ಧ ವಿಮಾನಗಳು ಭಾರತೀಯ ನೌಕಾಪಡೆ ಸೇರಿ ಆರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ನೆತ್ತಿಯ ಮೇಲೆ ಮಿಗ್ 29ಕೆ ವಿಮಾನ ಜೋಡಿ ಹಾರಾಡಿತು ಎಂದು ಐಎನ್‌ಎಸ್ ಕದಂಬ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಕಾರವಾರ ಬಳಿಯ ಐಎನ್‌ಎಸ್ ಕದಂಬ ನೌಕಾನೆಲೆ ಬೇಸ್‌ನಿಂದ ಹತ್ತು ದಿನಗಳ ಕಾಲ ಇಂಡೋ ಫ್ರಾನ್ಸ್ ನೌಕಾಪಡೆಯ ಜಂಟಿ ಸಮರಾಭ್ಯಾಸದ ಮೊದಲ ಹಂತ ಶುಕ್ರವಾರ ತಾನೇ ಅಂತಿಮವಾಗಿದ್ದು, ಕೊನೆಯ ದಿನ ಪಶ್ಚಿಮ ಕರಾವಳಿಯ ಅರಬ್ಬೀ ಸಮುದ್ರದಲ್ಲಿನ ನೇತ್ರಾಣಿ ಐಲ್ಯಾಂಡ್ ಸುತ್ತ ಭಾರತದ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾತ್ಯ ಮತ್ತು ಫ್ರಾನ್ಸನ ಯುದ್ಧ ನೌಕೆ ಚಾಲ್ಸ್ರ್ ಡಿ ಗುಲ್ಲೆಯಿಂದ ಬ್ಲಾಕ್ ಫ್ಯಾಂಥರ್ ಸ್ಕಾರ್ಡನ್ ಮಿಗ್ 29 ವಿಮಾನಗಳು ಹಾಗೂ ರಫೆಲ್ ಯುದ್ಧ ವಿಮಾನಗಳ ಪರೀಕ್ಷೆ ಹಾಗೂ ಸಮರಾಭ್ಯಾಸ ಹಾರಾಟವೂ ನಡೆಯಿತು. ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಸುತ್ತ 18 ನಾಟಿಕಲ್ ದೂರದಲ್ಲಿ ವರುಣ್ ಹೆಸರಿನ ಭಾರತ ಫ್ರಾನ್ಸ್ ಜಂಟಿ ಸಮರಾಭ್ಯಾಸ ರೋಚಕವಾಗಿತ್ತು.
ಶನಿವಾರ ಬೆಳಗ್ಗೆ ಕಾರವಾರ ನಗರ ಹಾಗೂ ಐಎನ್‌ಎಸ್ ಕದಂಬ ನೌಕಾನೆಲೆ ಸುತ್ತ ಮಿಗ್ 29ಕೆ ವಿಮಾನಗಳ ಹಾರಾಟ ಸಹ ನಡೆಯಿತು. ಸ್ಕ್ವಾರ್ಡನ್ ಮಿಗ್ -29ಕೆ ಯುದ್ಧ ವಿಮಾನಗಳು ಐಎನ್‌ಎ 303 (ಐಎನ್‌ಎಸ್ ಹಂಸ)ದ ಭಾಗವಾಗಿದ್ದು, ಇವುಗಳ ಹಾರಾಟ ನಡೆಯಿತು.
ಭಾರತದ ಪಶ್ಚಿಮ ನೇವಲ್ ಕಮಾಂಡ್ ಪಿ.ಅಜಿತ್ ಕುಮಾರ್, ಫ್ರಾನ್ಸ್ ನೌಕಾಪಡೆಯ ರಿಯರ್ ಆಡ್ಮಿರಲ್ ಒಲಿವಿರ್ ಲೀಬಾಸ್ ಹಾಗೂ ನೌಕೆಗಳ ಕ್ಯಾಪ್ಟನ್ಸ್ ಇದ್ದರು.
2ನೇ ಹಂತದ ಸಮರಾಭ್ಯಾಸ ಆಫ್ರಿಕಾದಲ್ಲಿ: ಎರಡನೇ ಹಂತದ ಸಮಾರಾಭ್ಯಾಸ ಆಫ್ರಿಕಾದ ಹಾರ್ನ ಎಂಬಲ್ಲಿ ಮೇ ಕೊನೆಯ ವಾರದಲ್ಲಿ ನಡೆಯಲಿದೆ. ದಾಜಿಬೌಟಿ ಎಂಬಲ್ಲಿ ಭಾರತ ಫ್ರಾನ್ಸ್ ನೌಕೆಗಳು ಹಾಗೂ ನೌಕಾಪಡೆ ಯುದ್ಧ ವಿಮಾನಗಳು ಹಾಗೂ ಸಬ್ ಮರೀನ್ಸಗಳು ಸಮರಾಭ್ಯಾಸದಲ್ಲಿ ಭಾಗಿಯಾಗಲಿವೆ ಎಂದು ಐಎನ್‌ಎಸ್ ಕದಂಬ ನೌಕಾನೆಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.