ಗಲ್ಲಿ ಗಲ್ಲಿಯಲ್ಲಿ ಸಂಭ್ರಮವೋ ಸಂಭ್ರಮ
Team Udayavani, May 25, 2019, 3:38 PM IST
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಅಂತರದ ಗೆಲುವು ಸಾಧಿಸಿದ ಬೆನ್ನ ಹಿಂದೆಯೇ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ಅದು ಪಕ್ಷದ ಮುಖಂಡರು ಮತ್ತು ಯುವಪಡೆ ವಿಜಯೋತ್ಸವದಲ್ಲಿ ಎದ್ದು ಕಾಣುತ್ತಿದೆ. ಕಾರವಾರದಲ್ಲಿ ಪಕ್ಷದ ಕಚೇರಿಯಿಂದ ಶುಕ್ರವಾರ ಮಧ್ಯಾಹ್ನ ಮೆರವಣಿಗೆ ಹೊರಡುತ್ತಿದ್ದಂತೆ ಮೋದಿ ಪರ ಜಯಘೋಷಗಳು ಮುಗಿಲು ಮುಟ್ಟಿದವು.
ಸಂಸದ ಅನಂತಕುಮಾರ್ ಹೆಗಡೆ ಅವರ ಅನುಪಸ್ಥಿತಿಯಲ್ಲೂ ಕಾರ್ಯಕರ್ತರ ವಿಜಯದ ಉತ್ಸಾಹ ಮುಗಿಲು ಮುಟ್ಟಿತ್ತು. ಮಹಿಳಾ ಕಾರ್ಯಕರ್ತೆಯರು, ಪದಾಧಿಕಾರಿಗಳು, ನಗರಸಭೆ ಮಹಿಳಾ ಸದಸ್ಯರು ಡೋಲಿನ ಶಬ್ದಕ್ಕೆ ಅಕ್ಷರಶಃ ಡಾನ್ಸ್ ಮಾಡಿದರು. ಶಾಸಕಿ ರೂಪಾಲಿ ನಾಯ್ಕ ಸಹ ಕಾರ್ಯಕರ್ತರ ಹುರುಪನ್ನು ಕಂಡು ಸ್ವತಃ ಡಾನ್ಸ್ ಮಾಡಿದರು. ಯುವಕರು ಕುಣಿದು ಕುಪ್ಪಳಿಸಿದರು.
ಇದಕ್ಕೆಲ್ಲಾ ಕಾರಣ ಕಾರವಾರ ವಿಧಾನಸಭಾ ಕ್ಷೇತ್ರ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಅತೀ ಹೆಚ್ಚು ಮತಗಳನ್ನು ನೀಡಿದ್ದು. ಅಷ್ಟರ ಮಟ್ಟಿಗೆ ಶಾಸಕಿ ರೂಪಾಲಿ ನಾಯ್ಕ ಶ್ರಮಿಸಿದ್ದರು. ಎಂಎಲ್ಎ ಚುನಾವಣೆಗಿಂತಲೂ ಹೆಚ್ಚು ಶ್ರಮ ಹಾಕಿದ ಚುನಾವಣೆ ಇದಾಗಿತ್ತು. ಅನಂತಕುಮಾರ್ ಹೆಗಡೆ ಅವರು ಭಾಷೆಯನ್ನೇ ಅಸ್ತ್ರವನ್ನಾಗಿಸಿಕೊಂಡು, ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಹೋಗದಂತೆ ತಡೆದರು. ಕಾಂಗ್ರೆಸ್ ಸಹ ನಾಮಕಾವಸ್ತೆ ಪ್ರಚಾರ ಮಾಡಿತ್ತು. ಇದರ ಸಂಪೂರ್ಣ ಲಾಭ ಪಡೆದುಕೊಂಡದ್ದು ಬಿಜೆಪಿ. ಕಾಂಗ್ರೆಸ್ ಕಾರ್ಯಕರ್ತರು ಕಾರವಾರ ಗ್ರಾಮಾಂತರ ಭಾಗದಲ್ಲಿ ನೇರವಾಗಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಡ್ಡಿ ತುಂಡು ಮಾಡಿದಂತೆ ‘ನಾವು ಮೋದಿಗೆ ಮತ ಹಾಕುತ್ತೇವೆ. ಮೈತ್ರಿ ಅಭ್ಯರ್ಥಿಗೆ ಮತ ಹಾಕುವುದಿಲ್ಲ’ ಎಂದು ಹೇಳಿದ್ದು ಆಗಿತ್ತು. ಹಾಗಾಗಿ ಕೆನರಾ ಲೋಕಸಭಾ ಚುನಾವಣೆ ಫಲಿತಾಂಶ ಮೊದಲೇ ನಿರ್ಧಾರವಾಗಿತ್ತು. ಬಿಜೆಪಿ ಮುಖಂಡರು ಹೇಳುತ್ತಿದ್ದ 3 ಲಕ್ಷ ಲೀಡ್ ಅಂತರವನ್ನು ಮೀರಿ, ಮತದಾರರು 4,79,649 ಮತಗಳ ಅಂತರವನ್ನು ಬಿಜೆಪಿಗೆ ನೀಡಿದ್ದಾರೆ.
