ನಾಲ್ಕು ದಶಕಗಳ ಮದ್ದಲೆ ನಾದ ಯಾನಕ್ಕೆ ಗೌರವ
Team Udayavani, Sep 19, 2018, 5:05 PM IST
ಶಿರಸಿ: ಯಕ್ಷಗಾನದಲ್ಲಿ ಬಡಗು ಹಾಗೂ ತೆಂಕಿನ ಎರಡೂ ಭಾಗವತರಿಗೆ ಹಿಮ್ಮೇಳ ಸಾಥ್ ನೀಡುವ, ದಿಗ್ಗಜ ಕಲಾವಿದರಿಂದ ಮಕ್ಕಳ ತನಕವೂ ರಂಗದಲ್ಲಿ ಕುಣಿಸಿದ ಮೇರು ಕಲಾವಿದ ಶಂಕರ ಭಾಗವತ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಗೌರವ ಪ್ರಕಟಿಸಿದೆ. ಭಾಗವತರ ಗಾಯನಕ್ಕೆ ವೇಷಧಾರಿಯ ನೃತ್ಯಕ್ಕೆ ಅದಕ್ಕಿಂತ ಹೆಚ್ಚಾಗಿ ತಾಳಗಳ ಬೋಲ್‌ಗಳು ಸ್ಪಷ್ಟವಾಗಿ ಮತ್ತು ಅತ್ಯಂತ ಮಧುರವಾಗಿ ಮದ್ದಲೆ ನುಡಿಸುವ ಶಂಕರ ಭಾಗವತ್ ಅವರು, ತಮ್ಮ ಕೈ ಬೆರಳುಗಳ ಮೋಡಿಯಿಂದಲೇ ಮನೆ ಮಾತಾಗಿದ್ದಾರೆ. ಮೂಲತಃ ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮದಲ್ಲಿ ರಾಮಚಂದ್ರ ಭಾಗವತ ಹಾಗೂ ಕಮಲಾ ಭಾಗವತರ ಹಿರಿಯ ಮಗನಾಗಿ 1955ರಲ್ಲಿ ಜನಿಸಿದವರು ಇವರು. ಓದಿದ್ದು 7ನೇ ತರಗತಿಯವರೆಗೆ. ಪ್ರಾಥಮಿಕ ಶಿಕ್ಷಣ ಪೂರೈಸುತ್ತಿರುವಂತೆಯೇ ಯಕ್ಷಗಾನದತ್ತ ಆಕರ್ಷಿತರಾದರು.
ದುರ್ಗಪ್ಪ ಗುಡಿಗಾರ ಹಾಗೂ ತಿಮ್ಮಪ್ಪ ನಾಯ್ಕರಲ್ಲಿ ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಶಾಲೆಯಲ್ಲಿ ಮದ್ದಲೆ ಅಭ್ಯಾಸ ಮಾಡಿದರು. ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಹೆಸರಾಂತ ಭಾಗವತರಾದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಿಗೆ, ಕಾಳಿಂಗ ನಾವುಡರಿಗೆ ಬಹಳಷ್ಟು ವರ್ಷ ಮದ್ದಲೆ ವಾದನದ ಸಾಥ್ ನೀಡಿದ ಅಪಾರ ಅನುಭವ ಉಳ್ಳವರು.