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 113135 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಅಸ್ನೋಟಿಕರ್ ಕೇವಲ 37349 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದ್ದಾರೆ. ಶಿರಸಿ ಕ್ಷೇತ್ರದಲ್ಲಿ ಸಹ ಬಿಜೆಪಿಗೆ 1,03904 ಮತಗಳು ಬಂದಿವೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಇರುವ ಖಾನಾಪುರ ಕ್ಷೇತ್ರದಲ್ಲಿ ಅನಂತಕುಮಾರ್ ಅವರಿಗೆ ಅತೀ ಹೆಚ್ಚು ಲೀಡ್ ಕೊಟ್ಟ ಕ್ಷೇತ್ರವಾಗಿದೆ. ಇಲ್ಲಿ 1,13,386 ಮತಗಳು ಬಂದರೆ, ಜೆಡಿಎಸ್‌ಗೆ 25108 ಮತಗಳು ಬಂದಿವೆ. ಮೈತ್ರಿ ಅಭ್ಯರ್ಥಿಗೆ ಅತ್ಯಂತ ಕಡಿಮೆ ಮತಗಳು ಬಂದ ವಿಧಾನಸಭಾ ಕ್ಷೇತ್ರ ಇದಾಗಿದೆ. ದೇಶಪಾಂಡೆ ಅವರ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ಮತಗಳು ಬಂದಿವೆ. 81629 ಮತಗಳು ಬಿಜೆಪಿಗೆ ಬಂದರೆ, ಜೆಡಿಎಸ್‌ಗೆ 39865 ಮತಗಳು ಮಾತ್ರ ಬಂದಿವೆ. ಇಲ್ಲಿ ಜೆಡಿಎಸ್‌ನ ಮೂಲ ಮತಗಳು ಇರುವ ಕಾರಣ 35 ಸಾವಿರ ಮತಗಳು ಮೈತ್ರಿ ಅಭ್ಯರ್ಥಿಗೆ ಬಂದಿವೆ ಎನ್ನಲಾಗುತ್ತಿದೆ. ಉಳಿದಂತೆ ಜೆಡಿಎಸ್‌ಗೆ ಜಿಲ್ಲೆಯಲ್ಲಿ ನೆಲೆಯೇ ಇಲ್ಲ. ಹಾಗಾಗಿ ಮೂಲ ಕೆಲ ಕಾಂಗ್ರೆಸ್ಸಿಗರು ಹಾಗೂ ಕೆಲ ಅಲ್ಪಸಂಖ್ಯಾತರ ಮತಗಳು ಮಾತ್ರ ಜೆಡಿಎಸ್ ಪಾಲಾಗಿದ್ದವು.
ಮೈತ್ರಿ ಅಭ್ಯರ್ಥಿ ಮಾತು ಮುಳುವಾಯಿತು: ಸಚಿವ ದೇಶಪಾಂಡೆ ಅವರ ಕುರಿತು ಲೋಕಸಭಾ ಚುನಾವಣೆಗೆ 4 ತಿಂಗಳು ಮುಂಚಿತವಾಗಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ದೇಶಪಾಂಡೆ ಅವರಿಗೆ ವಯಸ್ಸಾಗಿದೆ. ಅಜ್ಜ ಆಗಿದ್ದಾರೆ. ಅವರು ರಾಜಕೀಯ ನಿವೃತ್ತಿ ಪಡೆಯಬೇಕು. ಮಂತ್ರಿ ಸ್ಥಾನವನ್ನು ಶಿವರಾಮ ಹೆಬ್ಟಾರರಿಗೆ ಬಿಟ್ಟುಕೊಡಬೇಕು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದ ಮಾತು ಅವರಿಗೇ ಮುಳುವಾಯಿತು. ವಾಸ್ತವವಾಗಿ ಲೋಕಸಭಾ ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆಯೇ ಸಚಿವ ದೇಶಪಾಂಡೆ ಕಾರವಾರಕ್ಕೆ ಬರದೇ ತಮ್ಮ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಮತದಾನಕ್ಕೆ ಹತ್ತು ದಿನ ಇರುವಾಗ ಬಂದ ದೇಶಪಾಂಡೆ, ಕಾಟಾಚಾರಕ್ಕೆ ಪ್ರಚಾರದ ಶಾಸ್ತ್ರ ಮುಗಿಸಿದ್ದರು. ಜೊತೆಗೆ ದೇಶಪಾಂಡೆ ಅವರ ಕಟ್ಟಾ ಅಭಿಮಾನಿ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿ ಅಸ್ನೋಟಿಕರ್ ವಿರುದ್ಧ ತಿರುಗಿ ಬಿದ್ದಿದ್ದರು.
ಜೆಡಿಎಸ್‌ನ ಪದಾಧಿಕಾರಿಗಳು ಸಹ ಎರಡು ಬಣವಾದ ಕಾರಣ ಚುನಾವಣಾ ಪ್ರಚಾರದಲ್ಲಿ ಅಸ್ನೋಟಿಕರ್ ಹಿನ್ನೆಡೆ ಅನುಭವಿಸಿದ್ದರು. ಹಣಕಾಸು ವಿಷಯದಲ್ಲಿ ಮಾಡಿದ ಜಿಪುಣತನ ಸಹ ಮೈತ್ರಿ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು. ಹಾಲಿ ಸಂಸದರ ವಿರುದ್ಧ ಬಳಸಿದ ಅಸಂವಿಧಾನಕ ಭಾಷೆ, ಹಿಂದುಳಿದ ವರ್ಗದ ಪ್ರತಿನಿಧಿಯೆಂದು ಬೂಸಿ ಬಿಟ್ಟದ್ದು, ಶ್ರೀಮಂತಿಕೆ ಗತ್ತಿನಿಂದ ಅಸ್ನೋಟಿಕರ್ ಹೊರಬರದೇ ಇದ್ದುದು, ಮಾಧ್ಯಮಗಳನ್ನೇ ಒಡೆದು ಆಳಲು ನೋಡಿದ್ದು, ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಗಳನ್ನು ಬದಲಿಸಿದ್ದು ಅಸ್ನೋಟಿಕರ್ ಹಿನ್ನೆಡೆಗೆ ಕಾರಣವಾಗಿತ್ತು. ಯಾವತ್ತು ಜನರ ಜೊತೆ ಪ್ರಾಮಾಣಿಕವಾಗಿ ಬೆರೆಯದ ಉದ್ಯಮಿ ಅಸ್ನೋಟಿಕರ್‌ಗೆ ಪಾಠ ಕಲಿಸಲು ಸ್ವಕ್ಷೇತ್ರ ಕಾರವಾರದಲ್ಲೇ ನಿರ್ಧಾರಗಳಾಗಿದ್ದವು. ಮಾಜಿ ಶಾಸಕ ಕಾಂಗ್ರೆಸ್‌ನ ಸತೀಶ್ ಸೈಲ್ ಅತ್ಯಂತ ಅರ್ಥಪೂರ್ಣವಾಗಿ ಮೈತ್ರಿಯನ್ನು ತುಳಿದು ಹಾಕಿದ್ದು ಲೋಕಸಭಾ ಚುನಾವನಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ.