ಮರವಂತೆ ನರಸಿಂಹ ದಾಸರು, ಕಡತೋಕಾ ಮಂಜುನಾಥ ಭಾಗವತರು, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು, ವಿದ್ವಾನ್ ಗಣಪತಿ ಭಟ್ಟರು, ಕೊಳಗಿ ಕೇಶವ ಹೆಗಡೆ ಭಾಗವತರು, ಅಲ್ಲದೇ ಇಂದು ಪ್ರಚಲಿತರಾಗಿರುವ ಬಹುತೇಕ ಎಲ್ಲ ಭಾಗವತರೊಂದಿಗೆ ತಮ್ಮ ವಾದನ ಸಹಕಾರವನ್ನು ನೀಡುತ್ತಿರುವ ಕಲಾವಿದರಿವರು. 40ಕ್ಕೂ ಮಿಕ್ಕಿದ ವರ್ಷಗಳ ಅನುಭವ ಈ ಯಕ್ಷ ರಂಗದಲ್ಲಿ ಇದೆ. ಜಿ.ಆರ್. ಹೆಗಡೆಯವರಲ್ಲಿ ತಬಲಾ ವಾದನವನ್ನೂ ಅಭ್ಯಾಸ ಮಾಡಿ ಅದರಲ್ಲಿಯೂ ಅನುಭವ ಗಳಿಸಿದ್ದಾರೆ. ಯಕ್ಷಗಾನ ರಂಗದ ಹೆಸರಾಂತ ಕಲಾವಿದರೆಲ್ಲರಿಗೆ ಮದ್ದಲೆ ನುಡಿಸಿದ್ದಾರೆ, ಕುಣಿಸಿದ್ದಾರೆ, ಕುಣಿಸುತ್ತಿದ್ದಾರೆ.
ವೃತ್ತಿ ಮೇಳದಿಂದ ನಿವೃತ್ತಿ ಪಡೆದಿದ್ದರೂ ಯಕ್ಷಗಾನದಲ್ಲಿ ಮದ್ದಲೆಯ ವಾದನ ನಿರಂತರವಾಗಿ ಸಾಗಿದೆ. ಶಿರಸಿಯಲ್ಲಿ ‘ನಾದ ಶಂಕರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಇವರು ಅದರ ಮೂಲಕ ಮದ್ದಲೆ ಹಾಗೂ ಚಂಡೆ ವಾದನ ಕಲಿಕಾ ವರ್ಗ ನಡೆಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ನಾಡಿನ ಅನೇಕ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಅಲ್ಲಿಯೂ ತಮ್ಮ ಮದ್ದಲೆಯ ಸದ್ದನ್ನು ಮೊಳಗಿಸಿ ಬಂದಿದ್ದಾರೆ. ಇವರ ಮದ್ದಲೆಯ ವಾದನದ ಯಕ್ಷಗಾನಗಳ ಸಾವಿರಕ್ಕೂ ಹೆಚ್ಚು ಸಿಡಿಗಳು ಪ್ರಕಟಗೊಂಡಿವೆ. ಸಿಂಗಾಪುರದಲ್ಲಿ ಸಿಂಗರ ಕಲಾರತ್ನ, ಹೈದರಾಬಾದಿನಲ್ಲಿ ಯಕ್ಷ ಚೂಡಾಮಣಿ, ಉಡುಪಿ ಯಕ್ಷಕಲಾ ರಂಗದ ಪ್ರಶಸ್ತಿ, ಶಿರಸಿಯ ಮದ್ದಲೆಯ ಮದನ, ನಮ್ಮನೆ ಪುರಸ್ಕಾರ ಸೇರಿದಂತೆ ನೂರಾರು ಬಿರುದು ನೀಡಿ ಸನ್ಮಾನಿಸಲಾಗಿದೆ. ರಾಜ್ಯ, ಹೊರ ರಾಜ್ಯಗಳಲ್ಲದೇ ಸಿಂಗಾಪುರ, ದುಬೈ ಸೇರಿದಂತೆ ಅನೇಕ ಹೊರ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇವರ ಮದ್ದಲೆಯಾನಕ್ಕೆ ಪತ್ನಿ ವಿನೋದಾ, ಮಗ ದರ್ಶನ, ಹಾಗೂ ಮಗಳು ಪೂಜಾ ಸಹಕಾರವಿದೆ.
ಪ್ರಶಸ್ತಿ ಬಂದಿದ್ದು ಖುಷಿ ತಂದಿದೆ. ಕ್ಷೇತ್ರದಲ್ಲಿ ಇನ್ನಷ್ಟು ಕಲಿಯುವ ಆಸಕ್ತಿ ಹೆಚ್ಚಿಸಿದೆ.
. ಶಂಕರ ಭಾಗವತ್, ಯಲ್ಲಾಪುರ
ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.