ನಾಗರಾಜ ಹರಪನಹಳ್ಳಿ
ಇಲ್ಲಿನ ಶಂಶುದ್ಧೀನ್ ಸರ್ಕಲ್ನಲ್ಲಿ ಸೇರಿದ ಕಾರ್ಯಕರ್ತರು ಅನಂತಕುಮಾರ್ ಹೆಗಡೆ ಹಾಗೂ ಮೋದೀಜಿಗೆ ಹಾಕಿದ ಜೈಕಾರ ಮುಗಿಲು ಮುಟ್ಟುವಂತಿತ್ತು. ಉತ್ಸಾಹದಿಂದಲೇ ಭಾಗವಹಿಸಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ದ್ವಿಗುಣಗೊಳಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಇಲ್ಲಿನ ಸರ್ಕಲ್ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಂತರ ಶಾಸಕ ಸುನೀಲ್ ನಾಯ್ಕ ಹಾಗೂ ಬಿಜೆಪಿ ಪ್ರಮುಖರು ಬಂದು ಸೇರಿಕೊಂಡರು.
ಅನಂತಕುಮಾರ್ ಹೆಗಡೆಯವರಿಗೆ ರಾಜಕೀಯದ ಹುಟ್ಟು ನೀಡಿರುವುದೇ ಭಟ್ಕಳ ಎನ್ನುವುದಕ್ಕೆ ಎರಡು ಮಾತಿಲ್ಲ. ಅತ್ಯಂತ ಶಿಸ್ತಿನ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅವರಿಗೆ ಭಟ್ಕಳದ ನಂಟು ಹೊಸತೇನಲ್ಲವಾಗಿತ್ತು. ಆದರೆ 1993ರಲ್ಲಿ ಭಟ್ಕಳದಲ್ಲಿ ನಡೆದ ಸುದೀರ್ಘ ಗಲಭೆ ಅವರಿಗೆ ಭಟ್ಕಳದ ಜನತೆ ಮೇಲೆ ಅನುಕಂಪ ಹುಟ್ಟುವಂತೆ ಮಾಡಿತ್ತು. ಅಂದು ಭಟ್ಕಳದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವ ಅವರ ಭಾವನೆಯಿಂದಾಗಿ ಅವರು ಸಂಪೂರ್ಣ ತಮ್ಮನ್ನು ಇಲ್ಲಿನ ಹಿಂದೂಗಳ ರಕ್ಷಣೆಗೆ ತೊಡಗಿಸಿಕೊಂಡರು. ಹಲವಾರು ಬಾರಿ ಅಧಿಕಾರಿಗಳನ್ನು, ಸರಕಾರವನ್ನು ಕೂಡಾ ಎದುರು ಹಾಕಿಕೊಳ್ಳುವ ಪ್ರಸಂಗ ಎದುರಾದರೂ ಅವರು ಎದೆ ಗುಂದದೇ ಸದಾ ಸಂಕಷ್ಟಕ್ಕೆ ಸಿಲುಕಿದವರೊಂದಿಗೆ ಇದ್ದು ಜನರಿಗೆ ತಾವಿದ್ದೇವೆ ಎನ್ನುವ ಧೈರ್ಯ ತುಂಬಿದರು.
ಅನಂತಕುಮಾರ್ ಹೆಗಡೆ ಎಂದು ತಮಗಾಗಿ ಏನನ್ನೂ ಕೇಳಿದವರಲ್ಲ, ಅಂದು 1996ರಲ್ಲಿ ಅನಂತಕುಮಾರ್ ಹೆಗಡೆಯವರಿಗೆ ಪ್ರಥಮವಾಗಿ ಲೋಕಸಭೆಗೆ ಟಿಕೇಟ್ ದೊರೆತಾಗ ಕೂಡಾ ಅವರು ಹಿರಿಯರ ಒತ್ತಾಸೆಯ ಮೇರೆಗೆ ಒಪ್ಪಿಕೊಂಡಿದ್ದರು. ಡಾ| ಚಿತ್ತರಂಜನ್ ಅವರ ಹತ್ಯೆಯಾದಾಗ ಚುನಾವಣೆ ಹೊಸ್ತಿಲಲ್ಲಿದ್ದ ಹೆಗಡೆ ಅವರು ನಂತರದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಆರಿಸಿ ಬಂದು ಅತ್ಯಂತ ಕಿರಿಯ ವಯಸ್ಸಿನ ಸಂಸದ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇಂದು 6ನೇ ಬಾರಿಗೆ ಆಯ್ಕೆಯಾಗುವಾಗಲೂ ಅವರು ರಾಷ್ಟ್ರದಲ್ಲಿ ಅತಿ ಹೆಚ್ಚು ಪಡೆದ ಎರಡನೇ ಸಂಸದ ಎನ್ನುವ ಹೆಗ್ಗಳಿಕೆಯೊಂದಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ ಎನ್ನುವುದು ಭಟ್ಕಳದ ಜನತೆಗಷ್ಟೇ ಅಲ್ಲ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಒಂದು ಹೆಮ್ಮೆಯ ವಿಷಯವಾಗಿದೆ.
ಅಂದಾಜು 23 ವರ್ಷಗಳ ನನ್ನ ರಾಜಕೀಯ ಪಯಣದ ಪೂರ್ಣ ಹಾದಿಯಿಂದ ಹಿಡಿದು, ಬಹುತೇಕ ಮೆಟ್ಟಿಲುಗಳನ್ನು ಒಂದೊಂದಾಗಿ ನನ್ನ ಕ್ಷೇತ್ರದ ಜನರೇ ಏರಿಸಿದ್ದೇ ವಿನಹ, ಮಿಕ್ಕಿದೆಲ್ಲವೂ ಗೌಣ! ಏಳು ಚುನಾವಣೆ ಎದುರಿಸಿ ಆರನೇ ಬಾರಿ ಆಯ್ಕೆಗೊಂಡಿದ್ದೇನೆ. ಹಿಂದಿನ ಅನುಭವಗಳನ್ನು ಹಾಗೂ ತಾವು ಯಾರ್ಯಾರೊಂದಿಗೆ ಸ್ಪರ್ಧಿಸಿದ್ದೆ, ತನ್ನನ್ನು ಜನತೆ ಹೇಗೆ ಪ್ರೋತ್ಸಾಹಿಸಿದರು ಮತ್ತೂಮ್ಮೆ ತಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಈ ಬಾರಿಯ ಚುನಾವಣೆ ಇದುವರೆಗಿನ ಎಲ್ಲ ಚುನಾವಣೆಗಿಂತ ಬಹಳ ಭಿನ್ನವಾಗಿತ್ತು. ಜನತೆಯ ತೀರ್ಮಾನ ಕಾಂಗ್ರೆಸ್ ಪಕ್ಷದ ಆತ್ಮಸ್ಥೈರ್ಯವನ್ನೇ ಕುಗ್ಗಿಸಿತ್ತು. ಹಾಗಾಗಿ ಕ್ಷೇತ್ರವನ್ನು ಜನತಾದಳಕ್ಕೆ ಬಿಟ್ಟುಕೊಟ್ಟಿದ್ದರು. ಇದರ ಪರಿಣಾಮ ಜನತೆ ಮತ್ತೂಮ್ಮೆ ನನ್ನ ಪರವಾಗಿ ಕೇವಲ ಅಲ್ಪ ವಿಶ್ವಾಸವಲ್ಲ, ಬದಲಿಗೆ ಅತೀವ ಅಭಿಮಾನದ ಅಂಗೀಕಾರವನ್ನು ಸುಮಾರು 4,77,081 ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ತೀರ್ಮಾನ ನೀಡಿದ್ದಾರೆ.
ಹಾಗೆಂದು, ನಾನು ಸರ್ವಜ್ಞನು ಅಲ್ಲ, ಹಾಗೂ ಸರ್ವಶಕ್ತನೂ ಅಲ್ಲ! ನಾನೊಬ್ಬ ಕೇವಲ ಪಕ್ಷ ಹಾಗೂ ಸಂಘಟನೆಯ ಪ್ರತಿನಿಧಿ! ಈ ಗೆಲುವು ಸಂಪೂರ್ಣವಾಗಿ ನಮ್ಮ ಸಂಘಟನೆ ಹಾಗೂ ಪಕ್ಷದ ಸಿದ್ಧಾಂತಕ್ಕೆ ಸಲ್ಲಬೇಕು!
ಈ ಗೆಲುವಿನ ಮೂಲಕ ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಖುಷಿಗಿಂತ, ಕ್ಷೇತ್ರದ ಜನತೆಯ ಸೇವೆಯ ಜವಾಬ್ದಾರಿ ನನ್ನನ್ನು ಇನ್ನಷ್ಟು ವಿನಮ್ರನಾಗಿಸಿದೆ. ನನ್ನ ಕ್ಷೇತ್ರದ ಜನತೆ, ಮತದಾರ ಪ್ರಭು ತೋರಿರುವ ಇಂತಹ ಅಗಾಧ ಔದಾರ್ಯದ ನಂಬಿಕೆ ಮುಂದೆ ನಾನು ಅಕ್ಷರಶಃ ತಲೆ ಬಾಗಿದ್ದೇನೆ.! ಜೊತೆಗೆ ಚುನಾವಣೆ ವೇಳೆಗೆ ಹಗಲೂ ರಾತ್ರಿ ದುಡಿದ, ದಣಿವರಿಯದೆ ಊರೂರು ತಿರುಗಿದ, ಪಕ್ಷಕ್ಕಾಗಿ ಮತ ಯಾಚಿಸಿದ, ನನ್ನನ್ನು ಒಂದಿಷ್ಟೂ ಬಿಟ್ಟು ಕೊಡದೆ ಸಮರ್ಥಿಸಿ ಕೊಂಡು ಎಲ್ಲವನ್ನೂ, ಎಲ್ಲರನ್ನೂ ಎದುರಿಸಿದ ಪರಿವಾರದ ಕಾರ್ಯಕರ್ತರ ಅಖಂಡ ನಿಷ್ಠೆಯ ಮುಂದೆ, ಅವರ ಸೇವಾ ತತ್ಪರತೆ ಮುಂದೆ ಮಾತಿಲ್ಲದೆ ಮೂಕನಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಮೋದಿ ಅಲೆಯಿಂದಲೇ ಅನಂತಕುಮಾರ್ ಹೆಗಡೆ ಗೆದ್ದರೇ?
ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಈ ಬಾರಿ ಕರ್ನಾಟಕದಲ್ಲಿ ದಾಖಲೆಯ ಅಂತರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಗಿದ್ದು ಕೇವಲ ಮೋದಿ ಅಲೆಯಾ? ಅದೊಂದೇ ಆಗಿದ್ದರೆ ಈ ಪ್ರಮಾಣದಲ್ಲಿ ಗೆಲುವು ಸಾಧ್ಯವಾಗುತ್ತಿತ್ತಾ?
ಇಂಥದೊಂದು ಪ್ರಶ್ನೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಅನಂತಕುಮಾರ ಹೆಗಡೆ ಅವರಿಗೂ ಕಾಡುವಂತೆ ಆಗಿದೆ. ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲುವು ಎನ್ನುತ್ತಿದ್ದ ಅನಂತ ಬೆಂಬಲಿಗರ ನಿರೀಕ್ಷೆಗಿಂತ ಒಂದುವರೆ ಲಕ್ಷ ಮತಗಳು ಇನ್ನೂ ಹೆಚ್ಚಲು ಕಾರಣವೇನು ಎಂಬುದು ಕುತೂಹಲ ಗರಿಗೆದರಲು ಕಾರಣವಾಗುತ್ತಿದೆ. ದೇಶದಲ್ಲಿ ನಂಬರ್ 2 ಲೀಡ್‌ನಲ್ಲಿ ಗೆಲುವು ಸಾಧಿಸಿದ ಅನಂತಕುಮಾರ ಹೆಸರೇ ಬಹುತೇಕರಿಗೆ ಚುಂಬಕ ಶಕ್ತಿಯಾಗಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಕೂಡ ಇದೆ.
ದೂರ ದೂರಗಳಿಂದ, ದುಬೈ, ಅಮೆರಿಕಾ, ಜರ್ಮನಿ ಸೇರಿದಂತೆ ವಿವಿಧೆಡೆಯಿಂದ ಮತದಾರರು ಆಗಮಿಸಿ ಮತದಾನ ಮಾಡಿದ್ದರು. ಎಷ್ಟೋ ಕಡೆ ಮತವಾಗಿ ಪರಿವರ್ತನೆ ಆಗಲು ರಾಷ್ಟ್ರವನ್ನು ಪುನಃ ಪ್ರಪಂಚದ ಗುರುವಾಗಿಸಲು ಮೋದಿ ಬೆಂಬಲಿಸಿದ್ದಾಗಿ ಹೇಳಿಕೆಗಳೂ ವ್ಯಕ್ತವಾಗಿದ್ದವು.
ಕಾರವಾರಕ್ಕೆ ನಿರ್ಮಲಾ ಸೀತಾರಾಮ, ಶಿರಸಿ, ಸಿದ್ದಾಪುರ, ಯಲ್ಲಾಪುರಕ್ಕೆ ಮಾಳವಿಕಾ ಅವಿನಾಶ ಹೊರತುಪಡಿಸಿ ಉಳಿದವರಾರ್ಯರೂ ಸ್ಟಾರ್ ಪ್ರಚಾರಕರು ಬಂದಿಲ್ಲ. ಚಿಕ್ಕೋಡಿಗೆ ಮೋದಿ ಅವರು ಬಂದಾಗಲೂ ಬೆಳಗಾವಿಯ ಎರಡು ತಾಲೂಕು ಒಳಗೊಂಡ ಉತ್ತರ ಕನ್ನಡದ ಅಭ್ಯರ್ಥಿ ಕೂಡ ಹೋಗಿರಲಿಲ್ಲ. ಆದರೂ ಅನಂತಕುಮಾರ ಅವರನ್ನು ಈ ಪ್ರಮಾಣದಲ್ಲಿ ಬೆಂಬಲಿಸಿದ್ದು ಈಗ ಬಯಲಾಗಿದೆ. ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಬೇಡ ಎಂದು ಸ್ವತಃ ಅನಂತ್ ಹೇಳಿದ್ದರೂ ಕೇಂದ್ರ ಬಿಜೆಪಿ ಇಬ್ಬರನ್ನು ಕಳಿಸಿದ್ದು ಸಣ್ಣ ಆತಂಕದಿಂದಲೇ. ಕಾಂಗ್ರೆಸ್, ಜೆಡಿಎಸ್ ಸೇರಿ ಬಿಜೆಪಿ ಕಮಲಕ್ಕೆ ಏಟಾಗಬಹುದು ಎಂಬ ಆತಂಕದಿಂದಲೂ ಸೀಬರ್ಡ್ ಪ್ರದೇಶಕ್ಕೆ ನೆರವಾದ ನಿರ್ಮಲಾ ಅವರನ್ನು ಮತಯಾಚನೆಗೆ ಕಳಿಸಿತ್ತು.
ಬಿಜೆಪಿ ಗೆಲುವಿಗೆ ಕೇವಲ ಮೋದಿ ಅಲೆ ಕಾರಣವಲ್ಲ. ಬದಲಿಗೆ ಅನಂತಕುಮಾರ ಹೆಗಡೆ ಎದುರಿಗೂ ಕಾಂಗ್ರೆಸ್ ಅಭ್ಯರ್ಥಿ ಇಲ್ಲದೇ ಜೆಡಿಎಸ್ ಅಭ್ಯರ್ಥಿ ಹಾಕಿದ್ದೂ ಕಾರಣವಾಗಿದೆ. ಆನಂದ ಅಸ್ನೋಟಿಕರ್ ಅನಂತ ಎದುರಿಗೆ ಕಡಿಮೆ ಅವಧಿಯಲ್ಲಿ ಅಭ್ಯರ್ಥಿ ಹಾಕಿಸಿದ್ದು, ಕಾಂಗ್ರೆಸ್ ಜೆಡಿಎಸ್ ಸಂಘಟನೆ ಕೊನೇ ಕ್ಷಣದ ತನಕ ಆಗದೇ ಇರುವುದೂ, ಜೆಡಿಎಸ್‌ಗೆ ಅಭ್ಯರ್ಥಿ ಸ್ಥಾನ ಕೊಟ್ಟು, ಹಠ ಮಾಡಿ ದೇವೇಗೌಡರು ಸೀಟ್ ಕೊಡಿಸಿದ್ದು ಸೋಲಿಗೆ ಕಾರಣವಾಗಿದೆ.
ಅನಂತಕುಮಾರ ಪ್ರಖರ ಹಿಂದುತ್ವವಾದಿ ಆಗಿದ್ದರಿಂದ, ಪರೇಶ ಮೇಸ್ತಾ ಪ್ರಕರಣದ ಬಳಿಕ ಪರಿಣಾಮಗೊಂಡ ಹಿಂದುತ್ವದ ಅಲೆಯನ್ನು ಹಿಡಿದಿಟ್ಟುಕೊಂಡಿದ್ದು ಕೂಡ ಮತ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.
ಅಸ್ನೋಟಿಕರ್ ಸೋಲಿಗೆ ಕಾರಣ ಎಂದರೆ ಎಂಟು ವಿಧಾನ ಸಭಾ ಕ್ಷೇತ್ರಕ್ಕೆ ಪರಿಚಿತ ವ್ಯಕ್ತಿ ಆಗದೇ ಇರುವುದು, ಪಕ್ಷಾಂತರಿ ಆಗಿರುವದು, ಪದೇ ಪದೇ ಎದುರು ಅಭ್ಯರ್ಥಿಯನ್ನು ಏಕ ವಚನದಲ್ಲಿ ಸಂಬೋಧಿಸಿದ್ದು ಕೂಡ ಉಳಿದ ಮತಗಳು ಸೇರಲು ಕಾರಣವಾಗಿದೆ.
ದೇಶಪಾಂಡೆ ಅವರು ಮುದುಕ ಎಂದು ಹೇಳಿದ್ದು ಕಾಂಗ್ರೆಸ್ಸಿಗರು ಮರೆತಿರಲಿಲ್ಲ. ಕಾಂಗ್ರೆಸ್ ನಾಯಕರನ್ನು ಸೇರಿಸುವುದೇ ದೊಡ್ಡ ಸಮಸ್ಯೆ ಆಗಿದ್ದೂ ಅಸ್ನೋಟಿಕರ್‌ಗೆ ಸೋಲಲು ಕಾರಣವಾಗಿದೆ. ಜೆಡಿಎಸ್ ಪಕ್ಷವೇ ಬಲಿಷ್ಠ ಇಲ್ಲದೆಡೆ ಅಭ್ಯರ್ಥಿ ಆಗಿದ್ದೂ ಹಿನ್ನಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ನನ್ನ ಮಗಳ ಬಾಯ್‌ಫ್ರೆಂಡ್ ಫೋಟೋ ರಿವೀಲ್ ಮಾಡಿದರೆ 21 ಲಕ್ಷ ಬಹುಮಾನ: ಬಿಗ್ ಬಾಸ್‌ಗೆ ಸವಾಲು
Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.